×
Ad

ಇಸ್ರೇಲ್‍ಗೆ ಶಸ್ತ್ರಾಸ್ತ್ರ ರಫ್ತು ನಿಷೇಧದಿಂದ ಹಮಾಸ್‍ಗೆ ಲಾಭ: ಬ್ರಿಟನ್

Update: 2024-05-13 21:51 IST

Photo : Times of India

ಲಂಡನ್: ಗಾಝಾ ಪಟ್ಟಿಯ ರಫಾದ ಮೇಲೆ ಇಸ್ರೇಲ್ ಭೂದಾಳಿ ನಡೆಸಿದರೆ ಬ್ರಿಟನ್‍ನ ಶಸ್ತ್ರಾಸ್ತ್ರ ಪೂರೈಕೆಯನ್ನು ಸ್ಥಗಿತಗೊಳಿಸಬೇಕು ಎಂಬ ಆಗ್ರಹಕ್ಕೆ ಪ್ರತಿಕ್ರಿಯಿಸಿರುವ ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಕ್ಯಾಮರೂನ್, ಹೀಗೆ ಮಾಡಿದರೆ ಹಮಾಸ್ ಅನ್ನು ಬಲಪಡಿಸಿದಂತಾಗುತ್ತದೆ ಎಂದಿದ್ದಾರೆ.

ರಫಾದ ಮೇಲೆ ಭೂದಾಳಿ ನಡೆಸಿದರೆ ಶಸ್ತ್ರಾಸ್ತ್ರ ಪೂರೈಕೆಯನ್ನು ನಿಲ್ಲಿಸಲಾಗುವುದು ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಯ ನಡುವೆಯೇ ರಫಾದಿಂದ ತಕ್ಷಣ ಸ್ಥಳಾಂತರಗೊಳ್ಳುವಂತೆ ಸ್ಥಳೀಯರಿಗೆ ಇಸ್ರೇಲ್ ಸೇನೆ ಸೂಚಿಸಿ ಭಾರೀ ಆಕ್ರಮಣದ ಮುನ್ಸೂಚನೆ ನೀಡಿದೆ. `ರಫಾದಲ್ಲಿ ಆಶ್ರಯ ಪಡೆದಿರುವ ಸಾವಿರಾರು ನಾಗರಿಕರನ್ನು ರಕ್ಷಿಸುವ ಸೂಕ್ತ ಯೋಜನೆಯಿಲ್ಲದೆ ರಫಾದ ಮೇಲೆ ಭೂದಾಳಿಗೆ ಬ್ರಿಟನ್‍ನ ವಿರೋಧವಿದೆ. ಆದರೆ, ಇಸ್ರೇಲ್‍ಗೆ ಶಸ್ತ್ರಾಸ್ತ್ರ ಪೂರೈಸುವ ವಿಷಯದಲ್ಲಿ ನಮ್ಮ ಮತ್ತು ಅಮೆರಿಕದ ನಿಲುವುಗಳ ನಡುವೆ ವ್ಯತ್ಯಾಸವಿದೆ. ಇಸ್ರೇಲ್‍ಗೆ ಬ್ರಿಟನ್ ಒದಗಿಸುತ್ತಿರುವ ಶಸ್ತ್ರಾಸ್ತ್ರಗಳನ್ನು ಕಠಿಣ ಲೈಸೆನ್ಸಿಂಗ್ ವ್ಯವಸ್ಥೆ ನಿಯಂತ್ರಿಸುತ್ತದೆ. ಶಸ್ತ್ರಾಸ್ತ್ರ ಪೂರೈಕೆ ತಡೆ ಹಿಡಿಯುವುದಾಗಿ ರಾಜಕೀಯ ಹೇಳಿಕೆ ನೀಡಬಹುದು. ಆದರೆ ಅದರಿಂದ ಉಂಟಾಗುವ ಪರಿಣಾಮಗಳನ್ನೂ ಗಮನಿಸಬೇಕು. ಹೀಗೆ ಮಾಡಿದರೆ ಹಮಾಸ್‍ಗೆ ಅನುಕೂಲವಾಗುತ್ತದೆ. ಇದು ಸೂಕ್ತ ಕ್ರಮವಲ್ಲ ಎಂದು ನನಗನಿಸುತ್ತದೆ, ಯಾಕೆಂದರೆ ಶಸ್ತ್ರಾಸ್ತ್ರ ಪೂರೈಕೆ ಸ್ಥಗಿತಗೊಳಿಸುವ ಘೋಷಣೆ ಕದನ ವಿರಾಮ ಒಪ್ಪಂದದ ಮೇಲೆಯೂ ಪರಿಣಾಮ ಬೀರುತ್ತದೆ' ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News