×
Ad

ಪ್ರೊ. ಸೋನಾಝರಿಯಾ ಮಿಂಜ್: ಯುನೆಸ್ಕೋ ಗುರುತಿಸಿದ ದೇಶದ ಮೊದಲ ಬುಡಕಟ್ಟು ಮಹಿಳೆ

Update: 2026-03-10 12:10 IST

ಯುನೆಸ್ಕೋದಲ್ಲಿ ಭಾರತದ ಬುಡಕಟ್ಟುಗಳ ಜ್ಞಾನ ಪರಂಪರೆಯ ಬಗ್ಗೆ ಕೈಗೊಳ್ಳಬೇಕೆಂದಿರುವ ಹೊಸ ಯೋಜನೆಗಳ ಬಗ್ಗೆ ಕೇಳಿದಾಗ, ಪ್ರೊ. ಸೋನಾಝರಿಯಾ ಮಿಂಜ್ ಅವರು ‘‘ಮೂಲಭೂತವಾಗಿ ಭಾರತದ ಬುಡಕಟ್ಟುಗಳು ಬದುಕಿ ಉಳಿಯಬೇಕಿದೆ, ಅವರು ಬದುಕುಳಿದರೆ ಉಳಿದದ್ದರ ಬಗ್ಗೆ ಮಾತನಾಡಬಹುದು. ಕಾರಣ ಇಂದು ಅವರ ಬದುಕಿಗೆ ಕಂಟಕ ಬಂದಿದೆ’’ ಎನ್ನುತ್ತಾರೆ.

ಇದೀಗ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಮಹಿಳಾಪರವಾದ ಚರ್ಚೆ ಸಂವಾದಗಳು ನಡೆಯುತ್ತಿವೆ. ಒಂದೆಡೆ ಗಂಡಾಳ್ವಿಕೆಯ ದಮನವೂ, ಮತ್ತೊಂದೆಡೆ ಪುರುಷಪಾರಮ್ಯದ ಸಾಮಾಜಿಕ ಸಂರಚನೆಯನ್ನೇ ಬುಡಮೇಲು ಮಾಡುವ ಹೆಣ್ಣಿನ ಸಾಧನೆಗಳೂ ಜತೆ ಜತೆಗೇ ನಡೆಯುತ್ತಿವೆ. ಈಚೆಗೆ ನಾನು ಯುನೆಸ್ಕೋದ ‘ಟ್ರಾನ್ಸ್‌ಫಾರ್ಮಿಂಗ್ ಇಂಡಿಜೀನಿಯಸ್ ನಾಲೆಡ್ಜ್ ರಿಸರ್ಚ್ ಗವರ್ನರ್ಸ್‌ (IKRG) ಆಂಡ್ ರಿಮ್ಯಾಟ್ರಿಯೇಷನ್ ಟು ಅಡ್ವಾನ್ಸ್ ಇಂಡಿಜೀನಿಯಸ್ ರೈಟ್ಸ್ ನಾಲೆಡ್ಜ್ ಸಿಸ್ಟಮ್ ಆಂಡ್ ಸೆಲ್ಪ್ ಡಿಟರ್‌ಮಿನೇಷನ್’ ಪೀಠದ ಸಹ-ಅಧ್ಯಕ್ಷೆಯಾದ ಪ್ರೊ. ಸೋನಾಝರಿಯಾ ಮಿಂಜ್ ಅವರನ್ನು ಭೇಟಿ ಮಾಡಿದೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ (ಜೆಎನ್‌ಯು) ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿಯಾಗಿರುವ ಪ್ರೊ. ಸೋನಾಝರಿಯಾ ಮಿಂಜ್ ಅವರು ಯುನೆಸ್ಕೋದ ಈ ಸ್ಥಾನಕ್ಕೆ ಆಯ್ಕೆಯಾದ ಭಾರತದ ಮೊದಲ ಬುಡಕಟ್ಟು ಮಹಿಳೆ.

ಜಾರ್ಖಂಡ್‌ನಲ್ಲಿ ಮೂಲತಃ ದ್ರಾವಿಡ ಭಾಷಾ ಪರಿವಾರದ ಕುರುಖ್ ಭಾಷೆಯನ್ನು ಆಡುವ ಒರಾನ್ ಬುಡಕಟ್ಟಿದೆ. ಮುಂಡಾ ಬುಡಕಟ್ಟಿನವರು ಈ ಸಮುದಾಯವನ್ನು ಒರಾನ್ ಎನ್ನುತ್ತಿದ್ದರು. ಒರಾನ್ ಎಂದರೆ ಅಲೆದಾಡುವವರು ಎಂದರ್ಥ. ಈ ಸಮುದಾಯವನ್ನು ಕುರುಖ್ ಬುಡಕಟ್ಟು ಎಂತಲೂ ಕರೆಯುತ್ತಾರೆ. ಒರಾನ್ ಸಮುದಾಯ ಜಾರ್ಖಂಡ್ ರಾಜ್ಯವನ್ನು ಒಳಗೊಂಡಂತೆ ಪಶ್ಚಿಮ ಬಂಗಾಳ, ಒಡಿಶಾ ಮತ್ತು ಛತ್ತೀಸ್‌ಗಡದಲ್ಲಿಯೂ ಇದ್ದಾರೆ. ಜಾರ್ಖಂಡ್ ರಾಜ್ಯದಲ್ಲಿ ಸಂತಾಲರ ನಂತರ ದೊಡ್ಡ ಸಮುದಾಯ. 36 ಲಕ್ಷದಷ್ಟು ಜನಸಂಖ್ಯೆ ಇದೆ. ಒರಾನರು ಆರಂಭದಲ್ಲಿ ಕಾಡಿನ ಉತ್ಪನ್ನಗಳನ್ನು ಆಧರಿಸಿ ಬದುಕುತ್ತಿದ್ದರು. ನಂತರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೃಷಿಕರಾಗಿ ಬದಲಾದರು. ಬ್ರಿಟಿಷ್ ಆಳ್ವಿಕೆಯಲ್ಲಿ ಒರಾನ್‌ಗಳನ್ನು ಅಸ್ಸಾಂ, ಪಶ್ಚಿಮ ಬಂಗಾಳ, ಬಾಂಗ್ಲಾ ದೇಶದ ಕಾಫಿ ತೋಟಗಳಿಗೆ ಜೀತದಾಳುಗಳನ್ನಾಗಿ ಕರೆದೊಯ್ದಿದ್ದರು. ಈಗಲೂ ಮಾತೃಪ್ರಧಾನ ಸಂಸ್ಕೃತಿಯ ಕುರುಹುಗಳಿರುವ ಬುಡಕಟ್ಟು ಇದಾಗಿದೆ. 1955ರಲ್ಲಿ ಸಿನೆಮಾ ನಿರ್ದೇಶಕ ಋತ್ವಿಕ್ ಘಟಕ್ ಈ ಬುಡಕಟ್ಟು ಜನರ ಜೀವನವನ್ನು ಆಧರಿಸಿ ಬಂಗಾಳಿಯಲ್ಲಿ ‘ಒರಾನ್’ ಎನ್ನುವ ಸಿನೆಮಾ ತೆಗೆದರು. ಈ ಮೂಲಕ ಈ ಸಮುದಾಯ ಹೊರ ಜಗತ್ತಿಗೆ ಹೆಚ್ಚು ಪರಿಚಯವಾಯಿತು. ಇಂದು ಒರಾನ್ ಬುಡಕಟ್ಟಿನಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟ್ರವನ್ನು ಪ್ರತಿನಿಧಿಸಿದ ಹಲವು ಹಾಕಿ ಕ್ರೀಡಾಪಟುಗಳಿದ್ದಾರೆ, ರಾಜಕಾರಣಿಗಳು, ಅಕಾಡಮಿಷಿಯನ್ಸ್‌ಗಳ ಸಾಧನೆಗಳನ್ನು ಗುರುತಿಸಬಹುದು. ಇಂತಹ ಬುಡಕಟ್ಟಿನಿಂದ ಹೊರ ಬಂದ ಪ್ರತಿಭೆ ಪ್ರೊ. ಸೋನಾಝರಿಯಾ ಮಿಂಜ್.

ಜಾರ್ಖಂಡ್‌ನ ರಾಂಚಿಯ ಗುಮ್ಲಾ ಜಿಲ್ಲೆಯ ಒರಾನ್ ಬುಡಕಟ್ಟಿನ ಪ್ಯಾರಕ್ಲೆಟಾ ಮತ್ತು ನಿರ್ಮಲ್ ಮಿಂಜ್ ಅವರ ಮಗಳಾಗಿ 1962ರಲ್ಲಿ ಜನಿಸುತ್ತಾರೆ. ಮಿಂಜ್ ದಕ್ಷಿಣ ಭಾರತದ ಬೆಂಗಳೂರು, ಚೆನ್ನೈನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ದಿಲ್ಲಿಯ ಜೆಎನ್‌ಯುನಲ್ಲಿ ಉನ್ನತ ಶಿಕ್ಷಣ ಪೂರೈಸಿ, ಇದೀಗ ಇದೇ ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಜಾರ್ಖಂಡ್‌ನ ಸಿದೊ ಖ್ಹನು ಮುರ್ಮು ವಿಶ್ವವಿದ್ಯಾನಿಲಯದ ಉಪಕುಲಪತಿಯಾಗಿಯೂ ಆಗಿದ್ದ ಇವರ ಬದುಕಿನ ಪಯಣ ಕುತೂಹಲಕಾರಿಯಾಗಿದೆ.

ಸೋನಾಝರಿಯಾ ಮಿಂಜ್ ಅವರ ಬಾಲ್ಯ ಇತರ ಬುಡಕಟ್ಟು ಸಮುದಾಯಗಳ ಮಕ್ಕಳಂತಿರಲಿಲ್ಲ. ಕಾರಣ ತಂದೆ ತಾಯಿ ಎರಡನೇ ತಲೆಮಾರಿನ ವಿದ್ಯಾವಂತರಾಗಿದ್ದರು. ಹಾಗಾಗಿ ಬಾಲಕಿ ಮಿಂಜ್ ಅವರ ಬಾಲ್ಯ ಬುಡಕಟ್ಟುಗಳ ಕಷ್ಟದಿಂದ ಪಾರಾಗಿತ್ತು. ತಂದೆ ನಿರ್ಮಲ್ ಮಿಂಜ್ ಅವರು ಜಾರ್ಖಂಡ್‌ನ ನಾಗರಿಕ ಸಮುದಾಯಗಳಿಂದ ಬಹಳ ದೂರವಿದ್ದ ದಟ್ಟ ಕಾಡಿನ ಮಧ್ಯದ ಹಳ್ಳಿಯಾದ ಅನ್ವರಟೋಲಿಯ ಒರಾನ್ ಬುಡಕಟ್ಟು ಸಮುದಾಯದಿಂದ ಬಂದವರು. ಮೊದಲಿಗೆ ತನ್ನ ಬುಡಕಟ್ಟು ಪ್ರದೇಶದಿಂದ ರಾಂಚಿಗೆ ಬಂದು ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ ವಿದ್ಯಾ ಸಂಸ್ಥೆಗಳಲ್ಲಿ ತನ್ನ ಶಿಕ್ಷಣವನ್ನು ಆರಂಭಿಸಿದರು. ಮಿನ್ನೆಸೋಟದಲ್ಲಿ ಪದವಿ ಪಡೆದರು. ಪಾಟ್ನಾ ಯುನಿವರ್ಸಿಟಿಯಲ್ಲಿ ಎಂ.ಎ. ಮಾಡಿದರು. ಚಿಕಾಗೋ ವಿಶ್ವವಿದ್ಯಾನಿಲಯದಲ್ಲಿ ‘ಗಾಂಧಿ ಮತ್ತು ಹಿಂದೂ ಕ್ರಿಶ್ಚಿಯನ್ ಸಂಬಂಧ’ದ ಕುರಿತು ಪಿಎಚ್.ಡಿ. ಮಾಡಿದರು. ಸೆರಾಂಪೋಲ್ ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. ಮುಂದೆ ರಾಂಚಿಯಲ್ಲಿ ಗಾಜ್ನರ್ ಕಾಲೇಜನ್ನು ಸ್ಥಾಪಿಸಿದರು. ಲುಥೆನರ್ ಚರ್ಚಿನಲ್ಲಿ ಬಿಷಪ್ ಆಗಿ ಕೆಲಸ ಮಾಡಿದರು. ಬುಡಕಟ್ಟುಗಳ ಭೂಮಿ ಹಕ್ಕಿಗಾಗಿ, ಶಿಕ್ಷಣಕ್ಕಾಗಿ ಹೋರಾಟ ಮಾಡಿದರು. ಹೀಗೆ ನಿರ್ಮಲ್ ಮಿಂಜ್ ಜಾರ್ಖಂಡ್ ಬುಡಕಟ್ಟುಗಳ ಚರಿತ್ರೆಯಲ್ಲಿ ಬಹಳ ದೊಡ್ಡ ಸ್ಥಾನ ಪಡೆದವರು.

ಅಮ್ಮ ಪ್ಯಾರಕ್ಲೆಟಾ ಭೂಗೋಳ ಶಾಸ್ತ್ರದಲ್ಲಿ ಪದವಿ ಪಡೆದಿದ್ದರು. ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲಾಗದೆ ಉದ್ಯೋಗಕ್ಕಾಗಿ ಜರ್ಮನಿಗೆ ಹೋಗಿದ್ದರು. ಇಂಥವರ ಮಗಳಾಗಿ ಸೋನಾಝರಿಯಾ ಮಿಂಜ್ ಅವರಿಗೆ ಪ್ರಿವಿಲೈಜ್ ಸಿಕ್ಕಿದೆ. ‘ಕ್ರಿಶ್ಚಿಯನ್ ಮಿಷನರಿ ವಿದ್ಯಾ ಸಂಸ್ಥೆಗಳು ನನ್ನ ತಂದೆ ತಾಯಿಯರನ್ನು ಶಿಕ್ಷಣವಂತರನ್ನಾಗಿಸಿದ್ದಕ್ಕೆ ಇಂದು ನಾನು ಈ ಸ್ಥಾನದಲ್ಲಿದ್ದೀನಿ. ಅಪ್ಪನ ಬುಡಕಟ್ಟುಗಳ ಬಗೆಗಿನ ಹೋರಾಟ ಮತ್ತು ಕಾಳಜಿ ನನ್ನನ್ನು ರೂಪಿಸಿದೆ. ಅಂತೆಯೇ ನನ್ನ ಮುಂದಿನ ಕೆಲಸಗಳನ್ನೂ ಅದು ನಿರ್ದೇಶಿಸುತ್ತಿದೆ ಎಂದು ಮಿಂಜ್ ಅವರು ತಂದೆಯ ಬಗ್ಗೆ ಹೇಳುತ್ತಾರೆ.

ವಿಶೇಷವೆಂದರೆ ಪ್ರೊ. ಸೋನಾಝರಿಯಾ ಮಿಂಜ್ ಅವರಿಗೆ ಕರ್ನಾಟಕದ ನಂಟಿದೆ. ಬೆಂಗಳೂರಿನ ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ ಕ್ರಿಶ್ಚಿಯನ್ ವಿದ್ಯಾಸಂಸ್ಥೆಯಲ್ಲಿ 1980-81ರಲ್ಲಿ ಪಿಯುಸಿ ಓದುತ್ತಾರೆ. ಈ ಬಗ್ಗೆ ಕೇಳಿದರೆ ‘‘ಆಗ ಬೆಂಗಳೂರು ಈಗಿನಷ್ಟು ಬ್ಯುಸಿ ಇರಲಿಲ್ಲ. ಆರಾಮಾಗಿ ಓಡಾಡಬಹುದಾಗಿತ್ತು. ಈಗ ಬೆಂಗಳೂರು ಬಹಳ ಬೆಳೆದಿದೆ. ನಾನು ಈಗ ಜ್ಯೋತಿನಿವಾಸ ಕಾಲೇಜಿನ ಎದುರು ನಿಂತರೆ ಬಹುಶಃ ನಾನದನ್ನು ಗುರುತಿಸಲು ಸಾಧ್ಯವಾಗುವುದಿಲ್ಲ’’ ಎನ್ನುತ್ತಾರೆ.

ಪ್ರೊ. ಸೋನಾಝರಿಯಾ ಮಿಂಜ್ ಅವರು ಜಾರ್ಖಂಡ್‌ನ ಸಿದೊ ಕನ್ಹು ಮುರ್ಮು ಬುಡಕಟ್ಟು ವಿಶ್ವವಿದ್ಯಾನಿಲಯದ (2020-2023) ಕುಲಪತಿಯಾಗಿದ್ದರು. ಆಗ ಜಾರ್ಖಂಡ್‌ನ ರಾಜ್ಯಪಾಲರಾಗಿ ಈಗಿನ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿದ್ದರು. ಬಹುಶಃ ಒಬ್ಬ ಬುಡಕಟ್ಟು ಮಹಿಳೆ ರಾಜ್ಯಪಾಲರಾಗಿದ್ದ ಕಾರಣಕ್ಕೆ ಸೋನಾಝರಿಯಾ ಅವರು ಕುಲಪತಿಯಾಗಿ ಆಯ್ಕೆಯಾಗುತ್ತಾರೆ. 1857ರ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮೊದಲು 1855 ರಲ್ಲಿಯೇ ಬ್ರಿಟಿಷರ ವಿರುದ್ಧ ಬಂಡಾಯ ಎದ್ದ ಸಿದೋ ಮುರ್ಮು ಮತ್ತು ಕನ್ಹು ಮುರ್ಮು ಎಂಬ ಇಬ್ಬರು ಸಂತಾಲ ಬುಡಕಟ್ಟು ವೀರರ ಹೆಸರಲ್ಲಿ ಈ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದೆ. ಇವರ ಹೋರಾಟದ ಲೆಗಸಿಯನ್ನು ಈ ವಿಶ್ವವಿದ್ಯಾನಿಲಯದ ಮೂಲಕ ಬುಡಕಟ್ಟು ಸಮುದಾಯಗಳಿಗೆ ದಾಟಿಸಲು ಪ್ರೊ. ಸೋನಾಝರಿಯಾ ಮಿಂಜ್ ಪ್ರಯತ್ನಿಸುತ್ತಾರೆ.

ಬುಡಕಟ್ಟು ಮತ್ತು ಸ್ಥಳೀಯ ಅಧ್ಯಯನಕ್ಕಾಗಿ ಒಂದು ವಿಶೇಷ ಸಂಶೋಧನಾ ಕೇಂದ್ರವನ್ನೂ, ಪ್ರತ್ಯೇಕ ಬುಡಕಟ್ಟುಗಳ ಕ್ರೀಡಾ ವಿಭಾಗ ತೆರೆಯಲು ರಾಜ್ಯ ಸರಕಾರವನ್ನು ಕೇಳುತ್ತಾರೆ. ಆದರೆ ಇವರ ಯಾವುದೇ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುವುದಿಲ್ಲ. ಹೀಗೆ ಸರಕಾರ ಸ್ಪಂದಿಸದಿದ್ದಾಗ, ಒಬ್ಬ ಕುಲಪತಿಯಾಗಿ ತನ್ನ ಅಧಿಕಾರದ ಮಿತಿಯಲ್ಲಿ ಸಾಧ್ಯವಾಗುವುದನ್ನು ಪ್ರಯತ್ನಿಸುತ್ತಾರೆ. ಹಾಗಾಗಿ ಸಂತಾಲ ಸಂಸ್ಕೃತಿ ಕುರಿತ ಎಂ.ಎ. ಸ್ನಾತಕೋತ್ತರ ಪದವಿಯನ್ನು ಆರಂಭಿಸುತ್ತಾರೆ. ಪೂರಕವಾಗಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳಲ್ಲಿ ಸಂತಾಲ ಸಂಸ್ಕೃತಿಯ ವಿಷಯವನ್ನು ಸೇರಿಸುತ್ತಾರೆ. ಹೀಗೆ ಬಿ.ಎ.ನಲ್ಲಿ ಸಂತಾಲ ಸಂಸ್ಕೃತಿ ಓದಿದವರು ಮುಂದೆ ಸಂತಾಲ ಸಂಸ್ಕೃತಿಯ ಸ್ನಾತಕೋತ್ತರ ಪದವಿಗೆ ಬರುತ್ತಾರೆ, ಇವರೇ ಮರಳಿ ಪಾಠ ಮಾಡುವ ಅಧ್ಯಾಪಕರಾಗುತ್ತಾರೆ. ‘‘ಈ ಕೋರ್ಸ್‌ನಿಂದಾಗಿ ಸಂತಾಲ ಬುಡಕಟ್ಟು ಮಕ್ಕಳಲ್ಲಿ ಹೊಸ ಚೈತನ್ಯ ಬೆಳೆಯಿತು, ಉನ್ನತ ಶಿಕ್ಷಣಕ್ಕೆ ಬರುವ ಹೆದ್ದಾರಿಯೊಂದು ತೆರೆದಂತಾಯಿತು’’ ಎಂದು ವಿವರಿಸುತ್ತಾರೆ. ತಮ್ಮ ಹಲವು ಕನಸುಗಳು ಈಡೇರದ್ದನ್ನು ನೆನೆದು ‘‘ಹೆಸರಿಗೆ ಬುಡಕಟ್ಟು ವಿಶ್ವವಿದ್ಯಾನಿಲಯ, ಆದರೆ ಸರಕಾರ ಬುಡಕಟ್ಟುಗಳನ್ನೇ ಕೇಂದ್ರೀಕರಿಸಿದ ಮೂಲ ಬದಲಾವಣೆ ತರಬಲ್ಲ ಯಾವ ಬದಲಾವಣೆಗೂ ಸ್ಪಂದಿಸುವುದಿಲ್ಲ’’ ಎಂದು ವಿಷಾದ ವ್ಯಕ್ತಪಡಿಸುತ್ತಾರೆ.

ಕರ್ನಾಟಕದಲ್ಲಿ ಹೆಚ್ಚು ಬುಡಕಟ್ಟುಗಳಿರುವ ಜಿಲ್ಲೆಗಳಲ್ಲಿ ಒಂದಾದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಳಿ ಬುಡಕಟ್ಟು ಸಮುದಾಯಗಳ ಪಶುಪಾಲನೆಗಾಗಿ ಮೀಸಲಿಟ್ಟ ಕನಿಷ್ಠ ಹದಿನೈದು ಸಾವಿರ ಎಕರೆ ಜಮೀನನ್ನು ಕೇಂದ್ರ ಸರಕಾರ ವಶಪಡಿಸಿಕೊಂಡು ಇಂಡಿಯನ್ ಇನ್‌ಸ್ಟಿಟೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಝೇಷನ್ (ಡಿಆರ್‌ಡಿಒ) ಘಟಕ ಮತ್ತು ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ) ಸ್ಥಾಪಿಸಿದ್ದಾರೆ. ಈ ಭಾಗದ ಬುಡಕಟ್ಟುಗಳು ಈ ಸ್ಥಳವನ್ನು ಉಳಿಸಿಕೊಳ್ಳಲು ಹೋರಾಟ ಮಾಡಿದರೂ ಉಳಿಸಿಕೊಳ್ಳಲಾಗಲಿಲ್ಲ. ಇಂತಹ ಸಂದರ್ಭಗಳಲ್ಲಿ ಬುಡಕಟ್ಟುಗಳ ಹೋರಾಟ ಚಳವಳಿ ಹೇಗಿರಬೇಕೆಂದು ಪ್ರೊ. ಸೋನಾಝರಿಯಾ ಮಿಂಜ್ ಅವರನ್ನು ಕೇಳಿದೆ. ಇದಕ್ಕೆ ಅವರು ಕೊಟ್ಟ ಉತ್ತರ ಒಳನೋಟದಿಂದ ಕೂಡಿತ್ತು.

‘‘ಬುಡಕಟ್ಟು ಹೋರಾಟಗಳಲ್ಲಿ ಪ್ರವಾಹದ ಎದುರು ಈಜಲು ಸಾಧ್ಯವಿಲ್ಲ ಅಂತಾದರೆ ಆ ಪ್ರವಾಹದ ಭಾಗವಾಗಲು ಪ್ರಯತ್ನಿಸಬೇಕು. ಕ್ರೀಡಾ ವಸತಿ ಶಾಲೆಗಳಿರುವಂತೆ ಇಲ್ಲಿನ ಬುಡಕಟ್ಟು ಮಕ್ಕಳಿಗಾಗಿ ವಿಜ್ಞಾನ ತಂತ್ರಜ್ಞಾನದ ವಸತಿ ಶಾಲೆ ಆರಂಭಿಸಲು ಬೇಡಿಕೆ ಇಡಬೇಕಿತ್ತು. ಇಲ್ಲಿಯ ವಿಜ್ಞಾನ ತಂತ್ರಜ್ಞಾನ ವಸತಿ ಶಾಲೆಗಳಲ್ಲಿ ಈ ಭಾಗದ ಬುಡಕಟ್ಟು ಮಕ್ಕಳು ಕಲಿಯುವಂತಾಗಬೇಕು. ಇದೇ ಮಕ್ಕಳು ಓದಿ ಮುಂದೆ ಇದೇ ಸಂಸ್ಥೆಗಳಲ್ಲಿ ವಿಜ್ಞಾನಿಗಳಾಗಿ ಬರಬೇಕು. ‘‘ನಮ್ಮ ಭೂಮಿ ವಶಪಡಿಸಿಕೊಂಡದ್ದಕ್ಕಾಗಿ ಹಣ ರೂಪದ ಪರಿಹಾರವೂ ಬೇಡ, ವಾಸಕ್ಕೆ ಮನೆಯೂ ಬೇಡ, ಕಸ ಗುಡಿಸುವಂತಹ ಚಿಲ್ಲರೆ ಕೆಲಸಗಳೂ ಬೇಡ, ನಮ್ಮ ಮಕ್ಕಳಿಗೆ ವಿಜ್ಞಾನ ತಂತ್ರಜ್ಞಾನದ ವಸತಿ ಶಾಲೆ ಕಟ್ಟಿಸಿಕೊಡಿ ಎಂದು ಕೇಳಿ. ಈ ನೆಲೆಯಲ್ಲಿ ಹೊಸ ಹೋರಾಟವನ್ನು ಶುರುಮಾಡಿ’’ ಎನ್ನುತ್ತಾರೆ.

ಯುನೆಸ್ಕೋದಲ್ಲಿ ಭಾರತದ ಬುಡಕಟ್ಟುಗಳ ಜ್ಞಾನ ಪರಂಪರೆಯ ಬಗ್ಗೆ ಕೈಗೊಳ್ಳಬೇಕೆಂದಿರುವ ಹೊಸ ಯೋಜನೆಗಳ ಬಗ್ಗೆ ಕೇಳಿದಾಗ, ಪ್ರೊ. ಸೋನಾಝರಿಯಾ ಮಿಂಜ್ ಅವರು ‘‘ಮೂಲಭೂತವಾಗಿ ಭಾರತದ ಬುಡಕಟ್ಟುಗಳು ಬದುಕಿ ಉಳಿಯಬೇಕಿದೆ, ಅವರು ಬದುಕುಳಿದರೆ ಉಳಿದದ್ದರ ಬಗ್ಗೆ ಮಾತನಾಡಬಹುದು. ಕಾರಣ ಇಂದು ಅವರ ಬದುಕಿಗೆ ಕಂಟಕ ಬಂದಿದೆ’’ ಎನ್ನುತ್ತಾರೆ. ಮುಂದುವರಿದು, ‘‘ಇನ್ನೂ ನಾಲ್ಕು ವರ್ಷಗಳ ಕಾಲ (2025ರಿಂದ) ಯುನೆಸ್ಕೋದಲ್ಲಿ ಕೆಲಸ ಮಾಡುವ ಅವಕಾಶವಿದೆ. ನಾನು ನನ್ನ ತಜ್ಞತೆಯ ಕಂಪೂಟರ್ ಸೈನ್ಸ್‌ನ ನೆಲೆಯಿಂದ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಆಧರಿಸಿ ಬುಡಕಟ್ಟುಗಳ ಜ್ಞಾನ ಪರಂಪರೆಯನ್ನು ಉಳಿಸುವುದು ಸಾಧ್ಯವೇ? ಬುಡಕಟ್ಟುಗಳ ಭಾಷೆಗಳನ್ನು ಆಧುನಿಕ ತಂತ್ರಜ್ಞಾನದಿಂದ ಮರುಜೀವ ನೀಡಲು ಸಾಧ್ಯವೇ? ಮುಂತಾದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮುಖ್ಯವಾಗಿ ಭಾರತೀಯ ಬುಡಕಟ್ಟುಗಳನ್ನು ಒಂದು ಬಿಂದುವಿನಲ್ಲಿ ಸಂಧಿಸುವ ನೆಟ್‌ವರ್ಕಿಂಗ್ ಸಾಫ್ಟ್‌ವೇರ್ ಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಹೀಗೆ ಕನಸುಗಳೇನೋ ಬಹಳ ಇವೆ, ಅವು ಎಷ್ಟರಮಟ್ಟಿಗೆ ಈಡೇರುತ್ತವೆಯೋ ಕಾಯ್ದು ನೋಡಬೇಕಾಗಿದೆ’’ ಎನ್ನುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News