×
Ad

ಕಡುದುಃಖದ ಕಡಲಿನ ಒಂಟಿ ನಾವಿಕ ಪ್ರೊ.ಮೊಗಳ್ಳಿ ಗಣೇಶ್

Update: 2025-09-23 12:48 IST

ಬರೆಯುವವರು ಎಷ್ಟೇ ಆಳವಾಗಿ, ಸೂಕ್ಷ್ಮವಾಗಿ ಬರೆದರೂ ಸಾಹಿತ್ಯ ಸಾಂಸ್ಕೃತಿಕ ವಲಯದ ಜತೆ ಒಡನಾಟ ಇಲ್ಲದೆ ಹೋದರೆ ಹೇಗೆ ಏಕಾಂಗಿಗಳನ್ನಾಗಿಸಲಾಗುತ್ತದೆ ಎನ್ನುವುದಕ್ಕೆ ಮೊಗಳ್ಳಿ ಗಣೇಶ್ ಸಾಕ್ಷಿ. ಹಾಗಾಗಿಯೇ ಎಷ್ಟೋ ಬೂಸಾ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದರೂ ಈ ತನಕ ಮೊಗಳ್ಳಿಯವರಿಗೆ ಬರಲಿಲ್ಲ. ಇಡೀ ಕನ್ನಡ ಜಾನಪದದ ಚಿಂತನೆಯ ದಿಕ್ಕನ್ನೇ ಬದಲಿಸಿದರೂ, ಕರ್ನಾಟಕ ಜಾನಪದ ಅಕಾಡಮಿ ‘ಜಾನಪದ ವಿದ್ವಾಂಸ’ ಎಂದು ಈ ತನಕ ಗುರುತಿಸಲು ಸಾಧ್ಯವಾಗಿಲ್ಲ. ಮೇಲೆ ಗುರುತಿಸಿದ ಕೆಲವು ಮಿತಿಗಳ ಮಧ್ಯೆಯೂ ಮೊಗಳ್ಳಿಯವರು ಕನ್ನಡದ ಒಬ್ಬ ಸತ್ವಶಾಲಿ ಅನನ್ಯ ಕಥೆಗಾರ ಮತ್ತು ಚಿಂತಕ.

ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಎಂ.ಎ. ಕಲಿಯಲೆಂದು ಹೋದಾಗ ನನಗೆ ಇಬ್ಬರು ಕಥೆಗಾರರು ಪರಿಚಯವಿದ್ದರು. ಒಬ್ಬರು ಮೊಗಳ್ಳಿ ಗಣೇಶ್ ಮತ್ತೊಬ್ಬರು ಅಮರೇಶ ನುಗಡೋಣಿ. ಆಗ (2001) ಜಯಂತ್ ಕಾಯ್ಕಣಿ ಸಂಪಾದಿಸುತ್ತಿದ್ದ ‘ಭಾವನಾ’ ಪತ್ರಿಕೆಯಲ್ಲಿ ಇವರಿಬ್ಬರ ಕಥೆಗಳ ಓದಿದ್ದೆ. ಕ್ಯಾಂಪಸ್‌ಗೆ ಹೋದಾಗ ಮೊದಲಿಗೆ ಮೊಗಳ್ಳಿ ಗಣೇಶ್ ಅವರನ್ನು ಮಾತನಾಡಿಸಿದೆ. ‘‘ಬಾರೋ..ಏನೋ ನಿನ್ನ ಹೆಸರು..’’ ಮುಂತಾಗಿ ಆಪ್ತವಾಗಿ ಮಾತನಾಡಿಸಿದರು. ಪರಿಣಾಮವಾಗಿ ಕನ್ನಡ ಎಂ.ಎ.ಗೆ ಅರ್ಜಿ ಹಾಕಿದವನು ಜಾನಪದ ಎಂ.ಎ. ಸೇರುವಂತಾಯಿತು.

ನಿಧಾನಕ್ಕೆ ತರಗತಿಗಳು ಆರಂಭವಾದವು. ಮೊಗಳ್ಳಿಯವರು ಪಾಠ ಮಾಡತೊಡಗಿದರು. ಮೊದಲಿಗೆ ಅವರ ಭಾಷೆಯೇ ಅರ್ಥವಾಗುತ್ತಿರಲಿಲ್ಲ. ಅವರದ್ದೇ ಆದ ನುಡಿಗಟ್ಟುಗಳು ಒಂದು ಬಗೆಯ ಸಮ್ಮೋಹನಗೊಳಿಸುತ್ತಿತ್ತು. ಇದು ಕನ್ನಡ ಹೌದೋ ಅಲ್ಲವೋ ಎನ್ನುವಷ್ಟು ದಿಗಿಲುಗೊಂಡಿದ್ದೆ. ಪಾಠ ಕೇಳುತ್ತಾ ಕೇಳುತ್ತಾ ಯಾವುದೋ ಮಾಂತ್ರಿಕ ಲೋಕದಲ್ಲಿ ಪಯಣಿಸಿದಂತಾಗುತ್ತಿತ್ತು. ಒಂದು ಬಗೆಯಲ್ಲಿ ಮಾಯದ ಪುಷ್ಪಕ ವಿಮಾನ ಏರಿ ಕಾಣದ ಲೋಕವನ್ನೆಲ್ಲಾ ಸುತ್ತಾಡಿ ನಿಧಾನಕ್ಕೆ ಕನ್ನಡ ವಿವಿಗೆ ಲ್ಯಾಂಡ್ ಆಗುತ್ತಿದ್ದೆವು. ಒಮ್ಮೊಮ್ಮೆ ದಟ್ಟವಾದ ವಿಷಾದದಿಂದಲೂ, ಕಡುದುಃಖವನ್ನು ನುಂಗಿಕೊಂಡಂತೆಯೂ, ಅನಾಥ ಪ್ರಜ್ಞೆಯ ಅಂತಃಕರಣದಿಂದಲೂ ನಮಗಂತೂ ಬೆರಗು ಮೂಡಿಸುತ್ತಿದ್ದರು. ಲೋಕದ ಕೇಡುಗಳ ಬಗ್ಗೆ ಕೆಂಡಕಾರುವಾಗಲೆಲ್ಲಾ ಭಯ ಆವರಿಸುತ್ತಿತ್ತು. ಮೊಗಳ್ಳಿಯವರ ಶ್ರೇಷ್ಠ ಉಪನ್ಯಾಸ ಕೇಳುತ್ತಿರುವಾಗಲೇ ಬೇರೆ ಅಧ್ಯಾಪಕರ ಅತ್ಯಂತ ಕಳಪೆ ಉಪನ್ಯಾಸಗಳಿಗೂ ಕಿವಿಯಾಗಬೇಕಿತ್ತು. ಮೊಗಳ್ಳಿಯವರ ಉಪನ್ಯಾಸಗಳು ನನ್ನೊಳಗೊಂದು ಬಂಡುಕೋರತನವನ್ನು ಹುಟ್ಟುಹಾಕಿತು.

ಆಗ ಅವರ ‘ದಲಿತರು ಮತ್ತು ಜಾಗತೀಕರಣ’(1998) ಪುಸ್ತಕದ ಬಗ್ಗೆ ಪ್ರಜಾವಾಣಿಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಹೀಗೆ ಅವರ ಪಾಠಗಳಲ್ಲಿ ಜಾನಪದದ ನೆಪದಲ್ಲಿ ಜಾಗತಿಕ ಚಿಂತಕರ, ಕವಿಗಳ, ತತ್ವಜ್ಞಾನಿಗಳ ಬಗ್ಗೆ ತಿಳಿಯುವಂತಾಯಿತು. ನನ್ನ ಅರಿವಿನ ದಿಗಂತ ವಿಸ್ತರಿಸಿತು. ಈ ದಿನಗಳಲ್ಲೇ ಅವರ ಕಥೆಗಳನ್ನೂ, ಆತನಕ ಅವರು ಬರೆದ ಪುಸ್ತಕಗಳನ್ನು ಓದಿಕೊಂಡೆ. ಈಗ ನಾನೇನಾದರೂ ಜಾನಪದ ಕುರಿತಂತೆ ಚೂರು ಭಿನ್ನವಾಗಿ ಆಲೋಚಿಸುತ್ತೇನೆ ಅಂದರೆ ಅದರ ಬೀಜ ಬಿತ್ತಿದವರು ಮೇಷ್ಟ್ರು ಮೊಗಳ್ಳಿ ಗಣೇಶ್.

ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ, ಇದೀಗ ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಹೊತ್ತಲ್ಲಿ ಹಿಂದಿರುಗಿ ನೋಡಿದರೆ, ಪ್ರೊ. ಮೊಗಳ್ಳಿ ಗಣೇಶ್ ಕನ್ನಡಕ್ಕೆ ದಕ್ಕಿದ ಬಹಳ ಶಕ್ತಿಶಾಲಿ ಲೇಖಕ, ತನ್ನ ಮಾಂತ್ರಿಕ ಸೋಪಜ್ಞ ಭಾಷೆಯ ಮೂಲಕ ಕನ್ನಡಕ್ಕೆ ಹೊಸ ಕಸುವು ತುಂಬಿದವರು. ಅವರ ಅತ್ಯುತ್ತಮ ಶ್ರೇಷ್ಠ ಕಥೆಗಳು ಇಂಗ್ಲಿಷ್‌ಗೆ ಒಳ್ಳೆಯ ಅನುವಾದ ಆಗಿದ್ದರೆ ಎಂದೋ ಬೂಕರ್‌ನಂತಹ ಪ್ರಶಸ್ತಿ ಕನ್ನಡಕ್ಕೆ ಬರುತ್ತಿತ್ತು. ಮೊಗಳ್ಳಿಯವರ ಕೆಲವು ಕಥೆಗಳು ಜಾಗತಿಕ ಶ್ರೇಷ್ಠ ಕಥೆಗಳ ಸಾಲಿನಲ್ಲಿ ನಿಲ್ಲುವ ಶಕ್ತಿ ಪಡೆದಿವೆ.

ಮೊಗಳ್ಳಿಯವರು ಆದಿಮ ಸಂವೇದನೆಯನ್ನು, ಶತಶತಮಾನಗಳ ದಮನಿತರ ದುಃಖವನ್ನು ತಮ್ಮ ಬರಹಗಳಲ್ಲಿ ಮಾಂತ್ರಿಕವಾಗಿ ಪುನರ್‌ಸೃಷ್ಟಿ ಮಾಡುವವರು. ದೇವನೂರರ ಮಾದರಿ ಬೇರೆ ತರಹದ್ದು. ಮೊಗಳ್ಳಿಯವರ ‘ನುಡಿಗಟ್ಟು’ ತಮ್ಮ ಆಳದ ನೋವನ್ನು ಹಿಂಜಿದ ನೂಲಿನಿಂದ ದಂಗೆಕೋರತನದ ಪ್ರತಿರೋಧದ ಮಗ್ಗದಲ್ಲಿ ನೇಯ್ದದ್ದು. ಹಾಗಾಗಿ ಕನ್ನಡದ ಕಥನ, ವಿಮರ್ಶೆ ಮತ್ತು ಸಂಶೋಧನೆಗೆ ಮೊಗಳ್ಳಿ ಗಣೇಶ್ ತಮ್ಮದೇ ಆದ ಹೊಳಪನ್ನು ಕೊಟ್ಟಿದ್ದಾರೆ. ಮೊಗಳ್ಳಿಯವರ ಬರಹವನ್ನು ಅನುಕರಣೆ ಅಥವಾ ನಕಲು ಮಾಡಲು ಸಾಧ್ಯವಿಲ್ಲ. ಮರದೊಳಗಿನ ಕಿಚ್ಚಿನಂತೆ ಅವರ ಬರಹದ ಆಳದಲ್ಲಿ ಮೊಗಳ್ಳಿತನದ ಸಿಟ್ಟು ಆಕ್ರೋಶ ಕಾಣದಂತಡಗಿದೆ.

‘ಬುಗುರಿ’ ಕಥೆ ಮೂಲಕ ಕನ್ನಡದ ಕಥನಕ್ಕೆ ದಮನಿತರ ರೂಪಕಶಕ್ತಿಯ ಅಗಾಧತೆಯನ್ನು ಪರಿಚಯಿಸಿದರು. ಇಡೀ ದೇಶವನ್ನು ದೊಡ್ಡ ಹೇಲುಗುಂಡಿಯಂತೆ ಚಿತ್ರಿಸಿದ್ದು ಈ ಅಗಾಧತೆಯ ಒಂದು ನೆಲೆ. ಮುಂದೆ ಬತ್ತ, ಆ ಅಳು ಈಗಲೂ ಇಲ್ಲಿ, ಒಂದು ಹಳೆಯ ಚಡ್ಡಿ, ಅತ್ತೆ ತರಹದ ಹಲವು ಶ್ರೇಷ್ಠ ಕಥೆಗಳನ್ನು ಕೊಟ್ಟರು. ಬುಗುರಿ, ಅತ್ತೆ, ಭೂಮಿ, ಮಣ್ಣು, ಕನ್ನೆಮಳೆ, ದೇವರದಾರಿ ಕಥಾ ಸಂಕಲನಗಳ ಮೂಲಕ ಕನ್ನಡ ಕಥನ ಸಾಹಿತ್ಯದಲ್ಲಿ ಮೊಗಳ್ಳಿ ಕಥನ ಮಾದರಿಯನ್ನು ಪರಿಚಯಿಸಿದರು. ಅವರ ಕಥೆಗಳನ್ನು ಓದುತ್ತಿದ್ದರೆ, ಅಧೋಲೋಕದ ಕತ್ತಲಲ್ಲಿ ಎಲ್ಲೋ ದೂರದಲ್ಲಿ ಕೇಳುತ್ತಿರುವ ಮೂಕ ವೇದನೆಯ ದುಃಖದ ಅಲೆಗಳು ಅಪ್ಪಳಿಸಿದಂತಾಗುತ್ತದೆ. ಶತಮಾನಗಳಿಂದ ಬಾಯಿಯೇ ಇಲ್ಲದೆ ಮೂಕವಾಗಿದ್ದವರೆಲ್ಲಾ ಒಮ್ಮೆಲೇ ಲೋಕದ ಕಿವಿತಮಟೆ ಅರಿಯುವಂತೆ ದನಿಯನ್ನು ಎತ್ತರಿಸಿದಂತಾಗುತ್ತದೆ. ಅನಾಥ ಮಗುವೊಂದು ಕಗ್ಗಾಡಿನ ಕತ್ತಲಲ್ಲಿ ತಪ್ಪಿಸಿಕೊಂಡು ಅಂಡಲೆದಂತಾಗುತ್ತದೆ. ನೋವಿನ ನೂಲುಗಳು ಓದುವವರನ್ನು ಸುತ್ತಿಕೊಂಡು ಹಗ್ಗ ಹೆಣೆದಂತಾಗುತ್ತದೆ. ಇದುವೇ ಮೊಗಳ್ಳಿತನದ ಕಥನದ ಶಕ್ತಿ.

ಮೊಗಳ್ಳಿಯವರು ಕನ್ನಡದ ವಿಮರ್ಶೆಯ ಮಡಿಮೈಲಿಗೆಯ ಚಳಿಬಿಡಿಸಿದವರು. ನವೆಂಬರ್ 19, 1973ರಲ್ಲಿ ಬಿ. ಬಸವಲಿಂಗಪ್ಪ ಅವರು ‘‘ಕನ್ನಡದಲ್ಲೇನಿದೆ? ಅದರಲ್ಲಿ ಬಹುಪಾಲು ಬೂಸಾ...’’ ಎಂದು ಹೇಳಿ ಇಡೀ ಕನ್ನಡ ಸಾಹಿತ್ಯವನ್ನು ದಲಿತ ಕಣ್ಣೋಟದಿಂದ ನೋಡುವ ಒಂದು ನೋಟಕ್ರಮವನ್ನು ಉದ್ಘಾಟಿಸಿದರು. ಮುಂದೆ ಅದು ಬೂಸಾ ಪ್ರಕರಣವೇ ಆದದ್ದು ಚಾರಿತ್ರಿಕ ಸಂಗತಿ. ಹೀಗೆ ಬಸವಲಿಂಗಪ್ಪನವರು ಎತ್ತಿದ ‘ಬೂಸಾ..’ ಕಣ್ಣೋಟದಿಂದ ಕನ್ನಡ ಸಾಹಿತ್ಯವನ್ನು ಶಸ್ತ್ರಚಿಕಿತ್ಸೆ ಮಾಡಿದವರು ಮೊಗಳ್ಳಿ ಗಣೇಶ್. ಅವರು ಕನ್ನಡ ವಿಮರ್ಶೆಗೆ ಹೊಸ ಪರಿಭಾಷೆಯನ್ನೇ ಕೊಟ್ಟರು. ಅದನ್ನು ನಾವು ‘ತಕರಾರು’ ಎನ್ನಬಹುದು. ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ದಲಿತೇತರ ಮೇಲ್ಜಾತಿ ವಿಮರ್ಶಕರು ದಲಿತ-ದಮನಿತ ಕೆಳಜಾತಿಗಳಿಂದ ಬಂದು ಬರೆಯುವವರ ಬರಹಗಳನ್ನು ಬೆಲೆಗಟ್ಟುವ ಪರಂಪರೆ ಇತ್ತು. ಈ ವಿಮರ್ಶೆಯನ್ನು ಕೆಳಜಾತಿಗಳಿಂದ ಬಂದ ಲೇಖಕ-ಲೇಖಕಿಯರು ಮಹಾ ಪ್ರಸಾದವೆಂಬತೆ ಸ್ವೀಕರಿಸುವ ಒಂದು ವಿಧೇಯತೆ ರೂಢಿಯಾಗಿತ್ತು.

ಕನ್ನಡ ಸಾಹಿತ್ಯ ಪರಂಪರೆಯನ್ನು ಶೂದ್ರ ಕಣ್ಣೋಟದಿಂದ ಪರೀಕ್ಷಿಸುವ ಪರಂಪರೆಯನ್ನು ದಲಿತ ಸಮುದಾಯದ ಶಿಕ್ಷಿತ ಮೊದಲ ತಲೆಮಾರು ಆರಂಭಿಸಿತು. ಕುವೆಂಪು, ಬಿ. ಬಸವಲಿಂಗಪ್ಪ, ಬಿ. ಕೃಷ್ಣಪ್ಪ ಮೊದಲಾದವರು ಇಂತಹ ಪ್ರಶ್ನೆಗಳನ್ನು ಎತ್ತಿದರು. ಈ ಬಗೆಯ ವಿಮರ್ಶೆಯ ಅಂಚಿನ ಕಣ್ಣೋಟಕ್ಕೆ ತೀವ್ರತೆರನಾದ ನೆಲೆಗಟ್ಟನ್ನು ಕೊಟ್ಟವರು ಮೊಗಳ್ಳಿ ಗಣೇಶ್. ಕಟ್ಟಕಡೆಯ ಪಾತಳಿಯಲ್ಲಿ ನಿಂತು ಮೇಲಿನವರ ಸಾಹಿತ್ಯವನ್ನು ಬೆಲೆಗಟ್ಟುತ್ತಾ ಕನ್ನಡ ವಿಮರ್ಶೆಗೆ ದಲಿತ ಕಣ್ಣೋಟವನ್ನು ಕೊಟ್ಟವರು. ಹಾಗಾಗಿಯೇ ಮೊಗಳ್ಳಿಯವರ ವಿಮರ್ಶೆಯಲ್ಲಿ ಅತಿರೇಕ ಎನ್ನುವಷ್ಟು ಶತಮಾನದ ಸಿಟ್ಟು ಆಕ್ರೋಶ ಎದುರಾಳಿತನದ ದಂಗೆಕೋರ ಗುಣ ಬಂದುಬಿಟ್ಟಿದೆ.

ಮೊಗಳ್ಳಿಯವರು ಲಂಕೇಶ್ ಮತ್ತು ಅಗ್ನಿ ಪತ್ರಿಕೆಗೆ ಬರೆದ ‘ಪುಸ್ತಕ ವಿಮರ್ಶೆ’, ‘ತಕರಾರು’ ಬರಹಗಳನ್ನು ಗಮನಿಸಿದರೆ ಕನ್ನಡ ಸಾಹಿತ್ಯಲೋಕವನ್ನು ಮರಕ್ಕೆ ಬಿಗಿದು ಕಟ್ಟಿ ಚಾಟಿ ಬೀಸಿದಂತಿದೆ. ಅವರ ತಕರಾರುಗಳನ್ನು ಓದುತ್ತಾ ಹೋದಂತೆ ಒಂದಷ್ಟು ಅತಿ ಅನ್ನಿಸಿದರೂ ಅವರು ಶೂದ್ರ ನೆಲೆಯಿಂದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರ ಅರಿವಿನಿಂದ ಎತ್ತುವ ಪ್ರಶ್ನೆಗಳು ಮಾತ್ರ ಈತನಕ ಕನ್ನಡ ವಿಮರ್ಶೆ ಕೇಳಿಕೊಳ್ಳದೆ ಇರುವಂತಹವು. ಈ ಪ್ರಶ್ನೆಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಸಣ್ಣನೆ ನಡುಕ ಹುಟ್ಟಿಸಿತ್ತು. ಕನ್ನಡ ವಿಮರ್ಶೆಯ ಸುಕೋಮಲ ಪರಿಭಾಷೆ ನುಡಿಗಟ್ಟುಗಳ ಬದಲಿಸಿ ಕಿಡಿ ಹೊತ್ತಿಕೊಳ್ಳುವ ಹೊಸ ಪದಗಳನ್ನು ಬಳಸಿದರು. ಇದರಿಂದಾಗಿ ಮೊಗಳ್ಳಿಯವರು ಎಲ್ಲಾ ಹಿರಿಯ ಕಿರಿಯ ತನ್ನ ವಾರಿಗೆಯ ಕನ್ನಡ ಸಾಹಿತಿಗಳನ್ನು ಎದುರುಹಾಕಿಕೊಂಡರು. ಹಾಗಾಗಿ ಮುಂದೆ ಮೊಗಳ್ಳಿಯವರ ಬರಹ ಚಿಂತನೆಗಳನ್ನು ಕನ್ನಡ ವಿದ್ವತ್ ಲೋಕ ನಿರ್ಲಕ್ಷಿಸತೊಡಗಿತು. ಯಾರ ಬಗ್ಗೆಯೂ ವಿನಾಕಾರಣ ಮೆಚ್ಚುಗೆ ಮಾತನಾಡದ, ಯಾರಿಗೂ ಯಾವ ಪ್ರಶಸ್ತಿ ಬಿರುದು ಬಾವಲಿಗಳಿಗಾಗಿ ಡೊಗ್ಗು ಸಲಾಮು ಹಾಕಿ ಲಾಬಿ ಮಾಡದ ಮೊಗಳ್ಳಿಯವರು ಒಬ್ಬಂಟಿಯಾಗಿ ಉಳಿಯಬೇಕಾಯಿತು.

ಕನ್ನಡ ಸಂಸ್ಕೃತಿ ಮತ್ತು ಜಾನಪದ ಅಧ್ಯಯನದಲ್ಲಿ ಮೊಗಳ್ಳಿಯವರು ತಮ್ಮದೇ ಆದ ‘ದೇಸಿ’ ಚಿಂತನೆಯ ಪರ್ಯಾಯವನ್ನು ಕೊಟ್ಟರು. ಕರ್ನಾಟಕ ಜಾನಪದ ಅಧ್ಯಯನ ಮತ್ತು ವಿದ್ವತ್ತಿನ ಲೋಕದಲ್ಲಿ ಮೊಗಳ್ಳಿಯವರ ನೋಟಕ್ರಮ ಅನನ್ಯವಾದುದು. ಅವರ ‘ದೇಸಿ’ ಎನ್ನುವ ಪುಟ್ಟ ಕೃತಿಯಲ್ಲಿ ಜಾಗತಿಕ ಜಾನಪದ ಚಿಂತನೆಗಳ ಹಂಗುತೊರೆದು ನೆಲಮೂಲ ಶೋಧಿಸುವ ಹೊಸ ಹೊಳಹನ್ನು ಕೊಟ್ಟರು. ಸಹಜವಾಗಿ ಆಧುನಿಕ ಶಿಕ್ಷಣಕ್ಕೆ ಪ್ರವೇಶಿಸಿದ ಮೇಲ್ಜಾತಿಗಳ ಮೊದಲ ತಲೆಮಾರು ‘ಜಾನಪದ’ ಅಧ್ಯಯನಕ್ಕೆ ತೊಡಗಿದರು. ತೊಂಭತ್ತರ ದಶಕದ ಕನ್ನಡದ ಜಾನಪದ ವಿದ್ವಾಂಸರಿಗೆ ಅಮೆರಿಕದ ಫೋರ್ಡ್ ಫೌಂಡೇಷನ್ ಯೂರೋಪ್ ಮಾದರಿಯ ಬದಲು ಅಮೆರಿಕದ ದೃಷ್ಟಿಕೋನವನ್ನು ಕಸಿ ಮಾಡಿದರು. ಪರಿಣಾಮ ಜಾನಪದದ ಎಲ್ಲವನ್ನೂ ಮ್ಯೂಝಿಯಂ ವಸ್ತುಗಳಂತೆ ಕಾಣತೊಡಗಿದರು. ಈ ಸಂದರ್ಭದಲ್ಲಿ ಜೀಶಂಪ ಅವರ ಶಿಷ್ಯರಾಗಿದ್ದ ಮೊಗಳ್ಳಿ ಗಣೇಶ್ ಜಾನಪದದ ಆರಾಧನಾ ಭಾವಕ್ಕೆ ಭಿನ್ನ ಮತೀಯರಾಗಿದ್ದರು.

ಮೈಸೂರು ವಿವಿಯಲ್ಲಿ ಜಾನಪದವನ್ನು ಓದುವಾಗಲೇ ಅಮೆರಿಕದ ಬ್ಲಾಕ್ ಫೋಕ್‌ಲೋರ್‌ನ ಮಾದರಿಯಲ್ಲಿ ಭಾರತದಲ್ಲಿ ‘ದಲಿತ ಜಾನಪದ’ ವನ್ನು ಏಕೆ ನೋಡಬಾರದು ಎಂದು ಎ.ಕೆ.ರಾಮಾನುಜನ್ ಅವರನ್ನು ಕೇಳುತ್ತಾರೆ. ಈ ನಿಟ್ಟಿನಲ್ಲಿ ಮೊಗಳ್ಳಿಯವರ ‘ದೇಸಿ’ ಪುಸ್ತಕ ಮೊದಲುಗೊಂಡು ಈಚಿನ ‘ದಲಿತ ಜಾನಪದ’ ಗಮನಾರ್ಹವಾದವು. ಮೇಲ್ಜಾತಿಯಿಂದ ಬಂದ ಬಹುಪಾಲು ಜಾನಪದ ವಿದ್ವಾಂಸರು ಮೊಗಳ್ಳಿ ಎತ್ತಿದ ಬ್ಲಾಕ್‌ಫೋಕ್ ಮಾದರಿಯ ಪ್ರಶ್ನೆಗಳನ್ನು ಎಚ್ಚರದಿಂದಲೇ ನಿರ್ಲಕ್ಷಿಸಿದರು. ಕನ್ನಡ ಜಾನಪದ ವಿದ್ವತ್ ಲೋಕ ಮೊಗಳ್ಳಿಯವರ ನೆಲಮೂಲದ ದಲಿತ ‘ದೇಸಿ’ ಚಿಂತನೆಗಿಂತ ಪಶ್ಚಿಮದ ಚಿಂತನೆಗಳ ಜೀತ ಮಾಡುವುದರಲ್ಲೇ ಸುಖ ಕಂಡಿತು. ಹಾಗಾಗಿಯೇ ಮೇಲ್ಜಾತಿಗಳ ಸಂಸ್ಕೃತಿ ಚಿಂತಕರು ಮೊಗಳ್ಳಿಯವರ ಬರಹ ಚಿಂತನೆಯನ್ನು ಮುಟ್ಟದೆ ಅಸ್ಪಶ್ಯತೆ ಆಚರಿಸಿದರು. ಇಡೀ ಕನ್ನಡದ ಚಿಂತನಾ ಪರಂಪರೆ ಆಚರಿಸಿದ ಈ ಬಗೆಯ ಸಾಹಿತ್ಯ ಸಂಶೋಧನೆಯ ಅಸ್ಪಶ್ಯತೆಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಬೇಕಿದೆ.

ಈಚೆಗೆ ಮೊಗಳ್ಳಿಯವರ ‘ನಾನೆಂಬುದು ಕಿಂಚಿತ್ತು’ ಆತ್ಮಕಥೆ ಓದಿ ಬೆರಗಾದೆ. ಅಕ್ಷರಶಃ ತಲ್ಲಣಿಸಿದೆ. ಮೊದ ಮೊದಲ ಅಧ್ಯಾಯಗಳನ್ನು ಓದಿ ಭಯಗೊಂಡಿದ್ದೆ. ಮನುಷ್ಯಕ್ರೌರ್ಯಗಳು ಹೇಗೆಲ್ಲಾ ಇರುತ್ತಲ್ಲಾ ಎಂದು ಒಂದು ಕ್ಷಣ ವಿಚಲಿತನಾಗಿದ್ದೆ. ನನಗೆ ವೈಯಕ್ತಿಕವಾಗಿ ಮೊಗಳ್ಳಿ ಅವರ ಬಗೆಗಿದ್ದ ಒಗಟಿನಂತಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು. ಕಳೆದ ನಾಲ್ಕೈದು ವರ್ಷಗಳಲ್ಲಿ ಕನ್ನಡದ ಹಲವು ಸಂಸ್ಕೃತಿ ಚಿಂತಕರ ಆತ್ಮಕಥನಗಳನ್ನು ಓದಿದ್ದ ನನಗೆ ಮೊಗಳ್ಳಿಯವರ ಆತ್ಮಕಥನ ಬಹಳ ಬೇರೆಯಾಗಿಯೇ ಕಂಡಿತು. ನಿಷ್ಠುರವಾಗಿ ಯಾವುದೇ ಮಾರುವೇಷ ಹಾಕದೆ ಫಿಲ್ಟರ್ ಇಲ್ಲದೆ ತನ್ನನ್ನೂ, ತಾನು ಕಂಡ ಲೋಕವನ್ನು ಎದುರುಗೊಂಡ ಬಗೆಯನ್ನು ಬಿಚ್ಚಿಟ್ಟಿದ್ದಾರೆ. ಆರಂಭಕ್ಕೆ ತನ್ನನ್ನು ‘ಹೀರೋತನ’ದಲ್ಲಿ ಪರಿಚಯಿಸಿಕೊಂಡರೆ, ಕೊನೆಗೆ ತನ್ನನ್ನು ತಾನೇ ಒರೆಗೆ ಹಚ್ಚಿಕೊಳ್ಳುವ ಆತ್ಮವಿಮರ್ಶೆಯೂ ಸಾಧ್ಯವಾಗಿದೆ.

ಮೊಗಳ್ಳಿ ಗಣೇಶ್ ಅವರೂ ಮನುಷ್ಯ ಸಹಜ ಮಿತಿಗಳಿರುವ ಲೇಖಕ. ಬರಹವನ್ನೇ ಚಳವಳಿ ಎಂದು ಭಾವಿಸುವ ಮೊಗಳ್ಳಿಯವರು ಜನಚಳವಳಿಗಳಲ್ಲಿ ನೇರ ಭಾಗಿಯಾದದ್ದು, ಪ್ರಭಾವಿಸಿದ್ದು ಕಡಿಮೆ. ತಾನೊಬ್ಬ ಶ್ರೇಷ್ಠ ಲೇಖಕ ಎಂಬ ಗರಿಮೆ ಜನಪ್ರಿಯತೆ ಅವರನ್ನು ಜನ ಸಮುದಾಯಗಳ ಜತೆ ಬೆರೆಯದಂತೆ ಒಂಟಿಯಾಗಿಸಿದೆ. ಡಾ. ಅಂಬೇಡ್ಕರ್ ಕ್ಷಣಮಾತ್ರವೂ ವಾಸ್ತವವನ್ನು ಮರೆಸುವ ಯಾವುದೇ ಮಾದಕಗಳಿಂದ ದೂರ ಇರುವ ಬುದ್ಧನ ತತ್ವವನ್ನು ಪಾಲಿಸಿದರು. ಮೊಗಳ್ಳಿಯವರು ಇದಕ್ಕೆ ವಿರುದ್ಧವಾಗಿ ನಶೆಯ ತುಟ್ಟತುದಿಗೇರಿದರು. ಅದು ಅವರ ಆರೋಗ್ಯದ ಮೇಲೆ ಸವಾರಿ ಮಾಡಿತು. ಜಾನಪದ ಮತ್ತು ಸಂಸ್ಕೃತಿ ಚಿಂತನೆಯಲ್ಲಿ ಸೂಕ್ಷ್ಮ ಒಳನೋಟಗಳನ್ನು ಕೊಡುವ ಮೊಗಳ್ಳಿಯವರಿಗೆ ಜನಪದ ಮತ್ತು ಸಾಂಸ್ಕೃತಿಕ ಪಠ್ಯಗಳ ಆಳವಾದ ಅಧ್ಯಯನ ಮತ್ತು ವಿಸ್ತಾರವಾದ ಕ್ಷೇತ್ರಕಾರ್ಯ ಸಾಧ್ಯವಾಗಲಿಲ್ಲ. ಇದು ಸ್ವತಃ ಮೊಗಳ್ಳಿಯವರಿಗೆ ಮಿತಿಯಂತೆ ಕಂಡರೂ ಒಟ್ಟಾರೆ ಕನ್ನಡ ಸಂಸ್ಕೃತಿಯ ಅಧ್ಯಯನ ಕ್ಷೇತ್ರಕ್ಕೆ ನಷ್ಟವಾಗಿದೆ.

ಬರೆಯುವವರು ಎಷ್ಟೇ ಆಳವಾಗಿ, ಸೂಕ್ಷ್ಮವಾಗಿ ಬರೆದರೂ ಸಾಹಿತ್ಯ ಸಾಂಸ್ಕೃತಿಕ ವಲಯದ ಜತೆ ಒಡನಾಟ ಇಲ್ಲದೆ ಹೋದರೆ ಹೇಗೆ ಏಕಾಂಗಿಗಳನ್ನಾಗಿಸಲಾಗುತ್ತದೆ ಎನ್ನುವುದಕ್ಕೆ ಮೊಗಳ್ಳಿ ಗಣೇಶ್ ಸಾಕ್ಷಿ. ಹಾಗಾಗಿಯೇ ಎಷ್ಟೋ ಬೂಸಾ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದರೂ ಈ ತನಕ ಮೊಗಳ್ಳಿಯವರಿಗೆ ಬರಲಿಲ್ಲ. ಇಡೀ ಕನ್ನಡ ಜಾನಪದದ ಚಿಂತನೆಯ ದಿಕ್ಕನ್ನೇ ಬದಲಿಸಿದರೂ, ಕರ್ನಾಟಕ ಜಾನಪದ ಅಕಾಡಮಿ ‘ಜಾನಪದ ವಿದ್ವಾಂಸ’ ಎಂದು ಈ ತನಕ ಗುರುತಿಸಲು ಸಾಧ್ಯವಾಗಿಲ್ಲ. ಮೇಲೆ ಗುರುತಿಸಿದ ಕೆಲವು ಮಿತಿಗಳ ಮಧ್ಯೆಯೂ ಮೊಗಳ್ಳಿಯವರು ಕನ್ನಡದ ಒಬ್ಬ ಸತ್ವಶಾಲಿ ಅನನ್ಯ ಕಥೆಗಾರ ಮತ್ತು ಚಿಂತಕ. ಅವರು ಬೇಗ ಗುಣಮುಖರಾಗಿ ಹೊಸ ಚೈತನ್ಯದೊಂದಿಗೆ ಬರಹಕ್ಕೆ ತೊಡಗಲಿ ಎಂದು ಆಶಿಸುವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News