ತುರ್ಕಿಯೆ–ಖತರ್ ನಡುವೆ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ; ಮಿಲಿಟರಿ ಸಹಕಾರ ವಿಸ್ತರಣೆಗೆ ಉಭಯ ದೇಶಗಳ ಒಲವು
ಗಲ್ಫ್ ನಲ್ಲಿ ಶಾಂತಿ ಸ್ಥಾಪನೆಗೆ ಜಂಟಿ ಪ್ರಯತ್ನ: ಎರ್ಡೋಗನ್
Photo Credit : Reuters
ಇಸ್ತಾಂಬುಲ್, ನ. 13: ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಭದ್ರತಾ ಆತಂಕಗಳ ನಡುವೆ ತುರ್ಕಿಯೆ ಮತ್ತು ಖತರ್ ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ಶುಕ್ರವಾರ ಇಸ್ತಾಂಬುಲ್ ನಲ್ಲಿ ತುರ್ಕಿಯೆ ಅಧ್ಯಕ್ಷ ತಯ್ಯಿಪ್ ಎರ್ಡೋಗನ್ ಮತ್ತು ಖತರ್ ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ನಡುವಿನ ಸಭೆಯ ಬಳಿಕ ಈ ಒಪ್ಪಂದ ಏರ್ಪಟ್ಟಿದೆ ಎಂದು Aljazeera ವರದಿ ಮಾಡಿದೆ.
ಗಲ್ಫ್ ನಲ್ಲಿ ಮತ್ತೆ ಯುದ್ಧ ಮರುಕಳಿಸುವುದನ್ನು ತಡೆಯಲು, ಸಂವಾದಕ್ಕೆ ವೇದಿಕೆ ಕಲ್ಪಿಸಲು ಮತ್ತು ಶಾಂತಿ ಸ್ಥಾಪಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ ಎಂದು ಎರ್ಡೋಗನ್ ಹೇಳಿದ್ದಾರೆ. ಈ ಕುರಿತು ತುರ್ಕಿಯೆ ಅಧ್ಯಕ್ಷೀಯ ಕಚೇರಿ 'ಎಕ್ಸ್'ನಲ್ಲಿ ಹೇಳಿಕೆ ಪ್ರಕಟಿಸಿದೆ.
ದ್ವಿಪಕ್ಷೀಯ ಸಂಬಂಧಕ್ಕೆ ಹೊಸ ಆಯಾಮ ನೀಡಲಿರುವ ಈ ಒಪ್ಪಂದವನ್ನು 'ಕಾರ್ಯತಂತ್ರದ ಪಾಲುದಾರಿಕೆ' ಎಂದು ಖತರ್ ನ ಅಮೀರ್ ಹೇಳಿದ್ದಾರೆ. ಈಗಾಗಲೇ ಸಾಧಿಸಿರುವ ಪ್ರಗತಿಯನ್ನು ಮತ್ತಷ್ಟು ವಿಸ್ತರಿಸುವುದು ಹಾಗೂ ಮುಂದಿನ ದಿನಗಳಲ್ಲಿ ಜಂಟಿ ಕ್ರಮಗಳಿಗೆ ಆದ್ಯತೆ ನೀಡಬೇಕಾದ ಕ್ಷೇತ್ರಗಳನ್ನು ಗುರುತಿಸುವ ಕುರಿತು ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಉಭಯ ಸರ್ಕಾರಗಳ ನಡುವೆ ಹಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಶಾಂತಿ, ಸಮನ್ವಯ ಮತ್ತು ಸಂಘರ್ಷ ಪರಿಹಾರ ಕ್ಷೇತ್ರಗಳಲ್ಲಿನ ಸಹಕಾರಕ್ಕೆ ಸಂಬಂಧಿಸಿದ ತಿಳುವಳಿಕೆ ಒಪ್ಪಂದವೂ (MOU) ಅವುಗಳಲ್ಲಿ ಸೇರಿದೆ ಎಂದು ಖತರ್ ನ ಆಡಳಿತ ಕಚೇರಿಯಾದ ಅಮಿರಿ ದಿವಾನ್ ತಿಳಿಸಿದೆ.
►ಅಮೆರಿಕದ ಭದ್ರತಾ ಭರವಸೆಗಳ ಬಗ್ಗೆ ಆತಂಕ
ಇರಾನ್ ಯುದ್ಧ ಆರಂಭವಾದ ಬಳಿಕ ಗಲ್ಫ್ ರಾಷ್ಟ್ರಗಳು ಅದರ ಪರಿಣಾಮಗಳನ್ನು ಎದುರಿಸುತ್ತಿದ್ದು, ಯಾವುದೇ ದೇಶವೂ ಸುರಕ್ಷಿತವೆಂದು ಭಾವಿಸುವ ಸ್ಥಿತಿಯಲ್ಲಿಲ್ಲ ಎಂದು ಭದ್ರತಾ ವಿಶ್ಲೇಷಕ ಯೂಸುಫ್ ಅಲ್ಬರ್ದಾ Aljazeeraಗೆ ತಿಳಿಸಿದ್ದಾರೆ.
ವಿಶೇಷವಾಗಿ ಖತರ್, ಅಮೆರಿಕದಿಂದ ದೊರೆಯುತ್ತಿರುವ ಭದ್ರತಾ ಭರವಸೆಗಳು ನಿರೀಕ್ಷಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಅರಿತುಕೊಂಡಿದೆ. ಅಲ್ಲಿರುವ ತುರ್ಕಿಯೆ ಸೇನಾ ಪಡೆಗಳು ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.
ಖತರ್ ನ ಭದ್ರತೆಗಾಗಿ ಮುಂದಿನ ದಿನಗಳಲ್ಲಿ ತುರ್ಕಿಯೆ ಶಸ್ತ್ರಾಸ್ತ್ರಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ನಿಯೋಜಿಸುವ ಸಾಧ್ಯತೆಯಿದೆ. ಈ ಮಿಲಿಟರಿ ಸಹಕಾರವನ್ನು ಮುಂದುವರಿಸಲು ಇತ್ತೀಚಿನ ಒಪ್ಪಂದ ನೆರವಾಗಲಿದೆ ಎಂದು ಅಲ್ಬರ್ದಾ ವಿಶ್ಲೇಷಿಸಿದ್ದಾರೆ.
►ಪ್ರಾದೇಶಿಕ ರಕ್ಷಣಾ ಸಹಕಾರ
ಕಳೆದ ಆಗಸ್ಟ್ ನಲ್ಲಿ ತುರ್ಕಿಯೆ, ಪಾಕಿಸ್ತಾನ ಮತ್ತು ಸೌದಿ ಅರೇಬಿಯ ನಡುವೆ ಪ್ರಾದೇಶಿಕ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು. ಈ ಮೂರು ರಾಷ್ಟ್ರಗಳಲ್ಲಿ ಯಾವುದಾದರೂ ಒಂದರ ಮೇಲೆ ದಾಳಿ ನಡೆದರೆ ಉಳಿದ ದೇಶಗಳು ನೆರವಿಗೆ ಬರಲಿವೆ ಎಂಬುದು ಒಪ್ಪಂದದ ಪ್ರಮುಖ ಅಂಶ.
ಕಳೆದ ವಾರ ತುರ್ಕಿಯೆ ಸಂಸತ್ತು ಅನುಮೋದಿಸಿದ ಈ ಒಪ್ಪಂದವು, NATO ಮೈತ್ರಿಕೂಟದಲ್ಲಿ ಎರಡನೇ ಅತಿದೊಡ್ಡ ಸೇನಾ ಬಲ ಹೊಂದಿರುವ ತುರ್ಕಿಯೆಯನ್ನು, ಮುಸ್ಲಿಂ ಜಗತ್ತಿನ ಏಕೈಕ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾದ ಪಾಕಿಸ್ತಾನ ಮತ್ತು ಸೌದಿ ಅರೇಬಿಯದೊಂದಿಗೆ ಬೆಸೆಯುತ್ತದೆ.
ಯಾವುದೇ ಮೂರನೇ ದೇಶವನ್ನು ಗುರಿಯಾಗಿಸಿಕೊಂಡು ಈ ಒಪ್ಪಂದ ಮಾಡಿಕೊಳ್ಳಲಾಗಿಲ್ಲ ಎಂದು ತುರ್ಕಿಯೆ ಸ್ಪಷ್ಟಪಡಿಸಿದೆ. ಈಜಿಪ್ಟ್ ಸೇರಿದಂತೆ ಇತರ ರಾಷ್ಟ್ರಗಳಿಗೂ ಇದರಲ್ಲಿ ಸೇರ್ಪಡೆಯಾಗಲು ಅವಕಾಶವಿದೆ ಎಂದು ತಿಳಿಸಿದೆ.
ಇನ್ನು ಅಕ್ಟೋಬರ್ ನಲ್ಲಿ ಖತರ್, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ತುರ್ಕಿಯೆ ದೋಹಾದಲ್ಲಿ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಬಹುಪಕ್ಷೀಯ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ್ದವು. 'ಬದ್ರ್' ಎಂದು ಹೆಸರಿಸಲಾದ ಈ ಒಪ್ಪಂದವು ಭಾಗಿಯಾಗಿರುವ ರಾಷ್ಟ್ರಗಳ ನಡುವಿನ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿದೆ.