×
Ad

2025ರಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಯ ವೀಸಾ ರದ್ದುಪಡಿಸಿದ ಅಮೆರಿಕ

Update: 2026-01-13 22:30 IST

ಸಾಂದರ್ಭಿಕ ಚಿತ್ರ | Photo Credit : freepik

ವಾಶಿಂಗ್ಟನ್, ಜ.13: ಅಧ್ಯಕ್ಷರಾಗಿ 2025ರ ಜನವರಿಯಲ್ಲಿ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕ ಅಮೆರಿಕವು 1 ಲಕ್ಷಕ್ಕೂ ಅಧಿಕ ಮಂದಿಯ ವೀಸಾಗಳನ್ನು ರದ್ದುಪಡಿಸಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದ ದತ್ತಾಂಶಗಳು ಬಹಿರಂಗಪಡಿಸಿವೆ.

ವಲಸೆ ವಿರುದ್ಧ ಟ್ರಂಪ್ ಆಡಳಿತ ತಳೆದಿರುವ ಕಠಿಣ ನೀತಿಯ ಪರಿಣಾಮವಾಗಿ ವೀಸಾ ರದ್ದತಿ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದೆ. 2024ರಲ್ಲಿ, ಅಂದರೆ ಬೈಡೆನ್ ಆಡಳಿತದ ಕೊನೆಯ ವರ್ಷದಲ್ಲಿ 40 ಸಾವಿರ ವೀಸಾಗಳು ರದ್ದುಗೊಂಡಿದ್ದರೆ, ಅದರ ಎರಡು ಪಟ್ಟು ಅಧಿಕ ವೀಸಾಗಳು ಟ್ರಂಪ್ ದ್ವಿತೀಯಾವಧಿಯ ಮೊದಲ ವರ್ಷದಲ್ಲಿ ರದ್ದಾಗಿವೆ.

ಹೀಗೆ ರದ್ದುಗೊಂಡ ಬಹುತೇಕ ವೀಸಾಗಳಲ್ಲಿ ಹೆಚ್ಚಿನವು ನಿಗದಿತ ಅವಧಿಗಿಂತ ಹೆಚ್ಚು ಸಮಯ ಅಮೆರಿಕದಲ್ಲಿ ವಾಸ್ತವ್ಯವಿದ್ದ ಪ್ರವಾಸಿಗರು ಹಾಗೂ ಉದ್ಯಮಿಗಳದ್ದಾಗಿದೆ. ಇದರ ಜೊತೆಗೆ ಕಾನೂನುಬದ್ಧ ಸ್ಥಾನಮಾನವನ್ನು ಕಳೆದುಕೊಂಡ 8 ಸಾವಿರ ವಿದ್ಯಾರ್ಥಿಗಳು ಹಾಗೂ 2,500 ವಿಶೇಷ ಪರಿಣತಿಯ ಕಾರ್ಮಿಕರ ವೀಸಾಗಳನ್ನೂ ರದ್ದುಪಡಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಸುಮಾರು 5 ಸಾವಿರ ವಿದ್ಯಾರ್ಥಿಗಳು ಡ್ರಗ್ಸ್ ಹೊಂದಿದ್ದ ಅಥವಾ ವಿತರಿಸಿದ್ದ ಆರೋಪದಲ್ಲಿ ವೀಸಾಗಳನ್ನು ಕಳೆದುಕೊಂಡಿದ್ದಾರೆ. ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರೆನ್ನಲಾದ ನೂರಾರು ವಿದೇಶಿ ಕಾರ್ಮಿಕರು ಕೂಡ ವೀಸಾಗಳನ್ನು ಕಳೆದುಕೊಂಡಿದ್ದಾರೆ.

ಆದರೆ ಕ್ರಿಮಿನಲ್ ಆರೋಪ ಅಥವಾ ಅಪರಾಧ ಕೃತ್ಯ ಸಾಬೀತಾದ ಕಾರಣ ವೀಸಾ ರದ್ದುಗೊಂಡವರ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News