×
Ad

ಸಂವಿಧಾನ ರಚನಾ ಸಭೆಯಿಂದ ಮಗಳಿಗೆ ಬರೆದ ಪತ್ರಗಳು

Update: 2025-11-25 12:20 IST

ಎಸ್.ವಿ. ಕೃಷ್ಣಮೂರ್ತಿ ರಾವ್

ಎಸ್.ವಿ. ಕೃಷ್ಣಮೂರ್ತಿರಾವ್ ಅವರ ‘ದಿಲ್ಲಿಯ ಪತ್ರಗಳು’ ಕೃತಿ ಅಪರೂಪದ ದಾಖಲೆ. ಕಥನ ಮಾದರಿಯಲ್ಲಿಯೂ ಮಗಳ ಜತೆ ಸಂವಾದದ ಮಾದರಿಯಲ್ಲಿಯೂ ಈ ಪತ್ರಗಳಿವೆ. ಕೆಲವು ಖಾಸಗಿಯಾದ ಆಪ್ತ ಸಂಗತಿಗಳನ್ನೂ ಮಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂವಿಧಾನ ರಚನಾ ಸಭೆಯ ಒಳಗೆ ನಡೆಯುವ ಚರ್ಚೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿದ ದಿನ ಮತ್ತು ಗಾಂಧಿ ಹತ್ಯೆಯಾದ ಸಂದರ್ಭಗಳನ್ನು ಪ್ರತ್ಯಕ್ಷದರ್ಶಿಯಾಗಿ ಸವಿವರವಾಗಿ ಚಿತ್ರಿಸಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಏನೇನು ನಡೆಯಿತು ಎನ್ನುವುದನ್ನು ಮಗಳು ಚಂದ್ರಾಳಿಗೆ ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯು ಚಾರಿತ್ರಿಕ ಮಹತ್ವದ್ದಾಗಿದೆ.

ನಾಳೆಗೆ ಸಂವಿಧಾನ ಸಮರ್ಪಣೆ ಆಗಿ 76ನೇ ವರ್ಷಕ್ಕೆ ದಾಟುತ್ತಿದ್ದೇವೆ. ಸದ್ಯಕ್ಕೆ ಸ್ವತಃ ಸಂವಿಧಾನವೇ ಬಿಕ್ಕಟ್ಟಿನಲ್ಲಿದೆ. ಒಂದೆಡೆ ಸಂವಿಧಾನ ಬದಲಾವಣೆ ಚಿತಾವಣೆ, ಮತ್ತೊಂದೆಡೆ ಜನಪರ ಸಂಗಾತಿಗಳು ಸಂವಿಧಾನ ರಕ್ಷಣೆಯ ಜಾಗೃತಿ ಮೂಡಿಸುತ್ತಿರುವುದು ನಡೆಯುತ್ತಿವೆ. ಇಂತಹ ಹೊತ್ತಲ್ಲಿ ಸಂವಿಧಾನ ರಚನಾ ಸಭೆಗಳು ಹೇಗೆ ನಡೆಯುತ್ತಿದ್ದವು, ಒಳ-ಹೊರಗಣ ಚರ್ಚೆಗಳ ಸ್ವಾರಸ್ಯವೇನು ಎನ್ನುವ ಸಂವಿಧಾನ ರಚನಾ ಸಭೆಯ ಅನುಭವಗಳನ್ನು ತನ್ನ ಮಗಳಿಗೆ ಪತ್ರ ಬರೆದು ದಾಖಲಿಸಿದ ಒಂದು ಅಪರೂಪದ ಕೃತಿಯ ಬಗ್ಗೆ ನಿಮ್ಮ ಗಮನಸೆಳೆಯುವೆ.

ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಕೊಡಗು ಪ್ರಾಂತದಿಂದ ಕೆ.ಎಂ.ಪೊನ್ನಪ್ಪ, ಬಾಂಬೆ ಪ್ರಾಂತದಿಂದ ಎಸ್. ನಿಜಲಿಂಗಪ್ಪ ಮತ್ತು ದಿವಾಕರ್, ಮೈಸೂರು ಪ್ರಾಂತದಿಂದ ಕೆ. ಚಂಗಲರಾಯ ರೆಡ್ಡಿ, ಟಿ. ಸಿದ್ದಲಿಂಗಯ್ಯ, ಎಚ್.ಎಲ್. ಗುರುದೇವರೆಡ್ಡಿ, ಎಸ್.ವಿ. ಕೃಷ್ಣಮೂರ್ತಿ ರಾವ್, ಕೆಂಗಲ್ ಹನುಮಂತಯ್ಯ, ಎಚ್. ಸಿದ್ದವೀರಪ್ಪ ಅವರುಗಳು ಆಯ್ಕೆಯಾಗಿದ್ದರು. ಇದರಲ್ಲಿ ಮೂಲತಃ ಸಂತೇಬೆನ್ನೂರಿನ, ನಂತರ ಶಿವಮೊಗ್ಗ ವಾಸಿಯಾಗಿದ್ದ ಎಸ್.ವಿ. ಕೃಷ್ಣಮೂರ್ತಿರಾವ್ ಸಂವಿಧಾನ ರಚನಾ ಸಭೆಗೆ ದಿಲ್ಲಿಗೆ ತೆರಳುತ್ತಾರೆ. ದಿಲ್ಲಿಗೆ ಹೋದ ದಿನದಿಂದ ಅಂದರೆ 12.07.1947ರಿಂದ 19.2.1948ರ ಮಧ್ಯೆ ಆರು ತಿಂಗಳ ದಿಲ್ಲಿ ವಾಸದ ಕೆಲವು ಅನುಭವಗಳನ್ನು ಮಗಳು ಚಂದ್ರಾಳಿಗೆ ಪತ್ರ ಬರೆಯುತ್ತಾರೆ. ಆ ಪತ್ರಗಳ ದಾಖಲೆಯೇ ‘ದಿಲ್ಲಿಯ ಪತ್ರಗಳು’ ಕೃತಿ. 150 ಪುಟದ ಈ ಕೃತಿಯನ್ನು 1950ರಲ್ಲಿ ಮೈಸೂರಿನ ಆರ್.ಎನ್. ಹಬ್ಬು ಅವರ ಉಷಾ ಸಾಹಿತ್ಯ ಮಾಲೆಯ ಉಷಾ ಪ್ರೆಸ್‌ನಿಂದ ಪ್ರಕಟಿಸಿದ್ದಾರೆ.

ಇದೊಂದು ಅಪರೂಪದ ದಾಖಲೆ. ಕಥನ ಮಾದರಿಯಲ್ಲಿಯೂ ಮಗಳ ಜತೆ ಸಂವಾದದ ಮಾದರಿಯಲ್ಲಿಯೂ ಈ ಪತ್ರಗಳಿವೆ. ಕೆಲವು ಖಾಸಗಿಯಾದ ಆಪ್ತ ಸಂಗತಿಗಳನ್ನೂ ಮಗಳೊಂದಿಗೆ ಹಂಚಿಕೊಂಡಿದ್ದಾರೆ. ಸಂವಿಧಾನ ರಚನಾ ಸಭೆಯ ಒಳಗೆ ನಡೆಯುವ ಚರ್ಚೆಗಳನ್ನು ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ. 1947 ಆಗಸ್ಟ್ 15ರಂದು ಸ್ವಾತಂತ್ರ್ಯ ಲಭಿಸಿದ ದಿನ ಮತ್ತು ಗಾಂಧಿ ಹತ್ಯೆಯಾದ ಸಂದರ್ಭಗಳನ್ನು ಪ್ರತ್ಯಕ್ಷದರ್ಶಿಯಾಗಿ ಸವಿವರವಾಗಿ ಚಿತ್ರಿಸಿದ್ದಾರೆ. ಸಂವಿಧಾನ ರಚನಾ ಸಭೆಯಲ್ಲಿ ಏನೇನು ನಡೆಯಿತು ಎನ್ನುವುದನ್ನು ಮಗಳು ಚಂದ್ರಾಳಿಗೆ ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಈ ಕೃತಿಯು ಚಾರಿತ್ರಿಕ ಮಹತ್ವದ್ದಾಗಿದೆ.

ಜುಲೈ 17, 1947ರಲ್ಲಿ ಬರೆದ ಪತ್ರದಲ್ಲಿ ರಾವ್ ಅವರು, ‘ಸಂವಿಧಾನ ರಚನಾ ಸಭೆ ಸೇರಿ ನಿನ್ನೆಗೆ ಮೂರು ದಿನವಾಯಿತು, ನಿನ್ನೆ ಮಾತನಾಡಲು ಅವಕಾಶ ಕಲ್ಪಿಸಿಕೊಂಡೆ. ಸಾಮಾನ್ಯವಾಗಿ ದಿವಾನರಿಗೂ ನನಗೂ (ಕಾಂಗ್ರೆಸ್) ಸ್ವಲ್ಪ ದೂರದೂರವೇ. ನನ್ನ ಮಾತು ಮುಗಿಯುತ್ತಲೇ ನಾನು ಇರುವ ಸ್ಥಳಕ್ಕೆ ಬಂದು ಬಹಳ ಚೆನ್ನಾಗಿತ್ತು ಎಂದು ಹೊಗಳಿದರು. ಈಗ ಸಭೆ 3ರಿಂದ ಸಂಜೆ 6ರವರೆಗೆ ನಡೆಯುತ್ತಿದೆ. ಹೊರಗಡೆ ಕಾಫಿ, ಟೀಗೆ ಬಂದಾಗ ಎಲ್ಲರನ್ನೂ ನೋಡಬಹುದು, ಮಾತನಾಡಿಸಬಹುದು, ಪರಿಚಯವಿದ್ದರೆ ಕುಳಿತು ಹರಟೆ ಹೊಡೆಯಬಹುದು. ನಿನ್ನೆ ಡಾಕ್ಟರ್ ಅಂಬೇಡ್ಕರ್ ಪರಿಚಯವಾಯಿತು. ಮೊದಲು ಕಾಂಗ್ರೆಸ್ ಕಂಡರೆ ಕೆಂಡ ಕಾರುತ್ತಿದ್ದರು. ಈಗ ಕಾಂಗ್ರೆಸ್‌ನವರ ಬೆಂಬಲದಿಂದಲೇ ಸದಸ್ಯರಾಗಿದ್ದಾರೆ. ಮೌಲಾನ ಅಬ್ದುಲ್ ಕಲಾಂ ಆಝಾದ್, ಕೃಪಲಾನಿ ಮುಂತಾಗಿ ಎಲ್ಲರೂ ಟೀಗೆ ಬಂದಾಗ ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ’ ಎಂದು ಬರೆಯುತ್ತಾರೆ.

ಸಂವಿಧಾನ ರಚನಾ ಸಭೆಯಲ್ಲಿ ಸದಸ್ಯರಾಗಿ ಬಂದಿದ್ದ ದೇಶೀ ಸಂಸ್ಥಾನಗಳ ದಿವಾನರುಗಳ ಸ್ಥಿತಿ ಹೇಗಿತ್ತು ಎನ್ನುವುದನ್ನು ಚಿತ್ರಿಸಲಾಗಿದೆ. ‘‘ಇದುವರೆಗೆ ದಿವಾನರುಗಳು ದೂರದೂರವೇ ಇದ್ದರು. ಅವರ ಜರೀ ಪೇಟಗಳಿಗೆ ಇಲ್ಲಿ ಬೆಲೆಯೇ ಇಲ್ಲ. ರಾಷ್ಟ್ರದ ಮಹಾನಾಯಕರುಗಳ ಮಧ್ಯೆ ಅವರನ್ನು ಕೇಳುವವರೇ ಇಲ್ಲ. ಈಗ ಅವರಿಗೂ ಸ್ವಲ್ಪ ಬಿಸಿ ತಗಲಿದೆ, ಪ್ರಜೆಗಳ ಸಹಾಯವಿಲ್ಲದೆ ತಮ್ಮ ಬಂಡವಾಳ ಏನೂ ನಡೆಯುವುದಿಲ್ಲ ಎಂದು ಗೊತ್ತಾಗಿರುವಂತೆ ತೋರುತ್ತೆ’’ ಎನ್ನುತ್ತಾರೆ.

ರಾವ್ ಅವರು ಅಂಬೇಡ್ಕರ್ ಅವರ ಬಗ್ಗೆ ‘‘ಡಾಕ್ಟರ್ ಅಂಬೇಡ್ಕರ್ ಅವರ ವಿದ್ವತ್ತು ಅಪಾರವಾದುದು. ಅವರು ಬಹು ಸ್ಪಷ್ಟವಾಗಿಯೂ ಆಧಾರಭೂತವಾಗಿ ಮಾತನಾಡುತ್ತಾರೆ. ಅವರು ಪಟ್ಟು ಹಿಡಿದರೆ ಕದಲಿಸುವುದು ಕಷ್ಟ. ಆದರೆ ತಮ್ಮ ವಾದವು ತಪ್ಪೆಂದು ಗೊತ್ತಾದರೆ ಒಡನೆಯೇ ಒಪ್ಪಿಕೊಳ್ಳುತ್ತಾರೆ. ಸ್ವಲ್ಪ ಕಠಿಣವಾದಿಗಳು. ಒಮ್ಮೆ ಒಬ್ಬರಿಗೆ ‘ಗ್ಯಾಲರಿಗಳು ಖಾಲಿ ಇವೆ. ಸಭೆಯ ಕಾಲಹರಣ ಏಕೆ ಮಾಡುತ್ತೀರಿ?’ ಎಂದರು. ಶ್ರೀಮತಿ ಸರೋಜಿನಿ ನಾಯ್ಡು ಅವರು ಭವಿಷ್ಯವಾದಿಯಂತೆ ‘ಇಂದು ಇಷ್ಟು ಕಹಿ ಮನಸ್ಸಿನವರಾದ ಡಾ.ಅಂಬೇಡ್ಕರ್, ಬಹು ಸ್ವಲ್ಪ ಕಾಲದಲ್ಲೇ ಈ ವಿಧಾನ ಸಭೆಯ ಎಲ್ಲಾ ಉದ್ದೇಶಗಳಿಗೂ ಪ್ರಬಲ ಸಮರ್ಥಕರಾಗುತ್ತಾರೆ. ಅವರ ಮೂಲಕ ಅವರ ಕೋಟ್ಯಂತರ ಅನುಯಾಯಿಗಳಿಗೆ ಉತ್ತಮರಂತೆ ತಮಗೂ ಇಲ್ಲಿ ಪೂರ್ಣ ರಕ್ಷಣೆ ದೊರೆಯುತ್ತದೆ ಎಂಬ ಭರವಸೆ ಬರುವುದೆಂದು ಆಶಿಸುತ್ತೇನೆ ಮತ್ತು ನನ್ನ ಆಸೆಯು ಸರಿ ಎಂದು ನಂಬಿದ್ದೇನೆ’ ಎಂದರು. ಈಗ ಆ ವಾಣಿ ಕೇಳದು ಆದರೆ ಭವಿಷ್ಯ ಮಾತ್ರ ಸತ್ಯವಾಗಿದೆ.’’ (ಪು:131) ಎನ್ನುತ್ತಾರೆ. 1947ರಲ್ಲಿ ಪ್ರಕಟವಾದ ಡಾ.ಎಸ್.ಎಂ. ಹುಣಶ್ಯಾಳ್ ಅವರ ‘ಲಿಂಗಾಯತ ಮೂವ್‌ಮೆಂಟ್ ಕೃತಿಯನ್ನು ಹೊರತುಪಡಿಸಿದರೆ ಅಂಬೇಡ್ಕರ್ ಅವರನ್ನು ಕರ್ನಾಟಕದ ಸಂದರ್ಭದಲ್ಲಿ ಉಲ್ಲೇಖಿಸುವ ಎರಡನೇ ಗ್ರಂಥ ಇದೇ ಇರಬೇಕು.

ಪಂಡಿತ್ ಜವಾಹರಲಾಲ್ ನೆಹರೂ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ‘‘ನೆಹರೂ ಭಾವಾವೇಶದಿಂದ ಮಾತನಾಡುತ್ತಾರೆ. ಅವರದು ಅಂತರ್‌ರಾಷ್ಟ್ರೀಯ ದೃಷ್ಟಿ, ಒಂದು ತಲೆಮಾರಾದರೂ ಮುಂದೆ ನೋಡಿರುತ್ತಾರೆ’’ ಎನ್ನುತ್ತಾರೆ. ಅಂತೆಯೇ ನೆಹರೂ ಅವರು ಕಾರ್ಪೊರೇಟ್ ಬಂಡವಾಳಶಾಹಿಯನ್ನು ಹೇಗೆ ವಿರೋಧಿಸುತ್ತಿದ್ದರು ಎನ್ನುವುದಕ್ಕೆ ರಾವ್ ಅವರು ಒಂದು ಘಟನೆಯನ್ನು ಉಲ್ಲೇಖಿಸುತ್ತಾರೆ, ‘‘ರಾತ್ರಿ ಪಾರ್ಟಿ ಮೀಟಿಂಗ್, ಭಾರತದ ಸಂಯುಕ್ತ ಸರಕಾರದ ಅಧ್ಯಕ್ಷರಿಗೆ ಅವಸರದ ಸಂದರ್ಭಗಳಲ್ಲಿ ವಿಶೇಷಾಧಿಕಾರ ಇರಬೇಕೇ ಬೇಡವೇ ಎಂಬ ಪ್ರಶ್ನೆಗೆ ಶ್ರೀ ಡಿ. ಪಿ. ಬೈತಾನರು ‘ಇರಬೇಕು’ ಎಂದು ಒಂದು ತಿದ್ದುಪಡಿ ಸೂಚಿಸಿದರು. ಪಂಡಿತ್ ಜವಹರಲಾಲರ ಮೈ ಬೆಂಕಿಯಾಯಿತು. ಕೆನ್ನೆಗೆ ರಪರಪ ಹೊಡೆದಂತೆ ಸಿಟ್ಟಿನಿಂದ ‘ನಾವು ಪ್ರಜಾ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿದ್ದೇವೆ. ಒಬ್ಬ ವ್ಯಕ್ತಿಯು ಎಷ್ಟೇ ದೊಡ್ಡವನಾಗಿರಲಿ ಆತನಲ್ಲಿ ಸರ್ವಾಧಿಕಾರ ವಹಿಸುವುದು ದೊಡ್ಡ ತಪ್ಪು. ಅದು ಫ್ಯಾಶಿಸ್ಟ್ ಮತ್ತು ಹಿಟ್ಲರಿಸಂ ನೀತಿ. ಆ ನೀತಿಯನ್ನು ಪ್ರತಿಪಾದಿಸುವವರು ಈ ಸಭೆಯಲ್ಲೇ ಇರಲು ಅಯೋಗ್ಯರು’ ಎಂದುಬಿಟ್ಟರು. ಬೈತಾನರೆಂದರೆ ಬಿರ್ಲಾ ಕಂಪೆನಿಗಳ ಮ್ಯಾನೇಜರು. ಅವರ ವರಮಾನ ತಿಂಗಳಿಗೆ 20,000 ರೂಪಾಯಿ ಇರಬಹುದು. ಬಿರ್ಲಾಗಳು ಕೋಟ್ಯಧೀಶ್ವರರು. ಜವಾಹರರ ಭಾಷಣ ಕೇಳಿ ಬೈತಾನರು ತಣ್ಣಗಾಗಿ ಒನಕೆಹುಳ ಮುದುರಿದಂತೆ ಮುದುರಿಕೊಂಡರು. ಕೊನೆಗೆ ತಮ್ಮ ತಿದ್ದುಪಡಿಯನ್ನು ವಾಪಸ್ ತೆಗೆದುಕೊಂಡರು’’ (ಪು.22) ಎನ್ನುತ್ತಾರೆ. ಇದು ನೆಹರೂ ಅವರ ಪ್ರಜಾಪ್ರಭುತ್ವದ ಬಗೆಗಿನ ದೃಷ್ಟಿಕೋನ.

ನಾವು ಕರ್ನಾಟಕದ ಏಕೀಕರಣದ ಬಗ್ಗೆ ತಿಳಿದಿದ್ದೇವೆ, ಹೈದರಾಬಾದ್ ಸಂಸ್ಥಾನವನ್ನು ಒಕ್ಕೂಟಕ್ಕೆ ಸೇರಿಸಲು ದೊಡ್ಡ ಚಳವಳಿ ನಡೆದುದನ್ನು ಓದಿದ್ದೇವೆ. ಆದರೆ ಮೈಸೂರು ಸಂಸ್ಥಾನ ಕೂಡ ತಕ್ಷಣಕ್ಕೆ ಒಕ್ಕೂಟ ಸರಕಾರ ಸೇರಲಿಲ್ಲ. ಅದಕ್ಕಾಗಿ ಮೈಸೂರು ಪ್ರಾಂತದಲ್ಲಿ ‘ಮೈಸೂರು ಚಲೋ’ ಎಂಬ 42 ದಿನಗಳ ಹೋರಾಟ ನಡೆಯುತ್ತದೆ. ‘ಮೈಸೂರು ಕಾಂಗ್ರೆಸ್ ವರ್ಕಿಂಗ್ ಕಮಿಟಿ’ ಸದಸ್ಯರು ‘ಮೈಸೂರು ಚಲೋ ಘೋಷಣೆ ಮಾಡಿ ಅರಮನೆಗೆ ಸತ್ಯಾಗ್ರಹಕ್ಕಾಗಿ ಹೊರಟಿದ್ದು, ಹೆಂಡದ ಅಂಗಡಿ ಪಿಕೆಟಿಂಗ್, ಸರಕಾರಿ ಕಟ್ಟಡಗಳ ಮೇಲೆ ಧ್ವಜ ಹಾರಿಸಲು ಹೂಡಿದ ಸತ್ಯಾಗ್ರಹ, ಸಂಸ್ಥಾನದ ಮೂಲೆ ಮೂಲೆಗಳಿಂದ ರೈತರ ತಂಡಗಳು ‘ಮೈಸೂರು ಚಲೋ’ ಸತ್ಯಾಗ್ರಹ ಹೊರಟಿದ್ದು, ವಿದ್ಯಾರ್ಥಿಗಳ ಮುಷ್ಕರ, ರೈಲ್ವೆ ಮುಷ್ಕರ, ಅರಣ್ಯ ಸತ್ಯಾಗ್ರಹ, ಬೆಂಗಳೂರಿನಲ್ಲಿ ಪೊಲೀಸಿನವರ ಮುಷ್ಕರ, ಗುಂಡಿನೇಟುಗಳು, ಲಾಠಿ ಪ್ರಹಾರಗಳು, ರಾಜಘೋಷಣೆ ಹೊರಡಿಸಿ ಸತ್ಯಾಗ್ರಹವನ್ನು ಮುರಿಯಲು ಶ್ರೀ ರಾಮಸ್ವಾಮಿ ಮೊದಲಿಯಾರರು ಮಾಡಿದ ಪ್ರಯತ್ನ-ಸುತ್ತಲೂ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರದವರ ಸಹಾಯ, ಕೊನೆಗೆ ಮೈಸೂರು ಅರಮನೆ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ್ದನ್ನು ದಾಖಲಿಸುತ್ತಾ ಕೃಷ್ಣಮೂರ್ತಿ ರಾವ್‌ರವರು ಜೈಲಿಗೆ ಹೋದದ್ದು ನೆನಪಿಸಿಕೊಂಡಿದ್ದಾರೆ. (ಪು:69)

ಸಂವಿಧಾನ ರಚನಾ ಸಭೆಗಳು ನಡೆಯುವ ಸಂದರ್ಭದಲ್ಲಿಯೇ ರಾಷ್ಟ್ರದ್ವಜ ಸಂವಿಧಾನ ಸಭೆಯಲ್ಲಿ ಅಂಗೀಕಾರವಾಗುತ್ತದೆ. ರಾಷ್ಟ್ರಧ್ವಜದ ಬಗೆಗೆ ಚರ್ಚೆ ಭಾಷಣಗಳು ನಡೆಯುತ್ತವೆ. ಅಂತೆಯೇ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನದ ದೇಶವಾಸಿಗಳ ಸಂತಸವನ್ನು ಕಣ್ಣಿಗೆ ಕಟ್ಟುವಂತೆ ದಾಖಲಿಸಿದ್ದಾರೆ. ಅಂತೆಯೇ ಗಾಂಧಿಯ ಹತ್ಯೆ ಮತ್ತು ಇಡೀ ದೇಶ ಗಾಂಧಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರ ಬಗ್ಗೆ ವಿವರವಾಗಿ ಬರೆದಿದ್ದಾರೆ.

ಎಸ್.ವಿ. ಕೃಷ್ಣಮೂರ್ತಿ ರಾವ್ ಅವರು ಸಂತೇಬೆನ್ನೂರಿನ ವಾದಿರಾಜಾಚಾರ್ ಹಾಗೂ ನಾಗೂಬಾಯಿ ದಂಪತಿ ಮಗನಾಗಿ 1902ರ ನವೆಂಬರ್ 15ರಂದು ಜನಿಸಿದರು. ಸಂತೇಬೆನ್ನೂರಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಚಿಕ್ಕಮಗಳೂರಿನಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ, ಪುಣೆಯಲ್ಲಿ ಕಾನೂನು ಪದವಿ ಪಡೆದು 1927ರಲ್ಲಿ ಶಿವಮೊಗ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದ್ದರು. ಬಾಲಗಂಗಾಧರನಾಥ ತಿಲಕ್, ಗೋಪಾಲಕೃಷ್ಣ ಗೋಖಲೆ, ಮಹಾತ್ಮಾ ಗಾಂಧಿ ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಭಾರತೀಯ ಕಾಂಗ್ರೆಸ್ ಪಕ್ಷ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರ ಪರಿಣಾಮ ರಾವ್ ಅವರನ್ನು 18 ತಿಂಗಳು ಜೈಲಿನಲ್ಲಿರಿಸಲಾಯಿತು. ಜೈಲಿನಲ್ಲಿ ಗಾಂಧೀಜಿಯವರ ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’, ನೆಹರೂ ಅವರ ‘ಡಿಸ್ಕವರಿ ಆಫ್ ಇಂಡಿಯಾ’, ಸರ್.ಎಂ. ವಿಶ್ವೇಶ್ವರಯ್ಯ ಅವರ ‘ಪ್ಲಾನ್ಸ್ ಇಕಾನಮಿ ಫಾರ್ ಇಂಡಿಯಾ’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೈಲಿನಿಂದ ಹೊರಬಂದ ಮೇಲೆ ಅವುಗಳನ್ನು ಪ್ರಕಟಿಸಿದ್ದರು. ಉಳಿದಂತೆ ಗಾಂಧೀಜಿಯವರ ‘ಟು ದಿ ವುಮೆನ್’, ‘ಲೈಫ್ ಆಫ್ ಲೂಯಿಸ್ ಪಾಶ್ಚರ್’ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಂಗ್ಲಿಷ್‌ನಲ್ಲಿ ‘ದಿ ಲೆಫ್ಟಿಸ್ಟ್ ಎಕ್ಸ್ ಪರಿಮೆಂಟ್ಸ್’ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಮಗಳಿಗೆ ಬರೆದ ‘ದಿಲ್ಲಿಯ ಪತ್ರಗಳು’ ಮಹತ್ವದ ಕೃತಿಯಾಗಿದೆ.

ರಾವ್ ಅವರು ಅನೇಕ ನಾಗರಿಕ ಸಮಾಜ ಸಂಸ್ಥೆಗಳೊಂದಿಗೆ ಕೆಲಸ ಮಾಡಿದರು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು (1937-1947), ಮೈಸೂರಿನ ಕೈಗಾರಿಕೆ ಮತ್ತು ವಾಣಿಜ್ಯ ಯೋಜನಾ ಸಮಿತಿಯ ಸದಸ್ಯರಾಗಿದ್ದರು (1945-1948), ಮೈಸೂರು ಪ್ರಜಾ ಪ್ರತಿನಿಧಿ ಸಭೆಗೆ ಆಯ್ಕೆಯಾದರು (1945-1949), ಭಾರತದ ತಾತ್ಕಾಲಿಕ ಸಂಸತ್ತಿನ ಅಧ್ಯಕ್ಷರ ಸಮಿತಿಯಲ್ಲೂ ಇದ್ದರು. ರಾಜ್ಯಸಭೆಯ ಮೊದಲ ಉಪಾಧ್ಯಕ್ಷರಾಗಿದ್ದರು (31 ಮೇ 1952- 1 ಮಾರ್ಚ್ 1962), 1962 ರಿಂದ ಲೋಕಸಭೆಯಲ್ಲಿ ಉಪಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಘವನ್ನು ಪ್ರಾರಂಭಿಸಿದರು. ಈ ಸಂಸ್ಥೆಯು ಹಲವು ಪ್ರೌಢಶಾಲೆ ಮತ್ತು ಮಧ್ಯಮಿಕ ಶಾಲೆಗಳನ್ನು ನಡೆಸುತ್ತಿತ್ತು. ರಾವ್ ತಮ್ಮ ಜೀವಿತಾವಧಿಯಲ್ಲಿ ಜಪಾನ್, ಆಸ್ಟ್ರೇಲಿಯ, ಇಂಡೋನೇಶ್ಯ, ಕೆನಡಾ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿದರು. ಅವರು 18 ನವೆಂಬರ್ 1968ರಂದು ತಮ್ಮ 66ನೇ ವಯಸ್ಸಿನಲ್ಲಿ ನಿಧನರಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News