ಅಮೆರಿಕದ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ (Screengran:X/@SenBlumenthal)

ಹೊಸದಿಲ್ಲಿ: ರಷ್ಯಾ ಹಾಗೂ ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ದೇಶಗಳನ್ನು ಗುರಿಯಾಗಿಸಿಕೊಂಡು ನಿರ್ಬಂಧ ವಿಧಿಸುವ ಮಸೂದೆಯನ್ನು ಅಮೆರಿಕ ಕಾಂಗ್ರೆಸ್ ಅಂಗೀಕರಿಸಿದ ಬೆನ್ನಲ್ಲೇ, ಭಾರತ ಮತ್ತು ಚೀನಾಗೆ ನಿಮ್ಮ ನಡೆಯನ್ನು ಸರಿಪಡಿಸಿಕೊಳ್ಳಿ ಎಂದು ಅಮೆರಿಕದ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಆಗ್ರಹಿಸಿದ್ದಾರೆ.

ಉಕ್ರೇನ್ ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಮೇಲೆ ಮತ್ತಷ್ಟು ಒತ್ತಡ ಹೇರುವ ಉದ್ದೇಶದ ಹೊಸ ನಿರ್ಬಂಧಗಳ ಮಸೂದೆಗೆ ಅಮೆರಿಕ ಕಾಂಗ್ರೆಸ್ ಬುಧವಾರ ಅನುಮೋದನೆ ನೀಡಿದೆ.

ಚೀನಾ ಮತ್ತು ಭಾರತಕ್ಕೆ ನಾನು ಹೇಳುವುದೇನೆಂದರೆ, ನೀವು ನಿಮ್ಮ ನಡೆಯನ್ನು ಸರಿಪಡಿಸಿಕೊಳ್ಳುವುದು ಉತ್ತಮ, ನೀವು ತೈಲ ಮತ್ತು ಅನಿಲವನ್ನು ಬೇರೆಡೆಯಿಂದ ಖರೀದಿಸಿ, ಓಲೈಕೆಯು ತಂತ್ರವಲ್ಲ ಎಂದು ಎಂದು ಬ್ಲೂಮೆಂಥಾಲ್ ಹೇಳಿದರು.

ಆದರೆ, ಭಾರತವು ತನ್ನ 140 ಕೋಟಿ ಜನಸಂಖ್ಯೆಗೆ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಮುಂದಿನ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ ಎಂದು ಸಚಿವಾಲಯವು ತಿಳಿಸಿದೆ.

ದೇಶದ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭಾರತ ಸ್ಪಷ್ಟಪಡಿಸಿದೆ. ಈ ಬೆಳವಣಿಗೆಗಳ ಪರಿಣಾಮಗಳನ್ನು ಎದುರಿಸಲು ಸರಕಾರವು ಭಾರತೀಯ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯ ನಿರ್ವಹಿಸಲಿದ್ದು, ಮುಂದಿನ ಬೆಳವಣಿಗೆಗಳ ಮೇಲೆ ನಿಗಾಯಿಡಲಾಗಿದೆ ಎಂದು ತಿಳಿಸಿದೆ.

ಬುಧವಾರ ಅಮೆರಿಕದ ಸಂಸತ್ತು ‘ಲಿಂಡ್ಸೆ ಒ. ಗ್ರಹಾಂ ರಷ್ಯಾ ಮತ್ತು ಇರಾನ್ ಮೇಲಿನ ನಿರ್ಬಂಧ ಕಾಯ್ದೆ-2026’ ಅನ್ನು ಅಂಗೀಕರಿಸಿದೆ. ರಷ್ಯಾದಿಂದ ತೈಲ ಖರೀದಿಸುವ ಭಾರತ ಹಾಗೂ ಚೀನಾದಂತಹ ದೇಶಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸಲು ಈ ಮಸೂದೆಯು ಅಮೆರಿಕ ಅಧ್ಯಕ್ಷರಿಗೆ ಅಧಿಕಾರ ನೀಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor