ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ಭಾರತ ಆಗ್ರಹ: ಹಡಗುಗಳು, ನಾಗರಿಕರ ಮೇಲಿನ ದಾಳಿಗೆ ಖಂಡನೆ
ಹರೀಶ್ ಪರ್ವತನೇನಿ | Photo Credit : PTI
ವಿಶ್ವಸಂಸ್ಥೆ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತ, ನಾಗರಿಕ ಮೂಲಸೌಕರ್ಯಗಳು, ವಾಣಿಜ್ಯ ಹಡಗುಗಳು ಮತ್ತು ನಾವಿಕರ ಮೇಲಿನ ಸರಣಿ ದಾಳಿಗಳನ್ನು ಬಲವಾಗಿ ಖಂಡಿಸಿದೆ.
ಗುರುವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯದ ಪರಿಸ್ಥಿತಿಯ ಕುರಿತು ನಡೆದ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ `ಮಧ್ಯಪ್ರಾಚ್ಯದ ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯಲ್ಲಿ ಭಾರತಕ್ಕೆ ಹೆಚ್ಚಿನ ಹಿತಾಸಕ್ತಿಯಿದೆ. ಮಧ್ಯಪ್ರಾಚ್ಯದ ಜನರಿಗೆ ಯಥಾಸ್ಥಿತಿ ಮತ್ತು ಶಾಶ್ವತ ಶಾಂತಿಯ ಅಗತ್ಯವಿದೆ. ರಾಜತಾಂತ್ರಿಕತೆಯ ಮೂಲಕ ಸಂಘರ್ಷಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದು ಭಾರತದ ದೃಢ ನಿಲುವಾಗಿದೆ' ಎಂದರು.
ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗಳನ್ನು ಪರ್ವತನೇನಿ ಖಂಡಿಸಿದರು. ಸೌದಿ ಅರೇಬಿಯಾದ ಸಾರ್ವಭೌಮತ್ವದ ರಕ್ಷಣೆಯಲ್ಲಿ ಭಾರತವು ಅಲ್ಲಿನ ಸರಕಾರ ಮತ್ತು ಜನರೊಂದಿಗೆ ಸಂಪೂರ್ಣವಾಗಿ ಬೆಂಬಲವಾಗಿ ನಿಲ್ಲುತ್ತದೆ. ವಾಣಿಜ್ಯ ಹಡಗುಗಳು, ನಾವಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ತಕ್ಷಣವೇ ನಿಲ್ಲಬೇಕು. ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಜಲಮಾರ್ಗಗಳಲ್ಲಿ ನೌಕಾಯಾನದ ಸ್ವಾತಂತ್ರ್ಯ ಹಾಗೂ ಸುರಕ್ಷಿತ ವಾಣಿಜ್ಯ ವ್ಯಾಪಾರಕ್ಕೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.
ಇಂತಹ ದಾಳಿಗಳು ಹೆಚ್ಚುತ್ತಿರುವ ಬೆನ್ನಲ್ಲೇ, ಕಳೆದ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನೇಪಥ್ಯದಲ್ಲಿ ಭಾರತ ಮತ್ತು ಲಿಬೇರಿಯಾ ಜಂಟಿಯಾಗಿ `ನೌಕಾಯಾನ ಮತ್ತು ನಾವಿಕರ ಭದ್ರತೆ ಹಾಗೂ ಸುರಕ್ಷತೆಗಾಗಿ ಸ್ನೇಹಿತರ ಗುಂಪು' ಅನ್ನು ಪ್ರಾರಂಭಿಸಿದವು. 23 ಸದಸ್ಯ ರಾಷ್ಟ್ರಗಳು ಈ ಉಪಕ್ರಮಕ್ಕೆ ಸೇರ್ಪಡೆಗೊಂಡಿದ್ದು, ಮರುಕಳಿಸುವ ದಾಳಿಗಳನ್ನು ತಡೆಯಲು ಮತ್ತು ನಾವಿಕರ ಹಕ್ಕುಗಳನ್ನು ರಕ್ಷಿಸಲು ಸಮನ್ವಯವನ್ನು ಸುಧಾರಿಸಲು ಸಿದ್ಧವಾಗಿವೆ ಎಂದು ಪರ್ವತನೇನಿ ತಿಳಿಸಿದರು.
ಯಮನ್ ವಿಷಯದಲ್ಲಿ, ಭಾರತವು ಆ ದೇಶದ ಐಕ್ಯತೆ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ ಹಾಗೂ ಅದರ ಆಂತರಿಕ ವ್ಯವಹಾರಗಳಲ್ಲಿನ ಹಸ್ತಕ್ಷೇಪವನ್ನು ತಿರಸ್ಕರಿಸಿದೆ. ಸಮುದ್ರಯಾನ ಮತ್ತು ನಾವಿಕರ ಮೇಲಿನ ದಾಳಿಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಬಾಬ್ ಅಲ್-ಮಂದೇಬ್ ಜಲಸಂಧಿ ಮತ್ತು ದಕ್ಷಿಣ ಕೆಂಪು ಸಮುದ್ರದ ರಕ್ಷಣೆಯು ಒಂದು ಹಂಚಿಕೆಯ ಅಂತಾರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಜಾಗತಿಕ ಹಿತಾಸಕ್ತಿಯಾಗಿದೆ' ಎಂದು ಪರ್ವತನೇನಿ ಹೇಳಿದರು.