Photo credit : ndtv

ವಾಷಿಂಗ್ಟನ್: ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರ(ATC)ಗಳಲ್ಲಿ ಉಂಟಾದ ಸಂವಹನ ಸಮಸ್ಯೆಯಿಂದಾಗಿ ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಶುಕ್ರವಾರ ಮಧ್ಯಾಹ್ನ ದೇಶಾದ್ಯಂತ ಎಲ್ಲ ವಿಮಾನಗಳ ಹಾರಾಟವನ್ನು ತಡೆಹಿಡಿದಿದೆ.

ಸೆ. 11, 2001ರ ದಾಳಿಯ ಬಳಿಕ ಅಮೆರಿಕದಲ್ಲಿ ದೇಶಾದ್ಯಂತ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದು ಇದು ಎರಡನೇ ಬಾರಿಯಾಗಿದೆ. 2023ರ ಜನವರಿಯಲ್ಲಿ FAAಯ ಪ್ರಮುಖ ಕಂಪ್ಯೂಟರ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಇಂತಹ ನಿರ್ಬಂಧ ವಿಧಿಸಲಾಗಿದೆ.

ದೇಶದ ವಿಮಾನ ನಿಲ್ದಾಣಗಳ ನಡುವೆ ಸಂಚರಿಸುವ ವಿಮಾನಗಳಿಗೆ ಮಾರ್ಗದರ್ಶನ ನೀಡುವ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಸಂವಹನ ಸಮಸ್ಯೆ ಉಂಟಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು FAA ತಿಳಿಸಿದೆ. ಸಮಸ್ಯೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಹೇಳಿದ್ದಾರೆ.

ಅಮೆರಿಕದ ಆಂತರಿಕ ಭದ್ರತಾ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ಅವರು, ದೂರಸಂಪರ್ಕ ವ್ಯವಸ್ಥೆಯಲ್ಲಿನ ವ್ಯತ್ಯಯವೇ ಸಮಸ್ಯೆಗೆ ಕಾರಣ ಎಂದು ತಿಳಿಸಿದ್ದಾರೆ. ಇದರ ಹಿಂದೆ ಯಾವುದೇ ದುರುದ್ದೇಶಪೂರಿತ ಕೃತ್ಯ ನಡೆದಿರುವುದಕ್ಕೆ ಸದ್ಯಕ್ಕೆ ಪುರಾವೆಗಳಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಆದರೆ, ಸಂವಹನ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದಾಗಿ ಶುಕ್ರವಾರ ತಡರಾತ್ರಿಯವರೆಗೂ ಸಾವಿರಾರು ವಿಮಾನಗಳ ಸಂಚಾರಕ್ಕೆ ಅಡ್ಡಿಯುಂಟಾಯಿತು. ಮನೆಗೆ ಮರಳುತ್ತಿದ್ದವರು, ಮದುವೆ ಸಮಾರಂಭಗಳಿಗೆ ತೆರಳಬೇಕಿದ್ದವರು ಹಾಗೂ ವಾರಾಂತ್ಯದ ಪ್ರವಾಸಕ್ಕೆ ಯೋಜನೆ ರೂಪಿಸಿದ್ದವರು ಪರದಾಡುವಂತಾಯಿತು.

ಶುಕ್ರವಾರ ಸಂಜೆ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಪ್ರಮುಖ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಂದ ಕೆಲವು ಅಂತರರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸಿದವು.

"ಇದು ನಮ್ಮ ವಿರುದ್ಧ ನಡೆದ ಯಾವುದೇ ದುರುದ್ದೇಶಪೂರಿತ ದಾಳಿಯಾಗಿದೆ ಎಂಬುದಕ್ಕೆ ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ. ದೂರಸಂಪರ್ಕ ವ್ಯವಸ್ಥೆಯಲ್ಲಿನ ವ್ಯತ್ಯಯದಿಂದ ಈ ಸಮಸ್ಯೆ ಉಂಟಾಗಿದೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ನಿಮ್ಮ ಆಪ್ತರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರೆ, ಅವರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ" ಎಂದು ಮುಲ್ಲಿನ್ ಸುದ್ದಿಗಾರರಿಗೆ ತಿಳಿಸಿದರು.

600ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ :

ದೇಶಾದ್ಯಂತ ವಿಮಾನಗಳ ಹಾರಾಟವನ್ನು ತಡೆಹಿಡಿಯುವಂತೆ FAA ನೀಡಿದ ಆದೇಶದ ಪರಿಣಾಮವಾಗಿ ಕನಿಷ್ಠ 600 ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ.

ವಿಮಾನಯಾನ ವಿಶ್ಲೇಷಣಾ ಸಂಸ್ಥೆ 'ಸಿರಿಯಮ್' ಪ್ರಕಾರ, ಪೂರ್ವ ಕರಾವಳಿ ಸಮಯದ ಸಂಜೆ 5.50ರ ವೇಳೆಗೆ 496 ವಿಮಾನಗಳನ್ನು ಅವು ಹೊರಟಿದ್ದ ಮೂಲ ವಿಮಾನ ನಿಲ್ದಾಣಗಳಿಗೇ ಹಿಂದಿರುಗಿಸಲಾಗಿತ್ತು. ಇನ್ನು 104 ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಲಾಗಿತ್ತು.

ಚಿಕಾಗೊ ಓ'ಹೇರ್, ಡೆನ್ವರ್, ಡಲ್ಲಾಸ್ ಫೋರ್ಟ್ ವರ್ತ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು ಹಾಗೂ ರೊನಾಲ್ಡ್ ರೀಗನ್ ವಾಷಿಂಗ್ಟನ್ ರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹಲವು ವಿಮಾನಗಳನ್ನು ತಿರುಗಿಸಲಾಗಿತ್ತು.

ಅಮೆರಿಕದ ವಿಮಾನ ನಿಲ್ದಾಣಗಳಿಂದ ಪೂರ್ವ ಕರಾವಳಿ ಸಮಯದ ಸಂಜೆ 4 ಗಂಟೆಯ ಬಳಿಕ ಸುಮಾರು 11,000 ವಿಮಾನಗಳು ಹಾರಾಟ ನಡೆಸಬೇಕಿತ್ತು. ಈ ವಿಮಾನಗಳಲ್ಲಿ 15 ಲಕ್ಷಕ್ಕೂ ಅಧಿಕ ಪ್ರಯಾಣಿಕರಿದ್ದರು. ಹೀಗಾಗಿ, ಹೆಚ್ಚಿನ ವಿಮಾನಗಳು ರದ್ದಾಗುವ ಅಥವಾ ಮಾರ್ಗ ಬದಲಾಯಿಸುವ ಸಾಧ್ಯತೆ ಎದುರಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor