×
Ad

ಮೇ 15ರಂದು ಉಕ್ರೇನ್ ಜೊತೆ ನೇರ ಮಾತುಕತೆ: ರಶ್ಯ ಪ್ರಸ್ತಾಪ ಪೂರ್ವಷರತ್ತು ಇಲ್ಲದೆ ಸಭೆಗೆ ಪುಟಿನ್ ಕರೆ

Update: 2025-05-11 22:51 IST

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)

ಮಾಸ್ಕೋ: ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ಮೇ 15ರಂದು ಉಕ್ರೇನ್ ಜೊತೆ ಯಾವುದೇ ಪೂರ್ವ ಷರತ್ತುಗಳಿಲ್ಲದೆ ನೇರ ಮಾತುಕತೆ ಪುನರಾರಂಭಿಸುವ ಪ್ರಸ್ತಾಪವನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಿರಿಸಿದ್ದಾರೆ.

30 ದಿನಗಳ ಬೇಷರತ್ ಕದನ ವಿರಾಮಕ್ಕೆ ಒಪ್ಪಬೇಕು ಅಥವಾ ಹೆಚ್ಚುವರಿ ನಿರ್ಬಂಧ ಎದುರಿಸಬೇಕು ಎಂಬ ಪ್ರಮುಖ ನಾಲ್ಕು ಯುರೋಪಿಯನ್ ರಾಷ್ಟ್ರಗಳ ಎಚ್ಚರಿಕೆಗೆ ಪ್ರತಿಯಾಗಿ ಪುಟಿನ್ ಈ ಪ್ರಸ್ತಾಪ ಮುಂದಿರಿಸಿದ್ದಾರೆ.

ರವಿವಾರ ಬೆಳಿಗ್ಗೆ ಮಾಸ್ಕೋದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪುಟಿನ್ , 2022ರಲ್ಲಿ ಇಸ್ತಾಂಬುಲ್‍ನಲ್ಲಿ ಉಕ್ರೇನ್ ಜೊತೆ ನಡೆಸಿದ್ದ ನೇರ ಮಾತುಕತೆ ವಿಫಲವಾಗಿರುವುದನ್ನು ಉಲ್ಲೇಖಿಸಿದರು. ` ನಾವು ಉಕ್ರೇನ್‍ನೊಂದಿಗೆ ಗಂಭೀರ ಮಾತುಕತೆಗೆ ಬದ್ಧವಾಗಿದ್ದೇವೆ. ನೇರ ಮಾತುಕತೆ ಯಶಸ್ವಿಯಾದರೆ ಕದನ ವಿರಾಮ ಒಪ್ಪಂದ ಸಾಧ್ಯವಾಗಬಹುದು' ಎಂದು ಪುಟಿನ್ ಹೇಳಿರುವುದಾಗಿ ವರದಿಯಾಗಿದೆ.

ಸೋಮವಾರ(ಮೇ 12)ದಿಂದ ಆರಂಭಗೊಳ್ಳುವ 30 ದಿನಗಳ ಕದನ ವಿರಾಮದ ಪ್ರಸ್ತಾಪಕ್ಕೆ ಸಮ್ಮತಿಸುವಂತೆ ಫ್ರಾನ್ಸ್, ಬ್ರಿಟನ್, ಜರ್ಮನಿ ಮತ್ತು ಪೋಲ್ಯಾಂಡ್ ನಾಯಕರು ರಶ್ಯದ ಮೇಲೆ ಒತ್ತಡ ಹೇರಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪುಟಿನ್ ` ಇಂಧನ ನೆಲೆಗಳ ಮೇಲಿನ ದಾಳಿ ನಿಲ್ಲಿಸುವ, 30 ಗಂಟೆಗಳ ಈಸ್ಟರ್ ಕದನ ವಿರಾಮ, ಮೇ 8ರಿಂದ 10ರವರೆಗೆ ಏಕಪಕ್ಷೀಯ ಕದನ ವಿರಾಮ ಸೇರಿದಂತೆ ರಶ್ಯವು ಇತ್ತೀಚಿನ ತಿಂಗಳಲ್ಲಿ ಹಲವು ಕದನ ವಿರಾಮ ಒಪ್ಪಂದವನ್ನು ಪ್ರಸ್ತಾಪಿಸಿತ್ತು. ಆದರೆ ಇವೆಲ್ಲವನ್ನೂ ಉಕ್ರೇನ್ ಉಲ್ಲಂಘಿಸಿದೆ' ಎಂದು ಆರೋಪಿಸಿದರು.

`ಶಾಶ್ವತ ಶಾಂತಿಗೆ ಅನುವು ಮಾಡಿಕೊಡುವ ಒಪ್ಪಂದವನ್ನು ರಶ್ಯ ಬಯಸುತ್ತದೆ. ಉಕ್ರೇನ್‍ಗೆ ಸೇನಾಪಡೆಯನ್ನು ಸಜ್ಜುಗೊಳಿಸಲು ಮತ್ತು ಸೇನೆಗೆ ಸಿಬ್ಬಂದಿಗಳನ್ನು ನೇಮಕಗೊಳಿಸಲು ಸಮಯಾವಕಾಶ ನೀಡುವ ಒಪ್ಪಂದ ನಮಗೆ ಬೇಕಿಲ್ಲ. ನಿಜವಾಗಿಯೂ ಶಾಂತಿ ಬಯಸುವವರು ಶಾಂತಿ ಮಾತುಕತೆಯನ್ನು ಖಂಡಿತಾ ಬೆಂಬಲಿಸುತ್ತಾರೆ. ಮೇ 15ರಂದು ಶಾಂತಿ ಮಾತುಕತೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್‍ರೊಂದಿಗೆ ಮಾತನಾಡುವುದಾಗಿ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

► ಪುಟಿನ್ ಕರೆಗೆ ಟ್ರಂಪ್ ಶ್ಲಾಘನೆ

ವಾಷಿಂಗ್ಟನ್: ಉಕ್ರೇನ್ ಜೊತೆ ನೇರ ಮಾತುಕತೆ ನಡೆಸುವ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದು `ಅಮೆರಿಕವು ಯುದ್ಧ ನಿರತ ಎರಡೂ ದೇಶಗಳ ಜೊತೆ ವ್ಯಾಪಾರ ಸಂಬಂಧ ಮರುಸ್ಥಾಪನೆಯನ್ನು ಎದುರು ನೋಡುತ್ತಿದೆ' ಎಂದಿದ್ದಾರೆ.

ಇದು ರಶ್ಯ ಮತ್ತು ಉಕ್ರೇನ್ ಎರಡೂ ದೇಶಗಳಿಗೆ ಮಹಾನ್ ದಿನವಾಗಿದೆ. ಮೂರು ವರ್ಷಗಳ ಯುದ್ಧ ಕೊನೆಗೊಂಡರೆ ಜಗತ್ತಿಗೆ ಇನ್ನಷ್ಟು ಒಳಿತಾಗಲಿದೆ ಮತ್ತು ಈ ಎಂದಿಗೂ ಮುಗಿಯದ ರಕ್ತಪಾತವು ಕೊನೆಗೊಂಡರೆ ಸಾವಿರಾರು ಜೀವಗಳು ಉಳಿಯುತ್ತವೆ. ಇದು ಸಂಭವಿಸುವುದನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಯವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇನೆ ಎಂದು ಟ್ರಂಪ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

► ಶಾಂತಿ ಮಾತುಕತೆಗೂ ಮುನ್ನ ಕದನ ವಿರಾಮ: ಝೆಲೆನ್‍ಸ್ಕಿ ಆಗ್ರಹ

ಕೀವ್: ನೇರ ಶಾಂತಿ ಮಾತುಕತೆಯ ರಶ್ಯದ ಪ್ರಸ್ತಾಪವನ್ನು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ರವಿವಾರ ಸ್ವಾಗತಿಸಿದ್ದು ಮಾತುಕತೆ ಆರಂಭಕ್ಕೂ ಮುನ್ನ ಪೂರ್ಣಪ್ರಮಾಣದ, ತಾತ್ಕಾಲಿಕ ಕದನ ವಿರಾಮ ಜಾರಿಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉಕ್ರೇನ್ ಜೊತೆ ನೇರ ಶಾಂತಿ ಮಾತುಕತೆ ನಡೆಸುವ ರಶ್ಯ ಅಧ್ಯಕ್ಷರ ಪ್ರಸ್ತಾಪ `ಸಕಾರಾತ್ಮಕ' ಸೂಚನೆಯಾಗಿದೆ. ಇಡೀ ಜಗತ್ತೇ ದೀರ್ಘಕಾಲದಿಂದ ಇದಕ್ಕಾಗಿ ಕಾಯುತ್ತಿತ್ತು. ಆದರೆ ಯಾವುದೇ ಯುದ್ಧವನ್ನು ನಿಜವಾಗಿಯೂ ಕೊನೆಗೊಳಿಸುವ ಮೊದಲ ಹೆಜ್ಜೆ ಕದನ ವಿರಾಮ' ಎಂದವರು `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News