ಬಿಜೆಪಿಯಿಂದ ಮಹಾಕವಿಗೆ ಅವಮಾನ

ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರೇ ಮತಾಂತರದ ರೂವಾರಿ. ತಳ ಸಮುದಾಯದ ಅಸಂಖ್ಯಾತ ಜನರಿಗೆ ಲಿಂಗಧಾರಣೆ ಮಾಡಿದ್ದರಿಂದ ಲಿಂಗಾಯತ ಧರ್ಮ ವ್ಯಾಪಕವಾಗಿ ಆವರಿಸಲು ಸಾಧ್ಯವಾಗಿದ್ದು. ಇಂತಹ ನಾಡಿನಲ್ಲಿ ಕೋಮುವಾದಿ ರಾಜಕಾರಣ ಯಶಸ್ಸು ಕಾಣುವುದಿಲ್ಲ. ಭಾರತೀಯ ಜನತಾ ಪಕ್ಷದ ಮುಖಂಡರಿಗೆ ರಾಜಕಾರಣ ಮಾಡುವ ಇರಾದೆ ಇದ್ದರೆ ಅಭಿವೃದ್ಧಿ ರಾಜಕಾರಣ ಮಾಡಲಿ. ಸರ್ವಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕದಲ್ಲಿ ಮಂದಿರ, ಮಸೀದಿ, ಚರ್ಚ್‌ಗಳು ಪ್ರಾರ್ಥನೆಗಾಗಿ ಇವೆ, ಮತಾಂಧ ರಾಜಕಾರಣಕ್ಕಾಗಿಯಲ್ಲ.

Update: 2024-02-24 06:44 GMT

ದಯವಿಲ್ಲದ ಧರ್ಮವದಾವುದಯ್ಯ

ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ

ದಯವೇ ಧರ್ಮದ ಮೂಲವಯ್ಯ

ಕೂಡಲಸಂಗಮದೇವನಂತಲ್ಲದೊಲ್ಲನಯ್ಯ

-ಬಸವಣ್ಣ

ಕರ್ನಾಟಕದ ಭಾರತೀಯ ಜನತಾ ಪಕ್ಷದ ಮುಖಂಡರಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ, ಸಿ.ಟಿ. ರವಿ ಮುಂತಾದವರು ಸಾಂಸ್ಕೃತಿಕ ನಾಯಕ ಬಸವಣ್ಣನವರ ನಾಲ್ಕಾರು ವಚನಗಳನ್ನು ಓದಿ ಮನನ ಮಾಡಿಕೊಂಡಿದ್ದರೆ ಕೆರಗೋಡು ಹನುಮಧ್ವಜ ಪ್ರಕರಣ, ಮಂಗಳೂರು ಸಂತ ಜೆರೋಸಾ ಶಾಲಾ ಪ್ರಕರಣಗಳು ವಿವಾದದ ಸ್ವರೂಪ ಪಡೆದು ಸಾಮರಸ್ಯ ಹಾಳು ಮಾಡುತ್ತಿರಲಿಲ್ಲ. ಬಸವಣ್ಣನವರ ಹೆಸರನ್ನಿಟ್ಟುಕೊಂಡಿರುವ ಬಸವರಾಜ ಬೊಮ್ಮಾಯಿ ಸಾಮರಸ್ಯ ಕದಡುವ ಮೂಲಕ ಬಸವಾದಿ ಶರಣರು ಮತ್ತು ತಂದೆ ತಾಯಿಯ ಸದ್ಭಾವನೆಯನ್ನು ಅಪಮಾನಿಸುತ್ತಿದ್ದಾರೆ. 2023ರ ವಿಧಾನ ಸಭೆಯ ಚುನಾವಣೆಯಲ್ಲಿ ಕರ್ನಾಟಕದ ಜನ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದೇ ಬಸವಾದಿ ಶರಣರ ಆಶಯಗಳಿಗೆ ವಿರುದ್ಧವಾಗಿ ಕೋಮುವಾದಿ ರಾಜಕಾರಣ ಮಾಡಿದ್ದರಿಂದ. ಕನ್ನಡ ಪ್ರಜ್ಞೆಯಲ್ಲೇ ಸರ್ವ ಜನಾಂಗದ ಶಾಂತಿಯ ತೋಟದ ಕನಸುಗಳಿವೆ.ಕನ್ನಡಿಗರ ಧರ್ಮ ಪ್ರಜ್ಞೆ ವಿಶಾಲ ಮನೋಭಾವದ ತಳಹದಿಯ ಮೇಲೆ ರೂಪುಗೊಂಡಿದೆ.

ಭಾರತೀಯ ಜನಸಂಘದ ಕಾಲದಿಂದಲೂ ಯಡಿಯೂರಪ್ಪ, ಬಿ.ಬಿ. ಶಿವಪ್ಪ, ಕೆ. ಎಸ್. ಈಶ್ವರಪ್ಪ ಮುಂತಾದವರು ರಾಜಕಾರಣ ಮಾಡುತ್ತಿದ್ದಾರೆ. ಯಡಿಯೂರಪ್ಪ-ಅನಂತಕುಮಾರ್ ಜೋಡಿ ಬಿಜೆಪಿಗೆ ಜನತಾ ಪರಿವಾರದ ಹಲವರನ್ನು ಸೇರಿಸಿಕೊಂಡ ಮೇಲೆಯೇ ಆ ಪಕ್ಷ ಜನತೆಯ ಪ್ರೀತಿ-ವಿಶ್ವಾಸಕ್ಕೆ ಪಾತ್ರವಾಗುತ್ತಿರುವುದು. ಅಭಿವೃದ್ಧಿ ರಾಜಕಾರಣ ಮಾಡುವುದಾಗಿ ಯಡಿಯೂರಪ್ಪ-ಅನಂತ ಕುಮಾರ್ ಅವರು ಪದೇ ಪದೇ ಹೇಳಿದ ಮೇಲೆಯೇ ಅಧಿಕಾರಕ್ಕೆ ಹತ್ತಿರವಾಗಿದ್ದು. ಅಧಿಕಾರ ಸಿಕ್ಕ ಮೇಲೆ ಧರ್ಮದ ಹೆಸರಿನ ರಾಜಕಾರಣ ಮಾಡಿದ್ದರಿಂದ ಜನ ಬಿಜೆಪಿಗೆ ಸಂಪೂರ್ಣ ಬೆಂಬಲ ನೀಡುತ್ತಿಲ್ಲ. 2008ರಲ್ಲಿ ಯಡಿಯೂರಪ್ಪ ವಚನಭ್ರಷ್ಟತೆ ಅಸ್ತ್ರ ಮುಂದೆ ಮಾಡಿ ಗೋಳಾಡಿದ್ದರಿಂದ ಲಿಂಗಾಯತರು ಕರುಣೆ ತೋರಿ ಬಿಜೆಪಿಯನ್ನು ಬೆಂಬಲಿಸಿದ್ದರು. ಅಷ್ಟಾಗಿಯೂ ಬಿಜೆಪಿಗೆ ಸರಳ ಬಹುಮತ ದಕ್ಕಲಿಲ್ಲ. 110 ಶಾಸಕರ ಬಲ ಹೊಂದಿದ್ದ ಬಿಜೆಪಿ ಆಪರೇಷನ್ ಕಮಲ ಮಾಡಿ ಬೆರಕೆ ಸರಕಾರ ಮಾಡಿತ್ತು. ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಕೋಮುವಾದಿ ಶಕ್ತಿಗಳು ಯಡಿಯೂರಪ್ಪನವರ ವಿರುದ್ಧವೇ ಷಡ್ಯಂತ್ರ ರೂಪಿಸಿ ಜೈಲುಪಾಲು ಮಾಡಿದರು. ನಂತರ ಮುಖ್ಯಮಂತ್ರಿಗಳಾದ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಸೂತ್ರದ ಗೊಂಬೆಗಳಂತೆ ಕಾರ್ಯನಿರ್ವಹಿಸಿದರು. ಬಿಜೆಪಿಗೆ ಸೆಡ್ಡು ಹೊಡೆದ ಯಡಿಯೂರಪ್ಪ ಕೆಜೆಪಿ ಕಟ್ಟಿ ಆ ಪಕ್ಷ ಸಂಪೂರ್ಣ ನೆಲಕಚ್ಚುವಂತೆ ಮಾಡಿದರು. ಬಿಜೆಪಿಯೊಳಗಿನ ಮತಾಂಧ ಶಕ್ತಿಗಳು ಜನತೆಯ ಪ್ರೀತಿಗೆ ಪಾತ್ರರಾಗಲಿಲ್ಲ. ಅನಿವಾರ್ಯವಾಗಿ ಯಡಿಯೂರಪ್ಪರ ಮೊರೆ ಹೋದರು.

ಯಡಿಯೂರಪ್ಪ ಮತ್ತೆ ಬಿಜೆಪಿಗೆ ಬಂದ ಮೇಲೆಯೇ ಈ ಪಕ್ಷಕ್ಕೆ ಜೀವ ಬಂತು. 2014ರ ಲೋಕಸಭಾ ಚುನಾವಣೆಯಲ್ಲಿ ಬಂಪರ್ ಬೆಳೆ ತೆಗೆದರು. 2018ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಯಡಿಯೂರಪ್ಪ ಮುಂದಿನ ಮುಖ್ಯಮಂತ್ರಿ ಎಂದು ವ್ಯಾಪಕ ಪ್ರಚಾರ ಮಾಡಿದರು. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದಾಗಿ ಪುಂಖಾನುಪುಂಖ ಭರವಸೆ ನೀಡಿದರು. ಅಷ್ಟಕ್ಕೂ ಆ ಚುನಾವಣೆಯಲ್ಲಿ ಕೋಮುವಾದಿ ಅಜೆಂಡಾವನ್ನು ಮುನ್ನೆಲೆಗೆ ತರಲಿಲ್ಲ. ಅಷ್ಟಾಗಿಯೂ ಕರ್ನಾಟಕದ ಮತದಾರ ಬಿಜೆಪಿಯನ್ನು ಒಪ್ಪಿಕೊಳ್ಳಲಿಲ್ಲ. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಹತ್ತಾರು ಬಾರಿ ಹೇಳಿದರೂ ಸ್ವತಃ ಲಿಂಗಾಯತರೇ ಬಿಜೆಪಿಯನ್ನು ಪೂರ್ಣ ಪ್ರಮಾಣದಲ್ಲಿ ನಂಬಲಿಲ್ಲ. ಹಾಗಾಗಿ 2018ರ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಎಷ್ಟೇ ತಿಪ್ಪರಲಾಗ ಹಾಕಿದರೂ ಕೇವಲ 104 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲಾರರು, ಒಂದು ವೇಳೆ ಮಾಡಿದರೂ ಮುಕ್ತವಾಗಿ ಆಡಳಿತ ನಡೆಸಲು ಬಿಡಲಾರರು ಎಂದು ಲಿಂಗಾಯತರು ಭಾವಿಸಿದ್ದರಿಂದ ಬಿಜೆಪಿಗೆ ಬೆಂಬಲಿಸಲಿಲ್ಲ. ಕಾಂಗ್ರೆಸ್ ಸರಕಾರ ವೀರಶೈವ-ಲಿಂಗಾಯತ ವಿವಾದ ಹುಟ್ಟು ಹಾಕದೆ ಹೋಗಿದ್ದರೆ 2018ರ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನಗಳೂ ಸಿಗುತ್ತಿರಲಿಲ್ಲ. ಕರ್ನಾಟಕದ ಪ್ರಜ್ಞಾವಂತ ಮತದಾರ ಬಿಜೆಪಿಯ ಕೋಮುವಾದಿ ಅಜೆಂಡಾವನ್ನು ಎರಡು ಬಾರಿ ಅರೆಮನಸ್ಸಿನಿಂದ ತಿರಸ್ಕರಿಸಿದ್ದರು. ಯಾಕೆಂದರೆ, ಯಡಿಯೂರಪ್ಪ ಮುಖ ತೋರಿಸಲಾಗಿತ್ತು. 2023ರ ಚುನಾವಣೆಯಲ್ಲಿ ಯಡಿಯೂರಪ್ಪ ಮೂಲೆಗುಂಪಾಗಿದ್ದರು. ಬಸವರಾಜ ಬೊಮ್ಮಾಯಿ ಸೂತ್ರದ ಬೊಂಬೆ ಆಗಿದ್ದರು. ಮೊದಲ ಬಾರಿಗೆ ಬಿಜೆಪಿ ಕರ್ನಾಟಕದಲ್ಲಿ ತನ್ನ ಕೋಮುವಾದಿ ಅಜೆಂಡಾವನ್ನು ಮುನ್ನೆಲೆಗೆ ತಂದಿತು.

ಬೊಮ್ಮಾಯಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ಪ್ರಾಮುಖ್ಯತೆ ಪಡೆದುಕೊಂಡವು. ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ಕಡಿಮೆ ದರದಲ್ಲಿ ಸರಕಾರಿ ಗೋಮಾಳ ಜಮೀನನ್ನು ಕಾನೂನುಬಾಹಿರವಾಗಿ ನೀಡಲಾಯಿತು. ಚುನಾವಣಾ ಪೂರ್ವದಲ್ಲಿ ಬಿಜೆಪಿಗೆ ಕರ್ನಾಟಕವನ್ನು ‘ಮಾದರಿ’ ರಾಜ್ಯವನ್ನಾಗಿ ರೂಪಿಸುವುದು ಮುಖ್ಯವನಿಸಲಿಲ್ಲ. ಆ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ‘‘ಅಭಿವೃದ್ಧಿ ರಾಜಕಾರಣದ ಬಗ್ಗೆ ಮಾತನಾಡಬೇಡಿ, ಹಿಜಾಬ್, ಹಲಾಲ್, ಜಟ್ಕಾ, ಟಿಪ್ಪು ಸುಲ್ತಾನ್ ವಿಷಯಗಳು ಮುನ್ನೆಲೆಗೆ ಬರಬೇಕು’’ ಎಂದು ಬಹಿರಂಗವಾಗಿ ಕಾರ್ಯಕರ್ತರಿಗೆ ಕರೆನೀಡಿದರು. ಅಭಿವೃದ್ಧಿ ಕೆಲಸಗಳು ಆಗಿರಲಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಆ ಸಮುದಾಯಕ್ಕೆ ನಿರಾಸೆಯನ್ನುಂಟು ಮಾಡಿದ್ದರು. ಲಿಂಗಾಯತರು ಸೇರಿದಂತೆ ಕೆಲ ಸಮುದಾಯಗಳು ಬಿಜೆಪಿಗೆ ಮತ ನೀಡುವುದಿಲ್ಲ ಎಂಬುದು ಖಾತ್ರಿಯಾದ ಮೇಲೆಯೇ ಸಂಘ ಪರಿವಾರದವರು ಉತ್ತರ ಪ್ರದೇಶ ಮಾದರಿಯ ತಂತ್ರಗಾರಿಕೆ ರೂಪಿಸಿದರು. ಜಾತಿ ಸಮೀಕರಣ ಬಿಜೆಪಿಗೆ ಪೂರಕವಾಗಿಲ್ಲ ಎಂಬುದನ್ನು ಅರಿತ ಮೇಲೆ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣವಾಗುವಂತೆ ಕಥಾನಕಗಳನ್ನು ಸೆಟ್ ಮಾಡತೊಡಗಿದರು. ಹಿಂದೂ ಅಸ್ಮಿತೆ ಮುನ್ನೆಲೆಗೆ ತಂದರು. ಹಿಂದೂ ಎಂಬುದು ಮುಖ್ಯವಾಗಬೇಕು; ಬಡತನ, ನಿರುದ್ಯೋಗ, ಅಭಿವೃದ್ಧಿ, ಮಕ್ಕಳ ಭವಿಷ್ಯ, ನಗಣ್ಯವಾಗಬೇಕು ಆ ಕಾರಣಕ್ಕೆ ಬಡವರಿಗೆ ಅಷ್ಟೋ ಇಷ್ಟೋ ಅನುಕೂಲವಾಗುವ ಗ್ಯಾರಂಟಿಗಳನ್ನೇ ಗೇಲಿ ಮಾಡಿದರು. ಉರಿ ಗೌಡ-ನಂಜೇಗೌಡ ಹಲಾಲ್-ಜಟ್ಕಾ, ಹಿಜಾಬ್, ಮಸೀದಿಗಳಲ್ಲಿ ಮಂದಿರ ಹುಡುಕಾಟದ ಕಥಾನಕಗಳು ಕೆಲಸ ಮಾಡಲಿಲ್ಲ. ಹಿಂದೂ-ಮುಸ್ಲಿಮ್ ಧ್ರುವೀಕರಣ ಆಗಲೇ ಇಲ್ಲ. ನರೇಂದ್ರ ಮೋದಿಯವರ ಭಾಷಣಗಳೂ ಪರಿಣಾಮ ಬೀರಲಿಲ್ಲ.

ಎಲ್ಲಾ ಬಗೆಯ ಅಸ್ತ್ರಗಳನ್ನು ಬಳಸಿಯೂ ಬಿಜೆಪಿ ಕೇವಲ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಅಂದರೆ ಕರ್ನಾಟಕದಲ್ಲಿ ಧರ್ಮದ ಹೆಸರಿನ ರಾಜಕಾರಣಕ್ಕೆ ಅವಕಾಶವಿಲ್ಲ ಎಂಬುದು ನಿಚ್ಚಳವಾಗಿ ಸಾಬೀತಾಗಿದೆ. ಸೋತ ಮೇಲಾದರೂ ಬಿಜೆಪಿಯವರು ಪಾಠ ಕಲಿಯಬೇಕಿತ್ತು. ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಒಂಭತ್ತು ತಿಂಗಳಾಯಿತು. ಅಭಿವೃದ್ಧಿಪರ ನಿಲುವಿನ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮತ್ತೆ ಹಿಂದೂ-ಮುಸ್ಲಿಮ್ ಧ್ರುವೀಕರಣಕ್ಕಾಗಿ ಕೋಮುವಾದಿ ರಾಜಕಾರಣವನ್ನೇ ಮುಂದುವರಿಸಿದೆ. ಕರ್ನಾಟಕವನ್ನು ಕರಾವಳಿಯನ್ನಾಗಿಸಲು ಹೊರಟಿದೆ. ಮಂಡ್ಯದ ಕೆರಗೋಡಿನ ಹನುಮಧ್ವಜ ಪ್ರಕರಣ, ಮಂಗಳೂರಿನ ಸಂತ ಜೆರೋಸಾ ಶಾಲಾ ವಿವಾದ ಬಿಜೆಪಿಯವರಿಗೆ ಮೊದಲ ಆದ್ಯತೆಯಾಗಿದೆ. ಕರ್ನಾಟಕದಲ್ಲಿ ಬರಗಾಲ ತಾಂಡವವಾಡುತ್ತಿದೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ರೈತರ ನೆರವಿಗೆ ಧಾವಿಸಬೇಕಿತ್ತು. ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯವರೂ ಕೋಮುವಾದಿ ರಾಜಕಾರಣದ ಭಾಗವಾಗಿದ್ದಾರೆ.

ಮಂಗಳೂರಿನ ಸಂತ ಜೆರೋಸಾ ಶಾಲೆಯ ವಿವಾದವನ್ನೇ ಗಮನಿಸಿ: ಆ ಶಾಲೆಯ ಆಂಗ್ಲ ಭಾಷೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಹಿಂದೂ ಧರ್ಮ ಮತ್ತು ದೇವರನ್ನು ಅಪಮಾನಿಸಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಗಲಾಟೆ ಮಾಡಿದರು. ಆ ಗಲಾಟೆಯಲ್ಲಿ ಮಕ್ಕಳು-ಪಾಲಕರನ್ನು ಸೇರಿಸಿಕೊಂಡರು. ಯಡಿಯೂರಪ್ಪ, ವಿಜಯೇಂದ್ರ, ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಅವರಿಗೆ ಕನಿಷ್ಠ ಪ್ರಮಾಣದ ಸಾಮಾನ್ಯ ಜ್ಞಾನ ಇದ್ದಿದ್ದರೆ ಶಾಸಕ ವೇದವ್ಯಾಸ ಕಾಮತರನ್ನು ಕರೆದು ಬುದ್ಧಿ ಹೇಳುತ್ತಿದ್ದರು. ಏಳನೇ ತರಗತಿಯ ಆಂಗ್ಲ ವಿಷಯದ ಪಠ್ಯಪುಸ್ತಕದಲ್ಲಿ; ಸಾಹಿತ್ಯಕ್ಕಾಗಿ ನೊಬೆಲ್ ಪುರಸ್ಕಾರಕ್ಕೆ ಭಾಜನರಾದ ರವೀಂದ್ರನಾಥ ಟಾಗೋರ್ ಅವರ ‘work is worship’ ಎಂಬ ಹೆಸರಿನ ಪದ್ಯ ಇದೆ. ಆ ಪದ್ಯವನ್ನು ಸಿಸ್ಟರ್ ಪ್ರಭಾ ಅವರು ಯಥಾವತ್ತಾಗಿ ಮಕ್ಕಳಿಗೆ ಪಾಠ ಮಾಡಿದ್ದಾರೆ. ಪ್ರಭಾ ಅವರ ಬದಲಿಗೆ ಬೇರೆ ಯಾರೇ ಶಿಕ್ಷಕರು ಪಾಠ ಮಾಡಿದರೂ ಅದರಲ್ಲಿರುವ ಒಟ್ಟು ಸಾರವನ್ನೇ ಕಲಿಸಬೇಕು. ಪದ್ಯದ ಭಾವಾರ್ಥ ಗಮನಿಸಿ: ತೊರೆದು ಬಿಡು ಆ ನಿನ್ನ ಮಂತ್ರ ಪಠಣವನ್ನು. ಸುಮ್ಮನೆ ಕುಳಿತುಕೊಳ್ಳಬೇಡ. ದೇವರು ಗುಡಿ, ಚರ್ಚು, ಮಸೀದಿಗಳಲ್ಲಿ ಇಲ್ಲ. ಕಣ್ಣನ್ನು ತೆರೆದು ನೋಡು ಇಲ್ಲಿ ಇದ್ದಾನೆ. ನೇಗಿಲ ಯೋಗಿಯೊಳಗೆ ಇದ್ದಾನೆ. ಕಠಿಣ ಪರಿಶ್ರಮಿಯಲ್ಲಿದ್ದಾನೆ. ಶುದ್ಧತೆಯ ಹೆಸರಿನಲ್ಲಿ ಮೈಗೆ ಸ್ನಾನ ಮಾಡುವವನಲ್ಲಿ ಇಲ್ಲ. ಮೂಢ ಮಡಿವಂತಿಕೆಯಲ್ಲಿ ಇಲ್ಲ. ಮೂಢ ಸಂಪ್ರದಾಯದಲ್ಲಿ ಇಲ್ಲ. ಇಳಿದು ಬಾ ಈ ಧೂಳಿನ ಮಣ್ಣಿಗೆ, ಪರಿಶ್ರಮಪಟ್ಟು ದುಡಿದು ಕೆಲಸ ಮಾಡಿದರೆ ನೀನು ದೇವರ ಕೃಪೆಗೆ ಪಾತ್ರನಾಗುತ್ತಿ.’’-ಈ ಕವಿತೆ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ಭಾರತೀಯ ಧಾರ್ಮಿಕ ಪರಂಪರೆಯಲ್ಲಿ ಸಗುಣ ಭಕ್ತಿ ಇರುವಂತೆ ನಿರ್ಗುಣ, ನಿರಾಕಾರ ಭಕ್ತಿಯೂ ಇದೆ. ಯಾವುದೇ ಸ್ವರೂಪದ ವರ್ಣನೆಯನ್ನು ಹೊಂದಿರದ, ಅಚಿಂತ್ಯನಾದ, ಅವ್ಯಕ್ತ ಸ್ವರೂಪನಾದ, ಪರಿಪೂರ್ಣನಾದ, ಅಚಲನಾದ ನಿರಾಕಾರನ ಉಪಾಸನೆಯನ್ನು ಮಾಡುವುದು ನಿರ್ಗುಣ ಭಕ್ತಿ ಎನಿಸಿದೆ. ಬಸವಾದಿ ಶರಣರು ನಿರ್ಗುಣ ಭಕ್ತಿಯ ಪ್ರತಿಪಾದಕರು. ಭಕ್ತಿ ಭಂಡಾರಿ ಎನಿಸಿದ ಬಸವಣ್ಣನವರ ಒಂದು ವಚನವನ್ನು ನೋಡಿ- ‘‘ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ, ಮಠದ ದೇವರು ದೇವರಲ್ಲ, ಪಂಚಲೋಹದಿಂದ ಮಾಡಿದ ದೇವರು ದೇವರಲ್ಲ, ಸೇತುಬಂಧ ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾದ ಪುಣ್ಯಕ್ಷೇತ್ರಗಳಲ್ಲಿರುವ ದೇವರುಗಳು ದೇವರಲ್ಲ. ತನ್ನ ತಾ ಅರಿತು ತಾನ್ಯಾರೆಂದು ತಿಳಿದೆಡೆೆ ತನಗೆ ತಾನೇ ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವಾ ಎಂಬುದೂ ದೇವರ ಬಗೆಗಿನ ಒಂದು ತಿಳುವಳಿಕೆ. ತತ್ವಪದಕಾರರು ‘‘ತನ್ನ ತಾ ತಿಳಿದ ಮೇಲೆ ಇನ್ನೇನು ಇನ್ನೇನು’’ ಎನ್ನುತ್ತಾರೆ. ಶಂಕರಾಚಾರ್ಯರು ‘‘ಅಹಂ ಬ್ರಹ್ಮಾಸ್ಮಿ’’-ನನ್ನೊಳಗಿನ ಆತ್ಮವೇ ಪರಬ್ರಹ್ಮ ಎಂದು ಹೇಳುವ ಮೂಲಕ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುತ್ತಾರೆ. ರಾಮಕೃಷ್ಣ ಪರಮಹಂಸರನ್ನು ಅಪಾರವಾಗಿ ಗೌರವಿಸುತ್ತಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಒಂದು ಪದ್ಯ ಹೀಗಿದೆ: ‘‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆೆಯೇ ನಮಗಿಂದು ದೇವಿ ಪೂಜಿಸುವ ಬಾರಾ ಬಾರಾ. ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು, ಹಾವುಗಳಿಗೆ ಹಾಲೆರೆದು ಪೂಜಿಸಾಯ್ತು, ಬಿಸಿಲು, ಮಳೆ, ಗಾಳಿ, ಬೆಂಕಿಯನೆಲ್ಲ ಬೇಡಿಯಾಯಿತು, ದಾಸರನು ಪೂಜಿಸಿಯೇ ದಾಸ್ಯವಾಯಿತು...’’ ಎನ್ನುವ ಕುವೆಂಪು ಅವರು ನಾಸ್ತಿಕರೇನಲ್ಲ. ‘ಶ್ರೀ ರಾಮಾಯಣ ದರ್ಶನಂ’ ಮಹಾ ಕಾವ್ಯ ಬರೆದು ಶ್ರೀರಾಮಚಂದ್ರನ ವ್ಯಕ್ತಿತ್ವವನ್ನು ವಿಸ್ತಾರ ಗೊಳಿಸಿದವರು.

ರವೀಂದ್ರನಾಥ ಟಾಗೋರ್ ಅವರ ‘work is worship’ ಪದ್ಯವನ್ನೇ ಹೋಲುವ ಒಂದು ಕವನವನ್ನು ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ರಚಿಸಿದ್ದಾರೆ. ಇದು ನಾಡಿನ ತುಂಬ ಜನಪ್ರಿಯವಾಗಿದೆ. ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎಂಬ ಶೀರ್ಷಿಕೆಯ ಈ ಪದ್ಯ ಹೀಗಿದೆ: ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ, ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ. ಎಲ್ಲಿದೆ ನಂದನ, ಎಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ. ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಿಗೆಗೆ, ಹತ್ತಿರವಿದ್ದರೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲ್ಲಿ’’-ಎಂಬ ಸಾಲು ದೇವರನ್ನು ನೋಡುವ ದೃಷ್ಟಿಕೋನ ಬದಲಾಯಿಸುತ್ತದೆ. ಬಸವಣ್ಣ, ರವೀಂದ್ರನಾಥ ಟಾಗೋರ್, ಕುವೆಂಪು, ಜಿ.ಎಸ್. ಶಿವರುದ್ರಪ್ಪ ದೇವರಲ್ಲಿ ನಂಬಿಕೆ ಇರುವವರು. ದೇವರನ್ನು ಭಿನ್ನ ನೆಲೆಯಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ. ಬಿಜೆಪಿಯವರು ಆಳದಲ್ಲಿ ಬಸವಣ್ಣ, ರವೀಂದ್ರನಾಥ ಟಾಗೋರ್, ಕುವೆಂಪು, ಜಿ.ಎಸ್. ಶಿವರುದ್ರಪ್ಪ ಅವರ ವಿಚಾರಧಾರೆಗಳನ್ನು ವಿರೋಧಿಸುತ್ತಾರೆ. ಆದರೆ ವೋಟ್‌ಬ್ಯಾಂಕ್ ಕಾರಣಕ್ಕೆ ಬಹಿರಂಗವಾಗಿ ವಿರೋಧಿಸುವ ಧೈರ್ಯ ತೋರಲಾರರು. ಹಿಂದೂ-ಮುಸ್ಲಿಮ್ ಧ್ರುವೀಕರಣಕ್ಕಾಗಿ ಮಂಗಳೂರಿನ ಸಂತ ಜೆರೋಸಾ ಶಾಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ‘work is worship’ ಪದ್ಯವನ್ನು ಪಾಠ ಮಾಡಿದ ಸಿಸ್ಟರ್ ಪ್ರಭಾ ಅವರನ್ನು ಗುರಿ ಮಾಡಿದ್ದಾರೆ. ಇದೇ ಪದ್ಯವನ್ನು ಬೇರೆ ಬೇರೆ ಸಮುದಾಯದವರು ನಡೆಸುವ ಶಾಲೆಗಳಲ್ಲಿ ಲಿಂಗಾಯತ, ಬ್ರಾಹ್ಮಣ, ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಶಿಕ್ಷಕ/ಶಿಕ್ಷಕಿ ಕಲಿಸುತ್ತಾರೆ.

ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಶಾಲೆ, ಕ್ರಿಶ್ಚಿಯನ್ ಸಮುದಾಯದ ಶಿಕ್ಷಕಿಯನ್ನೇ ಟಾರ್ಗೆಟ್ ಮಾಡಿದ್ದು ಸಂಕುಚಿತ ನೆಲೆಯ ಮತಾಂಧತೆಯಷ್ಟೇ. ಪದ್ಯ ಬರೆದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಹಿಂದೂ. ಬಿಜೆಪಿಯವರಿಗೆ ಪದ್ಯದ ಅರ್ಥ ಹಿಂದೂ ವಿರೋಧಿಯೆನಿಸಿದರೆ ಅದನ್ನು ಬರೆದ ಕವಿಯ ಜೊತೆಗೆ ತಕರಾರು ಹೊಂದಿರಬೇಕು. ಆ ಪದ್ಯವನ್ನು ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಪರಿಶೀಲನೆಗೆ ಒಳಪಟ್ಟು ಪಠ್ಯವಾಗಿ ಮುಂದುವರಿದಿದೆ. ಟಾಗೋರ್ ಅವರ ಪದ್ಯ ಪಾಠ ಮಾಡುವ ಅಸಂಖ್ಯಾತ ಶಿಕ್ಷಕರನ್ನು ಬಿಟ್ಟು ಪ್ರಭಾ ಅವರನ್ನು ಟಾರ್ಗೆಟ್ ಮಾಡಿದ್ದು ದುರುದ್ದೇಶದಿಂದ ಕೂಡಿದೆ. ಡಿ.ಸಿ., ಎಸ್‌ಪಿ ಶಾಸಕ ವೇದವ್ಯಾಸ ಕಾಮತರ ಪುಂಡಾಟಿಕೆಗೆ ಅವಕಾಶವನ್ನೇ ನೀಡಬಾರದಿತ್ತು. ಬಸವಾದಿ ಶರಣರ ಅನೇಕ ಕ್ರಾಂತಿಕಾರಿ ವಚನಗಳು ಪಠ್ಯಪುಸ್ತಕದಲ್ಲಿ ಸೇರಿಕೊಂಡಿವೆ. ಪಾಠ ಮಾಡುವ ಶಿಕ್ಷಕರನ್ನು ಗುರಿಯಾಗಿಸಿ ತೊಂದರೆ ಕೊಡಬಹುದೇ? ರೆವರೆಂಡ್ ಫಾದರ್‌ಗೆ ಶಾಸಕ ಮತ್ತು ಅವರ ಹಿಂಬಾಲಕರು ಕಟು ಮಾತುಗಳಲ್ಲಿ ನಿಂದಿಸಿದ್ದಾರೆ. ಸಂತ ಜೆರೋಸಾ ಶಾಲೆಯ ಸಮಸ್ತ ಶಿಕ್ಷಕರ ಆತ್ಮಬಲ ಕುಂದಿಸಿದ್ದಾರೆ. ಸರಕಾರ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.

ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರೇ ಮತಾಂತರದ ರೂವಾರಿ. ತಳ ಸಮುದಾಯದ ಅಸಂಖ್ಯಾತ ಜನರಿಗೆ ಲಿಂಗಧಾರಣೆ ಮಾಡಿದ್ದರಿಂದ ಲಿಂಗಾಯತ ಧರ್ಮ ವ್ಯಾಪಕವಾಗಿ ಆವರಿಸಲು ಸಾಧ್ಯವಾಗಿದ್ದು. ಇಂತಹ ನಾಡಿನಲ್ಲಿ ಕೋಮುವಾದಿ ರಾಜಕಾರಣ ಯಶಸ್ಸು ಕಾಣುವುದಿಲ್ಲ. ಭಾರತೀಯ ಜನತಾ ಪಕ್ಷದ ಮುಖಂಡರಿಗೆ ರಾಜಕಾರಣ ಮಾಡುವ ಇರಾದೆ ಇದ್ದರೆ ಅಭಿವೃದ್ಧಿ ರಾಜಕಾರಣ ಮಾಡಲಿ. ಸರ್ವಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕದಲ್ಲಿ ಮಂದಿರ, ಮಸೀದಿ, ಚರ್ಚ್‌ಗಳು ಪ್ರಾರ್ಥನೆಗಾಗಿ ಇವೆ, ಮತಾಂಧ ರಾಜಕಾರಣಕ್ಕಾಗಿಯಲ್ಲ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News