×
Ad

ಜೆಎನ್‌ಯು: ದೇಶದ ವಿಶ್ವವಿದ್ಯಾನಿಲಯಗಳಿಗೆ ಮಾರ್ಗದರ್ಶಕ

Update: 2026-01-27 11:24 IST

ಜೆಎನ್‌ಯುನ ಚಾರಿತ್ರಿಕ ಬೆಳವಣಿಗೆಯನ್ನು ತಿಳಿಯಬೇಕೆಂಬ ಕುತೂಹಲದಿಂದ ಮೂಲತಃ ಕರ್ನಾಟಕದವರೇ ಆದ ಜಾನಕಿ ನಾಯರ್ ಅವರನ್ನು ಒಳಗೊಂಡಂತೆ ನೀಲಾದ್ರಿ ಭಟ್ಟಾಚಾರ್ಯ, ಕುನಾಲ್ ಚಕ್ರಬರ್ತಿ, ಎಸ್. ಗುಣಶೇಖರ್, ಜಾಯ್ ಎಲ್.ಕೆ. ಪಾಚುವ ಅವರುಗಳು ಸಂಪಾದನೆ ಮಾಡಿದ ‘ಜೆಎನ್‌ಯು ಸ್ಟೋರೀಸ್: ದ ಫಸ್ಟ್ ಫಿಪ್ಟಿ ಇಯರ್ಸ್‌’ ಕೃತಿಯನ್ನು ಗಮನಿಸಿದೆ. ಈ ಕೃತಿಯು ಜೆಎನ್‌ಯುನ ಚಾರಿತ್ರಿಕ ಬೆಳವಣಿಗೆಗಳ ಹಲವು ಆಯಾಮಗಳನ್ನು ಕಾಣಿಸುತ್ತದೆ.

ಕಳೆದ ಜನವರಿ 7ರಿಂದ ದೇಶದ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು)ಮಾಳವಿಯ ಮಿಷನ್ ಟೀಚರ್ ಟ್ರೈನಿಂಗ್ ಸೆಂಟರ್‌ನಲ್ಲಿ 21 ದಿನಗಳ ಫ್ಯಾಕಲ್ಟಿ ಇಂಡಕ್ಷನ್ ಪ್ರೋಗ್ರಾಮಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ವಿವಿಧ ವಿಭಾಗಗಳ ಜೆಎನ್‌ಯುನ ಪ್ರೊಫೆಸರ್‌ಗಳ ಪಾಠಗಳನ್ನು ಕೇಳುತ್ತಿದ್ದೇನೆ. ಇದರ ಜತೆಗೆ ಕ್ಯಾಂಪಸ್‌ನಲ್ಲಿ ನಡೆದಾಡುತ್ತಾ ನೀಲ್‌ಗಾಯ್‌ಗಳು, ನವಿಲುಗಳು, ನರಿಗಳು, ಗಿಳಿ-ಗೊರವಂಕ ಮೊದಲಾದ ಜೀವ ವೈವಿಧ್ಯಗಳನ್ನು, ದಟ್ಟವಾದ ಕಾಡಿನ ಸಸ್ಯಲೋಕವನ್ನು ನೋಡುತ್ತಿದ್ದೇನೆ. ಇಡೀ ದಿಲ್ಲಿಯ ವಾತಾವರಣ ಹದಗೆಟ್ಟಿದ್ದರೂ ಜೆಎನ್‌ಯು ಕ್ಯಾಂಪಸ್ ದಟ್ಟವಾದ ಕಾಡಿನಿಂದ ತನ್ನ ಪರಿಸರದ ಭೌತಿಕ ಆರೋಗ್ಯವನ್ನು ಕಾಪಾಡಿಕೊಂಡಿದೆ. ಇದೀಗ ಬೌದ್ಧಿಕ ಆರೋಗ್ಯ ನಿಧಾನಕ್ಕೆ ಹದಗೆಡುತ್ತಿದೆ.

ಮೊನ್ನೆ ಜೆಎನ್‌ಯುನ ಟೆಪ್ಲಾಸ್‌ನಲ್ಲಿ ಮಾರ್ಕ್ಸ್‌ವಾದದ 101ನೇ ವರ್ಷದ ಎರಡನೇ ದಿನದ ನೆನಪಿಗೆ ಕಲೆಕ್ಟಿವ್ ವಿದ್ಯಾರ್ಥಿ ಸಂಘಟನೆಯು ‘ಐತಿಹಾಸಿಕ ಭೌತವಾದ ಮತ್ತು ಭಾರತೀಯ ಸಂದರ್ಭ’ ಮತ್ತು ‘ಲೈಂಗಿಕತೆ ಮತ್ತು ಮಾರ್ಕ್ಸ್‌ವಾದ’ ಕುರಿತು ಚರ್ಚೆ ಸಂವಾದವನ್ನು ಏರ್ಪಡಿಸಿತ್ತು. ನಾನು ಈ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡೆ. ಈ ಚರ್ಚೆಯಲ್ಲಿ ಜತೆಯಾದ ವಿದ್ಯಾರ್ಥಿಗಳ ಗಂಭೀರತೆ, ಕೇಳಿದ ಪ್ರಶ್ನೆಗಳು, ನಡೆದ ಸಂವಾದ ಬೌದ್ಧಿಕ ನೆಲೆಯಲ್ಲಿ ಬಹಳ ಗಂಭೀರವಾದದ್ದು. ಇಂತಹ ಗಂಭೀರ ಚರ್ಚೆಗಳು ಈಗ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವುದು ಅಪರೂಪ. ಕಳೆದ ಒಂದು ದಶಕದಿಂದ ಜೆಎನ್‌ಯು ವಿದ್ಯಾರ್ಥಿಗಳನ್ನು ಮಾಧ್ಯಮಗಳು ನಕಾರಾತ್ಮಕವಾಗಿಯೇ ಹೆಚ್ಚು ತೋರಿಸುತ್ತಿವೆ. ವಿದ್ಯಾರ್ಥಿ ವಲಯದ ಇಂತಹ ವಿದ್ವತ್ಪೂರ್ಣ ಚರ್ಚೆ ಸಂವಾದಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತದೆ.

ಭಾರತದ ಬೇರೆ ಬೇರೆ ರಾಜ್ಯಗಳಿಂದ ಹಲವು ಸಾಮಾಜಿಕ, ಆರ್ಥಿಕ ಹಿನ್ನೆಲೆಗಳಿಂದ ಬಂದ ವಿದ್ಯಾರ್ಥಿಗಳ ಜತೆ ಒಡನಾಡುತ್ತಿದ್ದೇನೆ. ಇಲ್ಲಿನ ಕೆಂಪು ಇಟ್ಟಿಗೆಯ ಗೋಡೆಗಳು, ಈ ಗೋಡೆಗಳಿಗೆ ಅಂಟಿಸಿದ ಪೋಸ್ಟರುಗಳು, ವಿವಿಧ ವಿಭಾಗಗಳ ನೋಟಿಸ್ ಬೋರ್ಡುಗಳು ಈ ವಿಶ್ವವಿದ್ಯಾನಿಲಯದ ಕ್ರಿಯಾಶೀಲತೆಯನ್ನು, ಸಿದ್ಧಾಂತವನ್ನು ಬದಲಾಗುತ್ತಿರುವ ಜೆಎನ್‌ಯುನ ಹೊಸ ಆಯಾಮಗಳನ್ನು ಕಾಣಿಸುತ್ತಿದೆ. ಕಳೆದ ಹದಿನೈದು ವರ್ಷಗಳ ಹಿಂದೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ಓಡಾಡಿದ ನೆನಪುಗಳನ್ನು, ವಿದ್ಯಾರ್ಥಿ ಸಮೂಹದ ಜತೆ ನಡೆಸಿದ್ದ ಮಾತುಕತೆಗಳನ್ನು ನೆನಪಿಸಿಕೊಂಡರೆ ಈ ವ್ಯತ್ಯಾಸ ಢಾಳಾಗಿ ಕಾಣುತ್ತಿದೆ. ಈಗಿನ ಕೆಲವು ಅಧ್ಯಾಪಕರುಗಳ ಜತೆಗಿನ ಮಾತುಕತೆಯಲ್ಲಿ ಜೆಎನ್‌ಯುನ ವೈಚಾರಿಕ ವೈಜ್ಞಾನಿಕ ಅರಿವಿನ ಪ್ರಖರತೆಯ ಗತ ವೈಭವದ ಬಗೆಗಿನ ಅಪಾರವಾದ ಗೌರವವೂ, ಸದ್ಯಕ್ಕೆ ಸಡಿಲಗೊಳ್ಳುತ್ತಿರುವ ಜೆಎನ್‌ಯುನ ಸೈದ್ಧಾಂತಿಕ ಭದ್ರಕೋಟೆಯ ಬಗೆಗಿನ ಆತಂಕವೂ ಎದ್ದು ಕಾಣುತ್ತಿತ್ತು.

ಜೆಎನ್‌ಯುನ ಚಾರಿತ್ರಿಕ ಬೆಳವಣಿಗೆಯನ್ನು ತಿಳಿಯಬೇಕೆಂಬ ಕುತೂಹಲದಿಂದ ಮೂಲತಃ ಕರ್ನಾಟಕದವರೇ ಆದ ಜಾನಕಿ ನಾಯರ್ ಅವರನ್ನು ಒಳಗೊಂಡಂತೆ ನೀಲಾದ್ರಿ ಭಟ್ಟಾಚಾರ್ಯ, ಕುನಾಲ್ ಚಕ್ರಬರ್ತಿ, ಎಸ್. ಗುಣಶೇಖರ್, ಜಾಯ್ ಎಲ್.ಕೆ. ಪಾಚುವ ಅವರುಗಳು ಸಂಪಾದನೆ ಮಾಡಿದ ‘ಜೆಎನ್‌ಯು ಸ್ಟೋರೀಸ್: ದ ಫಸ್ಟ್ ಫಿಪ್ಟಿ ಇಯರ್ಸ್‌’ ಕೃತಿಯನ್ನು ಗಮನಿಸಿದೆ. ಈ ಕೃತಿಯು ಜೆಎನ್‌ಯುನ ಚಾರಿತ್ರಿಕ ಬೆಳವಣಿಗೆಗಳ ಹಲವು ಆಯಾಮಗಳನ್ನು ಕಾಣಿಸುತ್ತದೆ. ಮುಖ್ಯವಾಗಿ ಜೆಎನ್‌ಯುನ ಮಿತಿಗಳನ್ನು ಕೂಡ ಆರೋಗ್ಯಕರವಾಗಿ ಚರ್ಚಿಸುತ್ತದೆ. ಸುಖದೇವ ಥೋರಟ್, ರೋಮಿಲಾ ಥಾಪರ್, ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ, ಗೋಪಾಲ್ ಗುರು, ನಾಗೇಶ ಹೆಗಡೆ ಒಳಗೊಂಡಂತೆ ಇಂಡಿಯಾದ ಪ್ರತಿಷ್ಠಿತ ವಿದ್ವಾಂಸರು, ರಾಜಕಾರಣಿಗಳು, ವಿಜ್ಞಾನಿಗಳು ತಮ್ಮ ಜೆಎನ್‌ಯು ಅನುಭವಗಳನ್ನು ಬರೆದಿದ್ದಾರೆ. ಜೆಎನ್‌ಯು ಅಲ್ಯುಮಿನಿಗಳನ್ನು ಗಮನಿಸಿದರೆ ಈ ವಿಶ್ವವಿದ್ಯಾನಿಲಯ ಎಷ್ಟು ದೊಡ್ಡ ಸಮಾಜ ವಿಜ್ಞಾನಿಗಳನ್ನು, ರಾಜಕೀಯ ಚಿಂತಕರನ್ನು, ಪತ್ರಕರ್ತರನ್ನು, ಆರ್ಥಿಕ ಸಾಮಾಜಿಕ ನೀತಿ ನಿರೂಪಕರನ್ನು ರೂಪಿಸಿದೆ ಎನ್ನುವುದು ಅರ್ಥವಾಗುತ್ತದೆ.

ಜೆಎನ್‌ಯುಗೆ ‘ಜವಹರಲಾಲ್ ನೆಹರೂ’ ಹೆಸರು ಬಂದದ್ದು ಹೇಗೆ ಎಂದು ತಿಳಿದರೆ ನೆಹರೂ ದೂರದೃಷ್ಟಿ ಅರ್ಥವಾಗುತ್ತದೆ. ಹೊಸ ವಿಶ್ವವಿದ್ಯಾನಿಲಯ ರೂಪಿಸಲು ಯುಜಿಸಿ ಶಿಕ್ಷಣ ಸಚಿವಾಲಯಕ್ಕೆ ಒಂದು ಯೋಜನೆಯನ್ನು ಕಳುಹಿಸಿತು. 1963ರಲ್ಲಿ ಸಚಿವಾಲಯವು ವಿಸ್ತಾರವಾದ ಪ್ರಸ್ತಾವವನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚಿಸಿತು. ಆಗ ಶಿಕ್ಷಣ ಸಚಿವರಾಗಿದ್ದ ಎಂ.ಸಿ. ಚಾಗ್ಲಾ ಅವರು ನೆಹರೂ ಅವರೊಂದಿಗೆ ಚರ್ಚಿಸಿದ್ದನ್ನು ತಮ್ಮ ಆತ್ಮಚರಿತ್ರೆಯಲ್ಲಿ ದಾಖಲಿಸುತ್ತಾರೆ.

‘‘ನಾನು ಒಮ್ಮೆ ನೆಹರೂ ಅವರ ಬಳಿ ‘ದೆಹಲಿ ಬೆಳೆಯುತ್ತಿದೆ ಒಂದು ವಿಶ್ವವಿದ್ಯಾನಿಲಯವು ಸಾಕಾಗುವುದಿಲ್ಲ ಮತ್ತೊಂದು ವಿಶ್ವವಿದ್ಯಾನಿಲಯ ಸ್ಥಾಪಿಸೋಣ’ ಎಂದಾಗ ನೆಹರೂ ಒಪ್ಪಿಕೊಂಡರು. ನಂತರ ನಾನು ಸ್ವಲ್ಪ ಹಿಂಜರಿಕೆಯಿಂದ ‘ಪಂಡಿತ್‌ಜೀ, ಈ ವಿಶ್ವವಿದ್ಯಾನಿಲಯಕ್ಕೆ ನಿಮ್ಮ ಹೆಸರಿಡೋಣ, ನೀವು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದೀರಿ, ಈ ನಗರದಿಂದಲೇ ನಮ್ಮ ದೇಶವನ್ನು ಆಳುತ್ತಿದ್ದೀರಿ.’ ಎಂದಾಗ ನೆಹರೂ ಕೋಪಗೊಂಡರು. ‘ಜೀವಂತ ವ್ಯಕ್ತಿಗಳಿಗೆ ಸ್ಮಾರಕಗಳನ್ನು ನಿರ್ಮಿಸುವುದು ಸಂಪೂರ್ಣವಾಗಿ ತಪ್ಪು. ಜೀವಂತ ವ್ಯಕ್ತಿಗಳಿಗೆ ಯಾವುದೇ ಪ್ರತಿಮೆಗಳನ್ನು ನಿರ್ಮಿಸಬಾರದು, ಯಾವುದೇ ಸಂಸ್ಥೆಗಳಿಗೆ ಅವರ ಹೆಸರನ್ನು ಇಡಬಾರದು. ಬದಲಾಗಿ ಪರ್ವತಶ್ರೇಣಿಯ ಹೆಸರಾದ ‘ರೈಸಿನಾ’ ಎಂದು ಹೆಸರಿಡಲು ಸೂಚಿಸುತ್ತಾರೆ. 1964ರ ಮೇ 27ರಂದು ನೆಹರೂ ನಿಧನರಾಗುತ್ತಾರೆ. ಮುಂದೆ ದಿಲ್ಲಿ ವಿಶ್ವವಿದ್ಯಾನಿಲಯದ ದಕ್ಷಿಣ ಕ್ಯಾಂಪಸ್ ಎಂದು ಕಲ್ಪಿಸಲಾದ ಈ ಹೊಸ ವಿಶ್ವವಿದ್ಯಾನಿಲಯವನ್ನು ನೆಹರೂ ಅವರ ಸ್ಮರಣೆಗಾಗಿ 1964ರ ಡಿಸೆಂಬರ್ 24ರಂದು ರಾಜ್ಯಸಭೆಯಲ್ಲಿ ‘ರೈಸಿನಾ ವಿಶ್ವವಿದ್ಯಾನಿಲಯ’ವನ್ನು ‘ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ’ ಎಂದು ಮರುನಾಮಕರಣ ಮಾಡಲಾಯಿತು’’ ಎನ್ನುತ್ತಾರೆ.

ಜೆಎನ್‌ಯು ಕ್ಯಾಂಪಸ್‌ನ ಆಡಳಿತ ಕಟ್ಟಡದ ಎದುರು ನೆಹರೂ ಪ್ರತಿಮೆಯ ಕೆಳಗೆ ಅವರದ್ದೊಂದು ಹೇಳಿಕೆ ಇದೆ, ‘ಒಂದು ವಿಶ್ವವಿದ್ಯಾನಿಲಯವು ಮಾನವತಾವಾದ, ಸಹಿಷ್ಣುತೆ, ವಿವೇಕ, ವೈಚಾರಿಕತೆ ಮತ್ತು ಸತ್ಯದ ಹುಡುಕಾಟದ ಪರ ನಿಲ್ಲಬೇಕಾಗುತ್ತದೆ. ಅದು ಮಾನವ ಜನಾಂಗದ ಉನ್ನತ ಮೌಲ್ಯಗಳನ್ನು ಪ್ರತಿನಿಧಿಸಬೇಕು. ಈ ಕರ್ತವ್ಯಗಳನ್ನು ವಿಶ್ವವಿದ್ಯಾನಿಲಯಗಳು ಸಮರ್ಥವಾಗಿ ನಿರ್ವಹಿಸಿದರೆ, ಅದು ರಾಷ್ಟ್ರ ಮತ್ತು ಜನರಿಗೆ ಒಳ್ಳೆಯದು’ ಎನ್ನುವುದು. ಇದು ವಿಶ್ವವಿದ್ಯಾನಿಲಯವೊಂದು ಹೇಗಿರಬೇಕು ಎನ್ನುವುದರ ಬಗೆಗಿನ ನೆಹರೂ ಅವರ ಕನಸಾಗಿತ್ತು. ಮೊದಲ ಆರಂಭದ 50 ವರ್ಷಗಳ ಜೆಎನ್‌ಯು ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ನೆಹರೂ ಕನಸನ್ನು ನನಸಾಗಿಸಲು ದುಡಿದಿದೆ.

ಜೆಎನ್‌ಯು ಪ್ರಯೋಗವು 1970ರಲ್ಲಿ ಪ್ರಾರಂಭವಾಯಿತು ಮತ್ತು 1980ರ ದಶಕದ ಹೊತ್ತಿಗೆ ಜನರು ಈ ವಿಶ್ವವಿದ್ಯಾನಿಲಯವನ್ನು ಪಶ್ಚಿಮದ ಆಕ್ಸ್‌ಫರ್ಡ್ ಮತ್ತು ಕೇಂಬ್ರಿಡ್ಜ್‌ನೊಂದಿಗೆ ಹೋಲಿಸತೊಡಗಿದರು. ಇದು ಭಾರತದ ವಿಶ್ವವಿದ್ಯಾನಿಲಯಗಳ ಇತಿಹಾಸದಲ್ಲಿ ಒಂದು ಹೊಸ ಮೈಲುಗಲ್ಲನ್ನು ಸ್ಥಾಪಿಸಿತ್ತು. ಪ್ರೊ. ಸುಖದೇವ ಥೋರಟ್ ಹೇಳುವಂತೆ, ‘ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷನಾಗಿ, ದೇಶದ ವಿಶ್ವವಿದ್ಯಾನಿಲಯಗಳನ್ನು ಹತ್ತಿರದಿಂದ ಗಮನಿಸಿದ್ದೇನೆ, ಅಂತೆಯೇ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (ಯುಜಿಸಿ ಅಡಿಯಲ್ಲಿ) ಅಧ್ಯಕ್ಷನಾಗಿ, ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ಸಂಶೋಧನೆ ಮತ್ತು ಬೋಧನೆಯ ಗುಣಮಟ್ಟದ ಮೌಲ್ಯಮಾಪನಕ್ಕೂ ಸಾಕ್ಷಿಯಾಗಿದ್ದೇನೆ. ಆದರೆ ಭಾರತದಲ್ಲಿ ಯಾವುದೇ ಸಾರ್ವಜನಿಕ ವಿಶ್ವವಿದ್ಯಾನಿಲಯವು ಇಷ್ಟು ಕಡಿಮೆ ಸಮಯದಲ್ಲಿ ದೇಶದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿಲ್ಲ’’ ಎನ್ನುತ್ತಾರೆ.

ಜೆಎನ್‌ಯುನ ವಿಶೇಷವೆಂದರೆ, ಸಂವಿಧಾನದಲ್ಲಿ ಶಾಸನಬದ್ಧ ಮೀಸಲಾತಿ ಜಾರಿಗೆ ಬರುವ ಮೊದಲೇ, ತನ್ನ ಪ್ರವೇಶದಲ್ಲಿ ಮೀಸಲಾತಿಯನ್ನು ಅನುಸರಿಸಿತ್ತು. ಅವಕಾಶ ವಂಚಿತರು, ಆದಿವಾಸಿ, ಬುಡಕಟ್ಟು, ಹಿಂದುಳಿದ ವರ್ಗ, ಅಂಚಿನ ಸಮುದಾಯಗಳ ವಿದ್ಯಾರ್ಥಿಗಳನ್ನು ಪರಿಗಣಿಸಿತ್ತು. ಅಂತೆಯೇ ಪ್ರಾದೇಶಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಯನ್ನು ಆಯ್ಕೆಯ ಮಾನದಂಡವನ್ನಾಗಿಸಿಕೊಂಡಿತ್ತು. ಭಾರತದ ಯಾವುದೇ ಕುಗ್ರಾಮದಿಂದ ಬಂದ ವಿದ್ಯಾರ್ಥಿಯೂ ಕಟ್ಟಬಹುದಾದ ಕನಿಷ್ಠ ಫೀಸು ಮತ್ತು ಗರಿಷ್ಠ ಸೌಲಭ್ಯಗಳನ್ನು ಒದಗಿಸಿತು. ಇದರಿಂದಾಗಿ ಯಾವ ಸಮುದಾಯದ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳ ಮೆಟ್ಟಿಲು ಹತ್ತಲು ಸಾಧ್ಯವಿರಲಿಲ್ಲವೋ ಅಂತಹ ಎಲ್ಲಾ ಅವಕಾಶ ವಂಚಿತ ಸಮುದಾಯಗಳಿಗೆ ಜೆಎನ್‌ಯು ಬಾಗಿಲು ತೆರೆಯಿತು. ಉನ್ನತ ಶಿಕ್ಷಣದಲ್ಲಿ ಮಹಿಳೆ, ಹಿಂದುಳಿದ, ದಲಿತ, ದಮನಿತ ಸಮುದಾಯಗಳಿಗೆ ದೊಡ್ಡ ಅವಕಾಶವನ್ನು ಒದಗಿಸಿತು. ಮೀಸಲಾತಿಯ ಶಾಸನಬದ್ಧ ತೀರ್ಪು ಬಂದಾಕ್ಷಣ ಜೆಎನ್‌ಯು ಅದನ್ನು ಜಾರಿಗೊಳಿಸಿತು. ಇದರಿಂದಾಗಿ ಅಂಚಿನ ಸಮುದಾಯಗಳ ಮೊದಲ ತಲೆಮಾರು ಜೆಎನ್‌ಯುನಲ್ಲಿ ಪ್ರವೇಶ ಪಡೆಯಿತು. ಅವರುಗಳು ವಿವಿಧ ಕ್ಷೇತ್ರಗಳಲ್ಲಿ ತಜ್ಞತೆ ಪಡೆದು ಹೊರಬಂದು ಬದುಕು ಕಟ್ಟಿಕೊಂಡರು. ದೇಶಕ್ಕೂ ಕೊಡುಗೆ ನೀಡುತ್ತಿದ್ದಾರೆ.

ಭಾರತದ ಉನ್ನತ ಶಿಕ್ಷಣವನ್ನು ರೂಪಿಸುತ್ತಿರುವ ಯುನಿವರ್ಸಿಟಿ ಗ್ರಾಂಟ್ ಕಮಿಷನ್ (ಯುಜಿಸಿ) 1953ರಲ್ಲಿ ಸ್ಥಾಪನೆಯದರೂ, 1969ರಲ್ಲಿ ಜೆಎನ್‌ಯು ಸ್ಥಾಪನೆಯ ನಂತರ ಯುಜಿಸಿ ರೂಪಿಸಿದ ಬಹುಪಾಲು ಯೋಜನೆಗಳು ಜೆಎನ್‌ಯುನಲ್ಲಿ ನಡೆದ ಪ್ರಯೋಗಗಳಿಂದಲೂ, ಜೆಎನ್‌ಯು ಸಂಶೋಧನೆಗಳ ಫಲಿತಗಳಿಂದಲೂ, ಜೆಎನ್‌ಯುನ ವಿದ್ವಾಂಸರೊಂದಿಗಿನ ಚರ್ಚೆಗಳಿಂದಲೂ ರೂಪುಗೊಂಡಿವೆ. ಅಂದರೆ ಯುಜಿಸಿಯ ನಿಯಮಾವಳಿಯ ಆಧಾರದಲ್ಲಿ ನಡೆಯುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಾದ ವಿಶ್ವವಿದ್ಯಾನಿಲಯಗಳು, ಪದವಿ ಕಾಲೇಜುಗಳಿಗೆ ಪರೋಕ್ಷವಾಗಿ ಜೆಎನ್‌ಯುನ ಮಾರ್ಗದರ್ಶನವಿದೆ. ಯಾರು ಜೆಎನ್‌ಯುವನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದಾರೆಯೋ ಅವರುಗಳು ಪರೋಕ್ಷವಾಗಿ ಜೆಎನ್‌ಯು ರೂಪಿಸಿದ ನಿಯಮಾವಳಿಗಳ ಅಡಿಯಲ್ಲೇ ಅಧ್ಯಾಪನ ಸಂಶೋಧನೆ ಮಾಡುತ್ತಿರುತ್ತಾರೆ. ಅದುವೇ ಇಂಡಿಯಾದಲ್ಲಿ ಜೆಎನ್‌ಯುನ ಶಕ್ತಿಯಾಗಿದೆ. ಅಷ್ಟೇ ಅಲ್ಲ ಎಪ್ಪತ್ತರ ದಶಕದ ನಂತರ ಭಾರತದ ಕೇಂದ್ರ ಸರಕಾರ ರೂಪಿಸಿದ ಉನ್ನತ ಶಿಕ್ಷಣದ ಯೋಜನೆಗಳ ಮೇಲೆ ಜೆಎನ್‌ಯು ಪ್ರಭಾವ ಇರುವುದನ್ನು ಮರೆಯುವಂತಿಲ್ಲ. ಹಾಗಾಗಿ ಜೆಎನ್‌ಯು ದೇಶದ ಉನ್ನತ ಶಿಕ್ಷಣವನ್ನು ಮಾತ್ರವಲ್ಲ ಹಲವು ಸಾಮಾಜಿಕ ನ್ಯಾಯದ ಪಾಲಿಸಿಗಳನ್ನು ಪ್ರಭಾವಿಸಿದೆ.

ಇತ್ತೀಚಿನವರೆಗೂ, ಜೆಎನ್‌ಯು ಅಧ್ಯಾಪಕರಿಗೆ ಅವರ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಸ್ವಾತಂತ್ರ್ಯ ಮತ್ತು ಮುಕ್ತ ಅವಕಾಶ ನೀಡಿತ್ತು. ಇದರಲ್ಲಿ ಸಂಶೋಧನೆಗಾಗಿ ಮೂರು ವರ್ಷಗಳಿಗೊಮ್ಮೆ ಆರು ತಿಂಗಳ ರಜೆ ಅಥವಾ ಆರು ವರ್ಷಗಳ ನಂತರ ಒಂದು ವರ್ಷದವರೆಗೆ, ಅಧ್ಯಯನ ರಜೆ ಪಡೆಯಬಹುದಿತ್ತು. ಇದು ಅಧ್ಯಾಪಕರು ಆಳವಾದ ಅಧ್ಯಯನ ಮತ್ತು ಸಂಶೋಧನೆಗೆ ತೊಡಗಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡುತ್ತಿತ್ತು. ಇದರ ಫಲವಾಗಿಯೇ ಜೆಎನ್‌ಯು ದೇಶ ವಿದೇಶಗಳ ಗಮನಸೆಳೆಯುವಂತಹ ಪ್ರಖರ ವಿದ್ವಾಂಸರನ್ನು ಹುಟ್ಟುಹಾಕಿದೆ. ಜೆಎನ್‌ಯುನ ಮತ್ತೊಂದು ಮಹತ್ವದ ನಡೆಯೆಂದರೆ ಆಡಳಿತದ ವಿಕೇಂದ್ರೀಕರಣ ವಿಧಾನ. ಜೆಎನ್‌ಯು ಆಡಳಿತದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕೇತರ ಸಿಬ್ಬಂದಿಯೂ ಸಮಾನ ಪ್ರಾತಿನಿಧ್ಯವನ್ನು ಪಡೆದಿದ್ದರು. ಹಾಗಾಗಿಯೇ ಜೆಎನ್‌ಯುನ ವಿದ್ಯಾರ್ಥಿಗಳ ಸಂಘಟನೆಯು ಬಲವಾಗಿ ಬೆಳೆಯಿತು. ವಿಶ್ವವಿದ್ಯಾನಿಲಯದ ನಿರ್ಧಾರಗಳನ್ನು ಪ್ರಶ್ನಿಸುವ, ಬದಲಿಸುವ ವಿದ್ಯಾರ್ಥಿಗಳ ಪರವಾದ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಸಂಘಟನೆಗಳ ಪಾತ್ರ ದೊಡ್ಡದಿದೆ. ಜೆಎನ್‌ಯು ಕೇಂದ್ರಮಟ್ಟದ ಮೀಸಲಾತಿಯನ್ನು ವಿಶ್ವವಿದ್ಯಾನಿಲಯ ಮಟ್ಟದ ಮೀಸಲಾತಿಯನ್ನಾಗಿ ಬದಲಾಯಿಸಿತು. ಸುಖದೇವ ಥೋರಟ್ ಯುಜಿಸಿ ಅಧ್ಯಕ್ಷರಾಗಿದ್ದಾಗ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳಿಗೂ ಈ ನೀತಿಯನ್ನು ಅನ್ವಯಿಸಿದರು. ಇದರಿಂದಾಗಿ ದೇಶದಾದ್ಯಾಂತ ಮೀಸಲಾತಿಯಿಂದ ಪರಿಶಿಷ್ಟ ಜಾತಿ/ಪಂಗಡ/ಮಹಿಳೆ/ಅಲ್ಪಸಂಖ್ಯಾತ/ಹಿಂದುಳಿದ ಮೊದಲಾದ ವಲಯಗಳಿಂದ ದೊಡ್ಡಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳನ್ನು ಪ್ರವೇಶಿಸಲು ಸಾಧ್ಯವಾಯಿತು.

ಜೆಎನ್‌ಯುನ ಬಹಳ ದೊಡ್ಡ ಕೊಡುಗೆಯೆಂದರೆ, ಅದು ತನ್ನ ವಿಶ್ವವಿದ್ಯಾನಿಲಯಕ್ಕೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ರೂಪಿಸುತ್ತಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸಾಂವಿಧಾನಿಕ ದೃಷ್ಟಿಕೋನ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಸಿಕ್ಕ ಮುಕ್ತ ಸ್ವಾತಂತ್ರ್ಯ, ಭಿನ್ನವಾಗಿ ಆಲೋಚಿಸುವಂತೆ ಮಾಡುತ್ತಿದ್ದ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ನಡೆಯುತ್ತಿದ್ದ ಚರ್ಚೆ, ಸಂವಾದ, ವಾಗ್ವಾದಗಳು. ಡಾಬಾಗಳಲ್ಲಿ ಅಹೋರಾತ್ರಿ ನಡೆಯುತ್ತಿದ್ದ ಮಾತುಕತೆಗಳು. ಅಧ್ಯಾಪಕರು ವಿದ್ಯಾರ್ಥಿಗಳು ಎನ್ನುವ ಭೇದವಿಲ್ಲದೆ ಬೆರೆಯುತ್ತಿದ್ದ ಸಂವಾದ ಸಂಸ್ಕೃತಿ. ಇಡೀ ಕ್ಯಾಂಪಸನ್ನು ಜೀವಪರ ಚಿಂತನೆಯ ಚಿಲುಮೆಯಾಗಿಸಿತ್ತು. ಜೆಎನ್‌ಯುನಿಂದ ಹೊರ ಬಂದ ಅನೇಕರು ಹೊಸ ಆಲೋಚನೆಗಳ ಪ್ರವರ್ತಕರಾಗಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಲೋಕವನ್ನು ಸಮತೆಯ ಕಣ್ಣೋಟದಲ್ಲಿ ಹೇಗೆ ನೋಡಬೇಕು ಎಂಬ ದೃಷ್ಟಿಕೋನವನ್ನು ಕಲಿಸುವುದು, ಮತ್ತು ವೈಯಕ್ತಿಕ ನೆಲೆಯಲ್ಲಿ ಸಾಂವಿಧಾನಿಕ ನೈತಿಕತೆಯನ್ನು ಅಳವಡಿಸಿಕೊಳ್ಳುವಂತೆ ಮಾಡುವುದು ಬಹಳ ಮುಖ್ಯವಾಗಿತ್ತು. ಹೀಗಾಗಿಯೇ ಒಂದು ದಶಕಕ್ಕೂ ಮುಂಚೆ ದೇಶದ ವಿಶ್ವವಿದ್ಯಾನಿಲಯಗಳು ಹೇಗಿರಬೇಕು ಎನ್ನುವುದಕ್ಕೆ ಜೆಎನ್‌ಯು ಉನ್ನತ ಮಾದರಿಯಾಗಿತ್ತು. ಕಳೆದ ಹತ್ತು ವರ್ಷಗಳಲ್ಲಿ ಬಲಪಂಥೀಯ ಚಿಂತನೆಗಳು ಪ್ರವೇಶ ಪಡೆದು ನಿಧಾನಕ್ಕೆ ಬೇರು ಬಿಡುತ್ತಿವೆ. ಇದು ಮುಂದೆ ಮತ್ತಷ್ಟು ಬಲವಾಗಬಹುದು. ಆದರೂ ಜೆಎನ್‌ಯು ಒಳಗಿನ ಆಂತರಿಕ ಪ್ರತಿರೋಧ ಇದನ್ನು ಜೀರ್ಣಿಸಿಕೊಳ್ಳುವುದೋ ಅಥವಾ ಬಲಿಯಾಗುವುದೋ ಕಾದು ನೋಡಬೇಕಷ್ಟೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News