ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ನಿಂದ ದೌರ್ಜನ್ಯ ಹೆಚ್ಚುವ ಅಪಾಯ: ವಿಶ್ವಸಂಸ್ಥೆ ಎಚ್ಚರಿಕೆ
Photo Credit : news.un.org
ಜಿನೀವಾ: ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ನಿಂದ ದೌರ್ಜನ್ಯದ ಅಪರಾಧಗಳು ನಡೆಯುವ ಅಪಾಯ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದ್ದು, ತಕ್ಷಣವೇ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ರಾಷ್ಟ್ರಗಳಿಗೆ ಒತ್ತಾಯಿಸಿದೆ.
ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳು, ನೀತಿಗಳು ಮತ್ತು ಪೆಲೆಸ್ತೀನಿಯರ ವಿರುದ್ಧದ ಉಲ್ಲಂಘನೆಗಳು ಪಶ್ಚಿಮ ದಂಡೆ ಮತ್ತು ಗಾಝಾ ಪಟ್ಟಿಯಲ್ಲಿ ಮತ್ತಷ್ಟು ಘೋರ ಅಪರಾಧಗಳು ನಡೆಯುವ ಅಪಾಯವನ್ನು ವಿಸ್ತರಿಸುತ್ತಿವೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಹೇಳಿದ್ದಾರೆ.
ಇಸ್ರೇಲ್ ಸರಕಾರದ ಅತ್ಯುನ್ನತ ಮಟ್ಟದ ಪ್ರತಿನಿಧಿಗಳು ಪಶ್ಚಿಮ ದಂಡೆಯಲ್ಲಿ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ, ಜನಾಂಗೀಯ ನಿರ್ಮೂಲನೆ ಮತ್ತು ಸಾಮೂಹಿಕ ಶಿಕ್ಷೆಯ ನೀತಿಗಳನ್ನು ಪದೇ ಪದೇ ಸ್ಪಷ್ಟಪಡಿಸಿದ್ದಾರೆ. ಸಮಾಜದಾದ್ಯಂತ ದ್ವೇಷಕ್ಕೆ ಪ್ರಚೋದನೆ ನೀಡುವುದು ಮತ್ತು ಯುದ್ಧ ಅಪರಾಧಗಳು, ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ನರಮೇಧದಂತಹ ಘೋರ ಅಪರಾಧಗಳಿಗೆ ಸಮನಾದ ಉಲ್ಲಂಘನೆಗಳನ್ನು ಎಸಗಲು ಪ್ರೇರೇಪಿಸುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ. ಗಾಝಾದಲ್ಲಿ ಇಸ್ರೇಲ್ನ ಕ್ರಮಗಳು ಫೆಲೆಸ್ತೀನಿಯರ ನಿರಂತರ ಅಸ್ತಿತ್ವಕ್ಕೆ ನಿಜವಾದ ಬೆದರಿಕೆಯನ್ನು ಒಡ್ಡುತ್ತಿವೆ ಎಂದು ತಮ್ಮ ಕಚೇರಿಯು ಪದೇ ಪದೇ ಎಚ್ಚರಿಸಿದೆ ಎಂದು ಟರ್ಕ್ ಹೇಳಿದ್ದಾರೆ.
ಗಾಝಾದ 21 ಲಕ್ಷ ಜನಸಂಖ್ಯೆಯಲ್ಲಿ ಹೆಚ್ಚಿನವರು ಆ ಪ್ರದೇಶದಲ್ಲಿನ ಡೇರೆಗಳು ಅಥವಾ ತಾತ್ಕಾಲಿಕ ಆಶ್ರಯಗಳಲ್ಲಿ ನಿರಾಶ್ರಿತರಾಗಿ ವಾಸಿಸುತ್ತಿದ್ದಾರೆ. ಅಲ್ಲಿನ ಶೇಕಡಾ 60 ಕ್ಕಿಂತ ಹೆಚ್ಚು ಭೂಭಾಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವುದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ.
ಪಶ್ಚಿಮ ದಂಡೆ ಮತ್ತು ಗಾಝಾ ಎರಡೂ ಕಡೆಗಳಲ್ಲಿ ನಡೆಯುತ್ತಿರುವ ಉಲ್ಲಂಘನೆಗಳ ವ್ಯಾಪಕ ಮತ್ತು ವ್ಯವಸ್ಥಿತ ಸ್ವರೂಪದ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ನಮ್ಮ ಎಚ್ಚರಿಕೆಗಳಿಗೆ ಕಿವಿಗೊಡಲಾಗಿಲ್ಲ, ನಾಗರಿಕರ ಹತ್ಯೆ ಮುಂದುವರಿದಿದೆ ಮತ್ತು ಲಕ್ಷಾಂತರ ಫೆಲೆಸ್ತೀನಿಯರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ. ಈ ಸ್ಥಳಾಂತರವು ಶಾಶ್ವತವಾಗಿರಬೇಕು ಎಂಬ ಉದ್ದೇಶವನ್ನು ಇಸ್ರೇಲ್ನ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಸ್ವತಂತ್ರ ತನಿಖೆಗಳು ನಡೆಯಬೇಕು ಮತ್ತು ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಅಂತರ್ರಾಷ್ಟ್ರೀಯ ನ್ಯಾಯಾಲಯಗಳ ಕೆಲಸಕ್ಕೆ ಎಲ್ಲಾ ರಾಷ್ಟ್ರಗಳು ಬೆಂಬಲ ನೀಡಬೇಕು ಎಂದು ಟರ್ಕ್ ಒತ್ತಾಯಿಸಿದ್ದಾರೆ.
ನಾಗರಿಕರನ್ನು ರಕ್ಷಿಸುವುದು ಮತ್ತು ಮಾನವೀಯ ಕಾರ್ಯಾಚರಣೆಗಳ ಸುರಕ್ಷತೆಯನ್ನು ಗೌರವಿಸುವುದು ಸೇರಿದಂತೆ ಅಂತರ್ರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಹಮಾಸ್ ಮತ್ತು ಇತರ ಫೆಲೆಸ್ತೀನಿಯನ್ ಸಶಸ್ತ್ರ ಗುಂಪುಗಳೂ ತಮ್ಮ ಬಾಧ್ಯತೆಗಳನ್ನು ಪಾಲಿಸುವಂತೆ ಟರ್ಕ್ ಆಗ್ರಹಿಸಿದ್ದಾರೆ.
ಮಾನವ ಗುರಾಣಿಗಳಾಗಿ ಫೆಲೆಸ್ತೀನಿಯನ್ನರ ಬಳಕೆ
ಫೆಲೆಸ್ತೀನಿಯನ್ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ತನ್ನ ಸೇನೆಯ ಯಾವುದೇ ಸದಸ್ಯರ ವಿರುದ್ಧ ಈವರೆಗೆ ಕಾನೂನು ಕ್ರಮ ಜರುಗಿಸಿಲ್ಲ ಎಂದು ಇಸ್ರೇಲಿ ಮಾಧ್ಯಮ `ಹಾರೇಟ್ಜ್' ವರದಿ ಮಾಡಿದೆ.
ಅಕ್ಟೋಬರ್ 2023 ರಿಂದ ಶಂಕಿತ ಪ್ರಕರಣಗಳ ಕುರಿತು ಕನಿಷ್ಠ 16 ತನಿಖೆಗಳನ್ನು ಪ್ರಾರಂಭಿಸಿದ್ದರೂ, ಯಾವುದೇ ಬಂಧನವಾಗಲಿ ಅಥವಾ ಕಾನೂನು ಕ್ರಮವಾಗಲಿ ನಡೆದಿಲ್ಲ. ಈ ತನಿಖೆಗಳಲ್ಲಿ 10 ಪ್ರಕರಣಗಳು ಗಾಝಾ ಪಟ್ಟಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದ್ದರೆ, ಉಳಿದವು ಪಶ್ಚಿಮ ದಂಡೆಯ ಘಟನೆಗಳಿಗೆ ಸಂಬಂಧಿಸಿವೆ ಎಂದು ವರದಿ ತಿಳಿಸಿದೆ.
ಇಸ್ರೇಲಿ ಸೇನೆಯು ಈ ಕ್ರಮವನ್ನು `ಸೇನಾ ಕಾರ್ಯಾಚರಣೆಗಳಲ್ಲಿ ನಾಗರಿಕ ಜನಸಂಖ್ಯೆಯ ಶೋಷಣೆ' ಎಂದು ಬಣ್ಣಿಸಿದ್ದರೆ, ಕ್ಷೇತ್ರದಲ್ಲಿರುವ ಸೈನಿಕರು ಇದನ್ನು `ಸೊಳ್ಳೆ ವಿಧಾನ' ಎಂದು ಕರೆಯುತ್ತಾರೆ. ಗಾಝಾದಲ್ಲಿ ಈ ಪದ್ಧತಿಯು ಆರಂಭದಲ್ಲಿ ಸೀಮಿತ ಸಂಖ್ಯೆಯ ಘಟಕಗಳಲ್ಲಿ, ವಿಶೇಷವಾಗಿ ಸಾಮಾನ್ಯ ಪದಾತಿದಳದಲ್ಲಿ ಪ್ರಾರಂಭವಾಗಿ, ನಂತರ ಹೆಚ್ಚು ವ್ಯಾಪಕವಾಯಿತು ಎಂದು 2024ರ ಆರಂಭದಲ್ಲಿ ಈ ಪದ್ಧತಿಯನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ `ಹಾರೇಟ್ಜ್' ತಿಳಿಸಿದೆ.