ಮಹಿಳೆಯರ ಬರ್ಬರ ಹತ್ಯೆ: ಹಂತಕರಿಗೆ ಕಠಿಣ ಶಿಕ್ಷೆ...

ಜನಸಮುದಾಯಗಳಿಗಿರುವ ಸಹಜ ವಿವೇಕ, ಸಂವೇದನಾಶೀಲತೆ, ಅಂತಃಕರಣ ಕೆಲ ಮಾಧ್ಯಮದವರಿಗೆ, ರಾಜಕಾರಣಿಗಳಿಗೆ ಇದ್ದಿದ್ದರೆ ಕಾನೂನಿನ ಕುಣಿಕೆ ಬಲವಾಗಿರುತ್ತಿತ್ತು. ನ್ಯಾಯ ಪ್ರಕ್ರಿಯೆ ನಿಧಾನವಾಗುತ್ತಿರಲಿಲ್ಲ. ಕಾನೂನು ಕಠೋರವಾಗಿದ್ದರೆ ಪ್ರವೀಣ್ ಚೌಗುಲೆ, ಫಯಾಝ್, ಪ್ರದೀಪ್‌ನಂತಹ ಪಾಗಲ್ ಪ್ರೇಮಿಗಳು ಬರ್ಬರವಾಗಿ ಕೊಲೆ ಮಾಡುವ ದುಸ್ಸಾಹಸ ಮಾಡುತ್ತಿರಲಿಲ್ಲ. ಕಾನೂನಿನ ಭಯ ಯಾರಿಗೂ ಇಲ್ಲದ್ದರಿಂದ ಇಂತಹ ಅಮಾನುಷ ಕೃತ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಲಿವೆ.

Update: 2024-04-27 04:27 GMT

ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿದಾಗ, ಅವರ ಮೇಲೆ ಅತ್ಯಾಚಾರ ನಡೆದಾಗ ಜಾತಿ ಧರ್ಮದ ಎಲ್ಲೆ ಮೀರಿ ಜನಸಾಮಾನ್ಯರು ‘‘ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ತಕ್ಷಣವೇ ಗುಂಡಿಕ್ಕಿ ಕೊಲ್ಲಬೇಕು. ಪೊಲೀಸರಿಂದ ಸಾಧ್ಯವಾಗದಿದ್ದರೆ ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ನಮ್ಮ ಕೈಗೆ ಒಪ್ಪಿಸಿ ನಾವೇ ಕಠಿಣ ಶಿಕ್ಷೆ ನೀಡುತ್ತೇವೆ ಮುಂದೆ ಇಂತಹ ಕೃತ್ಯ ಎಸಗಲು ಹಿಂದೇಟು ಹಾಕಬೇಕು’’ ಎಂದು ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಬರ್ಬರ ಹತ್ಯೆಗೀಡಾದವರ ಕುಟುಂಬಸ್ಥರೂ ಕೊಲೆಗಡುಕರನ್ನು ‘ಎನ್‌ಕೌಂಟರ್’ ಮಾಡಿ ಕೊಲ್ಲಬೇಕೆಂದು ಅಪೇಕ್ಷಿಸುತ್ತಾರೆ. ನಿರ್ಭಯಾ ಪ್ರಕರಣದಿಂದ ಹಿಡಿದು ಎಪ್ರಿಲ್ 18ರಂದು ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ನೇಹಾ ಹಿರೇಮಠ್ ಅವರ ಬರ್ಬರ ಹತ್ಯೆಯ ಪ್ರಕರಣಗಳಲ್ಲಿ ಜನಸಾಮಾನ್ಯರು ಮತ್ತು ಪಾಲಕರು ತಕ್ಷಣದ ನ್ಯಾಯಕ್ಕೆ ಹಂಬಲಿಸುತ್ತಾರೆ. ಆದರೆ ಸರಕಾರವಾಗಲಿ, ಪೊಲೀಸರಾಗಲಿ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ನಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲವೂ ಈ ನೆಲದ ಕಾನೂನಿನಂತೆ ನಡೆಯಬೇಕಾಗಿದ್ದರಿಂದ ಎಫ್‌ಐಆರ್, ತನಿಖೆ, ಚಾರ್ಜ್‌ಶೀಟ್, ನ್ಯಾಯಾಲಯದಲ್ಲಿನ ಸುದೀರ್ಘ ವಾದ-ವಿವಾದ, ಆಮೇಲೆ ತೀರ್ಪು. ಇಷ್ಟಕ್ಕೆ ಅಪರಾಧಿಗೆ ಕಠಿಣ ಶಿಕ್ಷೆ ದೊರೆಯುವುದಿಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ, ಮತ್ತೆ ವಾದ-ವಿವಾದ ತಲೆಚಿಟ್ಟು ಹಿಡಿಯುವಷ್ಟು ಅಲೆದಾಟ. ಕೆಲವೊಮ್ಮೆ ಸೂಕ್ತ ಸಾಕ್ಷ್ಯಾಧಾರವಿಲ್ಲದ್ದಕ್ಕೆ ಹಂತಕರಿಗೆ ಸಜೆ ಆಗುವುದಿಲ್ಲ. ಅಷ್ಟೊತ್ತಿಗೆ ಬಲಿಪಶುವಾದ ವ್ಯಕ್ತಿಯ ಕುಟುಂಬದವರು ಸರಕಾರ, ಪೊಲೀಸ್ ವ್ಯವಸ್ಥೆ ಮತ್ತು ನ್ಯಾಯ ಪ್ರಕ್ರಿಯೆ ಮೇಲಿನ ವಿಶ್ವಾಸವನ್ನೇ ಕಳೆದುಕೊಂಡು ಸಿನಿಕರಾಗಿ ಬಿಡುತ್ತಾರೆ.

ಕಳೆದ ನಾಲ್ಕೈದು ತಿಂಗಳ ಹಿಂದೆ ಉಡುಪಿಯ ನೇಜಾರಿನ ತೃಪ್ತಿ ಲೇಔಟ್‌ನ ಮನೆಯೊಂದರ ನಾಲ್ವರನ್ನು ಅಮಾನುಷವಾಗಿ ಕೊಲೆ ಮಾಡಲಾಯಿತು. ಹತ್ಯೆಗೀಡಾದವರು ಒಬ್ಬ ತಾಯಿ ಮತ್ತು ಮೂರು ಜನ ಮಕ್ಕಳು. ಮೂರು ಜನ ಮಕ್ಕಳಲ್ಲಿ ಒಬ್ಬ ಹುಡುಗ. ತಾಯಿ ಹಸೀನಾ ಮಕ್ಕಳಾದ ಐನಾಝ್, ಅಫ್ನಾನ್ ಮತ್ತು ಅಸೀಮ್ ಮನೆಯಲ್ಲಿರುವಾಗಲೇ ಬಂದ ಹಂತಕ ಪ್ರವೀಣ್ ಚೌಗುಲೆ ಕೊಚ್ಚಿ ಕೊಚ್ಚಿ ಕೊಲೆಗೈದಿದ್ದಾನೆ. ಪೊಲೀಸರು ಹಂತಕನನ್ನು ಬಂಧಿಸಿದ್ದಾರೆ. ಹೊರದೇಶದಲ್ಲಿದ್ದ ಮನೆ ಯಜಮಾನ ನೂರ್ ಮುಹಮ್ಮದ್ ನೇಜಾರಿಗೆ ಬಂದು ಎಲ್ಲ ವಿಧಿ ವಿಧಾನಗಳನ್ನು ಪೂರೈಸಿದ್ದಾರೆ. ಸ್ಥಳ ಮಹಜರಿಗೆಂದು ಹಂತಕ ಪ್ರವೀಣ್ ಚೌಗುಲೆಯನ್ನು ಪೊಲೀಸರು ನೇಜಾರಿಗೆ ಕರೆತಂದಾಗ ಜನಸಾಮಾನ್ಯರು ಅಕ್ಷರಶಃ ದಂಗೆ ಎದ್ದಿದ್ದರು. ಮುಸ್ಲಿಮರು ಸೇರಿದಂತೆ ಆ ಊರಿನ ಎಲ್ಲಾ ಸಮುದಾಯದ ಜನರು ಒಕ್ಕೊರಲಿನಿಂದ ಹೇಳಿದ್ದು- ‘‘ಹಂತಕನನ್ನು ನಮ್ಮ ಕೈಗೆ ಒಪ್ಪಿಸಿ. ನಾವೇ ಶಿಕ್ಷೆ ನೀಡುತ್ತೇವೆ. ನಮ್ಮ ಕೈಗೆ ಒಪ್ಪಿಸುವುದಿಲ್ಲವೆಂದರೆ ಹಂತಕನನ್ನು ತಕ್ಷಣವೇ ಎನ್‌ಕೌಂಟರ್ ಮಾಡಿ. ಗುಂಡಿಟ್ಟು ಕೊಲ್ಲಿ’’ ಎಂದು. ಆಕ್ರೋಶಗೊಂಡ ಜನಸಾಮಾನ್ಯರನ್ನು ನಿಯಂತ್ರಿಸುವುದೇ ಪೊಲೀಸರಿಗೆ ಕಷ್ಟವಾಗಿತ್ತು. ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಹುಡುಗನ ಬರ್ಬರ ಕೊಲೆಯಾದರೂ ರಾಜ್ಯದ ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕಂಬನಿ ಮಿಡಿಯಲಿಲ್ಲ. ಅಷ್ಟೇ ಏಕೆ ಆ ಬರ್ಬರ ಹತ್ಯೆಯ ಬಗ್ಗೆ ಅವರು ಒಮ್ಮೆಯೂ ಮಾತನಾಡಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಂತ್ರಸ್ತರ ಮನೆಗೆ ಭೇಟಿ ಕೊಡುವುದು ಒತ್ತಟ್ಟಿಗಿರಲಿ ರಾಜ್ಯಾಧ್ಯಕ್ಷ ಬಿ. ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿ, ಸುನೀಲ್ ಕುಮಾರ್ ಆ ಪ್ರಕರಣದ ಬಗ್ಗೆ ಸಂತಾಪವನ್ನೂ ವ್ಯಕ್ತಪಡಿಸಲಿಲ್ಲ.

ಯಾಕೆಂದರೆ ಆಗ ಚುನಾವಣೆಯ ಸಮಯವಾಗಿರಲಿಲ್ಲ. ಗೃಹಮಂತ್ರಿಯೇ ಮೌನಕ್ಕೆ ಶರಣಾದ ಮೇಲೆ ಉಳಿದ ಕಾಂಗ್ರೆಸ್ ಮುಖಂಡರು ಯಾಕೆ ತಲೆ ಕೆಡಿಸಿಕೊಂಡಾರು? ನೇಜಾರಿನಲ್ಲಿ ಬರ್ಬರ ಹತ್ಯೆಗೆ ಒಳಗಾದ ನಾಲ್ವರು ಮುಸ್ಲಿಮ್ ಸಮುದಾಯಕ್ಕೆ ಸೇರಿದವರಾಗಿದ್ದರು. ಕೊಲೆಗಡುಕ ಪ್ರವೀಣ್ ಚೌಗುಲೆ ಹಿಂದೂ ಸಮುದಾಯಕ್ಕೆ ಸೇರಿದವ. ನೇಜಾರು-ಉಡುಪಿಯ ಸಮಸ್ತ ಹಿಂದೂ-ಮುಸ್ಲಿಮರು ಆ ನಾಲ್ಕು ಜೀವಗಳ ಕಗ್ಗೊಲೆಗೆ ಕಂಬನಿ ಮಿಡಿದರು. ತೀವ್ರ ಆಕ್ರೋಶ ವ್ಯಕ್ತಪಡಿಸಿ ಹಂತಕನನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಆಗ್ರಹಿಸಿದರು. ಆದರೆ ಗುಸು-ಗುಸು, ಪಿಸಿ-ಪಿಸಿ ಮಾತನಾಡಿದವರು ಕಾಮಾಲೆ ಕಣ್ಣಿನವರು ಮಾತ್ರ. ಆನಂತರ ನಡೆಸಿದ ಪೊಲೀಸ್ ತನಿಖೆ ಯಿಂದ ಎಲ್ಲ ವಿವರಗಳು ಹೊರಬಂದವು. ಆ ಎಲ್ಲಾ ವಿವರಗಳು ಹಂತಕ ಪ್ರವೀಣ್ ಚೌಗುಲೆ ನಡೆಸಿದ ಅಮಾನುಷ ಕೃತ್ಯಕ್ಕೆ ಸಮರ್ಥನೆ ಒದಗಿಸುವುದಿಲ್ಲ. ಆತನ ಶಿಕ್ಷೆಯ ಪ್ರಮಾಣವನ್ನೂ ತಗ್ಗಿಸುವುದಿಲ್ಲ. ಪ್ರವೀಣ್ ಚೌಗುಲೆ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದ. ನೂರ್ ಮುಹಮ್ಮದ್-ಹಸೀನಾ ದಂಪತಿಯ ಮಗಳು ಐನಾಝ್ ಅದೇ ಸಂಸ್ಥೆಯ ಉದ್ಯೋಗಿಯಾಗಿದ್ದರು. ಪ್ರವೀಣ್ ಚೌಗುಲೆ ಸಹೋದ್ಯೋಗಿಯಾಗಿದ್ದ. ಅವರಿಬ್ಬರ ನಡುವೆ ಪರಿಚಯ, ಸ್ನೇಹ ಇದ್ದ ಮಾತ್ರಕ್ಕೆ ಕೊಲ್ಲುವ ಹಂತಕ್ಕೆ ಹೋಗಬೇಕೇ? ಅಷ್ಟಕ್ಕೂ ಆತ ಸಂಸಾರಸ್ಥ, ಹೆಂಡತಿಗೆ ಕಿರುಕುಳ ಕೊಡುವ ಸ್ವಭಾವದವ. ಆತನ ಸ್ಯಾಡಿಸ್ಟ್ ಮನೋಭಾವ ಅರಿತ ಐನಾಝ್ ಅಂತರ ಕಾಯ್ದುಕೊಂಡಿರಬೇಕು. ಆತನಿಗೆ ಐನಾಝ್ ಬಗ್ಗೆ ನಿಜವಾಗಿಯೂ ಗೌರವಾದರ ಇದ್ದಿದ್ದರೆ ತನ್ನ ಪಾಡಿಗೆ ತಾನಿರಬೇಕಿತ್ತು. ಐನಾಝ್ ಮತ್ತು ಕುಟುಂಬದ ಮೂವರನ್ನು ಬರ್ಬರವಾಗಿ ಕೊಂದಿದ್ದು ಪ್ರವೀಣ್ ಚೌಗುಲೆಯ ವಿಕೃತಿಯನ್ನು ತೋರಿಸುತ್ತದೆ. ಸ್ನೇಹ, ಸಲುಗೆ, ಆತ್ಮೀಯತೆ ಯಾವ ಗಂಡಸಿಗೂ ಕೊಲ್ಲುವ ಅಧಿಕಾರ ನೀಡುವುದಿಲ್ಲ. ಆತನ ಕೃತ್ಯಕ್ಕೆ ಮನುಷ್ಯ ಸಂಬಂಧಗಳಲ್ಲಿ ಸಮರ್ಥನೆ ಎಂಬುದೇ ಇಲ್ಲ. ಅದು ಪುರುಷಾಹಂಕಾರದ ಪರಾಕಾಷ್ಠೆ. ಆ ಅಹಂಕಾರಕ್ಕೆ ಇನ್ನೊಬ್ಬರ ಜೀವ ಕಿತ್ತುಕೊಳ್ಳುವ ಯಾವ ಅಧಿಕಾರವೂ ಇಲ್ಲ. ಪಿತ್ತ ನೆತ್ತಿಗೇರಿ ಇನ್ನೊಬ್ಬರ ಬದುಕು ಕಸಿದುಕೊಂಡರೆ ಉಗ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಸಂದೇಶ ರವಾನೆಯಾದರೆ ಅಂತಹ ಕೃತ್ಯಗಳು ಮರುಕಳಿಸುವುದಿಲ್ಲ.

ಜನಸಮುದಾಯಗಳಿಗಿರುವ ಸಹಜ ವಿವೇಕ, ಸಂವೇದನಾಶೀಲತೆ, ಅಂತಃಕರಣ ಕೆಲ ಮಾಧ್ಯಮದವರಿಗೆ, ರಾಜಕಾರಣಿಗಳಿಗೆ ಇದ್ದಿದ್ದರೆ ಕಾನೂನಿನ ಕುಣಿಕೆ ಬಲವಾಗಿರುತ್ತಿತ್ತು. ನ್ಯಾಯ ಪ್ರಕ್ರಿಯೆ ನಿಧಾನವಾಗುತ್ತಿರಲಿಲ್ಲ. ಕಾನೂನು ಕಠೋರವಾಗಿದ್ದರೆ ಪ್ರವೀಣ್ ಚೌಗುಲೆ, ಫಯಾಝ್, ಪ್ರದೀಪ್‌ನಂತಹ ಪಾಗಲ್ ಪ್ರೇಮಿಗಳು ಬರ್ಬರವಾಗಿ ಕೊಲೆ ಮಾಡುವ ದುಸ್ಸಾಹಸ ಮಾಡುತ್ತಿರಲಿಲ್ಲ. ಕಾನೂನಿನ ಭಯ ಯಾರಿಗೂ ಇಲ್ಲದ್ದರಿಂದ ಇಂತಹ ಅಮಾನುಷ ಕೃತ್ಯಗಳು ಮತ್ತೆ ಮತ್ತೆ ಮರುಕಳಿಸುತ್ತಲಿವೆ. ರುಕ್ಸಾನಾ ಎಂಬ ಮಹಿಳೆಯನ್ನು ಪ್ರದೀಪ್ ಎಂಬಾತ ಪ್ರೀತಿ ನಿರಾಕರಿಸಿದ್ದಕ್ಕೆ ಬರ್ಬರವಾಗಿ ಕೊಂದು ತುಮಕೂರಿನಲ್ಲಿ ಸುಟ್ಟುಹಾಕಿದ್ದಾನೆ. ಕೊಲೆಗಡುಕರು ಮತ್ತು ಅತ್ಯಾಚಾರಿಗಳನ್ನು ಜಾತಿ, ಧರ್ಮ ಮತ್ತು ಮತಗಳಿಂದ ಗುರುತಿಸಿ ಪರ-ವಿರೋಧದ ಅಭಿಪ್ರಾಯ ವ್ಯಕ್ತಪಡಿಸುವುದೇ ಅತ್ಯಂತ ಅಪಾಯಕಾರಿ ಬೆಳವಣಿಗೆ. ಅಪಾಯಕಾರಿ ಮಾತ್ರವಲ್ಲ ಅಮಾನವೀಯ ಸಂಗತಿಯೂ ಹೌದು. ಸಾವಿನಲ್ಲಿ ರಾಜಕಾರಣ ಮಾಡುವುದು ಎಲ್ಲರಿಗೂ ರೂಢಿಯಾಗಿ ಬಿಟ್ಟಿದೆ. ಬರ್ಬರವಾಗಿ ಹತ್ಯೆಗೀಡಾದ ಜೀವಗಳನ್ನು ಹಿಂದೂ- ಮುಸ್ಲಿಮ್ ಎಂದು ವರ್ಗೀಕರಿಸಿ ರಾಜಕಾರಣ ಮಾಡುವುದು ಭಾರತೀಯ ಜನತಾ ಪಕ್ಷದವರ ಜಾಯಮಾನವೇ ಆಗಿದೆ. ಪ್ರತೀ ಹಿಂದೂ ಹೆಣ್ಣು ಜೀವದ ಹತ್ಯೆಯನ್ನು ‘ಲವ್ ಜಿಹಾದ್’ ಎಂದೇ ಪರಿಭಾವಿಸುವ ಬಿಜೆಪಿಯವರು ಹಸೀನಾ, ಐನಾಝ್, ಅಫ್ನಾನ್, ಅಸೀಮ್ ಮತ್ತು ರುಕ್ಸಾನಾ ಅವರ ಅಮಾನುಷ ಕೊಲೆಯನ್ನು ಯಾವ ದೃಷ್ಟಿಕೋನದಲ್ಲಿ ನೋಡುತ್ತಾರೆ? ನಾಲ್ವರನ್ನು ಬರ್ಬರವಾಗಿ ಕೊಂಡ ಪ್ರದೀಪ್ ಚೌಗುಲೆ ವಿಕೃತ ಮನಸ್ಸಿನ ಕೊಲೆಗಡುಕನೇ ಹೊರತು ಆತ ಹುಟ್ಟಿದ ಜಾತಿ, ಧರ್ಮದ ಪ್ರತಿನಿಧಿಯಾಗಲಾರ. ಆತ ನಡೆಸಿದ ಬರ್ಬರ ಕೃತ್ಯಕ್ಕಾಗಿ ಗುಂಡಿಕ್ಕಿ ಕೊಲ್ಲಬೇಕೆಂದು ಎಲ್ಲಾ ಜಾತಿ-ಧರ್ಮದವರು ಹಂಬಲಿಸಿದ್ದಾರೆ.

ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ತಾಂತ್ರಿಕ ವಿಶ್ವ ವಿದ್ಯಾನಿಲಯದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರನ್ನು ಹಾಡಹಗಲೇ ಕ್ಯಾಂಪಸ್‌ನಲ್ಲಿ ಎಪ್ರಿಲ್ 18ರಂದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಮಾಡಿದವ ಯಾವ ಧರ್ಮದವನೆಂಬುದು ಮುಖ್ಯವಲ್ಲ. ಫಯಾಝ್ ಕೂಡ ಅದೇ ಪ್ರವೀಣ್ ಚೌಗುಲೆಯಂತೆ ವಿಕೃತ ಮನಸ್ಸಿನ ಕೊಲೆಗಡುಕ ಮಾತ್ರ. ಆತ ಯಾವ ಕಾರಣಕ್ಕೆ ಕೊಂದ ಎಂಬುದೂ ಮುಖ್ಯವಲ್ಲ. ಭಾರತದ ಸಂವಿಧಾನದಲ್ಲಿ ಸಬೂಬುಗಳ ಮೂಲಕ ಯಾವ ಕೊಲೆಯನ್ನೂ ಸಮರ್ಥಿಸಲು ಸಾಧ್ಯವಿಲ್ಲ. ನೇಹಾ ಹಿರೇಮಠ್ ಅವರ ಬರ್ಬರ ಹತ್ಯೆಯ ಸಿಸಿಟಿವಿ ಫೂಟೇಜ್ ಎಲ್ಲರ ಮೊಬೈಲ್‌ನಲ್ಲಿ ಹರಿದಾಡಿದ್ದರಿಂದ ಅದೊಂದು ರಾಕ್ಷಸ ಕೃತ್ಯ ಎಂಬುದನ್ನು ಕಣ್ಣಾರೆ ಕಂಡು ಮನವರಿಕೆ ಮಾಡಿಕೊಂಡಿದ್ದಾರೆ. ಫಯಾಝ್‌ನ ವಿಕೃತಿಗೆ ಬೆಚ್ಚಿ ಬಿದ್ದಿರುವ ವಿದ್ಯಾರ್ಥಿಗಳು ರಕ್ಷಣೆಗೂ ಧಾವಿಸಿಲ್ಲ. ಕೇವಲ ಪ್ರೇಕ್ಷಕರಾಗಿದ್ದಾರೆ. ಸಾವಿರಾರು ವಿದ್ಯಾರ್ಥಿಗಳು ಓದುವ ಆ ಶಿಕ್ಷಣ ಸಂಸ್ಥೆಯಲ್ಲಿ ಶಸ್ತ್ರಸಜ್ಜಿತ ಸೆಕ್ಯೂರಿಟಿ ಗಾರ್ಡ್‌ಗಳು ಇಲ್ಲದಿರುವುದು ಬಹುದೊಡ್ಡ ಲೋಪ. ಸಮರ್ಪಕ ಸೆಕ್ಯೂರಿಟಿ ಗಾರ್ಡ್ ವ್ಯವಸ್ಥೆ ಇದ್ದಿದ್ದರೆ ನೇಹಾ ಹಿರೇಮಠ್ ಜೀವ ಉಳಿಸಬಹುದಿತ್ತು. ಶಿಕ್ಷಣದ ಹೆಸರಿನಲ್ಲಿ ಕೋಟಿ ಕೋಟಿ ಹಣ ಸಂಪಾದಿಸುವ ಕೆಎಲ್‌ಇ ಸಂಸ್ಥೆಯಲ್ಲಿ ಕನಿಷ್ಠ ಪ್ರಮಾಣದ ಭದ್ರತಾ ವ್ಯವಸ್ಥೆ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ. ಕೆಎಲ್‌ಇ ಸಂಸ್ಥೆ ಮಾತ್ರವಲ್ಲ ಕರ್ನಾಟಕದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಶಸ್ತ್ರಸಜ್ಜಿತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು.

ನೇಹಾ ಹಿರೇಮಠ್ ಅವರ ಅಮಾನುಷ ಕೊಲೆಯನ್ನು ಗೃಹಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸಂವೇದನಾಶೀಲರಾಗಿ ಪರಿಭಾವಿಸಿದ್ದರೆ ಬಿಜೆಪಿಯವರಿಗೆ ರಾಜಕೀಯ ಮಾಡಲು ಅವಕಾಶವೇ ದೊರೆಯುತ್ತಿರಲಿಲ್ಲ. ಹಾಗೆ ನೋಡಿದರೆ ಆ ಬರ್ಬರ ಹತ್ಯೆಯನ್ನು ತಂದೆ-ತಾಯಿಯ ಸ್ಥಾನದಲ್ಲಿ ನಿಂತು ಫೀಲ್ ಮಾಡಿದವರು ಹುಬ್ಬಳ್ಳಿಯ ಸಮಸ್ತ ಜನತೆ. ಅವರ ಆಕ್ರೋಶ, ಅಂತಃಕರಣ, ತಳಮಳ ಮನೆಯ ಮಗಳನ್ನು ಕಳೆದುಕೊಂಡಷ್ಟೇ ತೀವ್ರವಾಗಿತ್ತು. ಹಿಂದೂ-ಮುಸ್ಲಿಮ್ ಭೇದಭಾವ ಎಣಿಸದೆ ಸಮಸ್ತ ಹುಬ್ಬಳ್ಳಿ ಜನತೆ ನೇಹಾ ಹಿರೇಮಠ್ ಅವರ ಅಮಾನುಷ ಕೊಲೆಯನ್ನು ಖಂಡಿಸಿತು. ನೇಜಾರಿನಲ್ಲಿನ ಆಕ್ರೋಶವೇ ಜಾತಿ-ಧರ್ಮದ ಎಲ್ಲೆಕಟ್ಟುಗಳನ್ನು ಮೀರಿ ಹುಬ್ಬಳ್ಳಿಯ ಮನೆ ಮನಗಳಲ್ಲಿ, ಹಾದಿಬೀದಿಗಳಲ್ಲಿ ಪ್ರತಿಧ್ವನಿಸಿತು. ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಆ ನಗರದ ಎಲ್ಲರೂ- ‘‘ಹಂತಕ ಫಯಾಝ್‌ನನ್ನು ನಮಗೆ ಒಪ್ಪಿಸಿ ಅಥವಾ ಎನ್‌ಕೌಂಟರ್ ಮಾಡಿ ಎಂದೇ ಒತ್ತಾಯಿಸಿದರು. ಆತನ ಧರ್ಮದ ಕಾರಣಕ್ಕೆ ಯಾರೊಬ್ಬರೂ ಹಂತಕನನ್ನು, ಹೀನಕೃತ್ಯವನ್ನು ಸಮರ್ಥಿಸಿಕೊಳ್ಳಲಿಲ್ಲ. ಅವರಿವರ ಮಾತೇಕೆ ಫಯಾಝ್‌ನ ತಂದೆ-ತಾಯಿ ಕೂಡ ರಾಜ್ಯದ ಜನತೆಯ ಕ್ಷಮೆ ಕೋರಿ ‘‘ಮಗ ಮಾಡಿದ ತಪ್ಪಿಗೆ ಕಠಿಣ ಶಿಕ್ಷೆ ಆಗಲಿ’’ ಎಂದು ಒತ್ತಾಯಿಸಿದರು. ಮಗಳನ್ನು ಕಳೆದುಕೊಂಡ ತಂದೆ ನಿರಂಜನ ಹಿರೇಮಠ್, ತಾಯಿ ಗೀತಾ ಹಿರೇಮಠ್ ಯಾವ ಹಂತದಲ್ಲೂ ಕೊಲೆಯನ್ನು ಸಾಮಾನ್ಯೀಕರಿಸಲು ಯತ್ನಿಸಲಿಲ್ಲ.

ಹುಬ್ಬಳ್ಳಿ; ಉತ್ತರ ಕರ್ನಾಟಕದ ಬಹು ದೊಡ್ಡ ವ್ಯಾಪಾರ ಕೇಂದ್ರ. ಅಲ್ಲಿಯ ಲಿಂಗಾಯತರು-ಮುಸ್ಲಿಮರು ಪರಸ್ಪರ ಪ್ರೀತಿ-ವಿಶ್ವಾಸದಲ್ಲಿ ಬಾಳಿ ಬದುಕಿದವರು. ಈದ್ಗಾ ಮೈದಾನದ ಗಲಾಟೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಂತ್ರಿ ಪ್ರಹ್ಲಾದ್ ಜೋಶಿ ಪ್ರಯತ್ನಿಸಿದ್ದರು ಮತ್ತು ಯಶಸ್ವಿಯೂ ಆಗಿದ್ದರು. ಹೀಗಿದ್ದೂ ಲಿಂಗಾಯತ-ಮುಸ್ಲಿಮರ ನಡುವಿನ ಸಾಮರಸ್ಯಕ್ಕೇನು ಧಕ್ಕೆ ಬಂದಿರಲಿಲ್ಲ. ಆ ನಗರದ ಸಾಮರಸ್ಯವನ್ನು ಗಮನದಲ್ಲಿ ಇಟ್ಟುಕೊಂಡೇ ಕಾಂಗ್ರೆಸ್ ಮುಖಂಡರಾದ ಎ.ಎಂ. ಹಿಂಡಸಾಗೇರಿ ಮತ್ತು ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ನೇಹಾ ಹಿರೇಮಠ್ ಸಾವಿನ ದುಃಖದಲ್ಲಿ ಕಂಬನಿ ಮಿಡಿದರು. ಹುಬ್ಬಳ್ಳಿ ನಗರ ಬಂದ್ ಕರೆ ನೀಡಿ ಆ ಹೀನ ಕೃತ್ಯವನ್ನು ಖಂಡಿಸಿದರು. ಅಷ್ಟು ಮಾತ್ರವಲ್ಲ ಹುಬ್ಬಳ್ಳಿಯ ಯಾವ ವಕೀಲರೂ ಹಂತಕ ಫಯಾಝ್ ಪರ ವಕಾಲತ್ತು ವಹಿಸಬಾರದೆಂದು ಮನವಿ ಮಾಡಿದರು. ನೇಹಾ ಹಿರೇಮಠ್ ಅವರ ಸಾವಿನಲ್ಲಿ ಹುಬ್ಬಳ್ಳಿಯ ಜನತೆ ಧರ್ಮದ ಹೆಸರಲ್ಲಿ ರಾಜಕಾರಣ ಮಾಡಲಿಲ್ಲ. ಸೋಲಿನ ಭೀತಿಯಲ್ಲಿದ್ದ ಪ್ರಹ್ಲಾದ್ ಜೋಶಿ ‘ಇದು ಲವ್ ಜಿಹಾದ್’ ಎಂದು ಹೇಳುವ ಮೂಲಕ ಸಾವಿನ ಮನೆಯಲ್ಲಿ ಗಳ ಹಿರಿಯುವ ಕೆಲಸ ಶುರು ಮಾಡಿದರು. ತಡಮಾಡದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕರೆಸಿಕೊಂಡು ನೇಹಾ ಹಿರೇಮಠ್‌ಕುಟುಂಬದ ಭೇಟಿ ಮಾಡಿಸಿದರು. ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಲೇ ಕೆಲವರು ಪ್ರಹ್ಲಾದ್ ಜೋಶಿಯವರ ‘ಲವ್ ಜಿಹಾದ್’ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಫಯಾಝ್-ನೇಹಾ ಒಟ್ಟಿಗೆ ಇರುವ ಪ್ರೀತಿ-ಪ್ರಣಯದ ಸಾಕ್ಷಿ ಒದಗಿಸಲು ಹಲವಾರು ಭಾವಚಿತ್ರಗಳನ್ನು ಮಾಧ್ಯಮಗಳಿಗೆ ಹರಿಬಿಟ್ಟರು.

ನೇಹಾ ಹಿರೇಮಠ್ ಮತ್ತು ಫಯಾಝ್ ನಡುವೆ ಸ್ನೇಹ, ಸಲುಗೆ, ಪ್ರೀತಿ ಇತ್ತು ಎಂಬುದನ್ನು ಆ ಭಾವಚಿತ್ರಗಳನ್ನು ನೋಡಿ ಪರಿಭಾವಿಸಿದರೂ ಬರ್ಬರ ಹತ್ಯೆಯನ್ನು ಸಮರ್ಥಿಸಲಾಗದು. ಭಾರತದಂತಹ ಸಂಕೀರ್ಣ ಸಾಮಾಜಿಕ ಸನ್ನಿವೇಶದಲ್ಲಿ ಜಾತಿ- ಧರ್ಮ ಮೀರಿದ ಪ್ರೇಮ ಪ್ರಸಂಗಗಳು ತಾಳ್ಮೆ ಮತ್ತು ಪ್ರಬುದ್ಧತೆಯಲ್ಲಿಯೇ ಯಶಸ್ಸು ಪಡೆದಿವೆ. ಅಂತಿಮವಾಗಿ ಪ್ರೀತಿ ಪ್ರೇಮದ ಸಾರ್ಥಕತೆ ಇರುವುದು ಸಂಗಾತಿಯ ಹಿತ ಬಯಸುವುದರಲ್ಲಿ. ಪ್ರೀತಿಗಾಗಿ ಬೆನ್ನುಹತ್ತಿ ಐನಾಝ್‌ಳನ್ನು ಮತ್ತು ಕುಟುಂಬ ವರ್ಗದವರನ್ನು ರಕ್ತದ ಮಡುವಿನಲ್ಲಿ ನರಳುವಂತೆ ಮಾಡುವ ಪ್ರವೀಣ್ ಚೌಗುಲೆ, ನೇಹಾ ಹಿರೇಮಠ್‌ರನ್ನು ಪ್ರೀತಿಸಿದೆ ಆದರೆ ಸಿಗಲಿಲ್ಲ ಎಂಬ ಕಾರಣಕ್ಕೆ ಬರ್ಬರ ಹತ್ಯೆಗೈದ ಫಯಾಝ್ ‘ಪ್ರೀತಿ’ ಎಂಬ ಪವಿತ್ರ ಭಾವಕ್ಕೆ ಕಳಂಕ ಅಂಟಿಸಿದವರು. ನಿಜವಾದ ಪ್ರೀತಿ ಎಲ್ಲಾ ಅಡೆತಡೆಗಳನ್ನು ಮೀರಿ ಗೆಲ್ಲಲು ಹವಣಿಸುತ್ತದೆ. ಜಾತಿ-ಧರ್ಮದ ಎಲ್ಲೆಕಟ್ಟುಗಳನ್ನು ಮೀರಿ ಪ್ರೀತಿ ಕ್ರಿಯಾಶೀಲವಾಗಿರುತ್ತದೆ ಎಂಬ ಕಾಲಾತೀತ ನಂಬಿಕೆ ಮತ್ತು ಶ್ರದ್ಧೆಗೆ ಪ್ರವೀಣ್ ಚೌಗುಲೆ, ಫಯಾಝ್ ತರಹದವರು ಅಪಚಾರ ಮಾಡಿದ್ದಾರೆ. ನೇಹಾ ಹಿರೇಮಠ್ ಪ್ರಕರಣ ಚುನಾವಣಾ ಸಂದರ್ಭದಲ್ಲಿ ಸ್ಫೋಟಗೊಂಡಿದ್ದರಿಂದ ರಾಜಕೀಯ ಮೇಲಾಟದ ವಸ್ತುವಾಗಿ ಪರಿಣಮಿಸಿದೆ. ಪ್ರಹ್ಲಾದ್ ಜೋಶಿಗೆ ನೇಹಾ ಹಿರೇಮಠ್‌ಪ್ರಕರಣ ‘ಲವ್ ಜಿಹಾದ್’ ಆಗಿ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣದ ಕನಸು ಕಾಣುವಂತೆ ಮಾಡಿದೆ. ಕಾಂಗ್ರೆಸ್ ಮುಖಂಡರಿಗೆ ಲಿಂಗಾಯತ ಮತಗಳು ಕೈತಪ್ಪುವ ಭೀತಿ ಕಾಡುತ್ತಿದೆ. ಚುನಾವಣಾ ರಾಜಕೀಯ ಮೇಲಾಟದಲ್ಲಿ ನಿರಂಜನ ಹಿರೇಮಠ್‌ರ ಮನೆ ರಾಜಕಾರಣಿಗಳಿಂದ ತುಂಬಿ ತುಳುಕುತ್ತಿದೆ. ನೇಹಾ ಹಿರೇಮಠ್ ಅವರ ಬರ್ಬರ ಹತ್ಯೆ, ಅದು ಮಹಿಳಾ ಕುಲದ ಮೇಲೆ ಉಂಟುಮಾಡಿದ ಪರಿಣಾಮ, ತಾಯಿ ಗೀತಾ ಹಿರೇಮಠ್‌ರ ಮನದಾಳದ ಆಕ್ರಂದನ, ಅಸಂಖ್ಯಾತ ವಿದ್ಯಾರ್ಥಿಗಳಲ್ಲಿ ಹೆಚ್ಚಿದ ದುಗುಡ, ಪುರುಷಾಹಂಕಾರದ ವಿಕೃತಿಯ ಸ್ವರೂಪ-ಈ ಘಟನೆಯ ಕಾರಣಕ್ಕೆ ಹುಟ್ಟಿದ ತಲ್ಲಣ-ಸಮಸ್ತ ಕರ್ನಾಟಕದ ಜನತೆಗೆ ಹಾಂಟ್ ಮಾಡಬೇಕಿತ್ತು. ಒಂದು ಮನೆಯಲ್ಲಿ ಭೀಕರ ಸಾವು ಸಂಭವಿಸಿದಾಗ ಆಳದ ಕಾಳಜಿಯೊಂದಿಗೆ ಸಾಂತ್ವನ ಹೇಳುವುದು, ಭೇಟಿ ಮಾಡುವುದು, ನಿಮ್ಮ ಕಷ್ಟದಲ್ಲಿ, ದುಃಖದಲ್ಲಿ ನಾವಿದ್ದೇವೆ ಎಂದು ಹೇಳಿ ಧೈರ್ಯ ಮೂಡಿಸಲು ಯತ್ನಿಸುವುದು ಮನುಷ್ಯ ಸಹಜ ನಡವಳಿಕೆ.

ನೇಹಾ ಹಿರೇಮಠ್, ಐನಾಝ್, ರುಕ್ಸಾನಾರಂತಹ ಅಸಂಖ್ಯಾತ ಮಹಿಳೆಯರು ಪುರುಷಾಹಂಕಾರದ ಮತ್ತು ವಿಕೃತಿಯ ಕಾರಣಕ್ಕೆ ಭೀಕರವಾಗಿ ಕೊಲೆಯಾಗುತ್ತಿರುವುದು, ಅತ್ಯಾಚಾರಕ್ಕೊಳಗಾಗುತ್ತಿರುವುದು ನಿಧಾನ ನ್ಯಾಯ, ನ್ಯಾಯ ನಿರಾಕರಣೆಯಾಗುತ್ತಿರುವುದರಿಂದ. ಹೀನ ಕೃತ್ಯಕ್ಕೆ ಅಂಗೈ ಹುಣ್ಣಿನಷ್ಟೇ ಸಾಕ್ಷಿಗಳು ಸ್ಪಷ್ಟವಿರುವಾಗ ನ್ಯಾಯ ಪ್ರಕ್ರಿಯೆ ವಿಳಂಬವಾಗಲೇಬಾರದು. ಸಂದಿಗ್ಧತೆ ಇರುವ ಪ್ರಕರಣಗಳಲ್ಲಿ ಅಪರಾಧಿಯನ್ನು ಪತ್ತೆಹಚ್ಚುವಲ್ಲಿ ತಾಂತ್ರಿಕ ತೊಡಕುಗಳಿದ್ದರೆ ನ್ಯಾಯದಾನ ಪ್ರಕ್ರಿಯೆ ನಿಧಾನವಾದರೂ ಯಾರೂ ಆಕ್ಷೇಪಿಸುವುದಿಲ್ಲ. ಪ್ರವೀಣ್ ಚೌಗುಲೆ, ಪ್ರದೀಪ್, ಫಯಾಝ್ ಸೇರಿದಂತೆ ಹಲವರ ಹೀನಕೃತ್ಯ ನಿಚ್ಚಳವಾಗಿ ಗೋಚರಿಸುತ್ತಿರುವಾಗ ನ್ಯಾಯದಾನ ತ್ವರಿತವಾಗಬೇಕು. ತ್ವರಿತ ನ್ಯಾಯಾಲಯ ಸ್ಥಾಪಿಸಿಯಾದರೂ ಅಪರಾಧಿಗಳಿಗೆ ಕಠಿಣ ಶಿಕ್ಷೆವಿಧಿಸಬೇಕು. ಅಗತ್ಯಬಿದ್ದರೆ ಕಾನೂನಿಗೆ ತಿದ್ದುಪಡಿ ತಂದು ಅಥವಾ ಕಾಲದ ಅಗತ್ಯಕ್ಕೆ ತಕ್ಕ ಹೊಸ ಕಾನೂನು ರೂಪಿಸಿ ಪುರುಷಾಹಂಕಾರವನ್ನು ಬಗ್ಗುಬಡಿಯಬೇಕು. ಮಹಿಳಾ ಸ್ವಾತಂತ್ರ್ಯ, ಮಹಿಳೆಯರ ಆತ್ಮ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರಗಳು ಗಂಭೀರವಾಗಿ ಆಲೋಚಿಸಬೇಕು. ಜನತೆಯೇ ಕಾನೂನು ಕೈಗೆತ್ತಿಕೊಳ್ಳುವ ಮುನ್ನವೇ ಮಹಿಳಾಪರ ಕಾನೂನುಗಳಿಗೆ ಕಾಯಕಲ್ಪ ಕಲ್ಪಿಸಬೇಕು.

ನೇಹಾ ಹಿರೇಮಠ್ ಪ್ರಕರಣದಲ್ಲಿ ನೈಜ ಕಾಳಜಿಯೊಂದಿಗೆ ಸ್ಪಂದಿಸಿದವರು ಹುಬ್ಬಳ್ಳಿಯ ಸಮಸ್ತ ಜನತೆ. ಅಂಜುಮನ್ ಸಂಸ್ಥೆಯವರು, ನೇಹಾ ಹಿರೇಮಠ್ ಅವರ ದುರಂತ ಸಾವು ತಮ್ಮ ಮನೆಯ ಮಗಳದೆಂದೇ ಭಾವಿಸಿ ಘನತೆಯಿಂದ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಸಾರಿ’ ಕೇಳುವ ಮೂಲಕ ‘ಸಾವು’ ರಾಜಕೀಯ ಮೀರಿದ್ದು ಎಂದು ಪರಿಭಾವಿಸಿ ಅತ್ಯಂತ ಸಂವೇದನಾಶೀಲರಾಗಿ ನಡೆದುಕೊಂಡರು. ಪ್ರಹ್ಲಾದ್ ಜೋಶಿ, ಮಹೇಶ್ ಟೆಂಗಿನಕಾಯಿ, ಲಕ್ಷ್ಮೀ ಹೆಬ್ಬಾಳ್ಕರ್, ಬಿ.ವೈ. ವಿಜಯೇಂದ್ರ, ಸಂತೋಷ್ ಲಾಡ್ ಮುಂತಾದವರಿಗೆ ನೇಹಾ ಹಿರೇಮಠ್ ಅವರ ಭೀಕರ ಸಾವಿಗಿಂತಲೂ ಚುನಾವಣೆಯೇ ಮುಖ್ಯವೆನಿಸಿತು. ನಿರಂಜನ ಹಿರೇಮಠ್‌ರ ಮನೆಗೆ ಪೈಪೋಟಿಯಲ್ಲಿ ಭೇಟಿ ನೀಡಿದ ಎಲ್ಲಾ ರಾಜಕಾರಣಿಗಳು ನೇಹಾ ಹಿರೇಮಠ್ ಅವರ ಮೇಲಿನ ಗೌರವಕ್ಕಾದರೂ ಬಲಿಷ್ಠ ಮಹಿಳಾ ಕಾನೂನು ರೂಪಿಸುವಲ್ಲಿ ಪೈಪೋಟಿ ನಡೆಸಲಿ. ತಮ್ಮ ಮನೆಯ ಹೆಣ್ಣು ಮಕ್ಕಳ ನೆನೆದು ಪುರುಷಾಹಂಕಾರಕ್ಕೆ ಬಲವಾದ ಪೆಟ್ಟು ನೀಡಲಿ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News