ಡೊನಾಲ್ಡ್ ಟ್ರಂಪ್ | Photo Credit : PTI 

ವಾಶಿಂಗ್ಟನ್: ಅಮೆರಿಕದಲ್ಲಿ ವಿದೇಶಿ ವಿದ್ಯಾರ್ಥಿಗಳು ಎಷ್ಟು ಸಮಯ ಉಳಿಯಬಹುದು ಎಂಬುದನ್ನು ನಿಯಂತ್ರಿಸುವ ಹಳೆಯ ವ್ಯವಸ್ಥೆಯನ್ನು ಬದಲಾಯಿಸಲು ಡೊನಾಲ್ಡ್ ಟ್ರಂಪ್ ಆಡಳಿತ ತಂದಿದ್ದ ನಿಯಮವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ತಡೆಹಿಡಿದಿದ್ದಾರೆ. ಇದು ಭಾರತ ಸೇರಿದಂತೆ ಸಾವಿರಾರು ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ತಾತ್ಕಾಲಿಕ `ರಿಲೀಫ್' ನೀಡಿದೆ.

ಹೊಸ ಬದಲಾವಣೆಗಳ ಪ್ರಕಾರ ಅಂತರ್‍ರಾಷ್ಟ್ರೀಯ ವಿದ್ಯಾರ್ಥಿಗಳು ಮತ್ತು ಸಾಂಸ್ಕೃತಿಕ ವಿನಿಮಯ ಭೇಟಿದಾರರ ವಾಸ್ತವ್ಯವನ್ನು ಗರಿಷ್ಠ 4 ವರ್ಷಗಳಿಗೆ ಸೀಮಿತಗೊಳಿಸಲು ಹಾಗೂ ವಿದೇಶಿ ಪತ್ರಕರ್ತರಿಗೆ 240 ದಿನಗಳ ಮಿತಿಯನ್ನು ಹೇರಲು ಯೋಜಿಸಲಾಗಿತ್ತು. ಈ ನಿಯಮಕ್ಕೆ ಬಾಸ್ಟನ್‍ನ ಜಿಲ್ಲಾ ನ್ಯಾಯಾಧೀಶರು ಸೋಮವಾರ ತಡೆ ನೀಡಿದ್ದಾರೆ.

ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಅಥವಾ ಕಲಿಯಲು ಯೋಜಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಈ ತೀರ್ಪು ಅತ್ಯಂತ ಪ್ರಮುಖವಾಗಿದೆ. 4 ವರ್ಷಗಳ ಕಾಲಮಿತಿಯು ದೀರ್ಘಾವಧಿಯ ಹಾಗೂ ಸಂಶೋಧನಾ ಆಧಾರಿತ ಕೋರ್ಸ್‍ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆ ಉಂಟುಮಾಡುತ್ತಿತ್ತು.

ದಶಕಗಳಿಂದ, ಎಫ್-1 ವೀಸಾ ಅಡಿಯಲ್ಲಿ ಅಮೆರಿಕ ಪ್ರವೇಶಿಸುವ ಹೆಚ್ಚಿನ ಅಂತರ್‍ರಾಷ್ಟ್ರೀಯ ವಿದ್ಯಾರ್ಥಿಗಳಿಗೆ `ಡ್ಯುರೇಷನ್ ಆಫ್ ಸ್ಟೇಟಸ್' ಎಂಬ ನಿಯಮದಡಿ ಪ್ರವೇಶ ನೀಡಲಾಗುತ್ತಿತ್ತು. ಇದರ ಪ್ರಕಾರ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಂದುವರಿಸುವವರೆಗೆ ಮತ್ತು ನಿಗದಿತ ಮಾನದಂಡಗಳನ್ನು ಪಾಲಿಸುವವರೆಗೆ ದೇಶದಲ್ಲಿ ಉಳಿಯಲು ಅವಕಾಶವಿತ್ತು. ಆದರೆ ಟ್ರಂಪ್ ಆಡಳಿತವು ಈ ವ್ಯವಸ್ಥೆಯ ಬದಲಿಗೆ ನಿರ್ದಿಷ್ಟ ಅವಧಿಯ ಪ್ರವೇಶ ನಿಯಮವನ್ನು ತರಲು ಬಯಸಿತ್ತು.

ಹೆಚ್ಚುವರಿ ಸಮಯ ಬೇಕಾಗುವ ವಿದ್ಯಾರ್ಥಿಗಳು ವಿಸ್ತರಣೆಗಾಗಿ ಅರ್ಜಿ ಸಲ್ಲಿಸಬೇಕಾಗುತ್ತಿತ್ತು,

ಸದ್ಯಕ್ಕೆ, ಈ 4 ವರ್ಷಗಳ ಮಿತಿ ಜಾರಿಗೆ ಬರುವುದಿಲ್ಲ. ಅಂತರ್‍ರಾಷ್ಟ್ರೀಯ ವಿದ್ಯಾರ್ಥಿಗಳು ಪ್ರಸ್ತುತ ಇರುವ ವ್ಯವಸ್ಥೆಯಡಿಯಲ್ಲೇ ಮುಂದುವರಿಯಬಹುದು. ಈ 4 ವರ್ಷಗಳ ನಿಬರ್ಂಧಕ್ಕೆ ಸದ್ಯಕ್ಕೆ ತಡೆ ನೀಡಲಾಗಿದೆ, ಆದರೆ ಈ ವಿಷಯವು ಶಾಶ್ವತವಾಗಿ ಪರಿಹಾರವಾಗಿಲ್ಲ. ಸರಕಾರವು ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor