Saudi Arabia | ರಿಯಾದ್ ವಿಮಾನ ನಿಲ್ದಾಣ ಕಾರ್ಯಾಚರಣೆ ಪುನರಾರಂಭಕ್ಕೆ ಸಿದ್ಧತೆ; ಏರ್ಪೋರ್ಟ್ ಬಳಸದಂತೆ ಹೌತಿಗಳ ಎಚ್ಚರಿಕೆ
Photo :X.com /AJEnglish
ರಿಯಾದ್: ಹೌತಿಗಳ ದಾಳಿಯಿಂದ ಸ್ಥಗಿತಗೊಂಡಿದ್ದ ಸೌದಿ ಅರೇಬಿಯಾದ ರಿಯಾದ್ ನ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರಾರಂಭಕ್ಕೆ ಸಿದ್ಧತೆ ನಡೆಸಲಾಗಿದೆ. ರವಿವಾರದಿಂದ ವಿಮಾನಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಟರ್ಮಿನಲ್ ಗಳನ್ನು ಮರುವಿಂಗಡಿಸಲಾಗಿದೆ ಎಂದು Aljazeera ವರದಿ ಮಾಡಿದೆ.
ಈ ನಡುವೆ, ವಿಮಾನ ನಿಲ್ದಾಣವನ್ನು ಸೇನಾ ಗುರಿಯಾಗಿ ಪರಿಗಣಿಸಿರುವುದಾಗಿ ಘೋಷಿಸಿರುವ ಯೆಮನ್ ನ ಹೌತಿಗಳು, ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಪ್ರಯಾಣಿಕರು ಅದನ್ನು ಬಳಸದಂತೆ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.
ಹೌತಿ ಸಂಘಟನೆಯ ಸೇನಾ ವಕ್ತಾರ ಯಾಹ್ಯಾ ಸರೀ ಅವರು ರವಿವಾರ ಈ ಎಚ್ಚರಿಕೆ ನೀಡಿದ್ದಾರೆ. ವಿಮಾನ ನಿಲ್ದಾಣ ಇನ್ನೂ ಸೇನಾ ಗುರಿಯಾಗಿದ್ದು, ಅದನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ಶನಿವಾರ ರಾತ್ರಿ ವಿಮಾನ ನಿಲ್ದಾಣದ ಆಡಳಿತವು X ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಣೆ ಹೊರಡಿಸಿತ್ತು. ರವಿವಾರದಿಂದ ಟರ್ಮಿನಲ್ 1 ಅನ್ನು ದೇಶೀಯ ವಿಮಾನಗಳಿಗಾಗಿ ಹಾಗೂ ಟರ್ಮಿನಲ್ 2 ಅನ್ನು ಸೌದಿ ಅರೇಬಿಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ಅಂತರರಾಷ್ಟ್ರೀಯ ವಿಮಾನಗಳಿಗಾಗಿ ಮೀಸಲಿಡಲಾಗಿದೆ ಎಂದು ತಿಳಿಸಿತ್ತು.
ಅಕ್ಟೋಬರ್ 10ರಂದು ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯ ಬಳಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ದಾಳಿಯ ಹೊಣೆಯನ್ನು ಹೌತಿಗಳು ಹೊತ್ತುಕೊಂಡಿದ್ದರು. ದಾಳಿಯಲ್ಲಿ 13 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಸೌದಿ ಅರೇಬಿಯದಲ್ಲಿ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಸುರಕ್ಷತಾ ಪರಿಶೀಲನೆಗಳ ಹಿನ್ನೆಲೆಯಲ್ಲಿ ಅಕ್ಟೋಬರ್ 12ರಂದು ಕಾರ್ಯಾಚರಣೆ ಸ್ಥಗಿತವನ್ನು ವಿಸ್ತರಿಸಲಾಗಿತ್ತು.
ಪ್ರಯಾಣಿಕರಿಗೆ ಸೂಚನೆ
ವಿಮಾನ ನಿಲ್ದಾಣದ ಕಾರ್ಯಾಚರಣೆ ಪುನರಾರಂಭದ ಹಿನ್ನೆಲೆಯಲ್ಲಿ, ಖಚಿತ ಟಿಕೆಟ್ ಹೊಂದಿರುವ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮೊದಲು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿ ಟಿಕೆಟ್ ನ ಸ್ಥಿತಿ ಹಾಗೂ ವಿಮಾನದ ವೇಳಾಪಟ್ಟಿಯನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ಸೌದಿ ಅರೇಬಿಯದ ಮೇಲಿನ ಒತ್ತಡ ಹೆಚ್ಚಿಸುವ ಉದ್ದೇಶದಿಂದ ಹೌತಿಗಳು ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಮೂಲಕ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕದ ಮಿತ್ರರಾಷ್ಟ್ರವಾಗಿರುವ ಸೌದಿ ಅರೇಬಿಯ ಯೆಮನ್ ನಲ್ಲಿ ತನ್ನ ಸೇನಾ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಕೆಂಪು ಸಮುದ್ರದ ಕರಾವಳಿಯ ಆಯಕಟ್ಟಿನ ಪ್ರದೇಶಗಳನ್ನು ಹೌತಿಗಳು ವಶಪಡಿಸಿಕೊಂಡ ಬಳಿಕ, ಯೆಮನ್ ನ ಸರ್ಕಾರದ ಪಡೆಗಳ ಪ್ರತಿದಾಳಿಗೆ ಸೌದಿ ಅರೇಬಿಯ ಬೆಂಬಲ ನೀಡುತ್ತಿದೆ.