ಮಾಲ್ದೀವ್ಸ್ ಮಿಲಿಟರಿಯಲ್ಲಿ ಭಾರತ ನೀಡಿದ ವಿಮಾನಗಳನ್ನು ನಿರ್ವಹಿಸಲು ಪೈಲಟ್‌ಗಳಿಲ್ಲ : ರಕ್ಷಣಾ ಸಚಿವ ಘಾಸನ್ ಮೌಮೂನ್
ಸಾಂದರ್ಭಿಕ ಚಿತ್ರ | Photo : NDTV
ಮಾಲೆ : ಮಾಲ್ದೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝ್ಝು ಅವರ ಆದೇಶದಂತೆ ಭಾರತೀಯ ರಕ್ಷಣಾ ಸಿಬ್ಬಂದಿ ದ್ವೀಪ ರಾಷ್ಟ್ರವನ್ನು ತೊರೆದ ನಂತರ, ಮಾಲ್ದೀವ್ಸ್ ಮಿಲಿಟರಿಯಲ್ಲಿ ಭಾರತವು ಕೊಡುಗೆಯಾಗಿ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳಿಲ್ಲ ಎಂಬುದನ್ನು ರಕ್ಷಣಾ ಸಚಿವ ಘಾಸನ್ ಮೌಮೂನ್ ಒಪ್ಪಿಕೊಂಡಿದ್ದಾರೆ.
ಇಲ್ಲಿನ ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಘಾಸನ್ ಮೌಮೂನ್ ಈ ವಿಷಯ ತಿಳಿಸಿದ್ದಾರೆ. ಎರಡು ಹೆಲಿಕಾಪ್ಟರ್ಗಳು ಮತ್ತು ಡಾರ್ನಿಯರ್ ವಿಮಾನಗಳನ್ನು ನಿರ್ವಹಿಸಲು ಮಾಲ್ಡೀವ್ಸ್ ನಲ್ಲಿರುವ ಭಾರತೀಯ ಸೈನಿಕರನ್ನು ಹಿಂದಕ್ಕೆ ಕಳುಹಿಸಿ, ಅವರ ಸ್ಥಾನಕ್ಕೆ ಭಾರತದಿಂದ ನಾಗರಿಕರನ್ನು ನೇಮಿಸುವ ಯೋಜನೆಯಲ್ಲಿ ಮಾಲ್ದೀವ್ಸ್ ಇದೆ ಎಂದು ಅವರು ತಿಳಿಸಿದರು.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಘಾಸನ್ ಮೌಮೂನ್, ಮಾಲ್ದೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್‌ಡಿಎಫ್) ಬಳಿ ಭಾರತೀಯ ವಿಮಾನಗಳನ್ನು ನಿರ್ವಹಿಸಬಲ್ಲ ಯಾವುದೇ ಪೈಲೆಟ್ ಗಳಿಲ್ಲ. ಭಾರತೀಯ ಸೇನೆಯೊಂದಿಗೆ ಒಪ್ಪಂದದಂತೆ ಕೆಲವು ಸೈನಿಕರು ತರಬೇತಿ ಪಡೆಯಲು ಪ್ರಾರಂಭಿಸಿದ್ದರೂ, ನಿರ್ವಹಣೆ ಸಾಧ್ಯವಾಗಿಲ್ಲ ಎಂದರು.
“ತರಬೇತಿಯು ವಿವಿಧ ಹಂತಗಳಲ್ಲಿದ್ದುದರಿಂದ ನಮ್ಮ ಪೈಲೆಟ್ಗಳಿಗೆ ಎಲ್ಲಾ ಹಂತವನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ಎರಡು ಹೆಲಿಕಾಪ್ಟರ್ಗಳು ಮತ್ತು ಡಾರ್ನಿಯರ್ ವಿಮಾನವನ್ನು ಹಾರಿಸಲು ಪರವಾನಗಿ ಪಡೆದ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಯಾವುದೇ ಪೈಲೆಟ್ ನಮ್ಮ ಪಡೆಯಲ್ಲಿಲ್ಲ” ಎಂದು ಘಾಸನ್ ಮೌಮೂನ್ ಹೇಳಿರುವುದಾಗಿ Adhadhu.com ನ್ಯೂಸ್ ಪೋರ್ಟಲ್ ವರದಿ ಮಾಡಿದೆ.
ಮೇ 10 ರೊಳಗೆ ದ್ವೀಪ ರಾಷ್ಟ್ರದಲ್ಲಿ ಮೂರು ವಾಯುಯಾನ ವೇದಿಕೆಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ಸೇನಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಚೀನಾ ಪರ ಒಲವಿರುವು ಮಾಲ್ದೀವ್ಸ್ ಅಧ್ಯಕ್ಷ ಮುಯಿಝ್ಝು ಒತ್ತಾಯಿಸಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ತೀವ್ರ ಬದಲಾವಣೆಯಿತು. ಮಾಲ್ದೀವ್ಸ್ ಸೂಚನೆಯಂತೆ ಭಾರತವು ಈಗಾಗಲೇ 76 ಸೇನಾ ಸಿಬ್ಬಂದಿಯನ್ನು ಹಿಂಪಡೆದಿದೆ.
ಮಾಲ್ದೀವ್ಸ್ನ ಸೆನಾಹಿಯಾ ಮಿಲಿಟರಿ ಆಸ್ಪತ್ರೆಯಲ್ಲಿರುವ ಭಾರತೀಯ ವೈದ್ಯರನ್ನು ವಾಪಾಸ್ ಕಳಿಸುವ ಯಾವುದೇ ಉದ್ದೇಶವನ್ನು ಮಾಲ್ದೀವ್ಸ್ ಸರ್ಕಾರ ಹೊಂದಿಲ್ಲ ಎಂದು ಮಾಲ್ದೀವ್ಸ್ ಮಾಧ್ಯಮ ವರದಿ ತಿಳಿಸಿದೆ.
ತರಬೇತಿಯನ್ನು ಪೂರ್ಣಗೊಳಿಸಲು ವಿಫಲವಾದ ಹೊರತಾಗಿಯೂ, ಭಾರತೀಯ ಸೈನಿಕರನ್ನು ವಾಪಾಸ್ ಕಳಿಸಿ, ಭಾರತೀಯ ನಾಗರಿಕನ್ನು ನೇಮಿಸುವ ಒಪ್ಪಂದವು ಸ್ಥಳೀಯ ಪೈಲಟ್‌ಗಳಿಗೆ ತರಬೇತಿ ನೀಡುವ ಯೋಜನೆಯನ್ನೂ ಒಳಗೊಂಡಿದೆ ಎಂದು ವಿದೇಶಾಂಗ ಸಚಿವ ಜಮೀರ್ ಶನಿವಾರ ಹೇಳಿದರು.