Iran ವಿರುದ್ಧ ಮಿಲಿಟರಿ ಬಲಪ್ರಯೋಗಕ್ಕೆ ಅಮೆರಿಕ ಚಿಂತನೆ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಇರಾನ್ ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳ ಮೇಲೆ ನಡೆಯುತ್ತಿರುವ ದಮನಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ವಿರುದ್ಧ ಅಮೆರಿಕ “ಬಹಳ ಬಲವಾದ ಆಯ್ಕೆಗಳನ್ನು” ಪರಿಗಣಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಆಯ್ಕೆಗಳಲ್ಲಿ ಸಂಭಾವ್ಯ ಮಿಲಿಟರಿ ದಾಳಿಯೂ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ರವಿವಾರ ತಡರಾತ್ರಿ ಏರ್ ಫೋರ್ಸ್ ಒನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ. ಮಿಲಿಟರಿ ಬಳಕೆಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಹಲವು ಬಲವಾದ ಆಯ್ಕೆಗಳು ನಮ್ಮ ಮುಂದೆ ಇವೆ. ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.
ಮಿಲಿಟರಿ ಕ್ರಮದ ಬೆದರಿಕೆಗಳ ನಂತರ ಇರಾನ್ ನಾಯಕತ್ವವು ಮಾತುಕತೆಗೆ ಮುಂದಾಗಿದೆ ಎಂದು ಟ್ರಂಪ್ ತಿಳಿಸಿದರು. “ಸಭೆಯನ್ನು ನಿಗದಿಪಡಿಸಲಾಗುತ್ತಿದೆ. ಆದರೆ ಸಭೆಗೆ ಮೊದಲು ಕ್ರಮ ಕೈಗೊಳ್ಳಬೇಕಾದ ಪರಿಸ್ಥಿತಿಯೂ ಎದುರಾಗಬಹುದು” ಎಂದು ಅವರು ಎಚ್ಚರಿಕೆ ನೀಡಿದರು. ಈ ಹೇಳಿಕೆಗಳಿಗೆ ಟೆಹ್ರಾನ್‌ನಿಂದ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಇದಕ್ಕೂ ಮೊದಲು ಇರಾನ್ ನಾಯಕರು ಅಮೆರಿಕದ ಮಿಲಿಟರಿ ಹಸ್ತಕ್ಷೇಪದ ವಿರುದ್ಧ ಕಠಿಣ ಎಚ್ಚರಿಕೆ ನೀಡಿದ್ದರು. “ಇರಾನ್ ಮೇಲೆ ದಾಳಿ ನಡೆದರೆ ಇಸ್ರೇಲ್ ಆಕ್ರಮಿತ ಪ್ರದೇಶಗಳು, ಜೊತೆಗೆ ಎಲ್ಲಾ ಅಮೆರಿಕ ಸೇನಾ ನೆಲೆಗಳು ಹಾಗೂ ಹಡಗುಗಳು ನಮ್ಮ ಕಾನೂನುಬದ್ಧ ಗುರಿಯಾಗುತ್ತವೆ” ಎಂದು ಸಂಸತ್ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್ ಹೇಳಿದ್ದಾರೆ.
ಡಿಸೆಂಬರ್ 28ರಂದು ಟೆಹ್ರಾನ್ ನ ಗ್ರ್ಯಾಂಡ್ ಬಝಾರ್ ನಲ್ಲಿ ವ್ಯಾಪಾರಿಗಳು ಇರಾನಿನ ರಿಯಾಲ್ ಮೌಲ್ಯ ಕುಸಿತದ ವಿರುದ್ಧ ಅಂಗಡಿಗಳನ್ನು ಮುಚ್ಚಿದ ಬಳಿಕ ದೇಶದಲ್ಲಿ ಪ್ರತಿಭಟನೆಗಳು ಆರಂಭವಾಗಿದ್ದವು. ಹೆಚ್ಚುತ್ತಿರುವ ಜೀವನ ವೆಚ್ಚದ ವಿರುದ್ಧದ ಅಸಮಾಧಾನ, ಸರಕಾರದ ವಿರುದ್ಧ ವ್ಯಾಪಕ ವಿರೋಧಕ್ಕೆ ಕಾರಣವಾಗಿ, ಪ್ರತಿಭಟನೆಗಳು ದೇಶಾದ್ಯಂತ ಹರಡಿವೆ.
ಇರಾನಿನ ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಈಗ ಉಂಟಾಗಿರುವ ಪ್ರತಿಭಟನೆಯಲ್ಲಿ ಕನಿಷ್ಠ 109 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಆದರೆ ವಿದೇಶದಲ್ಲಿರುವ ಕಾರ್ಯಕರ್ತರು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಿದ್ದು ನೂರಾರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಮೇಲ್ವಿಚಾರಣಾ ಸಂಸ್ಥೆಗಳ ಮಾಹಿತಿ ಪ್ರಕಾರ, ದೇಶಾದ್ಯಂತ ಇಂಟರ್ನೆಟ್ ಸಂಪರ್ಕ ಕಡಿತವು 72 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದೆ.
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ರವಿವಾರ, ತಮ್ಮ ಸರ್ಕಾರ ಪ್ರತಿಭಟನಾಕಾರರ ಮಾತುಗಳನ್ನು ಕೇಳಲು ಸಿದ್ಧವಾಗಿದೆ ಎಂದು ಹೇಳಿದರು. ಆದರೆ ಗಲಭೆಕೋರರು ವಿನಾಶಕಾರಿ ಚಟುವಟಿಕೆಗಳಲ್ಲಿ ತೊಡಗುವುದನ್ನು ತಡೆಯುವಂತೆ ಸಾರ್ವಜನಿಕರನ್ನು ಅವರು ಮನವಿ ಮಾಡಿದರು. ಕಳೆದ ವರ್ಷದ ಜೂನ್ ನಲ್ಲಿ ಇರಾನ್ ವಿರುದ್ಧ 12 ದಿನಗಳ ಯುದ್ಧ ನಡೆಸಿದ ಇಸ್ರೇಲ್ ಮತ್ತು ಅಮೆರಿಕವೇ ಈ ಅಶಾಂತಿಯ ಹಿಂದೆ ಇರುವ ಶಕ್ತಿಗಳು ಎಂದು ಅವರು ಆರೋಪಿಸಿದರು.
ಇರಾನ್ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಚರ್ಚಿಸಲು ಟ್ರಂಪ್ ಮಂಗಳವಾರ ಹಿರಿಯ ಸಲಹೆಗಾರರನ್ನು ಭೇಟಿಯಾಗಲಿದ್ದಾರೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಿಲಿಟರಿ ದಾಳಿಗಳು, ರಹಸ್ಯ ಸೈಬರ್ ಕಾರ್ಯಾಚರಣೆಗಳು, ನಿರ್ಬಂಧಗಳ ವಿಸ್ತರಣೆ ಹಾಗೂ ಸರ್ಕಾರ ವಿರೋಧಿ ಗುಂಪುಗಳಿಗೆ ಆನ್‌ಲೈನ್ ಬೆಂಬಲ ನೀಡುವುದು ಸೇರಿದಂತೆ ಹಲವು ಆಯ್ಕೆಗಳು ಪರಿಶೀಲನೆಯಲ್ಲಿವೆ.
ಇದೇ ವೇಳೆ, ಇರಾನ್ ನಲ್ಲಿ ಇಂಟರ್ನೆಟ್ ಸಂಪರ್ಕ ಮರುಸ್ಥಾಪನೆ ಕುರಿತು ಬಿಲಿಯನೇರ್ ಎಲಾನ್ ಮಸ್ಕ್ ಅವರೊಂದಿಗೆ ಮಾತನಾಡಲು ಯೋಜನೆ ಇದೆ ಎಂದು ಟ್ರಂಪ್ ತಿಳಿಸಿದ್ದಾರೆ.