ಯುರೋಪ್ನ ಹಲವು ದೇಶಗಳಲ್ಲಿ ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ
ಫ್ರಾನ್ಸ್ ನಲ್ಲಿ ಸುಮಾರು 1,000 ಮಂದಿ ಬಂಧನ; ಮಿಲನ್ ನಲ್ಲಿ ಹೆಚ್ಚುವರಿ 500 ಸೈನಿಕರ ನಿಯೋಜನೆ
Photo: Reuters
ಲಂಡನ್: ಯುರೋಪ್ ನ ಹಲವು ದೇಶಗಳಲ್ಲಿ ಶನಿವಾರವೂ ಬೃಹತ್ ಪ್ರತಿಭಟನೆಗಳು ನಡೆದಿದ್ದು, ಫ್ರಾನ್ಸ್, ಇಟಲಿ, ಸ್ಪೇನ್, ಪೋರ್ಚುಗಲ್, ಅಲ್ಬೇನಿಯಾ ಮತ್ತು ಬೆಲ್ಜಿಯಂನಲ್ಲಿ ಲಕ್ಷಾಂತರ ಜನರು ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಕೆಲವು ಕಡೆ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೆ, ಇನ್ನು ಕೆಲವು ನಗರಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ನಡೆದವು. ಅಂಗಡಿಗಳ ಮೇಲೆ ದಾಳಿ, ಲೂಟಿ ಮತ್ತು ಬೆಂಕಿ ಹಚ್ಚಿದ ಘಟನೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾವಿರಾರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ, ಹಲವು ನಗರಗಳಲ್ಲಿ ನಿರ್ಬಂಧಗಳನ್ನು ವಿಧಿಸಿದ್ದಾರೆ.
ಫ್ರಾನ್ಸ್ ನಲ್ಲಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸುಮಾರು 1,000 ಮಂದಿಯನ್ನು ಬಂಧಿಸಲಾಗಿದೆ. ಇಟಲಿಯ ಮಿಲನ್ನಲ್ಲಿ ಕಳೆದ ವಾರಾಂತ್ಯದ ಹಿಂಸಾಚಾರ ಮರುಕಳಿಸದಂತೆ ಹೆಚ್ಚುವರಿಯಾಗಿ 500 ಸೈನಿಕರನ್ನು ನಿಯೋಜಿಸಲಾಗಿದೆ. ಬಾರ್ಸಿಲೋನಾದಲ್ಲಿ ಕೆಲವು ಪ್ರತಿಭಟನಾಕಾರರು ಅಂಗಡಿಗಳನ್ನು ಲೂಟಿ ಮಾಡಿ ಬೆಂಕಿ ಹಚ್ಚಿದರೆ, ರೋಮ್, ಟುರಿನ್, ಬ್ರಸೆಲ್ಸ್ ಮತ್ತು ಟಿರಾನಾದಲ್ಲಿ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಅಥವಾ ಜಲಫಿರಂಗಿ ಬಳಸಿದರು.
ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಕೈಗೆಟುಕದ ವಸತಿ ವೆಚ್ಚ, ಕಡಿಮೆ ವೇತನ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳ ಕುಸಿತ ಹಾಗೂ ಸರ್ಕಾರದ ನೀತಿಗಳ ವಿರುದ್ಧದ ಆಕ್ರೋಶ ಪ್ರತಿಭಟನೆಗಳಿಗೆ ಪ್ರಮುಖ ಕಾರಣಗಳಾಗಿವೆ. ಇವೆಲ್ಲವೂ ಒಂದೇ ಸಂಘಟಿತ ಚಳವಳಿಯ ಭಾಗವಲ್ಲದಿದ್ದರೂ, ಹಲವು ದೇಶಗಳಲ್ಲಿ ಮರುಕಳಿಸುತ್ತಿರುವ ಪ್ರತಿಭಟನೆಗಳು ಮತ್ತು ಹಿಂಸಾಚಾರ ಯುರೋಪ್ನ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿವೆ.
ಫ್ರಾನ್ಸ್: ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸುಮಾರು 1,000 ಮಂದಿ ಬಂಧನ
ಫ್ರಾನ್ಸ್ ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ಶನಿವಾರದ ಪ್ರತಿಭಟನೆಗಳಲ್ಲಿ ಸುಮಾರು 4.10 ಲಕ್ಷ ಜನರು ಪಾಲ್ಗೊಂಡಿದ್ದರು ಎಂದು ಅಲ್ಲಿನ ಆಂತರಿಕ ಸಚಿವಾಲಯ ಅಂದಾಜಿಸಿದೆ. ಕಾರ್ಮಿಕ ಸಂಘಟನೆಗಳ ಪ್ರಕಾರ, ಪ್ರತಿಭಟನಾಕಾರರ ಸಂಖ್ಯೆ ಸುಮಾರು 8 ಲಕ್ಷವಾಗಿತ್ತು.
ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗದಂತೆ ತಡೆಯಲು ಅಧಿಕಾರಿಗಳು ಸುಮಾರು 70,000 ಪೊಲೀಸರನ್ನು ನಿಯೋಜಿಸಿ, ಹಲವು ನಗರಗಳಲ್ಲಿ ನಿರ್ಬಂಧಗಳನ್ನು ವಿಧಿಸಿದ್ದರು. ಹಗಲಿನಲ್ಲಿ ಬಹುತೇಕ ಶಾಂತಿಯುತವಾಗಿದ್ದ ಪ್ರತಿಭಟನೆಗಳು ಸಂಜೆ ವೇಳೆಗೆ ಪ್ಯಾರಿಸ್ ಸೇರಿದಂತೆ ಹಲವು ನಗರಗಳಲ್ಲಿ ಘರ್ಷಣೆಗೆ ತಿರುಗಿದವು.
ಪ್ಯಾರಿಸ್ ನಲ್ಲಿ ಪೋರ್ಟ್ ದಿ ಇಟಲಿ ಪ್ರದೇಶದಿಂದ ಪೋರ್ಟ್ ದಿ ವಿನ್ಸೆನ್ಸ್ ಕಡೆಗೆ ಸಾಗಿದ ಮೆರವಣಿಗೆಯ ವೇಳೆ ಗಲಭೆ ನಿಯಂತ್ರಣ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಯಿತು. ಕೆಲವು ಪ್ರತಿಭಟನಾಕಾರರು ತಾತ್ಕಾಲಿಕ ಬ್ಯಾರಿಕೇಡ್ಗಳನ್ನು ನಿರ್ಮಿಸಿ ಪೊಲೀಸರತ್ತ ವಸ್ತುಗಳನ್ನು ಎಸೆದರು. ಮುಖ ಮುಚ್ಚಿಕೊಂಡಿದ್ದ ಯುವಕರ ಗುಂಪೊಂದು ಕಾರು ಮಾರಾಟ ಮಳಿಗೆಯ ಕಿಟಕಿಗಳನ್ನು ಒಡೆದುಹಾಕಿತು.
ಇದಕ್ಕೆ ಪ್ರತಿಯಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದರು.
ಮೆರವಣಿಗೆಯ ಹಿಂಭಾಗದಲ್ಲಿ ಹಲವು ಸಾವಿರ ತೀವ್ರಗಾಮಿ ಕಾರ್ಯಕರ್ತರು ಸೇರಿದ್ದರು. ಅವರಲ್ಲಿ ಸುಮಾರು 500 ಮಂದಿಯನ್ನು ಗಲಭೆಕೋರರು ಎಂದು ಗುರುತಿಸಲಾಗಿದೆ ಎಂದು ಆಂತರಿಕ ಸಚಿವ ಲಾರೆಂಟ್ ನುನೆಜ್ ಹೇಳಿರುವುದಾಗಿ ಎಎಫ್ಪಿ ವರದಿ ಮಾಡಿದೆ.
ಮಾರ್ಸೆಲ್ನಲ್ಲಿ ಕಸದ ತೊಟ್ಟಿಗಳಿಗೆ ಬೆಂಕಿ ಹಚ್ಚಿ, ಲೋಹದ ಹಾಳೆಗಳನ್ನು ಬಳಸಿ ರಸ್ತೆಗಳನ್ನು ಬಂದ್ ಮಾಡಲಾಯಿತು. ಬೋರ್ಡೊದಲ್ಲಿ ಕಪ್ಪು ಬಟ್ಟೆ ಧರಿಸಿ ಮುಖ ಮುಚ್ಚಿಕೊಂಡಿದ್ದ ಪ್ರತಿಭಟನಾಕಾರರು ಕಟ್ಟಡವೊಂದರ ಮೇಲಿದ್ದ ಫಲಕಗಳನ್ನು ತೆಗೆದು ರಸ್ತೆ ತಡೆ ನಿರ್ಮಿಸಿದರು. ಲಿಯಾನ್ನಲ್ಲಿ ಸ್ಥಳೀಯ ಆಡಳಿತ ನಿಷೇಧಿಸಿದ್ದ ಪ್ರದೇಶದಲ್ಲಿ ಪ್ರತಿಭಟನಾಕಾರರು ಸೇರಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಕಳೆದ ವಾರಾಂತ್ಯದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ, ಕಟ್ಟಡಗಳಿಗೆ ಬೆಂಕಿ ಹಚ್ಚಿದ ಘಟನೆಗಳಿಗೆ ಹೋಲಿಸಿದರೆ, ಈ ಬಾರಿ ಲೂಟಿ ಮತ್ತು ಆಸ್ತಿಪಾಸ್ತಿ ನಾಶದ ಪ್ರಮಾಣ ಕಡಿಮೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಈ ಹಿಂದೆ ಮಾನ್ಯತೆ ಪಡೆದ ಕಾರ್ಮಿಕ ಸಂಘಟನೆಗಳು ಆಯೋಜಿಸುವ ಪ್ರತಿಭಟನೆಗಳಿಗೆ ಮಾತ್ರ ಅನುಮತಿ ನೀಡುವ ಆದೇಶ ಹೊರಡಿಸಿದ್ದರು. ಇತ್ತೀಚಿನ ದಿನಗಳಲ್ಲಿ ಧ್ವಂಸ, ಬೆಂಕಿ ಹಚ್ಚುವಿಕೆ ಮತ್ತು ಲೂಟಿ ಪ್ರಕರಣಗಳಲ್ಲಿ ಬಂಧಿತರಾದ ನೂರಾರು ಮಂದಿಯ ವಿಚಾರಣೆಯನ್ನು ತ್ವರಿತಗೊಳಿಸಲಾಗಿದೆ.
ಇಟಲಿ: ಮಿಲನ್ನಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ
ಇಟಲಿಯ ಮಿಲನ್, ರೋಮ್ ಮತ್ತು ಟುರಿನ್ ಸೇರಿದಂತೆ ಹಲವು ನಗರಗಳಲ್ಲಿ ಪ್ರತಿಭಟನೆಗಳು ನಡೆದವು. ಬೆಲೆ ಏರಿಕೆ, ಕಡಿಮೆ ವೇತನ, ಸಾರ್ವಜನಿಕ ಸೇವೆಗಳು, ರಕ್ಷಣಾ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ಮುಖ್ಯವಾಗಿ ಯುವಕರು ಪ್ರತಿಭಟಿಸಿದರು.
ಕಳೆದ ವಾರಾಂತ್ಯದಲ್ಲಿ ನಡೆದ ಲೂಟಿ ಮತ್ತು ಘರ್ಷಣೆಗಳ ಹಿನ್ನೆಲೆಯಲ್ಲಿ ಮಿಲನ್ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ನಗರದಲ್ಲಿ ಹೆಚ್ಚುವರಿಯಾಗಿ 500 ಸೈನಿಕರನ್ನು ನಿಯೋಜಿಸುವುದಾಗಿ ಘೋಷಿಸಿದ್ದಾರೆ. ಈಗಾಗಲೇ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೂರಾರು ಸೈನಿಕರ ಜೊತೆಗೆ ಈ ಪಡೆ ಕಾರ್ಯನಿರ್ವಹಿಸಲಿದೆ.
ಸಂಭಾವ್ಯ ಹಿಂಸಾಚಾರ ತಡೆಯಲು ಡ್ರೋನ್ಗಳ ಮೂಲಕ ನಿಗಾ, ರೈಲು ನಿಲ್ದಾಣಗಳಲ್ಲಿ ತಪಾಸಣೆ ಮತ್ತು ತ್ವರಿತ ಪ್ರತಿಕ್ರಿಯಾ ಪಡೆಗಳನ್ನು ಬಳಸಲಾಯಿತು. ಐಷಾರಾಮಿ ಮಳಿಗೆಗಳು ಸೇರಿದಂತೆ ಪ್ರಮುಖ ವ್ಯಾಪಾರ ಸಂಸ್ಥೆಗಳು ತಮ್ಮ ಅಂಗಡಿಗಳ ಕಿಟಕಿಗಳಿಗೆ ರಕ್ಷಣಾತ್ಮಕ ಫಲಕಗಳನ್ನು ಅಳವಡಿಸಿಕೊಂಡವು. ಕೆಲವು ಅಂಗಡಿಗಳು ಪುನಃ ತೆರೆದರೂ, ಆ್ಯಪಲ್ ಮಳಿಗೆ ಮುಚ್ಚಿಯೇ ಇತ್ತು.
ಮಿಲನ್ನ ಮೆರವಣಿಗೆ ಬಹುತೇಕ ಶಾಂತಿಯುತವಾಗಿತ್ತು. ಪ್ರತಿಭಟನಾಕಾರರು ಮೆಲೋನಿ ವಿರುದ್ಧ ಘೋಷಣೆಗಳನ್ನು ಕೂಗಿ, ಸರ್ಕಾರದ ನೀತಿಗಳನ್ನು ಟೀಕಿಸುವ ಫಲಕಗಳನ್ನು ಪ್ರದರ್ಶಿಸಿದರು. ಇಂಧನ ವೆಚ್ಚದ ಏರಿಕೆಯನ್ನು ಖಂಡಿಸಲು ಕೆಲವರು ಇಟಲಿಯ ಇಂಧನ ನಿಯಂತ್ರಣ ಸಂಸ್ಥೆಯ ಕಚೇರಿ ಎದುರು ಗೊಬ್ಬರ ಸುರಿದು, ವಿದ್ಯುತ್ ಬಿಲ್ನ ದೊಡ್ಡ ಮಾದರಿಗೆ ಬೆಂಕಿ ಹಚ್ಚಿದರು.
ಆದರೆ, ರೋಮ್ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದರು. ಕೆಲವರು ಪೊಲೀಸರತ್ತ ಬಾಟಲಿಗಳು ಮತ್ತು ಪಟಾಕಿಗಳನ್ನು ಎಸೆದರು. ರಸ್ತೆ ಫಲಕಗಳಿಗೂ ಹಾನಿ ಮಾಡಲಾಯಿತು.