ಭಾರತದ ಮೇಲೆ ಶೇ. 100ರಷ್ಟು ಸುಂಕದ ಬೆದರಿಕೆಗೆ ಟ್ರಂಪ್ ತಾತ್ಕಾಲಿಕ ತಡೆ
► ರಷ್ಯಾ ವಿರುದ್ಧದ ನಿರ್ಬಂಧಗಳ ಜಾರಿ ಅಮಾನತು ► ಭಾರತ, ಚೀನಾಕ್ಕೆ ನಿರಾಳತೆ
ಡೊನಾಲ್ಡ್ ಟ್ರಂಪ್ (Photo: PTI)
ಹೊಸದಿಲ್ಲಿ: ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತ ಸೇರಿದಂತೆ ಹಲವು ದೇಶಗಳ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸಲು ಅವಕಾಶ ಕಲ್ಪಿಸಿದ್ದ ನಿರ್ಬಂಧಗಳ ಜಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ತಡೆ ನೀಡಿದ್ದಾರೆ. ಇದರಿಂದ ಭಾರತ ಮತ್ತು ಚೀನಾಕ್ಕೆ ನಿರಾಳತೆ ದೊರೆತಿದೆ.
ರಷ್ಯಾ ಸಂಬಂಧಿತ ನಿರ್ಬಂಧಗಳು ಮತ್ತು ಸುಂಕಗಳ ಅನ್ವಯವನ್ನು ಸಡಿಲಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.
‘ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026’ ಅಡಿಯಲ್ಲಿ ನಿರ್ಬಂಧಗಳು ಜಾರಿಗೆ ಬರಲು ಒಂದು ದಿನ ಬಾಕಿ ಇರುವಾಗ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾಯಿದೆಯ ಪ್ರಕಾರ, ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ದೇಶಗಳ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸಲು ಅವಕಾಶವಿತ್ತು. ಅಕ್ಟೋಬರ್ 18ರಂದು ಈ ಸಂಬಂಧದ ಗಡುವು ಮುಕ್ತಾಯಗೊಳ್ಳಬೇಕಿತ್ತು.
‘ಈ ಕಾಯಿದೆಯಡಿ ಬರುವ ನಿರ್ಬಂಧಗಳು, ನಿಯಂತ್ರಣಗಳು ಮತ್ತು ಸುಂಕಗಳ ಅನ್ವಯವನ್ನು ಸಡಿಲಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ವಿನಾಯಿತಿ ನೀಡುವುದು ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿದೆ ಎಂದು ಕಾಂಗ್ರೆಸ್ ಗೆ ಪ್ರಮಾಣಪತ್ರ ಸಲ್ಲಿಸಿದ್ದೇನೆ’ ಎಂದು ಟ್ರಂಪ್ ಕಾರ್ಯನಿರ್ವಾಹಕ ಆದೇಶದಲ್ಲಿ ತಿಳಿಸಿದ್ದಾರೆ.
ಆದರೆ, ಈ ಆದೇಶವು ನಿರ್ಬಂಧಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವುದಿಲ್ಲ. ಅವುಗಳ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುತ್ತದೆ. ಭವಿಷ್ಯದಲ್ಲಿ ಅಗತ್ಯವೆಂದು ಕಂಡುಬಂದರೆ ಮತ್ತೆ ಜಾರಿಗೆ ತರಲು ಅವಕಾಶವಿದೆ.
ರಷ್ಯಾದ ಆದಾಯಕ್ಕೆ ಕಡಿವಾಣದ ಉದ್ದೇಶ
ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸುತ್ತಿರುವ ಆರ್ಥಿಕ ಸಂಪನ್ಮೂಲಗಳನ್ನು ಕಡಿತಗೊಳಿಸುವುದು ಈ ಕಾಯಿದೆಯ ಉದ್ದೇಶ. ರಷ್ಯಾದ ಅಧಿಕಾರಿಗಳು, ಬ್ಯಾಂಕುಗಳು, ಇಂಧನ ವಲಯದ ಸಂಸ್ಥೆಗಳು ಮತ್ತು ಮಾಸ್ಕೋದ ಸೇನಾ ಕಾರ್ಯಾಚರಣೆಗಳಿಗೆ ನೆರವು ನೀಡುವ ವಿದೇಶಿ ಘಟಕಗಳ ವಿರುದ್ಧ ನಿರ್ಬಂಧ ವಿಧಿಸಲು ಇದು ಅವಕಾಶ ಕಲ್ಪಿಸುತ್ತದೆ.
ರಷ್ಯಾದ ಕಚ್ಚಾ ತೈಲವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುವ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ಸೇರಿದಂತೆ ದೇಶಗಳಿಂದ ಬರುವ ಸರಕುಗಳ ಮೇಲೆ ಶೇ. 100ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಟ್ರಂಪ್ಗೆ ನೀಡುವ ಪ್ರಸ್ತಾವವೂ ಇದರಲ್ಲಿತ್ತು. ರಷ್ಯಾದಿಂದ ಅಮೆರಿಕಕ್ಕೆ ಆಮದಾಗುವ ಇಂಧನ ಉತ್ಪನ್ನಗಳ ಮೇಲೆ ಶೇ 500ರಷ್ಟು ಸುಂಕ ವಿಧಿಸುವ ಅವಕಾಶವೂ ಕಾಯಿದೆಯಲ್ಲಿದೆ.
ಭಾರತದ ಮೇಲೆ ಪರಿಣಾಮ
ಭಾರತದ ಸರಕುಗಳ ಮೇಲೆ ಶೇ. 100ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರೆ, ಈಗಾಗಲೇ ಜಾರಿಯಲ್ಲಿರುವ ಸುಂಕದ ಹೊರೆ ಮತ್ತಷ್ಟು ಹೆಚ್ಚುತ್ತಿತ್ತು. ಬಲವಂತದ ದುಡಿಮೆಯಿಂದ ತಯಾರಿಸಿದ ಸರಕುಗಳ ಆಮದನ್ನು ತಡೆಯಲು ಸಾಕಷ್ಟು ಕ್ರಮ ಕೈಗೊಂಡಿಲ್ಲ ಎಂಬ ಕಾರಣಕ್ಕೆ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಅಮೆರಿಕ ಈಗಾಗಲೇ ಶೇ. 10ರಷ್ಟು ದಂಡನಾತ್ಮಕ ಸುಂಕ ವಿಧಿಸುತ್ತಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷ ರಷ್ಯಾದ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತದಿಂದ ಆಮದಾಗುವ ಸರಕುಗಳ ಮೇಲೆ ಟ್ರಂಪ್ ಹೆಚ್ಚುವರಿ ಶೇ. 25ರಷ್ಟು ಸುಂಕ ವಿಧಿಸಿದ್ದರು. ಪ್ರತೀಕಾರದ ಕ್ರಮವಾಗಿ ಮತ್ತೊಂದು ಶೇ. 25ರಷ್ಟು ಸುಂಕವನ್ನೂ ವಿಧಿಸಲಾಗಿತ್ತು. ಆದರೆ, ಫೆಬ್ರುವರಿ 2026ರಲ್ಲಿ ಅಮೆರಿಕ–ಭಾರತ ವ್ಯಾಪಾರ ಚೌಕಟ್ಟಿನ ಭಾಗವಾಗಿ ಹೆಚ್ಚುವರಿ ಸುಂಕಗಳನ್ನು ತೆಗೆದುಹಾಕಲಾಗಿತ್ತು. ಪರಸ್ಪರ ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿತ್ತು.
ಇಂಧನ ಭದ್ರತೆಗೆ ಭಾರತ ಬದ್ಧ
ರಷ್ಯಾ ವಿರುದ್ಧದ ನಿರ್ಬಂಧಗಳ ಮಸೂದೆಯನ್ನು ಅಮೆರಿಕದ ಕಾಂಗ್ರೆಸ್ ಅಂಗೀಕರಿಸಿದ ಸಂದರ್ಭದಲ್ಲಿ ಭಾರತ ತನ್ನ ವ್ಯಾಪಾರ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿತ್ತು.
‘1.4 ಶತಕೋಟಿ ಜನರಿಗೆ ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ಭಾರತ ಬದ್ಧವಾಗಿದೆ. ವಿವಿಧ ಮೂಲಗಳಿಂದ ಇಂಧನ ಪಡೆಯುವ ಮೂಲಕ ಮತ್ತು ಮಾರುಕಟ್ಟೆಯ ಬದಲಾದ ಪರಿಸ್ಥಿತಿಗಳಿಗೆ ಅನುಗುಣವಾಗಿ ತನ್ನ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದನ್ನು ಮುಂದುವರಿಸಲಿದೆ’ ಎಂದು ವಿದೇಶಾಂಗ ಸಚಿವಾಲಯ ಹೇಳಿತ್ತು.
ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕದ ವಿವಿಧ ಪ್ರತಿನಿಧಿಗಳೊಂದಿಗೆ ರಷ್ಯಾದೊಂದಿಗಿನ ವ್ಯಾಪಾರದ ಕುರಿತು ಉನ್ನತ ಮಟ್ಟದ ಮಾತುಕತೆ ನಡೆಸಲಾಗಿದೆ. ಈ ಬೆಳವಣಿಗೆ ದ್ವಿಪಕ್ಷೀಯ ಸಂಬಂಧಗಳ ಮೇಲೆ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಇಂಧನ ಮಾರುಕಟ್ಟೆಯ ಮೇಲೂ ಬೀರಬಹುದಾದ ಪರಿಣಾಮಗಳನ್ನು ಅಮೆರಿಕಕ್ಕೆ ಸ್ಪಷ್ಟಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿತ್ತು.
ಪುಟಿನ್ ಜತೆ ಟ್ರಂಪ್ ನಿಕಟತೆ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಟ್ರಂಪ್ ಬಾಂಧವ್ಯ ಸುಧಾರಿಸಿಕೊಳ್ಳುತ್ತಿರುವ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಬಹಿರಂಗವಾಗಿ ಟೀಕಿಸುತ್ತಿರುವ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿದೆ.
ರಷ್ಯಾದಿಂದ ಅಮೆರಿಕಕ್ಕೆ ಡೀಸೆಲ್ ಪೂರೈಕೆ ಮಾಡುವ ಕುರಿತು ಪುಟಿನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಟ್ರಂಪ್ ಕಳೆದ ವಾರ ಘೋಷಿಸಿದ್ದರು. ಅದರಂತೆ ರಷ್ಯಾ ತಕ್ಷಣವೇ 3 ಲಕ್ಷ ಟನ್ ಗಿಂತಲೂ ಹೆಚ್ಚು ಡೀಸೆಲ್ ಪೂರೈಸಲಿದ್ದು, ಮುಂದಿನ ತಿಂಗಳುಗಳಲ್ಲಿ ಮತ್ತಷ್ಟು ಪ್ರಮಾಣದ ಡೀಸೆಲ್ ರವಾನೆಯಾಗಲಿದೆ ಎಂದು ಅವರು ತಿಳಿಸಿದ್ದರು.
ಈ ಒಪ್ಪಂದವನ್ನು ಟೀಕಿಸಿರುವ ಝೆಲೆನ್ಸ್ಕಿ, ಇದನ್ನು ಪಾಲುದಾರರಿಗೆ ತಕ್ಕುದಲ್ಲದ ಮತ್ತು ದುರ್ಬಲ ನಿರ್ಧಾರ ಎಂದು ಕರೆದಿದ್ದಾರೆ. ಉಕ್ರೇನ್ ಮೇಲೆ ದಾಳಿ ನಡೆಸುವ ಮೂಲಕ ಮಾಸ್ಕೊ ತನ್ನ ‘ಕೃತಜ್ಞತೆ’ಯನ್ನು ವ್ಯಕ್ತಪಡಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದ ಮಾಡಿಕೊಳ್ಳುವಲ್ಲಿ ಝೆಲೆನ್ಸ್ಕಿ ಅಸಮರ್ಥರಾಗಿದ್ದಾರೆ ಎಂದು ಟ್ರಂಪ್ ಟೀಕಿಸಿದ್ದಾರೆ. ಉಕ್ರೇನ್ ಗೆ ಹೊಸ ಅಧ್ಯಕ್ಷರ ಅಗತ್ಯವಿದೆ ಎಂದೂ ಹೇಳಿದ್ದಾರೆ.
‘ಒಪ್ಪಂದ ಮಾಡಿಕೊಳ್ಳಬಲ್ಲ ಹೊಸ ನಾಯಕರನ್ನು ಕಂಡುಕೊಳ್ಳುವಂತೆ ನಾನು ಸಲಹೆ ನೀಡುತ್ತೇನೆ. ಆದರೆ, ಏನೋ ಕಾರಣದಿಂದ ಝೆಲೆನ್ಸ್ಕಿ ಹಾಗೆ ಮಾಡುವುದಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.