ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

ಈಶ್ವರಪ್ಪ, ಸಿ.ಟಿ. ರವಿ, ಸದಾನಂದ ಗೌಡ, ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕಟ್ ಆಗಿದ್ದು ವಿಜಯೇಂದ್ರ ಮತ್ತು ಯಡಿಯೂರಪ್ಪ ಬಣಕ್ಕೆ ಶತ್ರುಗಳ ಸಂಖ್ಯೆ ಹೆಚ್ಚಾದಂತೆ. ಈಶ್ವರಪ್ಪ ನಿಜವಾಗಿಯೂ ಬಂಡಾಯ ಎದ್ದರೆ ಕುರುಬ ಸಮುದಾಯ ಹೆಚ್ಚಾಗಿರುವ ಧಾರವಾಡ, ಹಾವೇರಿ, ಬೆಳಗಾವಿ, ಬೀದರ್, ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕಂಟಕವಾಗಬಹುದು. ಬಸವರಾಜ ಬೊಮ್ಮಾಯಿ ಗೆಲ್ಲಲು ಸಾಧ್ಯವಾಗುವುದೇ ಇಲ್ಲ. ಆದರೆ ಈಶ್ವರಪ್ಪ ಆ ಧೈರ್ಯ ತೋರುತ್ತಾರೆಯೇ? ಸದಾನಂದ ಗೌಡ, ಸಿ.ಟಿ. ರವಿ, ಪ್ರತಾಪ ಸಿಂಹ ಅವರ ಸಾಮರ್ಥ್ಯ ಅರಿತೇ ಹೈಕಮಾಂಡ್ ಅವರನ್ನು ನಿರ್ಲಕ್ಷಿಸಿರಬಹುದು.

Update: 2024-03-16 04:10 GMT

ಒಂದಾನೊಂದು ಕಾಲದಲ್ಲಿ ಭಾರತೀಯ ಜನತಾ ಪಕ್ಷವೆಂದರೆ ಕಠೋರ ಶಿಸ್ತಿನ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಭಿನ್ನಮತ, ಒಳಜಗಳ, ಸಣ್ಣತನಕ್ಕೆ ಆ ಪಕ್ಷದಲ್ಲಿ ಅವಕಾಶವೇ ಇರಲಿಲ್ಲ. ಒಮ್ಮೆ ಅಧಿಕಾರದ ರುಚಿ ಅನುಭವಿಸಿದ ಬಿಜೆಪಿಯ ನಾಯಕರು ಕಾಂಗ್ರೆಸ್, ಜನತಾ ಪರಿವಾರದ ಮುಖಂಡರನ್ನೂ ಮೀರಿಸುವ ಹಾಗೆ ಪರಸ್ಪರ ಕಾಲೆಳೆಯುವ ರಾಜಕಾರಣದಲ್ಲಿ ನಿಸ್ಸೀಮರಾದರು. ಕರ್ನಾಟಕದ ಬಿಜೆಪಿಯಲ್ಲಿ ಪಕ್ಷವನ್ನು ಕೆಳಹಂತದಿಂದ ಸಂಘಟಿಸಿದ ನಾಯಕರಿಗೇ ಬೆಲೆ ಇಲ್ಲದಂತಾಯಿತು. ಹೈಕಮಾಂಡ್ ಎದುರಲ್ಲಿ ಪರಸ್ಪರ ಚಾಡಿ ಹೇಳಿ ಬೇಳೆ ಬೇಯಿಸಿಕೊಳ್ಳುವ ಬಣ ರಾಜಕೀಯ ಶುರುವಾಗಿ ಬಹಳ ವರ್ಷಗಳಾಗಿವೆ. ಎ.ಕೆ. ಸುಬ್ಬಯ್ಯ, ಬಿ.ಬಿ. ಶಿವಪ್ಪ ಅವರ ಕಾಲದಲ್ಲಿ ಬಿಜೆಪಿ ಚುನಾವಣೆ ಗೆಲ್ಲಲು ಹರಸಾಹಸ ಮಾಡಬೇಕಾಗಿತ್ತು. ವಿಧಾನಸಭೆ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಯಾರಿಗೆ ಬೇಕಾದರೂ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಬಿಜೆಪಿ ಹೈಕಮಾಂಡ್‌ಗೆ ಇದೆ. ಬ್ರ್ಯಾಂಡ್ ಮೋದಿ ಕಾಲದಲ್ಲಿಯಂತೂ ಅದು ಅತಿರೇಕದ ಹಂತಕ್ಕೆ ತಲುಪಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ, ರಾಷ್ಟ್ರದಲ್ಲಿ ಮೋದಿಯವರ ವರ್ಚಸ್ಸು ಹೆಚ್ಚಿದ ಮೇಲೆ ಏನು ಬೇಕಾದರೂ ಮಾಡಬಹುದು ಎಂಬ ಮನೋಭಾವ ಹುಚ್ಚು ಕುದುರೆಯ ಓಟದಂತಾಗಿದೆ.

ಯಾರಿಗೆ ಬೇಕಾದರೂ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬಹುದು ಎಂಬ ನೀತಿ ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ರಾಜ್ಯಗಳಲ್ಲಿ ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಕರ್ನಾಟಕದಲ್ಲಿ ಆಯ್ದ ಮತಕ್ಷೇತ್ರಗಳಲ್ಲಿ ಮಾತ್ರ ಈ ಪ್ರಯೋಗ ಫಲ ನೀಡಿದೆ. ಅದು ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಯಶಸ್ಸು ಕಂಡಿದೆ. 2004ರ ಸಾರ್ವತ್ರಿಕ ಚುನಾವಣೆಯ ನಂತರ ಕರ್ನಾಟಕದ ಮತದಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಭಿನ್ನವಾದ ಜನಾದೇಶ ನೀಡ ತೊಡಗಿದ್ದಾರೆ. ಕರ್ನಾಟಕದಲ್ಲಿ 2004ರಲ್ಲಿ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆ ಏಕಕಾಲಕ್ಕೆ ನಡೆಯಿತು. ಆಗ ಮೋದಿಯವರು ಗುಜರಾತ್‌ನಲ್ಲೇ ಇದ್ದರು. ಬಿಜೆಪಿ ವಾಜಪೇಯಿ, ಅಡ್ವಾಣಿ ನೇತೃತ್ವದಲ್ಲಿ ಚುನಾವಣೆ ಎದುರಿಸಿತ್ತು. ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ-ಅನಂತ ಕುಮಾರ್ ಸಾರಥಿಯಾಗಿದ್ದರು. ಜನತಾ ಪರಿವಾರದ ಒಡಕಿನ ಲಾಭ ಪಡೆದ ಬಿಜೆಪಿ ನಾಯಕರು ರಾಮಕೃಷ್ಣ ಹೆಗಡೆಯವರ ಬಹುಪಾಲು ಶಿಷ್ಯರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಪರಿಣಾಮವಾಗಿ ಆ ಚುನಾವಣೆಯಲ್ಲಿ ಬಿಜೆಪಿ 18 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಆದರೆ ಅದೇ ಅನುಪಾತದಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಪ್ರಾಪ್ತಿಯಾಗಲಿಲ್ಲ. ಆ ಚುನಾವಣೆಯಲ್ಲಿ ಬಿಜೆಪಿ 79 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿ ಕಾಂಗ್ರೆಸ್-ಜೆಡಿಎಸ್‌ಗಿಂತಲೂ ಹೆಚ್ಚು ಶಾಸಕರನ್ನು ಹೊಂದಿತು. ಕಾಂಗ್ರೆಸ್ 65 ಕ್ಷೇತ್ರಗಳಲ್ಲಿ, ಜೆಡಿಎಸ್ 58 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದವು. ಲೋಕಸಭೆ ಮತ್ತು ವಿಧಾನಸಭೆಗೆ ಭಿನ್ನವಾದ ಜನಾದೇಶವನ್ನು ನೀಡುವ ಕ್ರಮ ಈಗಲೂ ಕರ್ನಾಟಕದಲ್ಲಿ ಮುಂದುವರಿದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಜಾತಿ ಸಮೀಕರಣ ನಿರ್ಣಾಯಕ ಪಾತ್ರ ವಹಿಸುತ್ತದೆ. ಯಡಿಯೂರಪ್ಪ ಹೊರತುಪಡಿಸಿದ ಬಿಜೆಪಿ ಕರ್ನಾಟಕದಲ್ಲಿ ಇಲ್ಲಿಯವರೆಗೂ ಯಶಸ್ಸು ಕಂಡಿಲ್ಲ. 2013ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಕಟ್ಟಿಕೊಂಡು ಚುನಾವಣೆ ಎದುರಿಸಿದರು. ಆ ಚುನಾವಣೆಯಲ್ಲಿ ಅವರಿಗೆ ಭಾರೀ ಯಶಸ್ಸು ದೊರೆಯಲಿಲ್ಲ. ಆದರೆ ಬಿಜೆಪಿಗೆ ನಷ್ಟ ಉಂಟು ಮಾಡುವಲ್ಲಿ ಯಶಸ್ವಿಯಾದರು. ಆ ಚುನಾವಣೆಯಲ್ಲಿ ಬಿಜೆಪಿ ಕೇವಲ 40 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅನಂತ ಕುಮಾರ್, ಈಶ್ವರಪ್ಪ, ಪ್ರಹ್ಲಾದ್ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಸಿ.ಟಿ. ರವಿ, ಆರ್. ಅಶೋಕ್ ಸೇರಿ ಬಿಜೆಪಿಯ ಬಹುಪಾಲು ನಾಯಕರು ಇದ್ದಾಗಲೂ ಪಕ್ಷಕ್ಕೆ ಕೇವಲ 40 ಸ್ಥಾನ ಲಭಿಸಿದ್ದು ಯಡಿಯೂರಪ್ಪ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಿತು. 2014ರ ಲೋಕಸಭಾ ಚುನಾವಣೆ ಹೊತ್ತಿಗೆ ಯಡಿಯೂರಪ್ಪ ಮತ್ತೆ ಬಿಜೆಪಿಗೆ ಮರಳಿದರು. ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿ ಹೊಸ ಮುಖಗಳನ್ನು ಪರಿಚಯಿಸುವ ಪ್ರಯೋಗ ಮಾಡಿತು. ಕೊಪ್ಪಳ ಲೋಕಸಭಾ ಸದಸ್ಯರಾಗಿದ್ದ ಶಿವರಾಮೇಗೌಡ ಅವರಿಗೆ ಟಿಕೆಟ್ ತಪ್ಪಿಸಿ ಸಂಗಣ್ಣ ಕರಡಿ ಅವರನ್ನು ಕಣಕ್ಕಿಳಿಸಿ ಯಶಸ್ಸು ಪಡೆಯಿತು. ಬೀದರ್ ಲೋಕಸಭಾ ಚುನಾವಣೆಯಲ್ಲಿ ಯಾರಿಗೂ ಗೊತ್ತಿರದ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಿ ಮಾಜಿ ಮುಖ್ಯಮಂತ್ರಿ ಎನ್. ಧರಂ ಸಿಂಗ್ ವಿರುದ್ಧ ಗೆಲ್ಲಿಸಿಕೊಂಡಿತ್ತು. ಶೋಭಾ ಕರಂದ್ಲಾಜೆ ಅವರನ್ನೂ ಮೊದಲ ಬಾರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡಿದ್ದರು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿತ್ತು. ಹೀಗಿದ್ದೂ ಬಿಜೆಪಿ 17 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು.

2023ರ ವಿಧಾನಸಭಾ ಚುನಾವಣೆಗೂ ಎರಡು ವರ್ಷ ಮೊದಲೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಳಿಸಿತ್ತು. ಹಾಗೆ ನೋಡಿದರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ‘‘ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ’’ ಎಂದು ಚುನಾವಣಾ ಪ್ರಚಾರದುದ್ದಕ್ಕೂ ಮಂತ್ರದಂತೆ ಪಠಿಸಿತ್ತು. ಆಗಲೂ ಮತದಾರ ಬಹುಮತವೇನೂ ನೀಡಲಿಲ್ಲ. 104 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅನಿವಾರ್ಯವಾಗಿ ಕಾಂಗ್ರೆಸ್-ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬಂತು. ಮೈತ್ರಿ ಸರಕಾರ ಇರುವಾಗ 2019ರ ಲೋಕಸಭಾ ಚುನಾವಣೆ ನಡೆಯಿತು. ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತು. ಕಾಂಗ್ರೆಸ್-ಜೆಡಿಎಸ್ ದೋಸ್ತಿಯಲ್ಲಿ ಚುನಾವಣೆ ಎದುರಿಸಿ ಗೆದ್ದಿದ್ದು ತಲಾ ಒಂದು ಸೀಟು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ವತಃ ಮಾಜಿ ಪ್ರಧಾನಿ ದೇವೇಗೌಡರೇ ಸೋತರು. ರಾಜ್ಯದಲ್ಲಿ ಬಿಜೆಪಿ ಸರಕಾರ ಇರದಿದ್ದರೂ ಆ ಪಕ್ಷ 25 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡಿ ಗೆಲ್ಲಿಸಿಕೊಂಡಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಗೆಲುವಿ ಗಾಗಿ ಶ್ರಮಿಸಿದ ಯಡಿಯೂರಪ್ಪ ಅವರಿಗೆ ಆಪರೇಷನ್ ಕಮಲದ ಮೂಲಕ ಸರಕಾರ ರಚಿಸಲು ಅವಕಾಶ ಸಿಕ್ಕಿತು. ಯಡಿಯೂರಪ್ಪ ಎರಡು ವರ್ಷ ಅಧಿಕಾರ ನಡೆಸಿದರು. ಆ ಎರಡೂ ವರ್ಷ ಕೇಂದ್ರ ನಾಯಕರು ಸಹಕಾರ ನೀಡಲಿಲ್ಲ. ವಯಸ್ಸಿನ ಕಾರಣಕ್ಕೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ಬಸವರಾಜ ಬೊಮ್ಮಾಯಿ ಅವರನ್ನು ಆ ಸ್ಥಾನದಲ್ಲಿ ಕೂರಿಸಿದರು.

ಇಷ್ಟೆಲ್ಲ ಪ್ರಯೋಗವನ್ನು ಯಡಿಯೂರಪ್ಪ ಅವರ ಮೇಲೆ ಹೈಕಮಾಂಡ್ ಮಾಡುತ್ತಿರುವಾಗ ಕೆ.ಎಸ್. ಈಶ್ವರಪ್ಪ, ಡಿ.ವಿ. ಸದಾನಂದ ಗೌಡ, ಪ್ರತಾಪ ಸಿಂಹ, ನಳಿನ್ ಕುಮಾರ್ ಕಟೀಲು ಸುಮ್ಮನೆ ಕೂತು ಎಂಜಾಯ್ ಮಾಡುತ್ತಿದ್ದರು. ಆಗ ಆ ಟೀಮಿನ ನಾಯಕ ಬಿ.ಎಲ್. ಸಂತೋಷ್ ಹೈಕಮಾಂಡನ್ನು ನಿಯಂತ್ರಿಸುತ್ತಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಿಂದ ಹಿಡಿದು ಹಿಂದೂ-ಮುಸ್ಲಿಮ್ ಮತ ಧ್ರುವೀಕರಣಕ್ಕೆ ಪೂರಕವಾಗಿ ನರೇಟಿವ್ ಸೆಟ್ ಮಾಡುವವರೆಗೆ ಎಲ್ಲವೂ ಬಿ.ಎಲ್. ಸಂತೋಷ್ ಸಲಹೆ ಮೇರೆಗೆ ನಡೆದಿತ್ತು. ಆಗ ಯಡಿಯೂರಪ್ಪ ಸಂಪೂರ್ಣ ಸೈಡ್‌ಲೈನ್ ಆಗಿದ್ದರು. ಹಿಂದಿ-ಇಂಗ್ಲಿಷ್ ಬಾರದ ಸಿ.ಟಿ. ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಅಲಂಕರಿಸಿದ್ದರು. ಅತ್ಯಂತ ನಿಷ್ಕ್ರಿಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಿಡಿದು ಬಿ.ಎಲ್. ಸಂತೋಷ್ ಬಣದ ಎಲ್ಲರೂ ಸ್ವಾರ್ಥ-ಪ್ರತಿಷ್ಠೆಗಾಗಿ ಕಾರ್ಯನಿರ್ವಹಿಸಿದರೇ ಹೊರತು ಪಕ್ಷದ ಒಳಿತಿಗಾಗಿ ಕಾರ್ಯನಿರ್ವಹಿಸಲಿಲ್ಲ. ಬೇಕಾದ ಡಮ್ಮಿಗಳಿಗೆ ಟಿಕೆಟ್ ನೀಡಿ, ಬೇಡವಾದ ಕ್ರಿಯಾಶೀಲರಿಗೆ ಟಿಕೆಟ್ ಕಟ್ ಮಾಡಿದರು. ಈ ಹೊತ್ತು ಪಕ್ಷ, ದೇಶ, ಕ್ರಿಯಾಶೀಲತೆ ಎಂದು ಬೊಗಳೆ ಬಿಡುತ್ತಿರುವ ವಿ. ಸೋಮಣ್ಣ, ಪ್ರತಾಪ್ ಸಿಂಹ ಮುಂತಾದವರು ಪಕ್ಷದ ಒಳಿತಿಗಾಗಿಯಾದರೂ ವಸ್ತುನಿಷ್ಠವಾಗಿ ಮಾತನಾಡಬೇಕಿತ್ತು. ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಹೊರತುಪಡಿಸಿದ ಬಿಜೆಪಿ ಸರಕಾರ ತರಲು ಯತ್ನಿಸಿದ್ದರು. ಸಿ.ಟಿ. ರವಿ, ಪ್ರತಾಪ ಸಿಂಹ ಮುಂತಾದ ಫೈರ್ ಬ್ರಾಂಡ್ ಕಲಿಗಳನ್ನು ಮುಂದಿಟ್ಟುಕೊಂಡು ಕರ್ನಾಟಕವನ್ನು ಗುಜರಾತ್, ಉತ್ತರಪ್ರದೇಶ ಮಾದರಿಯಲ್ಲಿ ಹಿಂದೂ- ಮುಸ್ಲಿಮ್ ಧ್ರುವೀಕರಣ ಮಾಡಿ ಅನಾಯಾಸವಾಗಿ ಚುನಾವಣೆಗೆ ಗೆಲ್ಲಲು ತಂತ್ರಗಾರಿಕೆ ರೂಪಿಸಿದರು. ಟಿಪ್ಪು, ಹಿಜಾಬ್, ಹಲಾಲ್, ಜಟ್ಕಾ, ಮಸೀದಿ-ದರ್ಗಾಗಳಲ್ಲಿ ಮಂದಿರ ಹುಡುಕಿ ಉಗ್ರ ಹಿಂದುತ್ವ ಮತ್ತು ಮೋದಿ ಅಲೆಯಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಗೆಲ್ಲುವ ಲೆಕ್ಕಾಚಾರ ಬಿ.ಎಲ್. ಸಂತೋಷ್ ಅವರದಾಗಿತ್ತು. ಅವರು ಹೇಳಿದ್ದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಅಸ್ತು ಎಂದಿದ್ದರು. ಸಂತೋಷ್ ತಂತ್ರಗಾರಿಕೆಯ ಭಾಗವಾಗಿಯೇ ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಅರವಿಂದ ಲಿಂಬಾವಳಿ, ರಾಮದಾಸ್, ರಘುಪತಿ ಭಟ್, ಮೂಡಿಗೆರೆ ಕುಮಾರಸ್ವಾಮಿ ಸೇರಿದಂತೆ ನಿಶ್ಚಿತವಾಗಿ ಗೆಲ್ಲಬಹುದಾದ ಹಲವಾರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಯಿತು. ವಿ. ಸೋಮಣ್ಣ ಗೆಲ್ಲಬಹುದಾದ ಗೋವಿಂದರಾಜ ನಗರ ತಪ್ಪಿಸಿ ಮೈಸೂರು ಜಿಲ್ಲೆಯ ವರುಣಾ ಮತಕ್ಷೇತ್ರ ಮತ್ತು ಚಾಮರಾಜನಗರ ಜಿಲ್ಲೆಯ ಚಾಮರಾಜನಗರ ಮತಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರು. ಆಗ ಹಿರಿಯ ಮತ್ತು ಅನುಭವಿ ಪತ್ರಕರ್ತರಾಗಿದ್ದ ಪ್ರತಾಪ ಸಿಂಹ ಅವರು ಈ ಪ್ರಯೋಗ ಸಾಧುವಾದುದಲ್ಲ ಅಂತ ಹೇಳಬಹುದಿತ್ತು. ರಾಮದಾಸ್ ಟಿಕೆಟ್ ವಂಚಿತರಾಗಿ ಸಂಕಟ ಅನುಭವಿಸುತ್ತಿದ್ದರೆ ಪ್ರತಾಪ ಸಿಂಹ ದೇಶಭಕ್ತಿ ಮತ್ತು ತ್ಯಾಗದ ಮಾತುಗಳನ್ನು ಆಡುತ್ತಿದ್ದರು.

ಕೆ.ಎಸ್. ಈಶ್ವರಪ್ಪ ಅವರಂತೂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಮುಂತಾದ ಟಿಕೆಟ್ ವಂಚಿತರಿಗೆ ಹೈಕಮಾಂಡ್ ನಿರ್ಧಾರ ಒಪ್ಪಿಕೊಳ್ಳಲೇ ಬೇಕು ಎಂದು ಬಿಟ್ಟಿ ಉಪದೇಶ ಮಾಡಿದ್ದರು. ಸಿ.ಟಿ. ರವಿಯವರಿಗೆ ಆಡುವ ಮಾತಿನ ಮೇಲೆ ಹಿಡಿತವೇ ಇರಲಿಲ್ಲ. ಬಿ.ಎಲ್. ಸಂತೋಷ್ ಅವರು ಹೊಸ ಪ್ರಯೋಗವೇನೋ ಮಾಡಿದರು. ಆದರೆ ಯಶಸ್ಸು ಸಾಧಿಸಲಿಲ್ಲ. ಪ್ರತಾಪ ಸಿಂಹ ಪ್ರಯೋಗದ ಮೂಲಕ ಸಂಸದರಾದವರು. ನಾಲ್ಕೆಂಟು ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಶಕ್ತಿ ಬೆಳೆಸಿಕೊಂಡವರಲ್ಲ. ಸಂತೋಷ್ ಬಣದ ನಳಿನ್ ಕುಮಾರ್ ಕಟೀಲು, ಈಶ್ವರಪ್ಪ, ಸಿ.ಟಿ. ರವಿ, ಈರಣ್ಣ ಕಡಾಡಿ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಬಹುತೇಕರಿಗೆ ಮತದಾರರ ಮೇಲೆ ಪ್ರಭಾವ ಬೀರಿ ಹೆಚ್ಚು ಶಾಸಕರನ್ನು ಗೆಲ್ಲಿಸಿಕೊಂಡು ಬರುವ ತಾಕತ್ತೇ ಇಲ್ಲ. ಕಳೆದ 20 ವರ್ಷಗಳ ಕರ್ನಾಟಕದ ಚುನಾವಣಾ ಫಲಿತಾಂಶಗಳನ್ನು ಗಮನಿಸಿದರೆ; ರಾಜ್ಯದ ಮತದಾರ ಲೋಕಸಭೆ ಚುನಾವಣೆಗೆ ಬಿಜೆಪಿಯನ್ನು ಬೆಂಬಲಿಸಿದರೂ ಯಡಿಯೂರಪ್ಪ ಪಾತ್ರ ಇರುವುದು ಎದ್ದು ಕಾಣುತ್ತದೆ. ವಿಧಾನಸಭೆ ಚುನಾವಣೆಗಳಲ್ಲಿ ಯಡಿಯೂರಪ್ಪ ಹೊರತುಪಡಿಸಿ ಬಿಜೆಪಿ ಯಶಸ್ಸು ಕಂಡಿಲ್ಲ. ಅಷ್ಟೇ ಅಲ್ಲ ಹಿಂದೂ-ಮುಸ್ಲಿಮ್ ಧ್ರುವೀಕರಣದ ಪ್ರಯತ್ನಗಳಿಗೂ ಮತದಾರ ಒಪ್ಪಿಲ್ಲ. ರೈತರ ಸಮಸ್ಯೆ ಸೇರಿ ನಾಡಿನ ಸರ್ವಾಂಗೀಣ ಅಭಿವೃದ್ಧಿ ಕುರಿತ ವಿಷಯಗಳಿಗೆ ಮತದಾರರು ಬೆಂಬಲಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಏಕಮಾತ್ರ ನಾಮಬಲದಿಂದ ಕರ್ನಾಟಕದ ವಿಧಾನಸಭಾ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ.

ನರೇಂದ್ರ ಮೋದಿಯವರಿಗೆ ಚುನಾವಣೆಯ ಮೂಡ್ ಅರ್ಥವಾಗುತ್ತದೆ. ಯಡಿಯೂರಪ್ಪ ನಾಣ್ಯ ನಡೆಯುವುದಿಲ್ಲ ಎಂಬುದು ಖಾತ್ರಿ ಆಗಿದ್ದರೆ ಅವರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪದವಿ ನೀಡುತ್ತಿರಲಿಲ್ಲ. ಚುನಾವಣೆಯ ನಂತರ ಯಡಿಯೂರಪ್ಪ-ವಿಜಯೇಂದ್ರ ಅವರಿಗೆ ಮನ್ನಣೆ ನೀಡದೇ ಇರಬಹುದು. ಆದರೆ ತತ್ಕಾಲದಲ್ಲಿ ಅವರನ್ನು ಬಳಸಿಕೊಳ್ಳುತ್ತಿರುವುದು ನಿಜ. 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಬಿ.ಎಲ್. ಸಂತೋಷ್ ತಂತ್ರಗಾರಿಕೆ ಮತ್ತು ಯಡಿಯೂರಪ್ಪ ಕಡೆಗಣನೆ ಕಾರಣ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಸಂಸದ ಪ್ರತಾಪ ಸಿಂಹ ಅವರು ಫಲಿತಾಂಶವನ್ನು ವಸ್ತುನಿಷ್ಠವಾಗಿ ಗ್ರಹಿಸದೆ ಸೋಲಿಗೆ ಒಳಒಪ್ಪಂದದ ರಾಜಕಾರಣವೇ ನಿಜವಾದ ಕಾರಣ ಎಂದು ಸಂತೋಷ್ ವೈಫಲ್ಯ ಮುಚ್ಚುವ ಥಿಯರಿ ತೇಲಿಬಿಟ್ಟರು. ಪ್ರತಾಪ ಸಿಂಹ ಮಾತಿನಲ್ಲಿ ಸತ್ಯ ಇತ್ತು. ಆದರೆ ಪ್ರತಾಪ ಸಿಂಹ ಸೇರಿದಂತೆ ಬಹುಪಾಲು ರಾಜಕಾರಣಿಗಳು ಒಳಒಪ್ಪಂದದ ಫಲಾನುಭವಿಗಳೇ. ಯಡಿಯೂರಪ್ಪ, ಬೊಮ್ಮಾಯಿ ಒಳಒಪ್ಪಂದದ ರಾಜಕಾರಣದಲ್ಲಿ ಪಳಗಿದವರು. ಈ ಸತ್ಯದ ಅರಿವಿದ್ದೇ ಸಂತೋಷ್ ಅವರು ತಂತ್ರಗಾರಿಕೆ ರೂಪಿಸಬೇಕಿತ್ತು. ಚುನಾವಣೆಯಲ್ಲಿ ಗೆಲುವು ಮಾತ್ರ ಲೆಕ್ಕಕ್ಕೆ ಬರುತ್ತದೆ. ಉಳಿದ ಸಂಗತಿಗಳು ನಗಣ್ಯವಾಗುತ್ತವೆ. ಪ್ರತಾಪ ಸಿಂಹ ಅವರಿಗೆ ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕಟ್ ಆಗಿರುವುದರಿಂದ ರಾಮದಾಸ್ ಅವರ ಸಂಕಟ ಅರ್ಥವಾಗಬಹುದೇನೋ.

20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಇನ್ನೂ ಐದು ಕ್ಷೇತ್ರಗಳ ಅಭ್ಯರ್ಥಿ ಹೆಸರು ಪ್ರಕಟಿಸಿಲ್ಲ. ಎಲ್ಲಕ್ಕೂ ಮಿಗಿಲಾಗಿ ಸಮಯ ಸಾಧಕ ಶೆಟ್ಟರ್‌ಗೆ ಧಾರವಾಡ, ಹಾವೇರಿಯಲ್ಲಿ ಪರಿಗಣಿಸಿಲ್ಲ. ಪ್ರತಾಪ ಸಿಂಹ, ಕಾಂತೇಶ್, ಸದಾನಂದ ಗೌಡರು ಟಿಕೆಟ್ ತಪ್ಪಿದ್ದಕ್ಕೆ ಹತಾಶರಾಗಿ ಕಿಡಿ ಕಾರುತ್ತಿದ್ದಾರೆ. ಮೋದಿಯವರ ಗಮನಕ್ಕೆ ಬಾರದೆ ಟಿಕೆಟ್ ಕಟ್ ಆಗಿರಲು ಸಾಧ್ಯವಿಲ್ಲ. ಈಶ್ವರಪ್ಪ ಸೇರಿದಂತೆ ಟಿಕೆಟ್ ವಂಚಿತರಾದ ಯಾರಿಗೂ ಪಕ್ಷನಿಷ್ಠೆ, ದೇಶಭಕ್ತಿ, ಮೋದಿ ಪ್ರೀತಿ ಯಾವುದೂ ಇಲ್ಲ. ಬಿಜೆಪಿಯೊಳಗಿನ ಭಿನ್ನಮತ ಬೀದಿಗೆ ಬಂದಿದೆ. ಪ್ರತಾಪ ಸಿಂಹ ಯದುವೀರ್ ಒಡೆಯರ್ ಗೆಲುವಿಗೆ ಖಂಡಿತ ಶ್ರಮಿಸುವುದಿಲ್ಲ. ಈಶ್ವರಪ್ಪ ನೇರವಾಗಿಯೇ ಹೇಳಿದ್ದಾರೆ; ಯಡಿಯೂರಪ್ಪ ತನಗೆ ಮೋಸ ಮಾಡಿದ್ದಾರೆ. ಬೆಂಬಲಿಗರ ಸಲಹೆ ಪಡೆದು ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ. ಸಿ.ಟಿ. ರವಿ, ಸದಾನಂದ ಗೌಡ, ಈಶ್ವರಪ್ಪ, ಸಂಗಣ್ಣ ಕರಡಿ ಸೇರಿದಂತೆ ಬಿಜೆಪಿ ಟಿಕೆಟ್ ವಂಚಿತರು ಪಕ್ಷದ ಅಭ್ಯರ್ಥಿಗಳ ಪರ ಖಂಡಿತ ಕೆಲಸ ಮಾಡಲಾರರು. ಬಿ.ಎಲ್. ಸಂತೋಷ್ ಮತ್ತವರ ಟೀಮಿನ ನಾಯಕರು ಬಿಜೆಪಿಗೆ ರಾಜ್ಯದಲ್ಲಿ ಕಡಿಮೆ ಸ್ಥಾನ ಬರುವಂತೆ ನೋಡಿಕೊಳ್ಳುತ್ತಾರೆ. ಕಾಂಗ್ರೆಸ್ ತುಸು ಜಾಣ ನಡೆ ಅನುಸರಿಸಿದರೆ ಭಿನ್ನಮತದ ಲಾಭ ಮಾಡಿಕೊಳ್ಳಬಹುದು.

ಈಶ್ವರಪ್ಪ, ಸಿ.ಟಿ. ರವಿ, ಸದಾನಂದ ಗೌಡ, ಪ್ರತಾಪ ಸಿಂಹ ಅವರಿಗೆ ಟಿಕೆಟ್ ಕಟ್ ಆಗಿದ್ದು ವಿಜಯೇಂದ್ರ ಮತ್ತು ಯಡಿಯೂರಪ್ಪ ಬಣಕ್ಕೆ ಶತ್ರುಗಳ ಸಂಖ್ಯೆ ಹೆಚ್ಚಾದಂತೆ. ಈಶ್ವರಪ್ಪ ನಿಜವಾಗಿಯೂ ಬಂಡಾಯ ಎದ್ದರೆ ಕುರುಬ ಸಮುದಾಯ ಹೆಚ್ಚಾಗಿರುವ ಧಾರವಾಡ, ಹಾವೇರಿ, ಬೆಳಗಾವಿ, ಬೀದರ್, ಕೊಪ್ಪಳ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕಂಟಕವಾಗಬಹುದು. ಬಸವರಾಜ ಬೊಮ್ಮಾಯಿ ಗೆಲ್ಲಲು ಸಾಧ್ಯವಾಗುವುದೇ ಇಲ್ಲ. ಆದರೆ ಈಶ್ವರಪ್ಪ ಆ ಧೈರ್ಯ ತೋರುತ್ತಾರೆಯೇ? ಸದಾನಂದ ಗೌಡ, ಸಿ.ಟಿ. ರವಿ, ಪ್ರತಾಪ ಸಿಂಹ ಅವರ ಸಾಮರ್ಥ್ಯ ಅರಿತೇ ಹೈಕಮಾಂಡ್ ಅವರನ್ನು ನಿರ್ಲಕ್ಷಿಸಿರಬಹುದು. ನರೇಂದ್ರ ಮೋದಿಯವರ ಕಾರಣಕ್ಕೆ ಬಿಜೆಪಿಯಲ್ಲಿನ ಬೆಂಕಿ-ಬಿರುಗಾಳಿ ತಾತ್ಕಾಲಿಕವಾಗಿ ಶಮನಗೊಂಡಂತೆ ಗೋಚರಿಸಬಹುದು. ಚುನಾವಣೆಯ ನಂತರ ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಮತ್ತಷ್ಟು ಗ್ಯಾಂಗಪ್ ಆಗಿ ಬಣ ರಾಜಕಾರಣ ಹೆಚ್ಚಾಗಬಹುದು. ಅದರ ಮುನ್ಸೂಚನೆ ಎನ್ನುವಂತೆ ಬಿಜೆಪಿಯ ಭಿನ್ನಮತೀಯರ ವಕ್ತಾರರಂತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ‘‘ನಾನೇ ಕರ್ನಾಟಕದ ಮುಖ್ಯಮಂತ್ರಿ’’ ಎಂದು ಘೋಷಿಸಿಕೊಂಡಿದ್ದಾರೆ. ಅಪ್ಪ ಮಕ್ಕಳ ಪ್ರಾಬಲ್ಯ ತಗ್ಗಿಸುವುದೇ ನನ್ನ ಗುರಿ ಎಂದು ಹೇಳಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ಮುಗಿದ ಮೇಲೆ ಯಡಿಯೂರಪ್ಪ-ವಿಜಯೇಂದ್ರ ಮತ್ತೆ ಟಾರ್ಗೆಟ್ ಆಗಲಿದ್ದಾರೆ ಎಂಬುದು ನಿಶ್ಚಿತ. ಚುನಾವಣೆಯ ಹೊಸ್ತಿಲಲ್ಲಿ ಬಸನಗೌಡ ಯತ್ನಾಳ್; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತವರ ಕುಟುಂಬದ ವಿರುದ್ಧ ರಾಜಾರೋಷವಾಗಿ ಗುಡುಗುತ್ತಾರೆಂದರೆ ಹೈಕಮಾಂಡ್ ಬಲ ಅವರೊಂದಿಗೆ ಇದೆ ಎಂದೇ ಅರ್ಥ. ಈ ಹುನ್ನಾರವನ್ನು ರಾಜ್ಯದ ಲಿಂಗಾಯತರು ಅರಿಯಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News