×
Ad

ಇರಾನ್‍ನಿಂದ ತೈಲ ಖರೀದಿಸಿದರೆ ಆರ್ಥಿಕ ದಿಗ್ಬಂಧನ: ಟ್ರಂಪ್ ಎಚ್ಚರಿಕೆ

Update: 2025-05-02 09:00 IST

ದುಬೈ: ಇರಾನ್‍ನಿಂದ ಯಾವುದೇ ದೇಶಗಳು ತೈಲ ಖರೀದಿಸಿದರೆ ಅಂಥ ರಾಷ್ಟ್ರಗಳ ವಿರುದ್ಧ ಆರ್ಥಿಕ ದಿಗ್ಬಂಧನ ಜಾರಿಗೊಳಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಇರಾನ್‍ನ ಕ್ಷಿಪ್ರಗತಿಯ ಅಣ್ವಸ್ತ್ರ ಯೋಜನೆ ಬಗೆಗಿನ ಮಾತುಕತೆಗಳನ್ನು ಮುಂದೂಡಿದ ಬೆನ್ನಲ್ಲೇ ಟ್ರಂಪ್ ಈ ಸಂದೇಶ ರವಾನಿಸಿದ್ದಾರೆ.

"ಇರಾನ್‍ನಿಂದ ತೈಲ ಅಥವಾ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಖರೀದಿಸುವವರು ಇದೀಗ ಸ್ಥಗಿತಗೊಳಿಸಬೇಕು" ಎಂದು ಸಾಮಾಜಿಕ ಜಾಲತಾಣ ಪೋಸ್ಟ್‍ನಲ್ಲಿ ಟ್ರಂಪ್ ಹೇಳಿದ್ದಾರೆ. ಇರಾನ್‍ನಿಂದ ಈ ಉತ್ಪನ್ನಗಳನ್ನು ಯಾವುದೇ ದೇಶ ಅಥವಾ ವ್ಯಕ್ತಿಗಳು ಖರೀದಿಸಿದಲ್ಲಿ ಅವರು ಅಮೆರಿಕದ ಜತೆ ವ್ಯವಹಾರ ನಡೆಸಲಾಗದು" ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ವಾರಾಂತ್ಯದಲ್ಲಿ ನಡೆಸಲು ಉದ್ದೇಶಿಸಿದ್ದ ಅಣ್ವಸ್ತ್ರ ಸಂಧಾನ ಮಾತುಕತೆಯನ್ನು ಮುಂದೂಡಲಾಗಿದೆ ಎಂದು ಒಮನ್ ಪ್ರಕಟಿಸಿದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ. ಒಮನ್ ವಿದೇಶಾಂಗ ಸಚಿವ ಬದ್ರ್ ಅಲ್ ಬುಸೈದಿ ಎಕ್ಸ್‍ನಲ್ಲಿ ನೀಡಿರುವ ಆನ್‍ಲೈನ್ ಸಂದೇಶದಲ್ಲಿ ಈ ಘೋಷಣೆ ಮಾಡಲಾಗಿದೆ.

ಮೇ 3ರಂದು ನಡೆಸಲು ಉದ್ದೇಶಿಸಿ ಅಮೆರಿಕ- ಇರಾನ್ ಮಾತುಕತೆಯನ್ನು ಮುಂದೂಡಲಾಗಿದೆ. ಪರಸ್ಪರರು ಒಪ್ಪಿಕೊಂಡ ಹೊಸ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ವಿವರಿಸಿದ್ದಾರೆ. ಇದುವರೆಗೆ ಮೂರು ಸುತ್ತಿನ ಮಾತುಕತೆಗಳ ಮಧ್ಯಸ್ಥಿಕೆ ವಹಿಸಿದ್ದ ಅಲ್ ಬುಸೈದಿ ಹೆಚ್ಚಿನ ವಿವರ ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News