Bangladesh | ಪೊಲೀಸ್ ಕಸ್ಟಡಿಯಲ್ಲಿ ರಾಜಕಾರಣಿ ಮೃತ್ಯು
PC: x.com/ThePrintIndia
ಢಾಕಾ: ಖ್ಯಾತ ಗಾಯಕ ಹಾಗೂ ಅವಾಮಿ ಲೀಗ್ ಪಕ್ಷದ ಹಿರಿಯ ಪದಾಧಿಕಾರಿ ಪ್ರೊಲೋಯ್ ಚಾಕಿ ಬಾಂಗ್ಲಾದೇಶದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟಿದ್ದಾರೆ. 60 ವರ್ಷ ವಯಸ್ಸಿನ ಚಾಕಿ ಅವರಿಗೆ ಜೈಲಿನಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ನಿರಾಕರಿಸಿದ್ದೇ ಅವರ ಸಾವಿಗೆ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಇದು ಸಹಜ ಸಾವು ಎಂಬ ಪೊಲೀಸರ ಹೇಳಿಕೆಯನ್ನು ಅವರು ತೀವ್ರವಾಗಿ ಅಲ್ಲಗಳೆದಿದ್ದಾರೆ.
2024ರಲ್ಲಿ ನಡೆದ ತಾರತಮ್ಯ ವಿರೋಧಿ ಹೋರಾಟದ ಸಂದರ್ಭದಲ್ಲಿ ನಡೆದ ಸ್ಫೋಟ ಪ್ರಕರಣವೊಂದಕ್ಕೆ ಸಂಬಂಧಿಸಿ ಪ್ರೊಲೋಯ್ ಅವರನ್ನು ಬಂಧಿಸಲಾಗಿತ್ತು. ಅವರು ರವಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಡಿಸೆಂಬರ್ 16ರಂದು ಪ್ರೊಲೋಯ್ ಅವರನ್ನು ದಿಲಾಲ್ಪುರದಲ್ಲಿರುವ ಅವರ ನಿವಾಸದಿಂದ ಪೊಲೀಸರು ಕರೆದೊಯ್ದಿದ್ದು, ಬಳಿಕ ಬಂಧನವಾಗಿದೆ ಎಂದು ತೋರಿಸಲಾಗಿದೆ ಎಂದು ಪಕ್ಷದ ಪಬ್ನಾ ಘಟಕದ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿ ತಿಳಿಸಿದ್ದಾರೆ.
ದೇಶದಲ್ಲಿ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರ ಮುಂದುವರಿದಿರುವ ನಡುವೆಯೇ ಪ್ರೊಲೋಯ್ ಚಾಕಿ ಸಾವು ಆತಂಕ ಮೂಡಿಸಿದೆ. ಅವಾಮಿ ಲೀಗ್‌ಗೆ ಸಂಪರ್ಕ ಹೊಂದಿರುವ ಗುಂಪುಗಳು, ಪಕ್ಷಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿ ಹಿಂಸಾಕೃತ್ಯಗಳು ನಡೆಯುತ್ತಿವೆ.
ಹಿಂಸಾಚಾರದಲ್ಲಿ ಏಳು ಮಂದಿ ಹತ್ಯೆಗೀಡಾಗಿದ್ದು, ದೀಪು ಚಂದ್ರ ದಾಸ್ ಅವರನ್ನು ಡಿಸೆಂಬರ್ 18ರಂದು ಮೈಮೆನ್ಸಿಂಗ್ ನಲ್ಲಿ ಹತ್ಯೆ ಮಾಡಿದ ಬಳಿಕ ಅವರ ಆಸ್ತಿಪಾಸ್ತಿಗಳನ್ನೂ ನಾಶಪಡಿಸಲಾಗಿದೆ. ಮೃತ ಚಾಕಿ ಅವರು ಹೃದ್ರೋಗ ಹಾಗೂ ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಪಬ್ನಾ ಜೈಲು ಅಧೀಕ್ಷಕ ಮುಹಮ್ಮದ್ ಉಮರ್ ಫಾರೂಕ್ ಹೇಳಿದ್ದಾರೆ.
“ಯಾವುದೇ ಪ್ರಕರಣ ಇಲ್ಲದಿದ್ದರೂ ನನ್ನ ತಂದೆಯನ್ನು ಬಂಧಿಸಲಾಗಿದೆ. ಅವರಿಗೆ ದೀರ್ಘಕಾಲದಿಂದ ಮಧುಮೇಹ ಮತ್ತು ಹೃದ್ರೋಗ ಇತ್ತು. ಜೈಲಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಇತರರಿಂದ ಮಾಹಿತಿ ಪಡೆದ ನಂತರ ಆಸ್ಪತ್ರೆಗೆ ಧಾವಿಸಿದ್ದೇವೆ. ಆದರೆ ಇಲ್ಲಿ ಸೂಕ್ತ ಚಿಕಿತ್ಸೆ ದೊರಕದ ಕಾರಣ ಅವರು ಮೃತಪಟ್ಟರು,” ಎಂದು ಪ್ರೊಲೋಯ್ ಅವರ ಪುತ್ರ ಆರೋಪಿಸಿದ್ದಾರೆ.