×
Ad

ಉತ್ತರ ಗಾಝಾ, ದಕ್ಷಿಣದ ರಫಾದತ್ತ ಮುನ್ನುಗ್ಗಿದ ಇಸ್ರೇಲ್ ಸೇನೆ

Update: 2024-05-13 21:36 IST

ಸಾಂದರ್ಭಿಕ ಚಿತ್ರ | Photo : PTI

ಗಾಝಾ: ಗಾಝಾದ ಉತ್ತರ ಪ್ರಾಂತವನ್ನು ಮರಳಿ ವಶಪಡಿಸಿಕೊಳ್ಳುವ ಜತೆಗೆ ದಕ್ಷಿಣ ಗಾಝಾದ ರಫಾ ನಗರದ ಮೇಲೆ ಆಕ್ರಮಣ ನಡೆಸುವ ಜಂಟಿ ಕಾರ್ಯಾಚರಣೆಯನ್ನು ಇಸ್ರೇಲ್ ಬಿರುಸುಗೊಳಿಸಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ರಫಾ ನಗರವನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಇಸ್ರೇಲ್‍ನ ಯುದ್ಧಟ್ಯಾಂಕ್ ಹಾಗೂ ಪದಾತಿ ದಳ ಮುಂದುವರಿಯುತ್ತಿದೆ ಎಂದು ವರದಿ ಹೇಳಿದೆ. ಗಾಝಾದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಸಾವಿರಾರು ಫೆಲೆಸ್ತೀನೀಯರು ಅತಂತ್ರ ಸ್ಥಿತಿಯಲ್ಲಿದ್ದು ಮಾನವೀಯ ಬಿಕ್ಕಟ್ಟು ಮತ್ತಷ್ಟು ಹದಗೆಡಲಿದೆ ಎಂದು ಮಾನವೀಯ ನೆರವು ವಿತರಿಸುವ ಸಂಸ್ಥೆಗಳು ಎಚ್ಚರಿಸಿವೆ. ಉತ್ತರ ಗಾಝಾದಲ್ಲಿ ಐದು ತಿಂಗಳ ಹಿಂದೆ ಹಮಾಸ್ ಅನ್ನು ಹಿಮ್ಮೆಟ್ಟಿಸಿದ ಬಳಿಕ ಅಲ್ಲಿಂದ ತನ್ನ ಪಡೆಗಳನ್ನು ಹಿಂಪಡೆಯಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಹಮಾಸ್ ಮತ್ತೆ ಒಗ್ಗೂಡುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ `ಅಂತಿಮ ಹಂತದ ಕಾರ್ಯಾಚರಣೆ'ಗೆ ಯೋಜನೆ ರೂಪಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಫೆಲೆಸ್ತೀನ್ ನಿರಾಶ್ರಿತರನ್ನು ನೆಲೆಗೊಳಿಸಲು 75 ವರ್ಷಗಳ ಹಿಂದೆ ನಿರ್ಮಿಸಲಾದ ಜಬಾಲಿಯಾ ಶಿಬಿರ ಪ್ರದೇಶದತ್ತ ಇಸ್ರೇಲ್ ಪಡೆ ಮುನ್ನುಗ್ಗುತ್ತಿದೆ. ಶಿಬಿರಗಳ ಮೇಲೆ ಟ್ಯಾಂಕ್‍ಗಳಿಂದ ಶೆಲ್‍ದಾಳಿ ನಡೆಯುತ್ತಿದ್ದು ವಾಯುದಾಳಿಯಲ್ಲಿ ಹಲವು ಮನೆಗಳು ನಾಶಗೊಂಡಿವೆ ಎಂದು ಮೂಲಗಳು ಹೇಳಿವೆ. ಜಬಾಲಿಯಾದ ಮೇಲೆ ರವಿವಾರ ರಾತ್ರಿ ನಡೆದ ದಾಳಿಯಲ್ಲಿ 20 ಫೆಲೆಸ್ತೀನೀಯರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವುದಾಗಿ ಗಾಝಾ ಆರೋಗ್ಯ ಇಲಾಖೆ ಹೇಳಿದೆ. ಗಾಝಾದ ಮತ್ತೊಂದು ತುದಿಯಲ್ಲಿರುವ ರಫಾ ನಗರದ ಪೂರ್ವ ಭಾಗದಲ್ಲಿ ಇಸ್ರೇಲ್ ವಾಯು ಮತ್ತು ಭೂದಾಳಿ ತೀವ್ರಗೊಳಿಸಿದ್ದು ವ್ಯಾಪಕ ಸಾವು-ನೋವು ಸಂಭವಿಸಿದೆ. ರಫಾದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಸಲಾಹುದ್ದೀನ್ ರಸ್ತೆಯನ್ನು ಬಂದ್ ಮಾಡಲಾಗಿದೆ. ಇಸ್ರೇಲ್ ಪಡೆ ರಫಾದ ಆಗ್ನೇಯದ ಭಾಗದಲ್ಲಿದ್ದು ಭಾರೀ ಸ್ಫೋಟದ ಸದ್ದು ಆಗಾಗ ಕೇಳಿಸುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ. ರಫಾದಿಂದ ಸ್ಥಳಾಂತರಗೊಳ್ಳುವಂತೆ ಒಂದು ವಾರದ ಹಿಂದೆ ಇಸ್ರೇಲ್ ಸೇನೆ ಆದೇಶಿಸಿದ ಬಳಿಕ ಸುಮಾರು 36,000 ಜನರು ರಫಾದಿಂದ ಸ್ಥಳಾಂತರಗೊಂಡಿದ್ದಾರೆ ಎಂದು ಗಾಝಾದಲ್ಲಿನ ವಿಶ್ವಸಂಸ್ಥೆಯ ನೆರವು ಏಜೆನ್ಸಿ ಯುಎನ್‍ಆರ್‍ಡಬ್ಲ್ಯೂಎ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News