Thailand | ಫುಕೆಟ್ನಲ್ಲಿ ಭೀಕರ ಅಗ್ನಿ ಅವಘಡ: 11 ಮೃತ್ಯು, 16 ಜನರಿಗೆ ಗಾಯ
Photo: X/ Thai Enquirer @ThaiEnquirer
ಫುಕೆಟ್: ಥೈಲ್ಯಾಂಡ್ ನ ಜನಪ್ರಿಯ ಪ್ರವಾಸಿ ದ್ವೀಪ ಫುಕೆಟ್ ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ. ಮೃತಪಟ್ಟವರು ಮತ್ತು ಗಾಯಗೊಂಡವರಲ್ಲಿ ಪ್ರವಾಸಿಗರು ಯಾರೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಫುಕೆಟ್ ನ ಪಶ್ಚಿಮ ಕರಾವಳಿಯ ಜನಪ್ರಿಯ ಪಟಾಂಗ್ ಬೀಚ್ ಸಮೀಪದ ಪಟ್ಟಣ ಪ್ರದೇಶದಲ್ಲಿರುವ ವಾಹನ ಬಾಡಿಗೆ ವ್ಯವಹಾರದ ಕಟ್ಟಡದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿ ಅಕ್ಕಪಕ್ಕದ ಹಲವು ಕಟ್ಟಡಗಳಿಗೂ ವ್ಯಾಪಿಸಿದೆ.
ಸೋಮವಾರ ಬೆಳಗಿನ ಜಾವ 3.17ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡ 16 ಮಂದಿಯಲ್ಲಿ 15 ಮಂದಿ ಥಾಯ್ ಪ್ರಜೆಗಳಾಗಿದ್ದು, ಒಬ್ಬರು ಮ್ಯಾನ್ಮಾರ್ ಪ್ರಜೆಯಾಗಿದ್ದಾರೆ. ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಪೈಕಿ ಪ್ರವಾಸಿಗರು ಯಾರೂ ಇಲ್ಲ ಎಂದು ಪೊಲೀಸರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಅಗ್ನಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ.
ಬ್ಯಾಂಕಾಕ್ ನ ಬಾರ್‌ವೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 27 ಮಂದಿ ಮೃತಪಟ್ಟ ನಾಲ್ಕು ತಿಂಗಳ ಬಳಿಕ ಥಾಯ್ಲೆಂಡ್ ನಲ್ಲಿ ಮತ್ತೊಂದು ಭೀಕರ ಅಗ್ನಿ ದುರಂತ ಸಂಭವಿಸಿದೆ.