×
Ad

ಹಿಂದೂ-ಮುಸ್ಲಿಮ್ ಬಂಧುತ್ವ ಸಾರಿದ ಕೋವಾಬನ್ ಪ್ರಕರಣ

Update: 2026-02-24 11:09 IST

ತೇಜಸ್ವಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನ ವೀಡಿಯೊಗಳನ್ನು ಪರಿಶೀಲಿಸಿದ ನೆಟಿಜೆನ್ಸ್ ಈ ವಿವಾದ ನಿಜಕ್ಕೂ ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಸಂಚು ಎಂದು ಅರಿತಿದ್ದಾರೆ. ಈ ವಿಷಯ ಬಹಿರಂಗವಾದ ನಂತರ ಆಂಧ್ರ ಮತ್ತು ತೆಲಂಗಾಣದ ಸಾಮಾನ್ಯ ಜನರು ಜಾತಿ ಧರ್ಮಗಳನ್ನು ಮರೆತು ಮಾನವೀಯವಾಗಿ ಸ್ಪಂದಿಸಿದ್ದಾರೆ. ಈ ಬಗೆಯ ಕೋಮುದ್ವೇಷ ಹರಡುವ ‘ಫುಡ್ ಜಿಹಾದ್’ ಪೊಳ್ಳುತನವನ್ನು ಬಯಲುಗೊಳಿಸಿದ್ದಾರೆ. ದೇಶದ ಜನರು ಕೋಮುವಾದಿಗಳಾಗಿದ್ದಾರೆ ಎನ್ನುವ ನಂಬಿಕೆಯನ್ನು ಕೋವಾಬನ್ ವಿವಾದ ಸುಳ್ಳಾಗಿಸಿದೆ.

ತೆಲಂಗಾಣ ಮತ್ತು ಆಂಧ್ರ ಪ್ರದೇಶ ಅವಳಿ ರಾಜ್ಯಗಳಲ್ಲಿ ಕಳೆದ ಫೆಬ್ರವರಿ 13ರಿಂದ ಕೋವಾಬನ್ ವಿವಾದ ವ್ಯಾಪಕವಾಗಿದೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಟ್ರೆಂಡ್ ಆಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಈ ಇಡೀ ವಿವಾದ ದೇಶಕ್ಕೆ ಕೋಮುಸೌಹಾರ್ದದ, ಜಾತಿ, ಧರ್ಮಗಳನ್ನು ಮೀರಿದ ಮಾನವೀಯತೆಯ ದೊಡ್ಡ ಸಂದೇಶವನ್ನು ಕೊಟ್ಟಿದೆ. ಏನಿದು ಕೋವಾಬನ್ ಪ್ರಕರಣ?

ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯ ತಡ್ವಾಯಿ ಮಂಡಲದ ಮೇದಾರಂ ಗ್ರಾಮದ ಸಮ್ಮಕ್ಕ ಸರಳಮ್ಮ ಜಾತ್ರೆಯು ಬಹುದೊಡ್ಡ ಬುಡಕಟ್ಟು ಜಾತ್ರೆಯಾಗಿದೆ. ಲಕ್ಷಾಂತರ ಜನ ಸೇರುತ್ತಾರೆ. ತೆಲಂಗಾಣದಲ್ಲಿ ಈ ಜಾತ್ರೆಯನ್ನು ದಕ್ಷಿಣ ಭಾರತದ ಕುಂಭಮೇಳ ಎನ್ನುತ್ತಾರೆ. ಈ ಜಾತ್ರೆಯಲ್ಲಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮುಸ್ಲಿಮ್ ಸಮುದಾಯದ ಶೇಕ್ ಶಾವಾಲಿ ಎಂಬ ಬೀದಿ ವ್ಯಾಪಾರಿಯು ಕೋವಾಬನ್ ಮಾರುತ್ತಿರುತ್ತಾರೆ. ಫೆಬ್ರವರಿ 13ರಂದು ತೇಜಸ್ವಿ ನ್ಯೂಸ್ ಎನ್ನುವ ಯೂಟ್ಯೂಬ್ ಚಾನೆಲ್ ಶಾವಾಲಿಯವರನ್ನು ಸಂದರ್ಶನ ಮಾಡಿ ಕೋವಾಬನ್ ಹೆಸರಲ್ಲಿ ‘ಫುಡ್ ಜಿಹಾದ್’ ಮಾಡುತ್ತಿದ್ದೀರೆಂದು ಆರೋಪಿಸುತ್ತದೆ. ಈ ಬನ್‌ಗಳ ಮೇಲೆ ಮ್ಯಾನುಪ್ಯಾಕ್ಚರಿಂಗ್ ಮತ್ತು ಎಕ್ಸಪರಿ ದಿನಾಂಕಗಳಿಲ್ಲ. ಇದರಿಂದ ಜನರ ಆರೋಗ್ಯ ಕೆಡುತ್ತದೆ. ಹೀಗೆ ಮಾರಾಟ ಮಾಡುವ ಮೂಲಕ ‘ಆಹಾರ ಜಿಹಾದ್’ ಮಾಡುತ್ತಿದ್ದೀರಿ ಎಂದು ದಾಳಿ ಮಾಡುತ್ತದೆೆ. ಈ ಬಗೆಯ ಏಕಾಏಕಿ ದಾಳಿಗೆ ಶೇಕ್ ಶಾವಾಲಿ ಭಯಗೊಳ್ಳುತ್ತಾರೆ. ಈ ಆರೋಪವನ್ನು ಅಲ್ಲಗಳೆದ ಶಾವಾಲಿಯು ಕೋವಾಬನ್‌ನಲ್ಲಿ ಯಾವುದೇ ಕಲಬೆರಕೆ ಇಲ್ಲ ಎಂದು ತಾನೇ ಎಲ್ಲರ ಎದುರು ತಿಂದು ತೋರಿಸುತ್ತಾರೆ. ಈ ವೀಡಿಯೋ ವ್ಯಾಪಕವಾಗಿ ವೈರಲ್ ಆಗಿ ಸದ್ದು ಮಾಡುತ್ತದೆ.

ಈ ಬಗೆಯ ದಾಳಿಗೆ ಹೆದರಿದ ಶಾವಾಲಿ ‘‘ನನ್ನ ಜೀವನದಲ್ಲಿ ನಾನು ಎಂದಿಗೂ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ. ನಮ್ಮ ಕುಟುಂಬವು ದಶಕಗಳಿಂದ ಕೋವಾಬನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ತನಕ ಯಾರೂ ಹೀಗೆ ಪ್ರಶ್ನೆ ಮಾಡಿಲ್ಲ. ಯಾರ ಆರೋಗ್ಯದ ಮೇಲೂ ಪರಿಣಾಮ ಬೀರಿಲ್ಲ, ಆದರೆ ಈ ಬಗೆಯ ದಾಳಿ ನನಗೆ ಜೀವಭಯವನ್ನು ಹುಟ್ಟಿಸಿತು’’ ಎಂದು ಹೇಳಿಕೊಂಡಿದ್ದಾರೆ. ಮುಂದುವರಿದು ‘‘ನನ್ನ ತಾಯಿ ಮನೆಯಲ್ಲಿ ಬಹಳ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಕೋವಾ ತಯಾರಿಸುತ್ತಾರೆ. ಬೇಕರಿಯಿಂದ ಬನ್‌ಗಳನ್ನು ಖರೀದಿಸುತ್ತೇವೆ. ಮೂರ್ನಾಲ್ಕು ದಿನಗಳಲ್ಲಿ ಕೊಂಡ ಬನ್‌ಗಳು ಖರ್ಚಾಗುವುದರಿಂದ ಉತ್ಪಾದನೆ ಎಕ್ಸಪರಿ ಡೇಟ್ ಹಾಕುವ ಪ್ರಶ್ನೆಯೇ ಬರುವುದಿಲ್ಲ. ನಾವು ಮನೆಯವರೆಲ್ಲಾ ಈ ಕೋವಾ ಬನ್ ತಿನ್ನುತ್ತೇವೆ. ಈತನಕ ಯಾರಿಗೂ ಕೋವಾ ಬನ್‌ನಿಂದಾಗಿ ಆರೋಗ್ಯ ಕೆಟ್ಟಿಲ್ಲ, ಯಾವ ಜನರೂ ಈ ಬಗ್ಗೆ ಈ ತನಕ ಆರೋಪಿಸಿಲ್ಲ ಎಂದು ವಿವರಿಸುತ್ತಾರೆ. ಮೇಲಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಫಾರಂ ‘ಸಿ ಪ್ರಮಾಣಪತ್ರವನ್ನು ಹೊಂದಿದ್ದು ಇದನ್ನು ಈಚೆಗೆ ಡಿಸೆಂಬರ್ 9, 2025ರಂದು ನವೀಕರಿಸಲಾಗಿದೆ. ಈ ಪ್ರಮಾಣ ಪತ್ರವು ‘ಮೆಸರ್ಸ್ ಕ್ವಾಲಿಟಿ ಸ್ವೀಟ್ಸ್ ಆಂಡ್ ಕೋವಾಬನ್’ ಹೆಸರಿನಲ್ಲಿದೆ.

ಹೀಗೆ ಶಾವಾಲಿಯವರನ್ನು ತೇಜಸ್ವಿ ನ್ಯೂಸ್ ದಾಳಿ ಮಾಡಿದ ವೀಡಿಯೊ ಮತ್ತು ಶಾವಾಲಿಯವರ ಈ ಮಾತುಕತೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆದವು. ಇದನ್ನು ಗಮನಿಸಿದ ಆಂಧ್ರ ಮತ್ತು ತೆಲಂಗಾಣ ಎರಡೂ ರಾಜ್ಯಗಳ ಸಾಮಾನ್ಯ ಜನರು ತಾವಾಗಿಯೇ ಪ್ರತಿಕ್ರಿಯಿಸುತ್ತಾರೆ. ಬಹುಪಾಲು ಜನರು ತೇಜಸ್ವಿ ನ್ಯೂಸ್ ಚಾನೆಲ್‌ಗೆ ಛೀಮಾರಿ ಹಾಕಿ ಕೋವಾಬನ್ ವ್ಯಾಪಾರಿ ಶಾವಾಲಿಯವರನ್ನು ಬೆಂಬಲಿಸುತ್ತಾರೆ. ತೆಲುಗು ಜನ ಸಂಸ್ಕೃತಿಯಲ್ಲಿ ಈ ರೀತಿಯ ಕೋಮುದ್ವೇಷಕ್ಕೆ ಅವಕಾಶವಿಲ್ಲ ಎನ್ನುವುದನ್ನು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಮೀಮ್ಸ್ ಮಾಡಿ ಮಾನವೀಯತೆಯನ್ನು ಎತ್ತಿಹಿಡಿಯುತ್ತಾರೆ. ಈ ಪ್ರಕರಣದಲ್ಲಿ ಜಾತಿ-ಧರ್ಮಕ್ಕಿಂತ ದುಡಿದು ತಿನ್ನುವ ಒಬ್ಬ ಶ್ರಮಜೀವಿಯನ್ನು ಅಪಮಾನಿಸಲಾಗಿದೆ ಎನ್ನುವ ಸಂಗತಿ ಮುನ್ನೆಲೆಗೆ ಬಂದಿದೆ. ಹಾಗಾಗಿ ಎಲ್ಲಾ ಬೀದಿ ವ್ಯಾಪಾರಿಗಳನ್ನು ಈ ಪ್ರಕರಣ ಒಂದುಗೂಡಿಸಿದೆ. ಬಡ ವ್ಯಾಪಾರಿಯನ್ನು ಪ್ರಶ್ನಿಸುವ ಯೂಟ್ಯೂಬ್ ಚಾನೆಲ್‌ನವರು ಇದೇ ಪ್ರಶ್ನೆಗಳನ್ನು ಸ್ಟಾರ್ ಹೋಟೆಲ್ ಮಾಲಕರಿಗೆ ಕೇಳುತ್ತಾರೆಯೇ? ಎನ್ನುವ ನೆಲೆಯ ನೂರಾರು ರೀಲ್ಸ್ ವೀಡಿಯೊಗಳು ಹುಟ್ಟಿಕೊಂಡಿವೆ.

ಹೀಗೆ ಸುದ್ದಿ ಮಾಡಿದ ತೇಜಸ್ವಿ ನ್ಯೂಸ್‌ನ ಯೂಟ್ಯೂಬರ್ ಬಾಲು ಬಾಲಾಜಿ ಗೌಡ್ ಅವರ ಹಿನ್ನೆಲೆಯನ್ನು ಗಮನಿಸಿದರೆ ಈ ಪ್ರಕರಣದ ಮೂಲ ತಿಳಿಯುತ್ತದೆ. ಜುಲೈ 25, 2025ರಂದು ಚಾಲನೆಗೊಂಡ ಈ ಯೂಟ್ಯೂಬ್ ಚಾನೆಲ್‌ಗೆ ಎಂಟು ಸಾವಿರ ಚಂದಾದಾರರಿದ್ದಾರೆ. ಬಾಲಾಜಿಗೌಡ ಹಿಂದೆ ತೆಲುಗು ಸುದ್ದಿವಾಹಿನಿ ಸುಮನ್ ಟಿ.ವಿ.ಯಲ್ಲಿದ್ದರು. ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತೆಲಂಗಾಣದ ಬಿಜೆಪಿ ನಾಯಕರುಗಳೊಂದಿಗೆ ಸಂಪರ್ಕ ಇರುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಈ ತನಕ 143 ವೀಡಿಯೊಗಳು ಅಪ್ಲೋಡ್ ಆಗಿದ್ದು ಬಹುಪಾಲು ಬಲಪಂಥೀಯ ಹಿಂದುತ್ವ ಮತ್ತು ಬಿಜೆಪಿ ಪಕ್ಷವನ್ನು ಬೆಂಬಲಿಸುವಂತಿವೆ.

ಈ ವಿವಾದ ಸೃಷ್ಟಿಯ ಎರಡು ವಾರಗಳ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಭಾಗ್ಯನಗರ ಗಣೇಶ ಉತ್ಸವ ಸಮಿತಿಯ ಯುವ ವಿಭಾಗ ಗಣೇಶ ಸೇನೆಯು ರಂಗಾರೆಡ್ಡಿ ಜಿಲ್ಲೆಯ ಬಲಾಪುರದಲ್ಲಿ ಜನವರಿ 24ರಂದು ‘ಧರ್ಮ ರಕ್ಷಣಾ ಸಭೆ’ಯನ್ನು ಆಯೋಜಿಸಿತ್ತು. ಕೋಮುಗಲಭೆಗೆ ಪ್ರಚೋದನೆ ಕೊಡದ ಹಾಗೆ ಸಾಂವಿಧಾನಿಕವಾಗಿ ಶಾಂತಿಯುತವಾಗಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿತ್ತು. ಈ ಸಭೆಯಲ್ಲಿ ರೊಹಿಂಗ್ಯಾ ಮುಸ್ಲಿಮರು ಮತ್ತು ಅಕ್ರಮ ಬಾಂಗ್ಲಾ ವಲಸಿಗರು ಮತ್ತು ‘ಲವ್ ಜಿಹಾದ್’ ಬಗ್ಗೆ ಚರ್ಚೆಯಾಗಿತ್ತು. ಈ ಎಲ್ಲವನ್ನೂ ತೇಜಸ್ವಿ ನ್ಯೂಸ್ ಚಾನೆಲ್ ವರದಿ ಮಾಡಿತ್ತು. ಕೋವಾಬನ್ ಪ್ರಕರಣ ಬೆಳಕಿಗೆ ಬಂದ ನಂತರ ‘ಫುಡ್ ಜಿಹಾದ್’ ಎಂದು ವಿಶ್ವಹಿಂದೂ ಪರಿಷತ್ ಬೆಂಬಲಿಸಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಈ ಸಭೆಗೂ ‘ಫುಡ್ ಜಿಹಾದ್’ ಪ್ರಕರಣಕ್ಕೂ ನೇರ ಸಂಬಂಧವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ನಿಷೇಧ ಹೇರುವ ಘಟನೆಗಳು ವರದಿಯಾಗಿದ್ದವು. ಜಾತ್ರೆಗಳಲ್ಲಿ ಹಾಕುವ ಅಂಗಡಿಗಳ ಮೇಲೆ ಹಿಂದೂಗಳ ಅಂಗಡಿಗಳೆಂದು ಗುರುತಿಸಲು ಕೇಸರಿ ಧ್ವಜಗಳನ್ನು ಹಾಕಿರುವುದನ್ನು ಕೆಲವು ಜಾತ್ರೆಗಳಲ್ಲಿ ಗಮನಿಸಿದ್ದೇನೆ. ಕೊರೋನ ಸಂದರ್ಭದಲ್ಲಿಯೂ ಮುಸ್ಲಿಮ್ ವ್ಯಾಪಾರಿಗಳು ತಾವು ಮಾರಾಟ ಮಾಡುವ ವಸ್ತುಗಳಿಂದ ಹಿಂದೂಗಳಿಗೆ ಕೊರೋನ ಸೋಂಕನ್ನು ಹಬ್ಬಿಸುತ್ತಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹರಡಲಾಗಿತ್ತು. 2022ರಲ್ಲಿ ಧಾರವಾಡದ ನುಗ್ಗೆಕೇರಿಯಲ್ಲಿ ಮುಸ್ಲಿಮ್ ವ್ಯಾಪಾರಿ ನಬೀಸಾಬ್ ಅವರ ಕಲ್ಲಂಗಡಿ ಹಣ್ಣಿನ ಅಂಗಡಿಯನ್ನು ಧ್ವಂಸ ಮಾಡಲಾಗಿತ್ತು. ಇದಕ್ಕೆ ಸಮತೆಯಲ್ಲಿ ನಂಬಿಕೆ ಇಟ್ಟವರಿಂದ ವ್ಯಾಪಕ ಪ್ರತಿರೋಧ ಹುಟ್ಟಿತ್ತು. ತೀರಾ ಈಚೆಗೆ ಮಹಾರಾಷ್ಟ್ರದ ಅಹಿಲ್ಯಾನಗರ ಜಿಲ್ಲೆಯ ಪಥ್ರಾಡಿ ತಾಲೂಕಿನ ಮಢಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಂಡಿದ್ದಾರೆ.

ಹೀಗೆ ದೇಶವ್ಯಾಪಿ ಧಾರ್ಮಿಕ ಬಲಪಂಥೀಯರಿಂದ ನಡೆಯುತ್ತಿರುವ ಈ ಎಲ್ಲಾ ಘಟನೆಗಳ ಆಳದಲ್ಲಿರುವ ಗುರಿ ಮುಸ್ಲಿಮರನ್ನು ಆರ್ಥಿಕವಾಗಿ ಕುಗ್ಗಿಸುವುದಾಗಿದೆ. ಅವರ ವ್ಯವಹಾರಗಳ ಮೇಲೆ ದಾಳಿ ಮಾಡಿದರೆ ಆರ್ಥಿಕ ಶಕ್ತಿ ಕುಂದುತ್ತದೆ, ಆಗ ಮುಸ್ಲಿಮರನ್ನು ಮಣಿಸಬಹುದು ಎನ್ನುವುದಾಗಿದೆ. ಆದರೆ ಮುಸ್ಲಿಮರ ಬಗೆಗಿನ ಈ ಆರೋಪಗಳು ಕೋಮುವಾದಿ ಅಜೆಂಡಾದ ಭಾಗವೆಂದು ಜನರಿಗೆ ಅರ್ಥವಾಗಿ ನಂತರದಲ್ಲಿ ಈ ಸ್ಥಿತಿಗಳು ಬದಲಾಗಿವೆ. ತೆಲಂಗಾಣ ರಾಜ್ಯದಲ್ಲಿ ನಡೆದ ಕೋವಾಬನ್ ಪ್ರಕರಣ ಕೂಡ ಇದರ ಮುಂದುವರಿದ ಭಾಗವಾಗಿದೆ. ಆದರೆ ಈ ಬಗೆಯ ಮುಸ್ಲಿಮರ ವ್ಯಾಪಾರವನ್ನು ವಿರೋಧಿಸಿ ನಡೆದ ಕೋಮುವಾದಿ ವ್ಯವಸ್ಥಿತ ದಾಳಿಗೆ ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರು ಕೊಟ್ಟ ಉತ್ತರ ಮಾತ್ರ ದೇಶದಲ್ಲಿಯೇ ಮಾದರಿಯಾಗಿದೆ. ಈಚಿನ ಐದಾರು ವರ್ಷಗಳಲ್ಲಿ ಕೋಮುದ್ವೇಷಕ್ಕೆ ಕೊಟ್ಟ ಬಹುದೊಡ್ಡ ಹೊಡೆತ ಇದಾಗಿದೆ.

ವಿಶೇಷವೆಂದರೆ ಈ ಪ್ರಕರಣದಲ್ಲಿ ಶೇಕ್ ಶಾವಾಲಿಯವರಿಗೆ ರಾಜಕೀಯ ಬೆಂಬಲವೂ ದೊರೆಯಿತು. ಆಂಧ್ರ ಪ್ರದೇಶದ ಐಟಿ ಮತ್ತು ಶಿಕ್ಷಣ ಮತ್ತು ಮಾನವ ಅಭಿವೃದ್ಧಿ ಸಚಿವರಾದ ಆಂಧ್ರದ ಮುಖ್ಯಮಂತ್ರಿ ಚಂದ್ರುಬಾಬು ನಾಯ್ಡು ಅವರ ಮಗ ನಾರಾ ಲೋಕೇಶ್ ಅವರು ‘‘ಸಾಮರಸ್ಯ ಮತ್ತು ಪರಸ್ಪರ ಗೌರವವನ್ನು ಪ್ರತಿನಿಧಿಸುವ ತೆಲುಗು ಸಮಾಜದಲ್ಲಿ ವಿಭಜಕ ನಡೆಗಳಿಗೆ ಅವಕಾಶವಿಲ್ಲ, ಶೀಘ್ರದಲ್ಲೇ ಶಾವಾಲಿಯವರ ಕೋವಾಬನ್ ತಿನ್ನಲು ಉತ್ಸುಕನಾಗಿದ್ದೇನೆ’’ ಎಂದು ಹೇಳಿಕೊಂಡಿದ್ದಾರೆ. ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಪರಿಟಾಲ ಶ್ರೀರಾಮ್ ಈ ಘಟನೆಗೆ ಪ್ರತಿಕ್ರಿಯಿಸಿ ‘‘ಒಂದು ಬ್ರೆಡ್ ಮಾರುವ ಬಡ ಸಣ್ಣ ವ್ಯಾಪಾರಿಯ ಜೀವನವನ್ನು ಈ ರೀತಿ ಬೀದಿಗೆ ತಂದಿರುವುದು ಅಮಾನವೀಯ ಕ್ರೌರ್ಯ. ಕೆಲವು ಯೂಟ್ಯೂಬರ್‌ಗಳು ನ್ಯೂಸ್ ಮತ್ತು ಲೈಕ್‌ಗಳಿಗಾಗಿ ಇಂತಹ ಕೆಲಸ ಮಾಡುತ್ತಾರೆ. ಸಾಧ್ಯವಾದರೆ ನಾವು ಬಡವರ ಪರವಾಗಿ ನಿಲ್ಲಬೇಕೇ ಹೊರತು ಅವರ ಸ್ಥಿತಿಯನ್ನು ಅಪಮಾನಿಸುವುದು ಸರಿಯಲ್ಲ’’ ಎಂದಿದ್ದಾರೆ. ನಂದ್ಯಾಳ ಕ್ಷೇತ್ರದ ಸಂಸದೆ ಸ್ವತಃ ವೈದ್ಯೆಯೂ ಆಗಿರುವ ಟಿಡಿಪಿಯ ಡಾ. ಬೈರೆಡ್ಡಿ ಶಬರಿ ಅವರು ‘‘ಹಸಿವಿಗೆ ಜಾತಿ ಇಲ್ಲ, ಸ್ವಾಭಿಮಾನಕ್ಕೆ ಧರ್ಮವಿಲ್ಲ’’ ಎಂದು ಜನರ ಮಾನವೀಯ ನಡೆಯನ್ನು ಬೆಂಬಲಿಸಿದ್ದಾರೆ. ಇಂತಹ ಪ್ರತಿಕ್ರಿಯೆಯಿಂದಾಗಿ ಆಂಧ್ರ ಸರಕಾರವು ಬಿಜೆಪಿ ಬೆಂಬಲವನ್ನು ಹಿಂದೆಗೆದುಕೊಳ್ಳಲಿ ಎಂದು ಜನತೆ ಒತ್ತಾಯಿಸಿದ್ದಾರೆ.

ತೇಜಸ್ವಿ ನ್ಯೂಸ್ ಯೂಟ್ಯೂಬ್ ಚಾನೆಲ್‌ನ ವೀಡಿಯೊಗಳನ್ನು ಪರಿಶೀಲಿಸಿದ ನೆಟಿಜೆನ್ಸ್ ಈ ವಿವಾದ ನಿಜಕ್ಕೂ ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಸಂಚು ಎಂದು ಅರಿತಿದ್ದಾರೆ. ಈ ವಿಷಯ ಬಹಿರಂಗವಾದ ನಂತರ ಆಂಧ್ರ ಮತ್ತು ತೆಲಂಗಾಣದ ಸಾಮಾನ್ಯ ಜನರು ಜಾತಿ ಧರ್ಮಗಳನ್ನು ಮರೆತು ಮಾನವೀಯವಾಗಿ ಸ್ಪಂದಿಸಿದ್ದಾರೆ. ಈ ಬಗೆಯ ಕೋಮುದ್ವೇಷ ಹರಡುವ ‘ಫುಡ್ ಜಿಹಾದ್’ ಪೊಳ್ಳುತನವನ್ನು ಬಯಲುಗೊಳಿಸಿದ್ದಾರೆ. ದೇಶದ ಜನರು ಕೋಮುವಾದಿಗಳಾಗಿದ್ದಾರೆ ಎನ್ನುವ ನಂಬಿಕೆಯನ್ನು ಈ ವಿವಾದ ಸುಳ್ಳಾಗಿಸಿದೆ. ವಿಶೇಷವಾಗಿ ಆಂಧ್ರ, ತೆಲಂಗಾಣ ಮತ್ತು ಹೈದರಾಬಾದ್ ಕರ್ನಾಟಕ ಭಾಗದ ಜನರಲ್ಲಿ ಕೋಮು ಸೌಹಾರ್ದ ಸಹಜವಾಗಿಯೇ ನೆಲೆಗೊಂಡಿದೆ ಎನ್ನುವುದಕ್ಕೂ ಈ ಪ್ರಕರಣ ಸಾಕ್ಷಿಯಾಗಿದೆ. ಈಚಿನ ದಿನಗಳಲ್ಲಿ ಈ ಕೋವಾಬನ್ ವಿವಾದವು ದೇಶಕ್ಕೆ ಹಿಂದೂ-ಮುಸ್ಲಿಮ್ ಬಂಧುತ್ವ ಬೆಸೆಯುವ ಕೋಮು ಸೌಹಾರ್ದದ ಮಾನವೀಯ ಸಂದೇಶ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ಅರುಣ್ ಜೋಳದಕೂಡ್ಲಿಗಿ

contributor

Similar News