ಮಾರ್ಕೊ ರೂಬಿಯೊ | Photo Credit : x  

ವಾಶಿಂಗ್ಟನ್, ಅ.24: ಕ್ಯೂಬಾದ ಕಮ್ಯುನಿಸ್ಟ್ ಸರಕಾರವನ್ನು ಕೊನೆಗೊಳಿಸಲು ಅಮೆರಿಕ ಯತ್ನಿಸುತ್ತಿರುವ ಬೆನ್ನಲ್ಲೇ, ಕ್ಯೂಬನ್ನರು ಅಮೆರಿಕದ ಗೂಢಚರ ಸಂಸ್ಥೆಗಳೊಂದಿಗೆ ಎಚ್ಚರಿಕೆಯಿಂದ ಸಂಪರ್ಕ ಸಾಧಿಸುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಸಾರ್ವಜನಿಕವಾಗಿ ಕರೆ ನೀಡಿದ್ದಾರೆ.

‘ಕ್ಯೂಬಾದಲ್ಲಿ ಧನಾತ್ಮಕ ಬದಲಾವಣೆ ತರಲು ಬಯಸುವವರಿಗೆ ಈಗಲೇ ಸರಿಯಾದ ಸಮಯ. ಈಡೇರದ ಭರವಸೆಗಳು, ಭ್ರಷ್ಟಾಚಾರ ಮತ್ತು ಕೆಲವೇ ಜನರ ಐಷಾರಾಮಿ ಜೀವನದಿಂದ ನಿರಾಶೆಗೊಂಡವರು, ಸಿಐಎ ಜೊತೆಗಿನ ಎಚ್ಚರಿಕೆಯ ಸಹಭಾಗಿತ್ವದ ಮೂಲಕ ತಾವು ಬಯಸುವ ಬದಲಾವಣೆ ತರಲು ಈ ಅವಕಾಶವನ್ನು ಬಳಸಿಕೊಳ್ಳಿ’ ಎಂದು ರೂಬಿಯೊ ಸಾಮಾಜಿಕ ಮಾಧ್ಯಮದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಆಸಕ್ತಿದಾಯಕ ಮಾಹಿತಿ ನೀಡಲು ಬಯಸುವವರಿಗೆ ಸ್ಪ್ಯಾನಿಷ್ ಭಾಷೆಯಲ್ಲಿ ಮಾರ್ಗದರ್ಶನ ನೀಡುವ ವಿಡಿಯೊವನ್ನು ಸಿಐಎ ‘ಎಕ್ಸ್‌’ನಲ್ಲಿ ಅಪ್‌ಲೋಡ್ ಮಾಡಿದೆ. ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾದರೆ, ಮೊದಲು ಅಧಿಕೃತ ಅಮೆರಿಕದ ಕಚೇರಿಗೆ ಖುದ್ದಾಗಿ ಭೇಟಿ ನೀಡುವಂತೆ ಪ್ರೋತ್ಸಾಹಿಸಿದೆ.

ಈ ಕರೆಯನ್ನು ಕ್ಯೂಬಾದ ಅಧಿಕಾರಿಗಳು ಲೇವಡಿ ಮಾಡಿದ್ದಾರೆ. ‘ಈಗ ಅಮೆರಿಕವು ಸಿಐಎಗಾಗಿ ಸಾರ್ವಜನಿಕ ನೇಮಕಾತಿಯ ಮೊರೆ ಹೋಗುತ್ತಿದೆ. ಟೂತ್‌ಪೇಸ್ಟ್ ಟ್ಯೂಬ್‌ನಂತೆ ತನ್ನ ಸೇವೆಗಳನ್ನು ಮಾರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದರೆ, ಆ ಸಂಸ್ಥೆಯೊಳಗೆ ಎಷ್ಟು ದೊಡ್ಡ ನಿರಾಶೆ ಅಥವಾ ದುಸ್ಥಿತಿ ಇರಬೇಕು?’ ಎಂದು ಕ್ಯೂಬಾದ ಉಪ ವಿದೇಶಾಂಗ ಸಚಿವ ಕಾರ್ಲೋಸ್ ಫೆರ್ನಾಂಡಿಸ್ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor