×
Ad

ಜನಪದ ಪರಂಪರೆ ಕಟ್ಟಿಕೊಟ್ಟ ‘ಕನ್ನಡ’ ಮತ್ತು ‘ಕರ್ನಾಟಕ’

Update: 2025-11-04 10:42 IST

ಈ ರಾಜ್ಯದ ಗಡಿರೇಖೆಗಳ ಒಳಗಿನ ಲಕ್ಷಾಂತರ ಮಂದಿಗೆ ರಾಜ್ಯ ಎನ್ನುವುದು ಒಂದು ಅನನ್ಯತೆ ಆಗಿರಲಿಲ್ಲ. ಅವರ ಗ್ರಾಮ, ಸೀಮೆ, ಪಟ್ಟಣ, ಊರು ಇವಿಷ್ಟೇ ಅವರ ಪ್ರಾದೇಶಿಕ ಅನನ್ಯತೆಯನ್ನು ರೂಪಿಸಿದ್ದು. ಇಂತಹ ಸ್ಥಳೀಯ ಗುರುತುಗಳೇ ಜನರಲ್ಲಿ ಕರ್ನಾಟಕ ಎನ್ನುವ ಬೃಹತ್ ರಾಜ್ಯದ ಕಲ್ಪನೆಯನ್ನು ತಂದುಕೊಟ್ಟವು. ಹೀಗಾಗಿ ಮರೆಯಬಾರದ ಅಂಶವೆಂದರೆ ಜನಪದರ ಪ್ರಾದೇಶಿಕ ಗುರುತುಗಳನ್ನೇ ಕನ್ನಡ ಮತ್ತು ಕರ್ನಾಟಕವನ್ನು ಕಟ್ಟಲು ಇಟ್ಟಿಗೆಯಾಗಿ ಬಳಸಿಕೊಳ್ಳಲಾಯಿತು. ಪುರುಷರ ಎಲ್ಲಾ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶ ಆಗುತ್ತಿರುವುದು ಗಂಡಾಳ್ವಿಕೆ ಕರ್ನಾಟಕದ ಚಹರೆಯನ್ನು ಹೆಣ್ಣಿನ ಗುರುತಿನೊಂದಿಗೆ ಬದಲಾಯಿಸುತ್ತಿರುವುದು ಕೂಡ ಬಹುಮುಖ್ಯ ಪಲ್ಲಟವಾಗಿದೆ.

ನವೆಂಬರ್ ತಿಂಗಳಲ್ಲಿ ಕನ್ನಡ ಭಾಷೆ ಮತ್ತು ಕರ್ನಾಟಕದ ಜನತೆಯ ನಾಡಾಭಿಮಾನದ ಬಗ್ಗೆ ಚರ್ಚೆಯಾಗುತ್ತದೆ. ಅದರಲ್ಲೂ ಕನ್ನಡದ ಕವಿಗಳ ಕನ್ನಡ ನಾಡಿನ ಬಗೆಗಿನ ಅಭಿಮಾನದ ಸಾಲುಗಳನ್ನು ಉಲ್ಲೇಖಿಸುತ್ತಾರೆ. ಕನ್ನಡದ ಶಿಷ್ಟ ಕವಿಗಳ ಉಲ್ಲೇಖದಂತೆ ಜನಪದ ಹಾಡಿಕೆಯಲ್ಲಿ ಆಧುನಿಕ ಕೆಲವು ರಚನೆಗಳನ್ನು ಬಿಟ್ಟರೆ, ಅಷ್ಟಾಗಿ ಕನ್ನಡ ಮತ್ತು ಕರ್ನಾಟಕದ ಬಗೆಗಿನ ಪದಗಳು, ನುಡಿಗಟ್ಟು ಗಾದೆ ಒಗಟುಗಳಿಲ್ಲ. ಹಾಗಾದರೆ ಕನ್ನಡ ನಾಡಿನ ಜನಪದರು ಕನ್ನಡ ಅಭಿಮಾನಿಗಳಲ್ಲವೇ? ಎನ್ನುವ ಪ್ರಶ್ನೆಯೊಂದು ಎದುರಾಗುತ್ತದೆ. ಹಾಗೆ ನೋಡಿದರೆ, ಕನ್ನಡ ಮತ್ತು ಕರ್ನಾಟಕತ್ವವನ್ನು ಭಾಷಿಕ ನೆಲೆಯಲ್ಲಿ, ಭೌಗೋಳಿಕ ನೆಲೆಯಲ್ಲಿ ಕಟ್ಟಿಕೊಳ್ಳುವಲ್ಲಿ ‘ಜಾನಪದ’ ಪ್ರಧಾನ ಮಾಧ್ಯಮವಾಗಿದೆ. ಜಾನಪದ ಅಧ್ಯಯನಗಳನ್ನು ಕನ್ನಡದೊಂದಿಗೆ ಜೋಡಿಸುವುದು, ಕರ್ನಾಟಕದ ಭೌಗೋಳಿಕ ಎಲ್ಲೆಯ ಜೊತೆ ಸಮೀಕರಿಸುವುದು ಈಗಲೂ ನಡೆಯುತ್ತಿದೆ. ಈ ತಿಳುವಳಿಕೆಯು ಕನ್ನಡದಲ್ಲಿ ನಡೆದ ಜಾನಪದ ಅಧ್ಯಯನಗಳಲ್ಲಿ ಹೆಚ್ಚಾಗಿದೆ.

‘ಕನ್ನಡ’ ಎನ್ನುವ ಭಾಷೆಯ ಹಿರಿಮೆಯನ್ನು ಅರಿಯಲು, ‘ಕರ್ನಾಟಕ’ ಎನ್ನುವ ರಾಜ್ಯದ ಸಾಂಸ್ಕೃತಿಕ ಬಹುತ್ವವನ್ನು ಗುರುತಿಸಲು ಜಾನಪದ ಆಕರಗಳು ಮತ್ತೆ ಮತ್ತೆ ಬಳಕೆಯಾಗುತ್ತಿವೆ. ಇಲ್ಲಿ ಜಾನಪದ ಆಕರಗಳ ಮೂಲಕ ಹುಟ್ಟುವ ತಿಳುವಳಿಕೆಯನ್ನು ಆಧರಿಸಿ ‘ಕನ್ನಡ’ ‘ಕರ್ನಾಟಕ’ ಕಲ್ಪನೆ ರೂಪುಗೊಳ್ಳುವುದಕ್ಕಿಂತ, ಕನ್ನಡ ಮತ್ತು ಕರ್ನಾಟಕದ ಚೌಕಟ್ಟುಗಳಿಗೆ ಜಾನಪದ ಆಕರಗಳನ್ನು ಜೋಡಿಸುವ ಮಾದರಿ ಹೆಚ್ಚಾಗಿದೆ. ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಕನ್ನಡ ಭಾಷೆ ಮಾತನಾಡುವವರನ್ನು ಕರ್ನಾಟಕ ಎಂಬ ಭೌಗೋಳಿಕ ನೆಲೆಯಲ್ಲಿ ಒಂದು ಗೂಡಿಸುವ ಪ್ರಯತ್ನ ನಡೆಯಿತು.

ಆಗಿನ ಕಾಲಕ್ಕೆ ಕರ್ನಾಟಕವನ್ನು ತಲುಪುವ ಮಾಧ್ಯಮಗಳೆಂದರೆ ನಾಟಕ ಮತ್ತು ಸಿನೆಮಾ. ಇವನ್ನು ಹೊರತುಪಡಿಸಿದರೆ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಇದ್ದ ಸಮಾನ ಮಾಧ್ಯಮವೆಂದರೆ ಜಾನಪದ. ಜನಪದ ಕತೆ, ಗೀತೆ, ಗಾದೆ, ಒಗಟು, ಕಲೆ, ಆಚರಣೆ ಮುಂತಾದ ವಿಷಯಗಳಲ್ಲಿ ಪ್ರಾದೇಶಿಕ ಭಿನ್ನತೆಗಳಿದ್ದರೂ, ಸಾಮಾನ್ಯ ಜನರ ಅಭಿವ್ಯಕ್ತಿಯ ಪ್ರಧಾನ ಧಾರೆಯಂತೆ ಜಾನಪದ ಲೋಕ ಅಧ್ಯಯನಕಾರರಿಗೆ ಕಂಡಿತು. ಇದರಿಂದಾಗಿ ಕನ್ನಡವನ್ನು ಭಾಷಿಕವಾಗಿ ಕಟ್ಟಲು, ಕರ್ನಾಟಕವೆಂಬ ಭೌಗೋಳಿಕ ಏಕತೆಯನ್ನು ತರಲು ಜನಪದವನ್ನು ಒಂದು ಸಾಂಸ್ಕೃತಿಕ ಶಕ್ತಿಯನ್ನಾಗಿ ಬಳಸಿಕೊಳ್ಳಲಾಯಿತು. ಇದು ಜನಪದ ಕುರಿತ ಆಲೋಚನಾ ಮಾದರಿಗಳನ್ನು ಪ್ರಭಾವಿಸಿತು. ಹಾಗಾಗಿ ‘ಕನ್ನಡ’ ‘ಕರ್ನಾಟಕ’ವನ್ನು ಭಾವನಾತ್ಮಕವಾಗಿ ವೈಭವೀಕರಿಸುವ ನಿರ್ವಚನಗಳೇ ಜಾನಪದ ಅಧ್ಯಯನದ ವಿಶ್ಲೇಷಣೆಗಳಲ್ಲಿ ಬಳಕೆಯಾದವು.

ಹಾಗೆ ನೋಡಿದರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಕರ್ನಾಟಕದ ಜನತೆಯ ಸಂಸ್ಕೃತಿ’ (1973), ನಂ. ತಪಸ್ವೀಕುಮಾರ್ ಅವರ ‘ಕನ್ನಡ ಜನಪದ ಒಗಟುಗಳ ಸಾಂಸ್ಕೃತಿಕ ಅಧ್ಯಯನ’ (1979), ವೀರಣ್ಣ ದಂಡೆಯವರ ‘ಕನ್ನಡ ಜಾನಪದ ಪ್ರಜ್ಞೆ’ (1993) ಶ್ರೀಕಂಠ ಕೂಡಿಗೆ ಅವರ ‘ಕನ್ನಡ ಲಾವಣಿಗಳು’ (1999), ಹಂಪ ನಾಗರಾಜಯ್ಯ ಅವರ ‘ಕರ್ನಾಟಕದ ಜಾತ್ರೆಗಳು’ (1981) ಇತ್ಯಾದಿ. ಇವುಗಳೆಲ್ಲವೂ ಕರ್ನಾಟಕದ, ಕನ್ನಡದ ಭಿನ್ನ ಚಹರೆಗಳನ್ನು ಹಲವು ನೆಲೆಗಳಲ್ಲಿ ಪರಿಚಯಿಸುತ್ತವೆ. ಬೇಂದ್ರೆಯವರು ‘ಗರತಿ ಹಾಡು’ (1931) ಸಂಕಲನಕ್ಕೆ ಮುನ್ನುಡಿ ಬರೆಯುತ್ತ ಭಾಷಿಕವಾಗಿ ಕನ್ನಡವನ್ನು ನಿರ್ವಚಿಸುವ ಬಗೆ ಹೀಗಿದೆ: ‘‘ಬೀದರ್, ಹೈದರಾಬಾದ್‌ಗಳ ಉತ್ತರದ ತುದಿಯಿಂದ ನೀಲಗಿರಿ, ಕೊಯಮತ್ತೂರಿನ ದಕ್ಷಿಣದ ತುದಿವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶನವು ಈ ಹಾಡುಗಳಲ್ಲಿದೆ. ಅಲ್ಪಸ್ವಲ್ಪ ಪಾಠ ಬೋಧದಿಂದ ಇವುಗಳಲ್ಲಿ ಅರ್ಧಕ್ಕರ್ಧ ಹಾಡುಗಳು ಎಲ್ಲ ಕನ್ನಡ ಮನೆಗಳಲ್ಲಿ ಹರಡಿಕೊಂಡಿರಲು ಸಾಕು. ಈ ಜನಪದ ವೇದವೇ. ಎಲ್ಲ ಕನ್ನಡಿಗರಿಗೂ ತಾಯ ಮೊಲೆ ಹಾಲು ಎಂಬುದು ಇದನ್ನೊದಿದವರ ಅನುಭವಕ್ಕೆ ಬಾರದೆ ಇರದು, ಈ ಅನುಭವದಿಂದ ಉಂಟಾಗುವ ಐಕ್ಯಭಾವವು ಅಂತಿಂತಹದಲ್ಲ. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಜನಸಾಮಾನ್ಯರ ಹೃದಯದೊಳಗಿನ ಸುಖದ ಕನಸೆಂತಹದೆಂಬುದನ್ನು ಕಂಡುಕೊಳ್ಳಲು ಇದರಂತಹ ಬೇರೆ ಕೈಗನ್ನಡಿಯಿಲ್ಲ’’. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಭದ್ರವಾಗಿಸಲು ಕನ್ನಡ ಭಾಷಿಕ ವಲಯವನ್ನು ಒಂದು ಗೂಡಿಸುವ ಆಶಯವಾಗಿ ಜನಪದ ಸಾಹಿತ್ಯವನ್ನು ಬೇಂದ್ರೆಯವರು ನಿರ್ವಚಿಸುತ್ತಾರೆ. ದೇವುಡು, ಬೆಟಗೇರಿ ಕೃಷ್ಣಶರ್ಮ, ಅರ್ಚಕ ಬಿ.ರಂಗಸ್ವಾಮಿ, ಬಿ.ಎಸ್.ಗದಿಗಿಮಠ ಮುಂತಾದವರ ನಿಲುವೂ ಕೂಡ ಹೆಚ್ಚು ಕಡಿಮೆ ಇದೇ ಆಗಿತ್ತು. ಇಲ್ಲಿ ಬ್ರಿಟಿಷ್ ಆಡಳಿತದ ನಂತರ ನಮ್ಮದೇ ಆದ ಆಡಳಿತಾತ್ಮಕ ಸಂರಚನೆಗೆ ಹೀಗೆ ಭಾಷಿಕ ವಲಯವೊಂದು ಒಗ್ಗೂಡುವುದು ಆ ಕಾಲದ ಒತ್ತಡವೂ ಆದಂತಿದೆ.

ಕರ್ನಾಟಕದ ಹಲವು ಸಾಂಸ್ಕೃತಿಕ, ಭಾಷಿಕ ವೈವಿಧ್ಯಗಳನ್ನು ‘ಕನ್ನಡ’ ಭಾಷೆಯಲ್ಲಿ ತಿಳಿಯಲು ಅನುಕೂಲವಾದಂತೆ, ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ಬರುವ ಹಲವು ಭಿನ್ನ ಭಾಷೆಗಳನ್ನು ಕನ್ನಡೀಕರಿಸಿ ಅವುಗಳ ಗುರುತುಗಳಿಗೆ ಧಕ್ಕೆಯಾಗಿದ್ದೂ ಇದೆ. ‘ಕನ್ನಡ ಜಾನಪದ’ ಎನ್ನುವಾಗ ಕಲ್ಪಿಸುವ ಕರ್ನಾಟಕ ಕನ್ನಡದ್ದು. ಆದರೆ ವಾಸ್ತವವಾಗಿ ಹಾಗಿಲ್ಲ, ಕರ್ನಾಟಕ ಬಹು ಸಂಖ್ಯಾತ ಕನ್ನಡಿಗರಿಂದಲೂ ಅಲ್ಪಸಂಖ್ಯಾತ ತುಳು, ಕೊಂಕಣಿ, ಲಂಬಾಣಿ, ಹಿಂದಿ, ಮರಾಠಿ, ಉರ್ದು, ತೆಲುಗು, ತಮಿಳು, ಬುಡಕಟ್ಟುಗಳ ಭಾಷೆಗಳು ಹೀಗೆ ಇತರ ಹಲವು ಭಾಷೆಗಳನ್ನು ಮಾತನಾಡುವವರೂ ಕರ್ನಾಟಕದಲ್ಲಿದ್ದಾರೆ. ಆದರೆ ಈ ಬಗೆಯ ಎಲ್ಲಾ ಅಲ್ಪಸಂಖ್ಯಾತ ಭಾಷಿಕರನ್ನೂ, ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳ ಉಪಭಾಷಿಕರನ್ನು ‘ಕನ್ನಡ’ದ ಪ್ರಮಾಣಿತ ಭಾಷೆಯಲ್ಲಿ ಪರಿಚಯಿಸುವ ಮತ್ತು ಅವರ ಜಾನಪದವನ್ನು ಕನ್ನಡದಲ್ಲೇ ನಿರ್ವಚಿಸುವ ಕ್ರಮ ಕರ್ನಾಟಕದಲ್ಲಿ ಹೆಚ್ಚು ಬಳಕೆಯಾಗಿದೆ. ಇದಕ್ಕೆ ಅಪವಾದವೆಂದರೆ ‘ತುಳು’ ಭಾಷೆ. ಈ ಭಾಷೆಯ ಮೂಲಕವೇ ತುಳುವ ಸಂಸ್ಕೃತಿಯನ್ನು ಅಧ್ಯಯನ ಮಾಡುವ ಗಂಭೀರ ಸಂಶೋಧನೆಗಳು ನಡೆದಿವೆ. ಕಾರಣ ‘ತುಳು’ ಭಾಷಿಕ ವಿದ್ವಾಂಸರೇ ಅಧ್ಯಯನ ಕೈಗೊಂಡಿರುವುದು ಮತ್ತು ಪಾಶ್ಚಿಮಾತ್ಯ ವಿದ್ವಾಂಸರು ‘ತುಳು’ ಭಾಷೆಯ ಬಗೆಗೆ ಅಧ್ಯಯನ ಮಾಡಿರುವುದು.

ಹೀಗೆ ಬಹುಭಾಷಿಕತೆ, ಬಹು ಸಾಂಸ್ಕೃತಿಕ ವೈವಿಧ್ಯಗಳನ್ನು ‘ಕನ್ನಡ ಜಾನಪದ ಎನ್ನುವ ನೆಲೆಯಲ್ಲಿ ತಿಳಿಯಲಾಗಿದೆ. ಇಲ್ಲಿ ‘ಭಾಷೆ’ಯೇ ಪ್ರಧಾನ ಅಂಶ ಎಂದು ಮೇಲು ನೋಟಕ್ಕೆ ಕಂಡರೂ, ಈ ಭಾಷೆಯನ್ನು ಅರ್ಥೈಸಿಕೊಂಡಿರುವ ಬಗೆ ಮಾತ್ರ ಬಹು ಆಯಾಮದ ನೆಲೆಯಲ್ಲಿ. ಕನ್ನಡ ಬಲ್ಲವ ಕೊಡವ, ತುಳು, ಕೊಂಕಣಿ, ಉರ್ದುಗಳನ್ನು ಮಾತನಾಡದಿದ್ದರೂ, ಈ ಭಾಷೆಗಳನ್ನು ಮಾತನಾಡುವ ಎಲ್ಲರೂ ಸಾಮಾನ್ಯವಾಗಿ ಕನ್ನಡವನ್ನು ಮಾತನಾಡುತ್ತಾರೆ. ಇದಕ್ಕೆ ಕಾರಣ ಈ ನಾಡಿನಲ್ಲಿ ಈ ಎಲ್ಲಾ ಜನರ ಬದುಕಿನ ಅಗತ್ಯಗಳ ಪೂರೈಕೆಗೆ ಕನ್ನಡ ಅಗತ್ಯವೆಂಬುದೇ ಆಗಿದೆ. ಹೀಗೆ ಭಾಷಿಕವಾಗಿ ‘ಕನ್ನಡ’ದ ಅನನ್ಯತೆಯನ್ನು ಭಿನ್ನ ನೆಲೆಗಳಲ್ಲಿ ಗುರುತಿಸಬಹುದು.

ಕರ್ನಾಟಕದ ಏಕೀಕರಣದ ಸಂದರ್ಭದಲ್ಲಿ ‘ಕನ್ನಡ’ ಭಾಷೆ ಮತ್ತು ಕರ್ನಾಟಕದ ಗಡಿಗಳ ಉಲ್ಲೇಖಗಳನ್ನು ಸಾಹಿತ್ಯ ಕೃತಿಗಳಲ್ಲಿ ಹುಡುಕತೊಡಗಿದರು. ಅಂತೆಯೇ ಕನ್ನಡದ ಬಹುಪಾಲು ಸಾಹಿತಿಗಳು ಕನ್ನಡಿಗರ ಶೌರ್ಯ, ಹಿರಿಮೆ, ನಾಡಿನ ವಿಸ್ತಾರಗಳ ಉಲ್ಲೇಖ ಒಳಗೊಂಡ ನಾಡಾಭಿಮಾನವನ್ನು ಹುಟ್ಟಿಸುವ ಗೀತೆಗಳನ್ನು ರಚಿಸತೊಡಗಿದರು. ಅದೇ ಹೊತ್ತಿಗೆ ಕನ್ನಡ ಭಾಷೆಯ ಅನನ್ಯತೆಯ ಭಿನ್ನ ಮುಖವಾಗಿ ಜಾನಪದ ಸಾಹಿತ್ಯವನ್ನು ವಿಶ್ಲೇಷಿಸತೊಡಗಿದರು. ವಿಪರ್ಯಾಸವೆಂದರೆ ಜಾನಪದ ಸಂಗ್ರಹಗಳಲ್ಲಿ ಒಂದು ‘ಕನ್ನಡ’ವಿರದೆ ಹಲವು ಕನ್ನಡಗಳಿದ್ದವು. ಇನ್ನು ಜನಪದ ಸಾಹಿತ್ಯದಲ್ಲಿ ‘ಕನ್ನಡ’ವೆಂತಾಗಲಿ, ಕರ್ನಾಟಕವೆಂತಾಗಲಿ ಉಲ್ಲೇಖಗಳೇ ಇರಲಿಲ್ಲ. ಏಕೀಕರಣದ ಕವಿಗಳ ಕನ್ನಡದ ಕಾವ್ಯಗಳ ಪ್ರಭಾವಗಳಲ್ಲಿ ಕೆಲವು ಜನಪದ ಲಾವಣಿಕಾರರು ಕನ್ನಡದ ಬಗ್ಗೆ ಲಾವಣಿ ಕಟ್ಟಿದರು. ಹೀಗೆ ಅನೇಕತೆಯನ್ನು ಒಳಗೊಂಡ ಜನಪದ ಭಾಷೆಯನ್ನು ‘ಕನ್ನಡ’ ಎನ್ನುವ ಏಕಭಾಷೆಯನ್ನು ವಿವರಿಸಲು ಬಳಸಿಕೊಳ್ಳಲಾಯಿತು.

ಕರ್ನಾಟಕದ ಜನಪದ ಕಥೆಗಳು, ಕರ್ನಾಟಕದ ಗಾದೆಗಳು, ಕರ್ನಾಟಕದ ಜನಪದ ಮಹಾಕಾವ್ಯಗಳು, ಈ ಬಗೆಯ ಅಧ್ಯಯನಗಳು ಕರ್ನಾಟಕದ ಹಲವು ಭಿನ್ನತೆಗಳನ್ನು ಒಟ್ಟಾಗಿಸಿಯೇ ‘ಕರ್ನಾಟಕ’ದ ಗುರುತನ್ನು ಗಟ್ಟಿಗೊಳಿಸಲು ಪ್ರಯತ್ನಿಸಿವೆ. ಭೌಗೋಳಿಕ ಭಿನ್ನತೆಗಳನ್ನು ವಿವರಿಸುತ್ತಲೇ ‘ಕರ್ನಾಟಕ’ದ ಕಲ್ಪನೆಯನ್ನು ಕಟ್ಟಿಕೊಳ್ಳುವ ಕ್ರಮ ಜಾನಪದ ಅಧ್ಯಯನಗಳಲ್ಲಿದೆ. ಜೀಶಂಪ, ವಿಲಿಯಂ ಮಾಡ್ತ ಅವರು ಸಂಪಾದಿಸಿದ ‘ಕರ್ನಾಟಕ ಜಾನಪದ’ (1989) ಕೃತಿಯೂ ಈ ಬಗೆಯ ಕರ್ನಾಟಕ ಭೂ ಪ್ರದೇಶದ ಜನಸಂಸ್ಕೃತಿಯ ಹಲವು ಆಯಾಮಗಳನ್ನು ಪರಿಚಯಿಸುತ್ತದೆ. ಹೀಗೆ ಕರ್ನಾಟಕದ ಭೂ ಪ್ರದೇಶವನ್ನು, ಅದರೊಳಗಿನ ಬಹು ಸಂಸ್ಕೃತಿಯನ್ನು ಪ್ರತಿನಿಧಿಸುವ ಮತ್ತು ಕರ್ನಾಟಕದ ಅನನ್ಯತೆಯನ್ನು ಗಟ್ಟಿಗೊಳಿಸುವ ನೆಲೆಯಲ್ಲಿ ಕರ್ನಾಟಕ ಜಾನಪದ ಅಕಾಡಮಿ ಇರುವುದನ್ನು ಗಮನಿಸಬಹುದು.

ಕರ್ನಾಟಕವನ್ನು ಹೊರತುಪಡಿಸಿ ಬೇರೆ ಬೇರೆ ರಾಜ್ಯಗಳಿಗೆ, ವಿದೇಶಿ ಜಾನಪದ ವಿದ್ವಾಂಸರುಗಳಿಗೆ ಕರ್ನಾಟಕದ ಸಾಂಸ್ಕೃತಿಕ ವೈವಿಧ್ಯವನ್ನು ಪರಿಚಯಿಸುವ ನೆಲೆಯೂ ‘ಕರ್ನಾಟಕ ಜಾನಪದ’ ಎಂಬ ಚೌಕಟ್ಟಿನ ಅಧ್ಯಯನಗಳ ಪ್ರೇರಣೆಯಾಗಿತ್ತು. ಜೀಶಂ ಪರಮಶಿವಯ್ಯ ಅವರು ‘ಕರ್ನಾಟಕ ಜಾನಪದ’ ಕೃತಿಗೆ ಮುನ್ನುಡಿ ಬರೆಯುತ್ತ ‘‘....ಇಷ್ಟೆಲ್ಲಾ ಜಾನಪದ ಚಟುವಟಿಕೆಗಳು ಕರ್ನಾಟಕದಲ್ಲಿ ನಡೆದಿದ್ದರೂ ಸರಿಯಾದ ರೀತಿಯಲ್ಲಿ ಇದರ ಪ್ರಚಾರ ಹೊರಜಗತ್ತಿನ ದೃಷ್ಟಿಯಿಂದ ನಡೆದಿಲ್ಲವೆಂದೇ ಹೇಳಬೇಕು. ಕರ್ನಾಟಕದಲ್ಲಿ ಏನು ನಡೆದಿದೆ ಎಂಬುದು ವಿಶ್ವ ಜಾನಪದ ವೇದಿಕೆಗೆ ತಿಳಿದರೆ ಜಗತ್ತಿನ ವಿದ್ವಾಂಸರ ದೃಷ್ಟಿ ಇತ್ತ ಹರಿಯುತ್ತದೆ’’ ಎನ್ನುತ್ತಾರೆ. ಇದರಲ್ಲೂ ಮೇಲ್ವರ್ಗದ ಜನಪದ ಕಲೆಗಳೇ ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದದ್ದೊಂದು ವಿಪರ್ಯಾಸ. ಯಕ್ಷಗಾನವನ್ನೂ ಕರ್ನಾಟಕದ ಅನನ್ಯ ಕಲೆ ಎಂದು ಬಿಂಬಿಸಲಾಗಿದೆ. ವೀರಗಾಸೆ, ಪೂಜಾಕುಣಿತ ಮುಂತಾದ ಮೇಲ್ವರ್ಗದ, ‘ಉತ್ತಮ’ ಜಾತಿಯವರ ಜನಪದ ಕಲೆ ಸಂಪ್ರದಾಯಗಳು ಕರ್ನಾಟಕದ ಅನನ್ಯತೆಯನ್ನು ಬಿಂಬಿಸಲು ಬಳಕೆಯಾದರೆ, ದಲಿತರು ಬಳಸುವ ‘ಹಲಗೆ’, ಮಾರಿಹಬ್ಬ, ಅಲೆಮಾರಿ ಬುಡಕಟ್ಟುಗಳ ಕಲೆಗಳು ಕನ್ನಡದ ಗುರುತುಗಳಾಗಿಲ್ಲ.

ಕನ್ನಡ ರಾಷ್ಟ್ರೀಯತೆಯ ಬಗ್ಗೆ ಸಂಶೋಧನೆ ಮಾಡಿದ ಬಂಜಗೆರೆ ಜಯಪ್ರಕಾಶ್ ಅವರು ಕನ್ನಡತ್ವವನ್ನು ನಿರೂಪಿಸುವ ಕ್ರಮದಲ್ಲಿಯೇ ಜಾನಪದದ ಅಂತರ್ಗತ ಸ್ಥಿತಿಯನ್ನು ಗುರುತಿಸಲು ಸಾಧ್ಯ. ‘‘ಕನ್ನಡತ್ವವೆಂಬುದು ಕೇವಲ ಒಂದು ಸಾಮಾಜಿಕ ಅಂಶವಲ್ಲ, ಅಥವಾ ಸಾಂಸ್ಕೃತಿಕ ಚಿನ್ಹೆ ಮಾತ್ರವಲ್ಲ. ಅದೊಂದು ಅಖಂಡವಾದ ಜನಜೀವನದ ಪ್ರತೀಕ, ಅದರೊಳಗೆ ರಾಜಕೀಯವಿದೆ, ಆರ್ಥಿಕತೆ ಇದೆ, ಇತಿಹಾಸವಿದೆ, ಸಾಹಿತ್ಯ, ಸಾಂಸ್ಕೃತಿಕತೆ ಇತ್ಯಾದಿ ಎಲ್ಲವೂ ಇದೆ. ಒಂದು ಸಮಾಜದ ಉತ್ಪಾದನಾ ವಿನ್ಯಾಸದೊಳಗೆ ಒಂದು ಪಂಗಡವಾಗಿ ಏರ್ಪಟ್ಟು ಕಡೆಗೆ ಒಂದು ಸಾಂಸ್ಕೃತಿಕ ಗುರುತಿಸಿಕೊಳ್ಳುವಿಕೆಯನ್ನು ರೂಢಿಸಿಕೊಂಡ ಜಾತಿ ಎಂಬುದು ಹೇಗೆ ಒಂದು ನಿರ್ದಿಷ್ಟ ಜನ ಸಮುದಾಯದ ಸಾಮಾಜಿಕ ಸಂಘಟೀಕರಣವೋ, ಕನ್ನಡತನವೆಂಬುದೂ ಹಾಗೆಯೇ ಒಂದು ಜನಸಮುದಾಯದ ಪಂಗಡೀಕರಣ’’ ಎನ್ನುತ್ತಾರೆ. ಜಾತಿಯ ಸಂಘಟೀಕರಣ ಕನ್ನಡತನದ ಜನಸಮುದಾಯದ ಪಂಗಡೀಕರಣ ಆಗುವಲ್ಲಿಯೂ ಜನಪದ ಸಾಂಸ್ಕೃತಿಕ ಲೋಕದ ಒಳಗೊಳ್ಳುವಿಕೆ ಬಹಳ ಮುಖ್ಯವಾದ ಸಂಗತಿ.

ಕನ್ನಡ ರಾಷ್ಟ್ರೀಯತೆಯ ಪರಿಕಲ್ಪನೆಯು ಅಂತಹ ಒಂದು ನಿರ್ಮಿಸಿದ ಅನನ್ಯತೆ. ಒಂದು ರಾಷ್ಟ್ರದ ಪರಿಕಲ್ಪನೆ ಕಾಲದಿಂದ ಕಾಲಕ್ಕೆ ಬದಲಾಗುತ್ತದೆ. 1956ರ ಬಳಿಕ ಕರ್ನಾಟಕ ಎಂಬ ರಾಜ್ಯದ ಪರಿಕಲ್ಪನೆ ರೂಪುಗೊಳ್ಳುತ್ತಾ ಹೋಯಿತು. ಈ ರಾಜ್ಯದ ಗಡಿರೇಖೆಗಳ ಒಳಗಿನ ಲಕ್ಷಾಂತರ ಮಂದಿಗೆ ರಾಜ್ಯ ಎನ್ನುವುದು ಒಂದು ಅನನ್ಯತೆ ಆಗಿರಲಿಲ್ಲ. ಅವರ ಗ್ರಾಮ, ಸೀಮೆ, ಪಟ್ಟಣ, ಊರು ಇವಿಷ್ಟೇ ಅವರ ಪ್ರಾದೇಶಿಕ ಅನನ್ಯತೆಯನ್ನು ರೂಪಿಸಿದ್ದು. ಇಂತಹ ಸ್ಥಳೀಯ ಗುರುತುಗಳೇ ಜನರಲ್ಲಿ ಕರ್ನಾಟಕ ಎನ್ನುವ ಬೃಹತ್ ರಾಜ್ಯದ ಕಲ್ಪನೆಯನ್ನು ತಂದುಕೊಟ್ಟವು. ಹೀಗಾಗಿ ಮರೆಯಬಾರದ ಅಂಶವೆಂದರೆ ಜನಪದರ ಪ್ರಾದೇಶಿಕ ಗುರುತುಗಳನ್ನೇ ಕನ್ನಡ ಮತ್ತು ಕರ್ನಾಟಕವನ್ನು ಕಟ್ಟಲು ಇಟ್ಟಿಗೆಯಾಗಿ ಬಳಸಿಕೊಳ್ಳಲಾಯಿತು. ಪುರುಷರ ಎಲ್ಲಾ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶ ಆಗುತ್ತಿರುವುದು ಗಂಡಾಳ್ವಿಕೆ ಕರ್ನಾಟಕದ ಚಹರೆಯನ್ನು ಹೆಣ್ಣಿನ ಗುರುತಿನೊಂದಿಗೆ ಬದಲಾಯಿಸುತ್ತಿರುವುದು ಕೂಡ ಬಹುಮುಖ್ಯ ಪಲ್ಲಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News