×
Ad

ಯುದ್ಧ, ಮಾತುಕತೆ ಎರಡಕ್ಕೂ ನಾವು ಸಿದ್ಧ: ಇರಾನ್

ಪರಿಸ್ಥಿತಿ ನಿಯಂತ್ರಣದಲ್ಲಿ: ವರದಿ

Update: 2026-01-12 21:47 IST

Photo Credit : ddnews.gov.in

ಟೆಹ್ರಾನ್, ಜ.12: ಇರಾನ್ ನಾಯಕರು ಮಾತುಕತೆಗೆ ಮುಂದಾಗಿದ್ದಾರೆ ಎಂಬ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ‘ದೇಶವು ಯುದ್ಧಕ್ಕೆ ಮಾತ್ರವಲ್ಲ, ಮಾತುಕತೆಗೂ ಸಿದ್ಧವಾಗಿದೆ’ ಎಂದಿದ್ದಾರೆ.

ರಾಷ್ಟ್ರವ್ಯಾಪಿ ಪ್ರತಿಭಟನೆಗಳು ಹಿಂಸಾತ್ಮಕ ಮತ್ತು ರಕ್ತಸಿಕ್ತವಾಗಿ ಬದಲಾಗಿರುವುದು ದೇಶದಲ್ಲಿ ಮಿಲಿಟರಿಯ ಮಧ್ಯಪ್ರವೇಶಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಒಂದು ನೆಪವನ್ನು ಒದಗಿಸಿದೆ. ವಾರಾಂತ್ಯದಲ್ಲಿ ಹಿಂಸಾಚಾರ ತೀವ್ರಗೊಂಡಿದ್ದರೂ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳುವ ಟ್ರಂಪ್ ಎಚ್ಚರಿಕೆಯು ‘ಗಲಭೆಕೋರರಿಗೆ’ ಹಿಂಸಾತ್ಮಕ ಪ್ರತಿಭಟನೆಗೆ ಪ್ರಚೋದನೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರಿಗೆ ಶಸ್ತ್ರಾಸ್ತ್ರಗಳನ್ನು ಹಂಚುತ್ತಿರುವ ವೀಡಿಯೊ ದೃಶ್ಯಾವಳಿಗಳನ್ನು ಇರಾನ್ ಹೊಂದಿದೆ. ಬಂಧಿತರ ತಪ್ಪೊಪ್ಪಿಗೆಗಳನ್ನು ಅಧಿಕಾರಿಗಳು ಶೀಘ್ರವೇ ಬಿಡುಗಡೆಗೊಳಿಸಲಿದ್ದಾರೆ. ಪ್ರತಿಭಟನೆಯ ಬೆಂಕಿಗೆ ವಿದೇಶಿ ಶಕ್ತಿಗಳು ತುಪ್ಪ ಸುರಿದಿವೆ ಮತ್ತು ಪ್ರಚೋದನೆ ನೀಡಿವೆ. ಭದ್ರತಾ ಪಡೆಗಳು ಹೊಣೆಗಾರರನ್ನು ‘ಬೇಟೆಯಾಡಲಿವೆ’ ಎಂದರು.

ರಾಷ್ಟ್ರವ್ಯಾಪಿ ಇಂಟರ್‌ನೆಟ್ ಸ್ಥಗಿತ ಮತ್ತು ಟ್ರಂಪ್‌ನಿಂದ ಪುನರಾವರ್ತಿತ ಮಿಲಿಟರಿ ಹಸ್ತಕ್ಷೇಪದ ಬೆದರಿಕೆಗಳ ಮಧ್ಯೆ, ಇರಾನಿನಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳು ಮೂರನೇ ವಾರವನ್ನು ಪ್ರವೇಶಿಸಿವೆ. ಪ್ರತಿಭಟನೆಯ ಸಂದರ್ಭ 109 ಭದ್ರತಾ ಸಿಬ್ಬಂದಿ ಸಾವನ್ನಪ್ಪಿರುವುದಾಗಿ ಇರಾನಿನ ‘ತಸ್ನೀಮ್’ ಸುದ್ದಿಸಂಸ್ಥೆ ರವಿವಾರ ವರದಿ ಮಾಡಿದೆ.

*ಇರಾನ್ ನಾಯಕರು ಸಂಧಾನಕ್ಕೆ ಕರೆ ನೀಡಿದ್ದಾರೆ: ಟ್ರಂಪ್ ಹೇಳಿಕೆ

ಅಮೆರಿಕಾದ ನಿರಂತರ ಒತ್ತಡದಿಂದ ದಣಿದಿರುವ ಇರಾನ್‌ನ ನಾಯಕರು ಸಂಧಾನಕ್ಕಾಗಿ ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

‘ಅವರು ಮಾತುಕತೆಯನ್ನು ಬಯಸಿ ಕರೆ ಮಾಡಿದ್ದಾರೆ. ಸಭೆಯನ್ನು ವ್ಯವಸ್ಥೆ ಮಾಡಿ ಅವರನ್ನು ಭೇಟಿ ಆಗಬಹುದು. ಆದರೆ ಮಾತುಕತೆಗೂ ಮೊದಲು ನಡೆಯಬಹುದಾದ ಬೆಳವಣಿಗೆಗಳಿಗೆ ತಕ್ಷಣದ ಕ್ರಮದ ಅಗತ್ಯವಿದ್ದರೆ ಅಮೆರಿಕಾ ಕಾರ್ಯನಿರ್ವಹಿಸಬಹುದು’ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಇರಾನಿನ ವಿಪಕ್ಷ ನಾಯಕರೊಂದಿಗೂ ಸಂಪರ್ಕದಲ್ಲಿದ್ದೇವೆ. ಇದೀಗ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಯ ಸಂದರ್ಭ ಹಲವಾರು ಪ್ರತಿಭಟನಾಕಾರರ ಹತ್ಯೆಯಾಗಿರುವ ವರದಿಗಳ ಬಳಿಕ ಇರಾನ್ ವಿರುದ್ಧ ಮಿಲಿಟರಿ ದಾಳಿಗಳನ್ನು ಪರಿಗಣಿಸಲಾಗುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News