ಯಾದಗಿರಿಯ ಯುವ ಪ್ರತಿರೋಧ: ಲೋಕೇಶ್ ರಾಠೋಡ್
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರಕಾರದಿಂದ ಬಂದ ಹಣದ ಉಪಯೋಗದ ಬಗ್ಗೆ ಪ್ರಾಮಾಣಿಕ ತನಿಖೆ ನಡೆದರೆ ಬಹುಶಃ ಪಕ್ಷಾತೀತವಾಗಿ ಎಲ್ಲರ ಹಗರಣಗಳು ಬಯಲಿಗೆ ಬರುತ್ತವೆ. ಇಂತಹ ವ್ಯವಸ್ಥೆಯನ್ನು ನೋಡಿದ ಕಲ್ಯಾಣ ಕರ್ನಾಟಕದ ಯಾವುದೇ ಪ್ರಜ್ಞಾವಂತ ಯುವಕ-ಯುವತಿಯರೂ ಕೂಡ ಲೋಕೇಶರಂತೆ ಪ್ರಶ್ನೆ ಎತ್ತಬಲ್ಲರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಅವಿರತ ಕಠಿಣ ಶ್ರಮದ ಮೂಲಕ ಗಮನಸೆಳೆದ ಲೋಕೇಶ್ ಎತ್ತಿದ ಪ್ರಶ್ನೆ ಅದು ಆತನೊಬ್ಬನ ಪ್ರಶ್ನೆಯಲ್ಲ. ಇದು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಯುವಧ್ವನಿ. ಇದನ್ನು ಆಡಳಿತ ಸರಕಾರ ಅರಿಯಬೇಕಾಗಿದೆ. ಆತನ ಬೇಡಿಕೆಗಳಿಗೆ ಸರಕಾರ ಕಿವಿಯಾಗಬೇಕಿದೆ.
ನಾನೊಮ್ಮೆ ಫೇಸ್‌ಬುಕ್ ಪೇಜಲ್ಲಿ ಲೋಕೇಶ್ ರಾಠೋಡ್ ಎನ್ನುವ ಕ್ರೀಡಾಪಟು ಯಾದಗಿರಿ ಜಿಲ್ಲೆಯ ಕ್ರೀಡಾಂಗಣದ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿ ಮಾತನಾಡುತ್ತಿರುವುದನ್ನು ನೋಡಿದೆ. ಆನಂತರ ಆತನ ಚಟುವಟಿಕೆಗಳನ್ನು ಗಮನಿಸುತ್ತಾ ಬಂದೆ. ಆತನ ಹೋರಾಟ, ಆತ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳನ್ನು ಪ್ರತಿನಿಧಿಸಿ ಕೇಳುತ್ತಿರುವ ಪ್ರಶ್ನೆಗಳು ಪ್ರಾಮಾಣಿಕ ಅನ್ನಿಸಿತು. ಭ್ರಷ್ಟ ವ್ಯವಸ್ಥೆಯ ವಿರುದ್ಧ ವಯೋಸಹಜ ಯುವಧ್ವನಿ ಇದಾಗಿತ್ತು. ಹೀಗೆ ಭ್ರಷ್ಟಾಚಾರದ ವಿರುದ್ಧ ಯುವಕನೊಬ್ಬ ಧ್ವನಿ ಎತ್ತುವುದು, ಗಟ್ಟಿಯಾಗಿ ಕಾನೂನಾತ್ಮಕ ಪ್ರಶ್ನೆ ಮಾಡುವುದು ಹೊಸತೆನಿಸಿತು. ಇದು ಜಿಲ್ಲಾಧಿಕಾರಿಯನ್ನು ಒಳಗೊಂಡಂತೆ ಇಲ್ಲಿನ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲೆನೋವಾಯಿತು. ಆರಂಭಕ್ಕೆ ಸಹಿಸಿದರೂ ನಂತರ ಈತನನ್ನು ಬೆದರಿಸುವ, ಧ್ವನಿ ಎತ್ತಿದ್ದಕ್ಕೆ ಎಫ್‌ಐಆರ್ ಮಾಡುವ ಮಟ್ಟಕ್ಕೆ ಹೋಯಿತು. ಇಷ್ಟೆಲ್ಲಾ ಗಮನಿಸುತ್ತಾ ಕುತೂಹಲದಿಂದ ಲೋಕೇಶ್ ಜತೆ ಮಾತನಾಡಿದೆ. ಆತನ ಬದುಕಿನ ಪಯಣ ಕಲ್ಯಾಣ ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕ ಅನ್ನಿಸಿತು.
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಉಕ್ಕಿನಾಳ ಗ್ರಾಮದ ಭೀಮಾನಾಯಕ ತಾಂಡದ ದಮು ರಾಠೋಡ್ ಮತ್ತು ಗಂಗಾಬಾಯಿ ಅವರ ಮಗ ಲೋಕೇಶ್. ಕಲ್ಯಾಣ ಕರ್ನಾಟಕದಲ್ಲಿ ಬದುಕಿಗಾಗಿ ವಲಸೆ ಹೋಗುವುದು ಸಾಮಾನ್ಯ. ಹೀಗೆ ಲೋಕೇಶ್ ಅವರ ತಂದೆ-ತಾಯಿಯರು ಪುಣೆಗೆ ಕೆಲಸ ಅರಸಿ ವಲಸೆ ಹೋಗುತ್ತಾರೆ. ಹೊಟ್ಟೆಪಾಡಿಗಾಗಿ ದುಡಿಯುತ್ತ ಕೆಲ ಕಾಲ ಪುಣೆಯಲ್ಲಿಯೇ ನೆಲೆಸುತ್ತಾರೆ. ಪುಣೆಯಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸುವ ದೇವಧರ ಕ್ರೀಡಾ ಪ್ರಭೋದಿನಿ, ಬನೇರ್ ಬಾಲವಾಡಿ ಎನ್ನುವ ಶಾಲೆ ಇದೆ. ಈ ಶಾಲೆಗೆ ಮಿಲಿಟರಿ ಶಾಲೆಯಂತೆ ಕಠಿಣ ಪರೀಕ್ಷೆಗಳ ನಂತರವೇ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಂತಹ ಸ್ಕೂಲಿನಲ್ಲಿ ಎಲ್ಲಾ ಪರೀಕ್ಷೆಗಳನ್ನು ಎದುರಿಸಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಯಾಗಿ ಲೋಕೇಶನ ಕ್ರೀಡೆಯ ಜತೆಗೆ ಶಿಕ್ಷಣ ಆರಂಭವಾಗುತ್ತದೆ.
ಈ ಹುಡುಗ ಹನ್ನೊಂದು ವರ್ಷದಲ್ಲಿಯೇ ಬಾಕ್ಸಿಂಗ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆಯುತ್ತಾನೆ. ನಂತರ 2011ರ ಅತ್ಲೆಟಿಕ್ಸ್‌ನಲ್ಲೂ ಗೋಲ್ಡ್ ಮೆಡಲ್ ತರುತ್ತಾನೆ. ಹತ್ತನೇ ತರಗತಿಯ ತನಕ ಅತ್ಲೆಟಿಕ್ಸ್‌ನಲ್ಲಿ ಪ್ರತೀ ವರ್ಷವೂ ರಾಜ್ಯಮಟ್ಟದ ಮೆಡಲ್ ಪಡೆಯುತ್ತಾ ತನ್ನ ಕ್ರೀಡಾ ಪ್ರತಿಭೆಯಿಂದ ಗಮನ ಸೆಳೆಯುತ್ತಾನೆ. ಬಾಕ್ಸಿಂಗ್, ಹೈಜಂಪ್‌ನಲ್ಲಿ ವಿಶೇಷ ಪ್ರತಿಭೆಯಾಗಿ ಹೊರ ಹೊಮ್ಮುತ್ತಾನೆ. ಹೀಗಿರುವಾಗ ಲೋಕೇಶ್ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ ಕಾರಣ ಆತನ ಜೆರ್ಸಿಯಲ್ಲಿ ಸಹಜವಾಗಿ ಮಹಾರಾಷ್ಟ್ರ ಎಂದು ಅಚ್ಚಾಗುತ್ತದೆ. ಇದು ಲೋಕೇಶನಲ್ಲಿ ತನ್ನತನವನ್ನು ಬಡಿದೆಬ್ಬಿಸುತ್ತದೆ. ತಾನು ಮೂಲತಃ ಕರ್ನಾಟಕದ ಹುಡುಗ ತಾನು ತನ್ನ ರಾಜ್ಯವನ್ನು ಪ್ರತಿನಿಧಿಸಬೇಕೆಂದು ನಿರ್ಧರಿಸುತ್ತಾನೆ. ಹಾಗಾಗಿ ಹತ್ತನೇ ತರಗತಿಯ ನಂತರದ (2017) ಶಿಕ್ಷಣವನ್ನು ಕರ್ನಾಟಕದಲ್ಲಿ ಮಾಡಬೇಕು ಎಂಬ ನಿಲುವಿಗೆ ಬರುತ್ತಾನೆ.
ಈ ಸಂದರ್ಭದಲ್ಲಿ ಗೇಲ್ ಇಂಡಿಯಾ ಕಂಪೆನಿಯು ಇಂಡಿಯನ್ ಸ್ಪೀಡ್ ಸ್ಟಾರ್ ಎನ್ನುವ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಈ ಸ್ಪರ್ಧೆಯಲ್ಲಿ ನೂರು ಮೀಟರ್ ಓಟದಲ್ಲಿ ಹಂತ ಹಂತವಾಗಿ ಸ್ಪರ್ಧೆ ಏರ್ಪಡಿಸಿ ಕೊನೆಗೆ ನೂರು, ಇನ್ನೂರು ಮೀಟರ್ ಸ್ಪರ್ಧೆಯಲ್ಲಿ ವಿಶ್ವ ಚಾಂಪಿಯನ್ ಆದ ಜಮೈಕಾದ ಉಸೈನ್ ಬೋಲ್ಟ್ ಜತೆ ತರಬೇತಿ ಪಡೆಯುವ ಅವಕಾಶ ಒದಗಿಸುತ್ತದೆ. ಈ ಸ್ಪರ್ಧೆಯಲ್ಲಿ ಲೋಕೇಶ್ ನ್ಯಾಷನಲ್ ಲೆವೆಲ್‌ನಲ್ಲಿ ನಾಲ್ಕನೇ ರ್ಯಾಂಕ್ ಪಡೆದ ಕಾರಣ ಉಸೈನ್ ಬೋಲ್ಟ್ ಅವರ ತರಬೇತಿಗೆ ಆಯ್ಕೆಯಾಗುವುದಿಲ್ಲ. ಈ ಸಂದರ್ಭದಲ್ಲಿ ಕರಾಚಿಯಿಂದ ಬಂದ ಒಬ್ಬ ಅತ್ಲೀಟ್‌ನ ಪರಿಚಯವಾಗುತ್ತದೆ. ಅವರು ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು (ಡಿವೈಇಎಸ್) ಕ್ರೀಡಾಪಟುಗಳಿಗಾಗಿ ಹಾಸ್ಟೆಲ್ ಸೌಲಭ್ಯ ಒದಗಿಸುವ ಬಗ್ಗೆ ಗಮನಸೆಳೆಯುತ್ತಾರೆ. ಆಗ ಮೊದಲ ಪಿಯುಸಿಗೆ ಕ್ರೀಡಾ ಹಾಸ್ಟೆಲ್‌ಗೆ ಸೇರಿ ಬೆಂಗಳೂರಿನ ವಿದ್ಯಾವಾಹಿನಿ ಕಾಲೇಜಿನಲ್ಲಿ ಓದಿ 2020 ರಲ್ಲಿ ಪಿಯುಸಿ ಮುಗಿಸುತ್ತಾನೆ. ಆರ್ಥಿಕ ಸಮಸ್ಯೆಯಿಂದಾಗಿ ಪಿಯುಸಿ ನಂತರ ಕ್ರೀಡಾ ಕೋಟಾದಲ್ಲಿ ಕೆಲಸ ಹುಡುಕುವ ಪ್ರಯತ್ನ ಮಾಡುತ್ತಾನೆ. ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಪ್ರಯತ್ನಿಸುತ್ತಾನೆ. ಕೆಲಸಕ್ಕಾಗಿ ಲಂಚ ನಡೆದ ಕಾರಣ ಕೆಲಸ ಪಡೆಯಲಾಗುವುದಿಲ್ಲ. ಈ ಘಟನೆ ಲೋಕೇಶನಲ್ಲಿ ಭ್ರಷ್ಟಾಚಾರದ ಬಗ್ಗೆ ಸಿಟ್ಟು ಆಕ್ರೋಶವನ್ನು ಬಡಿದೆಬ್ಬಿಸುತ್ತದೆ. ಇದೀಗ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ ಜಿಬಿಆರ್ ಕಾಲೇಜಿನಲ್ಲಿ ಲೋಕೇಶ್ ಬಿ.ಎ. ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ.
ಮೊದಲ ವರ್ಷದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಹದಿನಾರು ವರ್ಷದ ಒಳಗಿನ ಆಯ್ಕೆಯಲ್ಲಿ ಬೆಳ್ಳಿ ಪದಕ ಪಡೆಯುತ್ತಾನೆ. ಇದಾದ ನಂತರ 2017 ರಿಂದ ಮೊದಲುಗೊಂಡು ಈ ತನಕ ಕರ್ನಾಟಕ ರಾಜ್ಯ ಮಟ್ಟದಲ್ಲಿ ಬಂಗಾರ ಪದಕ ಪಡೆಯುತ್ತಲೇ ಬಂದಿದ್ದಾನೆ. ಡೆಕತ್ಲಾನ್ ನಲ್ಲಿ 2018ರಿಂದಲೂ ಸ್ಟೇಟ್ ರೆಕಾರ್ಡ್ ಹೋಲ್ಡರ್ ಆಗಿ ಲೋಕೇಶ್ ಈ ತನಕ ತನ್ನ ಸ್ಥಾನವನ್ನು ಕಾಯ್ದುಕೊಂಡಿದ್ದಾನೆ. 2025ರಲ್ಲಿ 5ನೇ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸ್ಪರ್ಧೆಗೆ ಲೋಕೇಶ್ ಆಯ್ಕೆಯಾಗಿ ಹೆಚ್ಚು ಜನರ ಗಮನಸೆಳೆಯುತ್ತಾನೆ.
ಇತ್ತ ತಂದೆ ತಾಯಿ ಕುಟುಂಬ ಸಮೇತ ಯಾದಗಿರಿಯಿಂದ ಪುಣೆಗೆ ನಿರಂತರ ಹೋಗಿ ಬಂದು ಮಾಡುತ್ತಾರೆ. ಕೆಲಕಾಲ ಪುಣೆಯಲ್ಲಿ ಕೂಲಿ ಮಾಡುವುದು, ಮತ್ತೆ ಸ್ವಲ್ಪ ಕಾಲ ಯಾದಗಿರಿಯಲ್ಲಿ ಕೂಲಿಗಳಾಗಿ ದುಡಿಯುವುದು ಹೀಗೆ ನಡೆಯುತ್ತದೆ. ಹಾಗಾಗಿ ಲೋಕೇಶ್ ಕುಟುಂಬಕ್ಕೆ ಹೊರೆಯಾಗಬಾರದು ಯಾದಗಿರಿಯಲ್ಲಿ ತನ್ನ ಪ್ರತಿಭೆಯನ್ನು ಬಳಸಿಕೊಂಡೇ ಏನನ್ನಾದರೂ ಮಾಡಬೇಕೆಂದು ಯೋಚಿಸುತ್ತಾನೆ. ಹೀಗಿರುವಾಗ 2022ರಲ್ಲಿ ಯಾದಗಿರಿಗೆ ಬಂದಾಗ ತನ್ನದೇ ತವರಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸು ಕಂಡು ತನ್ನದೇ ಕೋಚಿಂಗ್ ಕ್ಲಬ್ ತೆರೆದು ತಮ್ಮ ಭಾಗದ ಯುವ ಕ್ರೀಡಾಪಟುಗಳ ಬೆಳವಣಿಗೆಗೆ ಸಹಕಾರ ನೀಡುವ ಅಂಗವಾಗಿ ತೊಡಗಿಸಿಕೊಳ್ಳುತ್ತಾನೆ.
ಲೋಕೇಶ್ ಮೊದಲಿಗೆ ಸರಕಾರದ ಕ್ರೀಡಾ ಇಲಾಖೆಯಿಂದ ಯಾದಗಿರಿಯಲ್ಲಿ ಯಾವ ಬಗೆಯ ಸೌಲಭ್ಯಗಳಿವೆ ಎನ್ನುವುದನ್ನು ಪರಿಶೀಲಿಸುತ್ತಾನೆ. ಯಾದಗಿರಿಯ ಜಿಲ್ಲಾ ಕ್ರೀಡಾಂಗಣವನ್ನು ನೋಡಿದಾಗ ಯಾವುದೇ ವ್ಯವಸ್ಥೆ ಇರದೆ ಅವ್ಯವಸ್ಥೆಯ ಗೂಡಾಗಿರುತ್ತದೆ. ಇದನ್ನು ನೋಡಿದ ಲೋಕೇಶ್ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾನೆ. ಹೀಗೆ ಕಂಡು ಹೇಳಿ ಕೇಳಿದ್ದಕ್ಕೆ ಏನೂ ಪ್ರತಿಫಲ ಸಿಗದೆ ಇದ್ದಾಗ, ಸಂಬಂಧ ಪಟ್ಟವರಿಗೆ ನೇರವಾಗಿ ಪತ್ರಗಳನ್ನು ಬರೆಯಲು ಶುರು ಮಾಡುತ್ತಾನೆ. ಸರಕಾರದಿಂದ ಕ್ರೀಡೆಗಾಗಿ ಏನೇನು ಹಣ ಬಂದಿದೆ, ಎಷ್ಟು ಖರ್ಚಾಗಿದೆ ಎನ್ನುವುದನ್ನು ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಕೇಳಲು ಪ್ರಯತ್ನಿಸುತ್ತಾನೆ. ಈ ಬಗೆಯ ಎಲ್ಲಾ ಪ್ರಯತ್ನಗಳ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಕ್ರೀಡೆಗೆ ಸಂಬಂಧಿಸಿದ ಪ್ರಾಥಮಿಕ ಸೌಲಭ್ಯಗಳನ್ನಾದರೂ ಒದಗಿಸಿ ಎಂದು ಮೊರೆ ಇಡುತ್ತಾನೆ. ಒಮ್ಮೆ ತಾನು ಈ ತನಕ ಪಡೆದ ಎಲ್ಲಾ ಪದಕಗಳನ್ನು ಹರಡಿಕೊಂಡು ತನ್ನದೇ ಫೋಟೊಕ್ಕೆ ಹಾರ ಹಾಕಿಕೊಂಡು ಕ್ರೀಡಾಂಗಣದ ಎದುರು ಪ್ರತಿಭಟನೆಗಿಳಿದು ಗಮನಸೆಳೆಯುತ್ತಾನೆ. ಕಲ್ಯಾಣ ಕರ್ನಾಟಕ ಯೂತ್ ಅಸೋಸಿಯೇಶನ್ ಸಂಘಟನೆಯ ಮೂಲಕವೂ ಹೋರಾಟ ಮುಂದುವರಿಯುತ್ತದೆ. ಪುನೀತ್ ರಾಜ ಕಮತಗಿ ಇದಕ್ಕೆ ಜತೆಯಾಗುತ್ತಾರೆ. ನಂತರ ಲೋಕೇಶನ ಪ್ರತಿಭಟನೆಯ ವೀಡಿಯೋಗಳನ್ನು ಕೆಲವು ರಾಜಕೀಯ ಪಕ್ಷಗಳು ಆಡಳಿತ ಪಕ್ಷದ ವಿರೋಧಕ್ಕೆ ಬಳಸಿಕೊಳ್ಳುತ್ತವೆ. ಇದರಿಂದಾಗಿ ಲೋಕೇಶನ ಪ್ರಾಮಾಣಿಕ ಹೋರಾಟಕ್ಕೆ ರಾಜಕೀಯ ಬಣ್ಣ ಬರುತ್ತದೆ.
ಈ ಬಗ್ಗೆ ಲೋಕೇಶ್ ‘‘ಯಾವುದೇ ರಾಜಕೀಯ ಪಕ್ಷದ ಪರ ವಿರೋಧ ನನ್ನ ಉದ್ದೇಶವಲ್ಲ, ಯಾವ ಪಕ್ಷ ಆಡಳಿತದಲ್ಲಿದ್ದರೂ ನನ್ನ ಹೋರಾಟ ಯಾದಗಿರಿ ಜಿಲ್ಲೆಯ ಕ್ರೀಡಾಪಟುಗಳ ಪರವಾಗಿಯೇ ಇರುತ್ತಿತ್ತು. ಅನಗತ್ಯವಾಗಿ ನನ್ನ ಕ್ರೀಡಾ ಸುಧಾರಣೆಯ ಪ್ರಶ್ನೆಗಳನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ’’ ಎನ್ನುತ್ತಾರೆ. ಮುಂದುವರಿದು, ‘‘ಯಾದಗಿರಿ ಭಾಗದ ಹಳ್ಳಿಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಇವರುಗಳು ಕ್ರೀಡೆಯಲ್ಲಿ ಮುಂದೆ ಬರಲು ಕನಿಷ್ಠ ಪ್ರೋತ್ಸಾಹದ ಅಗತ್ಯವಿದೆ. ಇಂತಹ ಪ್ರೋತ್ಸಾಹ ಸಿಗಲಿ ಎಂದು ನಾನು ಹೋರಾಡುತ್ತಿದ್ದೇನೆ’’ ಎನ್ನುತ್ತಾರೆ.
ಲೋಕೇಶ್ ಈ ಭಾಗದಲ್ಲಿ ಏನನ್ನಾದರೂ ಮಾಡಬೇಕು ಎನ್ನುವ ಹಂಬಲದಲ್ಲಿ ಸರಕಾರದಿಂದ 15 ಲಕ್ಷ ರೂ. ಸಾಲ ಪಡೆದು ‘ಯಾದಗಿರಿ ಫಿಟ್‌ನೆಸ್’ ಎನ್ನುವ ಒಂದು ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಇದರದ್ದೇ ಆದ yadgirfitness.in ಎಂಬ ವೆಬ್‌ಸೈಟ್ ಮಾಡಿದ್ದಾರೆ. ಯುವಜನರನ್ನು ಈ ಸಂಸ್ಥೆಯ ಮೂಲಕ ಜಿಮ್ ಟ್ರೈನಿಂಗ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಸಾಲವಾಗಿ 15 ಲಕ್ಷ ರೂ. ಪಡೆಯಲೂ ಕೂಡ ಲಕ್ಷಗಟ್ಟಲೆ ಹಣ ಲಂಚಕೊಡಬೇಕಾಯಿತು ಎಂದು ಲೋಕೇಶ್ ನೋವಿನಿಂದ ಹೇಳುತ್ತಾರೆ.
ಕರ್ನಾಟಕ ಸರಕಾರ ಹೊರ ತಂದ 2024-25ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸುವಂತೆ ಕರ್ನಾಟಕದ ಜಿಲ್ಲೆಗಳ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಬೆಂಗಳೂರು ನಗರ ಜಿಲ್ಲೆಯು 0.738 ಮೌಲ್ಯದೊಂದಿಗೆ ಮೊದಲನೇ ಸ್ಥಾನದಲ್ಲಿದ್ದರೆ ಯಾದಗಿರಿ (0.538)ರಷ್ಟು ಎಚ್‌ಡಿಐ ಮೌಲ್ಯದೊಂದಿಗೆ ಕೆಳಗಿನ ಸ್ಥಾನದಲ್ಲಿದೆ. ತಾಲೂಕುವಾರು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದಕ್ಷಿಣ ಕನ್ನಡದ ಮಂಗಳೂರು ತಾಲೂಕು (0.786) ಅತಿ ಹೆಚ್ಚು ಮೌಲ್ಯವನ್ನು ಹೊಂದಿದೆ. ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕು (0.325) ಅತಿ ಕಡಿಮೆ ಮೌಲ್ಯವನ್ನು ಹೊಂದಿದೆ. 76 ತಾಲೂಕುಗಳು ರಾಜ್ಯದ ಸರಾಸರಿಗಿಂತ (0.573) ಕಡಿಮೆ ಇದ್ದು, ತುರ್ತು ಅಭಿವೃದ್ಧಿಯ ಗಮನ ಅಗತ್ಯವಿದೆ. ತಲಾ ಆದಾಯದಲ್ಲಿಯೂ ಯಾದಗಿರಿ ಕಡೆಯ ಸ್ಥಾನದಲ್ಲಿದೆ. ಶಾಲೆಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಯಾದಗಿರಿ ಮುಂದಿದೆ. ಈ ಪರಿಸ್ಥಿತಿಯೇ ಯಾದಗಿರಿಯ ಪ್ರಜ್ಞಾವಂತರನ್ನು ಹೋರಾಟಕ್ಕೆ ಇಳಿಸುತ್ತದೆ. ಯುವಜನರಲ್ಲಿ ಕಿಚ್ಚನ್ನು ಹೊತ್ತಿಸುತ್ತದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯಲ್ಲಿ ಪಕ್ಷಾತೀತವಾಗಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕಲ್ಯಾಣ ಕರ್ನಾಟಕದ ಹಿಂದುಳಿಯುವಿಕೆಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಆಡಳಿತ ವರ್ಗ ನೇರ ಹೊಣೆ ಹೊರಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರಕಾರದಿಂದ ಬಂದ ಹಣದ ಉಪಯೋಗದ ಬಗ್ಗೆ ಪ್ರಾಮಾಣಿಕ ತನಿಖೆ ನಡೆದರೆ ಬಹುಶಃ ಪಕ್ಷಾತೀತವಾಗಿ ಎಲ್ಲರ ಹಗರಣಗಳು ಬಯಲಿಗೆ ಬರುತ್ತವೆ. ಇಂತಹ ವ್ಯವಸ್ಥೆಯನ್ನು ನೋಡಿದ ಕಲ್ಯಾಣ ಕರ್ನಾಟಕದ ಯಾವುದೇ ಪ್ರಜ್ಞಾವಂತ ಯುವಕ-ಯುವತಿಯರೂ ಕೂಡ ಲೋಕೇಶರಂತೆ ಪ್ರಶ್ನೆ ಎತ್ತಬಲ್ಲರು. ರಾಜ್ಯ, ರಾಷ್ಟ್ರಮಟ್ಟದಲ್ಲಿ ತನ್ನ ಅವಿರತ ಕಠಿಣ ಶ್ರಮದ ಮೂಲಕ ಗಮನಸೆಳೆದ ಲೋಕೇಶ್ ಎತ್ತಿದ ಪ್ರಶ್ನೆ ಅದು ಆತನೊಬ್ಬನ ಪ್ರಶ್ನೆಯಲ್ಲ. ಇದು ಕಲ್ಯಾಣ ಕರ್ನಾಟಕದ ಪ್ರಾತಿನಿಧಿಕ ಯುವಧ್ವನಿ. ಇದನ್ನು ಆಡಳಿತ ಸರಕಾರ ಅರಿಯಬೇಕಾಗಿದೆ. ಆತನ ಬೇಡಿಕೆಗಳಿಗೆ ಸರಕಾರ ಕಿವಿಯಾಗಬೇಕಿದೆ. ಏಶ್ಯನ್ ಗೇಮ್ಸ್‌ಗಾಗಿ ಬೆಂಗಳೂರಿನಲ್ಲಿ ಕಠಿಣ ತಯಾರಿ ನಡೆಸಿರುವ ಲೋಕೇಶನ ಮುಂದಿನ ಭವಿಷ್ಯ ಉಜ್ವಲವಾಗಲಿ.