×
Ad

ಇಸ್ರೇಲ್‌ ನ ಗಾಝಾ ನೆರವು ಯೋಜನೆ ಸಿನಿಕತನದ ಪ್ರದರ್ಶನ: ವಿಶ್ವಸಂಸ್ಥೆ ತುರ್ತು ನೆರವು ಏಜೆನ್ಸಿ ಮುಖ್ಯಸ್ಥರ ಖಂಡನೆ

Update: 2025-05-14 21:42 IST

 PC : PTI

ವಿಶ್ವಸಂಸ್ಥೆ: ಗಾಝಾ ಪಟ್ಟಿಯಲ್ಲಿ ನೆರವು ವಿತರಣೆಗೆ ಇಸ್ರೇಲ್ ಮುಂದಿರಿಸಿದ ಯೋಜನೆ ಸಿನಿಕತದ ಪ್ರದರ್ಶನವಾಗಿದೆ. ಗಮನ ಬೇರೆಡೆ ಸೆಳೆಯುವ ಉದ್ದೇಶಪೂರ್ವಕ ನಡೆಯಾಗಿದ್ದು ಈ ಪ್ರದೇಶದಲ್ಲಿ ಇನ್ನಷ್ಟು ಹಿಂಸಾಚಾರ ಮತ್ತು ಸ್ಥಳಾಂತರಕ್ಕೆ ಪ್ರಚೋದನೆ ನೀಡುತ್ತದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರ ಮತ್ತು ತುರ್ತು ನೆರವು ಸಂಯೋಜಕ ಏಜೆನ್ಸಿಯ(ಒಸಿಎಚ್‍ಎ) ಮುಖ್ಯಸ್ಥ ಟಾಮ್ ಫ್ಲೆಚರ್ ಖಂಡಿಸಿದ್ದಾರೆ.

ಯುದ್ಧದಿಂದ ಜರ್ಝರಿತತೊಂಡ ಗಾಝಾ ಪಟ್ಟಿಗೆ ಕಳೆದ 10 ವಾರಗಳಿಂದಲೂ ಯಾವುದೇ ಆಹಾರ, ಔಷಧ, ನೀರು ಅಥವಾ ಟೆಂಟ್‍ಗಳು ಪೂರೈಕೆಯಾಗಿಲ್ಲ ಎಂದು ಫ್ಲೆಚರ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮಾಹಿತಿ ನೀಡಿದರು. `ಯುದ್ಧದ ಹೊಡೆತದಿಂದ ಬದುಕುಳಿದ ನೂರಾರು ಜನರನ್ನು ನಾವು ರಕ್ಷಿಸಬಹುದು. ನಮ್ಮ ನೆರವು ನಾಗರಿಕರಿಗೆ ಸಿಗುತ್ತದೆ ಮತ್ತು ಹಮಾಸ್‍ ಗೆ ಹೋಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮಲ್ಲಿ ಕಠಿಣ ಕಾರ್ಯವಿಧಾನಗಳಿವೆ. ಆದರೆ ಇಸ್ರೇಲ್ ನಮಗೆ ಪ್ರವೇಶವನ್ನು ನಿರಾಕರಿಸುತ್ತದೆ. ನಾಗರಿಕರ ಜೀವ ರಕ್ಷಣೆಗಿಂತ ಹೆಚ್ಚಿನ ಆದ್ಯತೆಯನ್ನು ಗಾಝಾ ವಿಭಜನೆಗೆ ನೀಡುತ್ತಿದೆ' ಎಂದು ಫ್ಲೆಚರ್ ಹೇಳಿದ್ದಾರೆ.

ಗಾಝಾ ಪಟ್ಟಿಗೆ ಮಾರ್ಚ್ 2ರಿಂದ ಯಾವುದೇ ನೆರವು ಪೂರೈಕೆಯಾಗಿಲ್ಲ. ಉಳಿದಿರುವ ಎಲ್ಲಾ ಒತ್ತೆಯಾಳುಗಳನ್ನೂ ಹಮಾಸ್ ಬಿಡುಗಡೆ ಮಾಡುವವರೆಗೆ ಗಾಝಾಗೆ ಸರಕು ಮತ್ತು ಸರಬರಾಜುಗಳನ್ನು ಪ್ರವೇಶಿಸಲು ಅನುಮತಿಸುವುದಿಲ್ಲ ಎಂದು ಇಸ್ರೇಲ್ ಹೇಳಿದೆ. ಗಾಝಾದಲ್ಲಿ ಆಹಾರ ದಾಸ್ತಾನು ಮುಗಿಯುತ್ತಿದೆ ಎಂದು ಕಳೆದ ತಿಂಗಳಾಂತ್ಯದಲ್ಲಿ ವಿಶ್ವಸಂಸ್ಥೆಯ ಆಹಾರ ಯೋಜನೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಆಹಾರ ಮತ್ತು ಔಷಧಗಳನ್ನು ತಲುಪಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೇಲೆ ಒತ್ತಡ ಹೇರುವುದಾಗಿ' ಹೇಳಿದ್ದರು.

`ಇಸ್ರೇಲ್ ಪ್ರಸ್ತಾಪಿಸಿದ ನೆರವು ವಿತರಣಾ ಮಾದರಿಯನ್ನು ಚರ್ಚಿಸಲು ವಿಶ್ವಸಂಸ್ಥೆ ಪ್ರತಿನಿಧಿಗಳು ಇಸ್ರೇಲ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿಯಾಗಿದ್ದು ವಿಶ್ವಸಂಸ್ಥೆ ಒಳಗೊಳ್ಳುವಿಕೆಗೆ ಅಗತ್ಯವಾದ ಕನಿಷ್ಠ ಷರತ್ತುಗಳನ್ನು ಒತ್ತಿ ಹೇಳಿದ್ದರು. ಇಸ್ರೇಲ್ ವಿನ್ಯಾಸಗೊಳಿಸಿದ ವಿತರಣಾ ವಿಧಾನವು ಉತ್ತರವಲ್ಲ. ಅದು ಮತ್ತಷ್ಟು ಸ್ಥಳಾಂತರಕ್ಕೆ ಒತ್ತಡ ಹೇರುತ್ತದೆ. ಸಾವಿರಾರು ಜನರನ್ನು ಹಾನಿಗೆ ಒಡ್ಡುತ್ತದೆ. ಗಾಝಾದ ಒಂದು ಭಾಗಕ್ಕೆ ಮಾತ್ರ ನೆರವನ್ನು ನಿರ್ಬಂಧಿಸುತ್ತದೆ. ರಾಜಕೀಯ ಮತ್ತು ಮಿಲಿಟರಿ ಉದ್ದೇಶದಿಂದ ಸಹಾಯವನ್ನು ಷರತ್ತುಬದ್ಧಗೊಳಿಸುತ್ತದೆ. ಹಸಿವನ್ನು ಚೌಕಾಶಿಯ ಕಾರ್ಡ್ ಆಗಿ ಬಳಸುತ್ತದೆ ' ಎಂದು ಫ್ಲೆಚರ್ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News