ಜೋಶಿ ಸೋತರೆ ಧಾರವಾಡ ಅಸ್ಮಿತೆಯ ಗೆಲುವು

ಪ್ರಹ್ಲಾದ್ ಜೋಶಿ 20 ವರ್ಷಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ರೂಪಿಸಬಹುದಿತ್ತು. ಕರ್ನಾಟಕ ಕಾಲೇಜು 2017ರಲ್ಲೇ ಶತಮಾನೋತ್ಸವ ಆಚರಿಸಿಕೊಂಡಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ 75 ವರ್ಷಗಳಾಗಿವೆ. ಭವ್ಯ ಪರಂಪರೆ ಹೊಂದಿರುವ ಈ ಕಾಲೇಜು ಮತ್ತು ವಿಶ್ವವಿದ್ಯಾನಿಲಯವನ್ನು ವಿಶೇಷ ಪ್ರಕರಣವೆಂದು ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಮೇಲ್ದರ್ಜೆಗೆ ಏರಿಸಬಹುದಿತ್ತು. ಈ ಹೊತ್ತು ಕೇಂದ್ರ ಸರಕಾರದ ವಿಶೇಷ ಅನುದಾನದಲ್ಲಿ ನಡೆಯುವ ಜೈಪುರ ಸಂಗೀತೋತ್ಸವ ಜಗದ್ವಿಖ್ಯಾತಿ ಪಡೆದಿದೆ. ಹಾಗೆ ನೋಡಿದರೆ ಜೈಪುರ, ಧಾರವಾಡದ ಹಾಗೆ ಸಾಹಿತ್ಯ-ಸಂಗೀತ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ದಿಗ್ಗಜರನ್ನು ಸೃಷ್ಟಿಸಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹುಬ್ಬಳ್ಳಿ-ಧಾರವಾಡ ಹಾಳು ಕೊಂಪೆಯಂತಾಗಿದೆ. ಧಾರವಾಡ ಸೀಮೆಯ ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ಮ್ಯೂಸಿಯಂ ಸ್ಥಾಪನೆ ಮಾಡಿದ್ದರೆ ಪ್ರಹ್ಲಾದ್ ಜೋಶಿಯವರ ಹೆಸರನ್ನು ಸರ್ ಸಿದ್ದಪ್ಪ ಕಂಬಳಿಯವರ ಹಾಗೆ ಜನ ಸದಾ ನೆನಪಿಸಿಕೊಳ್ಳುತ್ತಿದ್ದರು.

Update: 2024-04-13 06:38 GMT

ಈಗಿನ ಗದಗ, ಹಾವೇರಿ ಜಿಲ್ಲೆಗಳು; 1997ಕ್ಕೂ ಮುಂಚೆ ಅವಿಭಜಿತ ಧಾರವಾಡ ಜಿಲ್ಲೆಯ ಭಾಗವಾಗಿದ್ದವು. ಆಡಳಿತದ ಅನುಕೂಲಕ್ಕೆ ಧಾರವಾಡ, ಗದಗ, ಹಾವೇರಿ ಪ್ರತ್ಯೇಕ ಜಿಲ್ಲೆಗಳಾಗಿದ್ದರೂ ಸಾಂಸ್ಕೃತಿಕವಾಗಿ ಈಗಲೂ ಒಂದಕ್ಕೊಂದು ಬೆಸೆದುಕೊಂಡೇ ಇವೆ. ಧಾರವಾಡ ಕೇಂದ್ರಿತ ಸಾಂಸ್ಕೃತಿಕ ವಲಯಕ್ಕೆ ಇಡೀ ಕರ್ನಾಟಕವೇ ಹೆಮ್ಮೆಪಡಬಹುದಾದ ಶ್ರೀಮಂತ ಪರಂಪರೆ ಇದೆ. ಮಲೆನಾಡ ಸೆರಗಿನ ಆಸರೆ ಪಡೆದ ಧಾರವಾಡ ಏಕಕಾಲಕ್ಕೆ ಬಯಲು ಮತ್ತು ಆಲಯಗಳ ಸಂಗಮವಾಗಿದೆ. ಧಾರವಾಡ ಸೀಮೆ ಸಾಹಿತ್ಯ, ಸಂಗೀತ, ಸಂಸ್ಕೃತಿ, ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಹಲವಾರು ಮಹನೀಯರು ಈ ಭಾಗದ ಸಾಂಸ್ಕೃತಿಕ ವಲಯವನ್ನು ಶ್ರೀಮಂತ ಗೊಳಿಸಿದ್ದಾರೆ. ಅಖಂಡ ಧಾರವಾಡ ಸೀಮೆ ಈ ಹೊತ್ತು ರಾಷ್ಟ್ರೀಯ-ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ್ದು ಸಾಂಸ್ಕೃತಿಕ ಕ್ಷೇತ್ರದ ಶ್ರೀಮಂತಿಕೆಯ ಕಾರಣಕ್ಕೆ ಹೊರತು ರಾಜಕಾರಣಿಗಳ ದೆಸೆಯಿಂದ ಅಲ್ಲ. ಈ ಭಾಗದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ ಸಿದ್ದಪ್ಪ ಕಂಬಳಿಯವರಂತಹ ಹಿರಿಯ ರಾಜಕಾರಣಿಗಳ ಕೊಡುಗೆ ಇರುವುದನ್ನು ಅಲ್ಲಗಳೆಯಲಾಗದು. ‘ಧಾರವಾಡ ಅಸ್ಮಿತೆ’ಯನ್ನು ರೂಪಿಸಿದ್ದೇ ಸಾಹಿತ್ಯ, ಸಂಗೀತ, ಶಿಕ್ಷಣ, ಆಧ್ಯಾತ್ಮಿಕ ಪರಂಪರೆ -ಸೌಹಾರ್ದಕ್ಕೆ ಹೆಸರಾದ ಶ್ರದ್ಧಾ ಕೇಂದ್ರಗಳು. ಬ್ಯಾಡಗಿ ಮೆಣಸಿನಕಾಯಿ, ಧಾರವಾಡದ ಪೇಡ, ತುಪ್ಪದ ಅವಲಕ್ಕಿ, ಚಹಾ ಮತ್ತು ಚುವಡಾ, ಧಾರವಾಡ ಅಸ್ಮಿತೆಗೆ ಗರಿ ಮೂಡಿಸಿದೆ.

ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಜನಿಸಿದ ಕನ್ನಡದ ಆದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಭಾವದಲ್ಲಿ ಕಾವ್ಯ ರಚಿಸಿ ಕನ್ನಡ ಕಾವ್ಯ ಪರಂಪರೆಗೆ ಸುಭದ್ರ ನೆಲೆಯೊದಗಿಸಿದ ಮಹಾನ್ ಕವಿ. ಕೋಳಿವಾಡ ಗ್ರಾಮದ ಕುಮಾರವ್ಯಾಸ; ಮಹಾಭಾರತದ ಜೊತೆಗೆ ಸೃಜನಶೀಲ ಕಾವ್ಯಾನುಸಂಧಾನ ನಡೆಸಿ ಕರ್ನಾಟಕ ಭಾರತ ಕಥಾಮಂಜರಿಯನ್ನು ಸೃಜಿಸಿದ ಅಪರೂಪದ ಕವಿ. ‘ಕುಲಕುಲವೆಂದು ಹೊಡೆದಾಡದಿರಿ ಕುಲದ ನೆಲೆಯನೇನಾದರೂ ಬಲ್ಲಿರಾ’ ಎಂದು ಕನ್ನಡದ ಜನತೆಗೆ ಕುಲದ ನೆಲೆಯನ್ನು ಅರುಹಿದ ಕನಕದಾಸರು ಧಾರವಾಡ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದವರು. ಜಾತಿ ಅಸಮಾನತೆಯ ವಿರುದ್ಧ ದನಿ ಎತ್ತಿದ ಅಪರೂಪದ ದಾಸ ಕವಿ. ಹುಬ್ಬಳ್ಳಿಯಲ್ಲಿ ನೆಲೆ ನಿಂತ 19ನೇ ಶತಮಾನದ ಆರೂಢ ಪರಂಪರೆಯ ಸಂತ ಸಿದ್ಧಾರೂಢರು ಧಾರವಾಡ ಸೀಮೆಯ ಎಲ್ಲಾ ಸಮುದಾಯದವರಿಗೆ ದೈವ ಸಮಾನರು. ಜಾತಿ-ಮತ-ಪಂಥಗಳಾಚೆ ಸಮುದಾಯಗಳನ್ನು ಒಂದುಗೂಡಿಸಿದ ಸಿದ್ಧಾರೂಢರು ಧಾರವಾಡ ಅಸ್ಮಿತೆಗೆ ಕಿರೀಟ ತೊಡಿಸಿದವರು. ಸಿದ್ಧಾರೂಢರ ಸಂತ ಸ್ನೇಹ ಬಳಗದ ಸದಸ್ಯರಾದ ಶಿಶುನಾಳ ಷರೀಫರು, ಗರಗದ ಮಡಿವಾಳಪ್ಪ, ನವಲಗುಂದದ ನಾಗಲಿಂಗರು, ಶಿರಹಟ್ಟಿಯ ಫಕೀರೇಶ್ವರ ಶಿವಯೋಗಿಗಳು, ಶಿಶುನಾಳ ಶರೀಫರ ಗುರುಗಳಾದ ಗೋವಿಂದ ಭಟ್ಟರು ಧಾರ್ಮಿಕ-ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಪರೂಪದ ಮಾದರಿಗಳನ್ನು ಸೃಷ್ಟಿಸಿದವರು. ಸಮುದಾಯಗಳಲ್ಲಿ ಸಾಮರಸ್ಯದ ಭಾವವನ್ನು ಗಟ್ಟಿಗೊಳಿಸಿದವರು. ಸಮಗಾರ ಭೀಮವ್ವಳ ಎದೆ ಹಾಲು ಕುಡಿದ ನಾಗಲಿಂಗರು ಜಾತಿ ವ್ಯವಸ್ಥೆಗೆ ಸವಾಲು ಹಾಕಿ ಅಜಾತರಾದವರು.

ಈ ಅಜಾತ ಪರಂಪರೆಯ ರಥವನ್ನು 20ನೆಯ ಶತಮಾನದಲ್ಲಿಯೂ ಅಬಾಧಿತವಾಗಿ ಧಾರವಾಡ ಸೀಮೆ ಎಲ್ಲೆಡೆ ಮುನ್ನಡೆಸಿದವರು ಹಾನಗಲ್ ಕುಮಾರ ಸ್ವಾಮಿಗಳು. ವಚನ ಸಾಹಿತ್ಯವನ್ನು ಗಾಯನದ ಮೂಲಕ ಮನೆ ಮನೆಗೆ ತಲುಪಿಸಲು ಸತ್ಪ್ರೇರಣೆ ನೀಡಿದವರು ಹಾನಗಲ್ ಕುಮಾರ ಸ್ವಾಮಿಗಳು. ಹಾನಗಲ್ ಕುಮಾರ ಸ್ವಾಮಿಗಳ ಶಿಷ್ಯರಾದ ಪಂಡಿತ್ ಪಂಚಾಕ್ಷರಿ ಗವಾಯಿಗಳು ಅಂಧ ಮಕ್ಕಳಿಗೆ ಸಂಗೀತ ದೀಕ್ಷೆ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದವರು. ಪಂಚಾಕ್ಷರಿ ಗವಾಯಿಗಳ ಶಿಷ್ಯ ಪಂಡಿತ ಪುಟ್ಟರಾಜ ಗವಾಯಿಗಳು ಗದಗದಲ್ಲಿ ನೆಲೆನಿಂತು ಅಂಧರು ಮತ್ತು ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಸಂಗೀತ ದಾಸೋಹ ನೀಡಿ ಅಸಂಖ್ಯಾತ ನಿರಾಶ್ರಿತರ ಬದುಕಿಗೆ ಬೆಳಕಾದವರು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಅನ್ನ, ಅಕ್ಷರ, ಸಂಗೀತ ಕಲಿಕೆಗೆ ಅವಕಾಶ ಕಲ್ಪಿಸಿ ಗುರುಕುಲ ಶಿಕ್ಷಣ ಪದ್ಧತಿಗೆ ಹೊಸ ಆಯಾಮ ನೀಡಿದವರು. ಸಂಗೀತ ಕಲಿಕೆಗೆ ಅಂಟಿದ ಮಡಿವಂತಿಕೆ ನಿವಾರಿಸಿ ಸಂಗೀತ ಕಲಿಕೆಯನ್ನು ಸಾರ್ವತ್ರಿಕಗೊಳಿಸಿದವರು. ಹಾಗೆ ನೋಡಿದರೆ; ಪಂಡಿತ ಪಂಚಾಕ್ಷರಿ ಗವಾಯಿಗಳು ಮತ್ತು ಪಂಡಿತ ಪುಟ್ಟರಾಜ ಗವಾಯಿಗಳು ಹುಟ್ಟು ಕುರುಡರು. ಉಭಯ ಗವಾಯಿಗಳು ಹಾನಗಲ್ ಕುಮಾರ ಸ್ವಾಮಿಗಳ ಪರಂಪರೆಯಲ್ಲಿ ಮುನ್ನಡೆದು ಈ ಹೊತ್ತು ಅಂಧ, ಅನಾಥರ ಪಾಲಿನ ಬೆಳಕಾಗಿದ್ದಾರೆ. ಪಂಡಿತ ಪಂಚಾಕ್ಷರಿ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರು. ಪುಟ್ಟರಾಜ ಗವಾಯಿಗಳು ಕರ್ನಾಟಕ ಮತ್ತು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಪ್ರತಿಮ ಸಾಧಕರು. ತಮ್ಮ ಸಂಗೀತ ಸಾಧನೆಗೆ ಕಾಳಿದಾಸ ಸನ್ಮಾನ, ಕರ್ನಾಟಕ ರತ್ನ ಮತ್ತು ಪದ್ಮಭೂಷಣ ಪುರಸ್ಕಾರಕ್ಕೆ ಭಾಜನರಾದವರು. ಜೀವನವಿಡೀ ಅಂಧ, ಅನಾಥ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಲಕ್ಷಾಂತರ ಜನ ಸಂಗೀತದ ಮೂಲಕ ಬದುಕು ಕಟ್ಟಿಕೊಳ್ಳುವಂತೆ ಮಾಡಿದ ಧೀಮಂತ ಸಾಧಕರು. ವೀರೇಶ್ವರ ಪುಣ್ಯಾಶ್ರಮದಲ್ಲಿ ಇವತ್ತಿಗೂ ಸಂಗೀತ ದಾಸೋಹ ಎಲ್ಲಾ ಸಮುದಾಯದವರಿಗೆ ನಿರಂತರ ಲಭ್ಯವಿದೆ.

ಧಾರವಾಡ ಸೀಮೆಯ ಪರಿಸರದಲ್ಲಿ ಸಾಹಿತ್ಯ, ಸಂಗೀತ, ಸೌಹಾರ್ದ ಬದುಕಿಗೆ ನೆಲೆಯೊದಗಿಸುವ ಆಧ್ಯಾತ್ಮಿಕತೆ ಅಂತರ್ಗತವಾಗಿದೆ. ಆ ಸಾಂಸ್ಕೃತಿಕ ವಲಯಕ್ಕೆ ಆಧುನಿಕ ಕಾಲದಲ್ಲಿ ಮತ್ತಷ್ಟು ಬಲ ನೀಡಿದ್ದು ಅತ್ಯುತ್ತಮವಾದ ಶೈಕ್ಷಣಿಕ ಸಂಸ್ಥೆಗಳು. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮುಂಬೈ ರಾಜ್ಯದ ಭಾಗವಾಗಿದ್ದ ಧಾರವಾಡ ಸೀಮೆ ಶೈಕ್ಷಣಿಕ ಸವಲತ್ತುಗಳನ್ನು ಪಡೆದಿದ್ದರಿಂದಲೇ ಎಲ್ಲಾ ಕ್ಷೇತ್ರಗಳಲ್ಲೂ ಮಹತ್ತರ ಸಾಧನೆ ಮಾಡಲು ಸಾಧ್ಯವಾಯಿತು. 1917ಕ್ಕೂ ಮೊದಲು ಧಾರವಾಡ ಸೀಮೆಯ ಜನ ಉನ್ನತ ಶಿಕ್ಷಣಕ್ಕೆ ಪುಣೆ, ಮುಂಬೈಗೆ ಹೋಗಬೇಕಿತ್ತು. ಕೆಲವೇ ಶ್ರೀಮಂತರ ಮತ್ತು ಮೇಲುಜಾತಿಯವರಿಗೆ ಅದು ಸಾಧ್ಯವಾಗುತ್ತಿತ್ತು. ಮಧ್ಯಮ-ಕೆಳಮಧ್ಯಮ ವರ್ಗದವರಿಗೆ ಉನ್ನತ ಶಿಕ್ಷಣ ಗಗನ ಕುಸುಮವಾಗಿತ್ತು. ಎಲ್ಲರಿಗೂ ಉನ್ನತ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ದಿವಾನ್ ಬಹದ್ದೂರ್ ರೊದ್ದ ಶ್ರೀನಿವಾಸರಾಯರು ಮತ್ತು ರಾವ್ ಬಹದ್ದೂರ್ ಅರಟಾಳ್ ರುದ್ರಗೌಡರು ಕರ್ನಾಟಕ ಕಾಲೇಜು ಧಾರವಾಡ-1917ರಲ್ಲಿ ಸ್ಥಾಪಿಸಿದರು. ಕಲಾ ಮತ್ತು ವಿಜ್ಞಾನ ವಿಭಾಗಗಳೊಂದಿಗೆ ಆರಂಭವಾದ ಕರ್ನಾಟಕ ಕಾಲೇಜು ಈಗ ಅತ್ಯುನ್ನತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಕಾಲೇಜನ್ನು ಮುಚ್ಚಿಸಲು ಹಲವಾರು ಬಾರಿ ಪ್ರಯತ್ನಿಸಲಾಗಿತ್ತು. ಬ್ರಿಟಿಷ್ ಕಾಲದ ಮುಂಬೈ ರಾಜ್ಯದಲ್ಲಿ ಹುಬ್ಬಳ್ಳಿ ಮೂಲದ ಸರ್ ಸಿದ್ದಪ್ಪ ಕಂಬಳಿ ಅವರು ಶಿಕ್ಷಣ ಮಂತ್ರಿಯಾಗಿದ್ದರು. ಅವರು ತಮ್ಮ ಅಧಿಕಾರದ ಬಲದಿಂದ ಕರ್ನಾಟಕ ಕಾಲೇಜು ಮುಚ್ಚದಂತೆ ನೋಡಿಕೊಳ್ಳುತ್ತಿದ್ದರು. ಅವರ ಪ್ರಯತ್ನದಿಂದಲೇ 1949ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯ ಅಸ್ತಿತ್ವಕ್ಕೆ ಬರುತ್ತದೆ. ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ ಸರ್ ಸಿದ್ದಪ್ಪ ಕಂಬಳಿಯವರು ಹುಬ್ಬಳ್ಳಿ ಮುನ್ಸಿಪಾಲ್ ಸದಸ್ಯರಾಗಿ ಮೊದಲು ಆಯ್ಕೆಯಾಗಿ ನಂತರ ಮುಂಬೈ ರಾಜ್ಯದಲ್ಲಿ ಶಿಕ್ಷಣ ಮಂತ್ರಿಯಾಗುವವರೆಗೆ ಬೆಳೆದಿದ್ದರು.

ಕರ್ನಾಟಕ ಕಾಲೇಜು ಹಲವಾರು ದಿಗ್ಗಜರನ್ನು ಸೃಷ್ಟಿಸಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಕೂಡ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿನಾಯಕ ಕೃಷ್ಣ ಗೋಕಾಕ, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ, ಕನ್ನಡದ ಪ್ರತಿಭಾವಂತ ಸಾಹಿತಿಗಳಾದ ಪ್ರೊ. ಚಂದ್ರಶೇಖರ ಪಾಟೀಲ, ಎಂ.ಎಂ. ಕಲಬುರ್ಗಿ, ಆರ್.ಸಿ. ಹಿರೇಮಠ, ಜಿ.ಎಸ್. ಅಮೂರ, ಗಂಗಾಧರ ಚಿತ್ತಾಲ, ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಂದನ್ ನೀಲೇಕಣಿ ಈ ಕಾಲೇಜಿನ ವಿದ್ಯಾರ್ಥಿಗಳು. ಖ್ಯಾತನಾಮರ ಪಟ್ಟಿ ದೊಡ್ಡದಿದೆ. 70-80ರ ದಶಕದಲ್ಲಿ ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯ ಹಲವು ಚಿಂತನೆ ಧಾರೆಗಳ, ಹೋರಾಟಗಳ ಆಡಂಬೊಲವಾಗಿತ್ತು. ಸಮಾಜವಾದಿಗಳು, ಕಮ್ಯುನಿಸ್ಟರು, ನಕ್ಸಲೈಟ್ ಸಂಘಟನೆಯವರು, ಗಾಂಧಿವಾದಿಗಳು, ಲೋಹಿಯಾವಾದಿಗಳು, ಎಂ.ಎನ್. ರಾಯ್ ಅನುಯಾಯಿಗಳೂ ಇಲ್ಲಿದ್ದರು. ಕನ್ನಡ ಚಳವಳಿಗಳು, ರೈತ ಹೋರಾಟಗಾರರು, ಎಬಿವಿಪಿ, ಎಐಎಸ್‌ಎಫ್, ಎಸ್‌ಎಫ್‌ಐನಂತಹ ವಿದ್ಯಾರ್ಥಿ ಸಂಘಟನೆಗಳು, ದಲಿತ ಸಂಘಟನೆಗಳು ಕ್ರಿಯಾಶೀಲವಾಗಿದ್ದವು. ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಇಲ್ಲಿಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿ ಮುಖಂಡರು. ಕಮ್ಯುನಿಸ್ಟ್ ಪಕ್ಷದ ಡಾ. ಸಿದ್ದನಗೌಡ ಪಾಟೀಲ, ಸಮುದಾಯ ಸಂಘಟನೆಯ ಪ್ರಸನ್ನ ಸೇರಿದಂತೆ ಹಲವಾರು ದಿಗ್ಗಜರು ಈ ವಿಶ್ವವಿದ್ಯಾನಿಲಯದವರೇ. ಆಗ ಪ್ರೊ. ಚಂದ್ರಶೇಖರ ಪಾಟೀಲರು ಮತ್ತವರ ವಿದ್ಯಾರ್ಥಿ ಮಿತ್ರರು ಒಟ್ಟಾಗಿಯೇ ಹೋರಾಟದ ಭಾಗವಾಗಿರುತ್ತಿದ್ದರು. 70-80ರ ದಶಕದ ಧಾರವಾಡದಲ್ಲಿ ಎಂ.ಕೆ. ಭಟ್ಟರಂತಹ ಕಮ್ಯುನಿಸ್ಟರು ಎಲ್ಲರ ಒಡನಾಡಿಗಳಾಗಿದ್ದರು.

70-80ರ ದಶಕದಲ್ಲಿ ಧಾರವಾಡ ಸೀಮೆ ಮತ್ತು ಸಾಂಸ್ಕೃತಿಕ ನಗರಿ ಧಾರವಾಡ ಎಲ್ಲಾ ಬಗೆಯ ಚಿಂತನಧಾರೆಗಳ ಹೋರಾಟಗಾರರಿಗೆ ನೆಲೆವೀಡಾಗಿತ್ತು. ಕಮ್ಯುನಿಸ್ಟರು, ಸಮಾಜವಾದಿಗಳು ಹೆಚ್ಚು ಕ್ರಿಯಾಶೀಲವಾಗಿದ್ದರು. ಗೋಕಾಕ್ ಚಳವಳಿಯಲ್ಲಿ ಡಾ. ರಾಜಕುಮಾರ್ ಅವರು ಭಾಗವಹಿಸಲು ಪ್ರೇರಣೆ ಒದಗಿಸಿದವರೇ ಧಾರವಾಡದ ಪ್ರೊ. ಚಂದ್ರಶೇಖರ ಪಾಟೀಲರು. ಪಾಟೀಲ ಪುಟ್ಟಪ್ಪನವರು ಕನ್ನಡ ನಾಡು-ನುಡಿಯ ವಿಷಯದಲ್ಲಿ ವಿರೋಧ ಪಕ್ಷದ ನಾಯಕರಂತೆ ಸದಾ ದನಿ ಎತ್ತುತ್ತಿದ್ದರು. ಧಾರವಾಡ ಶ್ರೇಷ್ಠ ಮತ್ತು ಭಿನ್ನ ಚಿಂತನೆಧಾರೆಗಳ ಸಾಹಿತಿಗಳಿಗೆ ತವರೂರಾಗಿ ಪರಿಣಮಿಸಿತ್ತು. ನವೋದಯ, ನವ್ಯ, ಪ್ರಗತಿಶೀಲ, ದಲಿತ ಬಂಡಾಯದ ಪ್ರವರ್ತಕರೆಲ್ಲ ಧಾರವಾಡದವರೇ ಆಗಿದ್ದರು. ನವೋದಯ ಕಾವ್ಯ ಪರಂಪರೆಯ ಸಮರ್ಥ ಪ್ರತಿನಿಧಿ ದ.ರಾ. ಬೇಂದ್ರೆಯವರು ಜ್ಞಾನಪೀಠ ಪ್ರಶಸ್ತಿ ಪುರಸ್ಕಾರಕ್ಕೂ ಭಾಜನರಾದರು. ನವ್ಯದ ಪ್ರಮುಖ ಸಾಹಿತಿಗಳಾದ ಡಾ. ವಿ.ಕೃ. ಗೋಕಾಕ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಅವರು ಅರಳಿದ್ದು ಧಾರವಾಡದಲ್ಲೇ. ಪ್ರಗತಿಶೀಲ ಚಳವಳಿಯ ಆದ್ಯಪವರ್ತಕರಲ್ಲೊಬ್ಬರಾದ ಬಸವರಾಜ ಕಟ್ಟೀಮನಿ ಅವರು ಧಾರವಾಡದಲ್ಲೇ ನೆಲೆನಿಂತು ಬಡತನದ ಬದುಕಿನಲ್ಲೂ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರು. ಶಂಕರ್ ಮೊಕಾಶಿ ಪುಣೇಕರ್, ಕೀರ್ತಿನಾಥ ಕುರ್ತಕೋಟಿ, ಜಿ.ಎಸ್. ಅಮೂರ, ಚನ್ನವೀರ ಕಣವಿ, ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕ, ಬೆಟಗೇರಿ ಕೃಷ್ಣಶರ್ಮ, ಗಳಗನಾಥ, ರಾಯ ಧಾರವಾಡಕರ್, ಶಂಭಾ ಜೋಶಿ, ಗಿರಡ್ಡಿ ಗೋವಿಂದರಾಜ್, ಸಿದ್ದಲಿಂಗ ಪಟ್ಟಣಶೆಟ್ಟಿ, ವೀಣಾಶಾಂತೇಶ್ವರ, ಸೋಮಶೇಖರ್ ಇಮ್ರಾಪೂರ, ಬಸವನಾಳರು ಧಾರವಾಡದವರೇ.

ವೃತ್ತಿರಂಗಭೂಮಿಯ ಆದ್ಯ ಪ್ರವರ್ತಕರೆನಿಸಿದ ಶಾಂತ ಕವಿಗಳು, ಸದಾಶಿವ ರಾಯರು, ಏಣಗಿ ಬಾಳಪ್ಪ, ಸವಾಯಿ ಗಂಧರ್ವರು ಧಾರವಾಡದವರೇ. ಭಾರತದ ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ದಿಗ್ಗಜರಲ್ಲಿ ಧಾರವಾಡದವರೇ ಹೆಚ್ಚಾಗಿದ್ದಾರೆ. ಪದ್ಮ ವಿಭೂಷಣರಾದ ಮಲ್ಲಿಕಾರ್ಜುನ ಮನ್ಸೂರ, ಗಂಗೂಬಾಯಿ ಹಾನಗಲ್, ಬಸವರಾಜ ಗುರು ಮತ್ತು ಭಾರತ ರತ್ನ ಭೀಮಸೇನ್ ಜೋಶಿ ಅವರು ಧಾರವಾಡದ ಹಿರಿಮೆಯನ್ನು ಜಗತ್ತಿಗೇ ತೋರಿಸಿಕೊಟ್ಟವರು. ಗಂಗೂಬಾಯಿ ಹಾನಗಲ್ ಮತ್ತು ಭೀಮಸೇನ್ ಜೋಶಿ ಅವರು ಸಂಗೀತ ಕ್ಷೇತ್ರದಲ್ಲಿ ಎತ್ತರದ ಸಾಧನೆ ಮಾಡಲು ಅವರ ಗುರು ಕುಂದಗೋಳದ ಸವಾಯಿ ಗಂಧರ್ವರು ಕಾರಣರು. ಸವಾಯಿ ಗಂಧರ್ವರಿಗೆ ಕಿರಾಣಾ ಘರಾಣೆಯ ಸಂಗೀತ ದೀಕ್ಷೆ ನೀಡಿದವರು ಆ ಘರಾಣೆಯ ಹಿರಿಯರಾದ ಉಸ್ತಾದ್ ಅಬ್ದುಲ್ ಕರೀಂ ಖಾನರು. ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಂಗೀತ ಕಲಿಸಿದ ಗುರುಗಳು; ಮಹಾರಾಷ್ಟ್ರದ ಅಲ್ಲಾಧಿಯಾಖಾನ್ ಸಾಹೇಬರ ಮಕ್ಕಳಾದ ಮಂಜಿಖಾನ್, ಭುರ್ಜಿಖಾನರು. ಮನ್ಸೂರ ಅವರಿಗೆ ಎಲ್ಲಾ ಹಂತದಲ್ಲಿ ಬೆಂಬಲಿಸಿದವರು ಮಹಾರಾಷ್ಟ್ರದ ಪು.ಲ. ದೇಶಪಾಂಡೆ. ಧಾರವಾಡದಲ್ಲಿ ನೆಲೆನಿಂತು ಸಿತಾರ ಪರಂಪರೆಯನ್ನು ಪ್ರಚುರಪಡಿಸಿದ ಸಿತಾರ ರತ್ನ ರಹಮತ್‌ಖಾನರು ಮೂಲತಃ ಉತ್ತರ ಪ್ರದೇಶದವರು. ಧಾರವಾಡ ಸಂಗೀತ ಲೋಕ ಎಲ್ಲ ಬಗೆಯ ದನಿಗಳಿಂದ ಶ್ರೀಮಂತಗೊಂಡಿದೆ. ಅರ್ಜುನ್‌ಸಾ ನಾಕೋಡ, ಹನುಮಂತಪ್ಪ ಭಜಂತ್ರಿ, ಬಸವರಾಜ ಬೆಂಡಿಗೇರಿ, ಸಂಗಮೇಶ ಗುರವ, ರಾಜಶೇಖರ ಮನ್ಸೂರ, ಪಂಚಾಕ್ಷರಿ ಸ್ವಾಮಿ ಮತ್ತಿಘಟ್ಟ, ಬಸವರಾಜ ರಾಜಗುರುಗಳ ಶಿಷ್ಯರಾದ ಗಣಪತಿ ಭಟ್ಟ ಹಾಸಣಗಿ, ಪರಮೇಶ್ವರ ಹೆಗಡೆ, ಶ್ರೀಪಾದ ಹೆಗಡೆ ಸೇರಿ ಹಲವು ಸಾಧಕರು ಧಾರವಾಡದ ಗೌರವ ಹೆಚ್ಚಿಸಿದ್ದಾರೆ. ಪಂ.ವೆಂಕಟೇಶ ಕುಮಾರ್ ಮೂಲತಃ ಪುಟ್ಟರಾಜ ಗವಾಯಿಗಳ ವೀರೇಶ್ವರ ಪುಣ್ಯಾಶ್ರಮದ ಫಲಾನುಭವಿ. ಈಗ ಪ್ರಹ್ಲಾದ್ ಜೋಶಿಯವರ ಚುನಾವಣಾ ಪ್ರಚಾರಕ.

ಧಾರವಾಡ ಅಸ್ಮಿತೆಯೆಂದರೆ; ಭಿನ್ನದನಿಗಳನ್ನು ಒಳಗೊಳ್ಳುವುದು. ಚರ್ಚೆ, ವಾಗ್ವಾದ, ಸಂವಾದ, ಚಿಂತನ ಮಂಥನಗಳ ಮೂಲಕ ಶ್ರೇಷ್ಠವಾದುದನ್ನು ಶೋಧಿಸುವುದು. ಎಲ್ಲ ಕ್ಷೇತ್ರಗಳ ದಿಗ್ಗಜರು ಧಾರವಾಡದಲ್ಲಿ ಸ್ನೇಹ ಭಾವದಲ್ಲಿ ಬದುಕಿದ್ದಾರೆ. ದ.ರಾ.ಬೇಂದ್ರೆ, ಶಂಭಾ ಜೋಶಿಯವರಿಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಬೇಂದ್ರೆ-ಮಧುರ ಚೆನ್ನರು ಅಣ್ಣತಮ್ಮಂದಿರಂತೆ ಬಾಳಿಬದುಕಿದರು. ಜಾತಿ, ಧರ್ಮ ಮೀರಿದ ಸೌಹಾರ್ದ ಬದುಕು ಕಟ್ಟಿಕೊಂಡವರು. 1992-95ರ ಅವಧಿಯಲ್ಲಿ ಈದ್ಗಾ ಮೈದಾನದ ಸಂಘರ್ಷದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಂಡವರು ಈ ಭಾಗದ ಸಂಸದ, ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಶಿ. ಹಿಂದೂ- ಮುಸ್ಲಿಮ್ ಸಂಘರ್ಷವನ್ನು ಜೀವಂತವಾಗಿಟ್ಟು ಧಾರವಾಡದ ಅಸ್ಮಿತೆಗೆ ಧಕ್ಕೆ ತರುತ್ತಿರುವವರು ಅವರು. ಜೋಶಿ ಬಾಲಬಡುಕರಾದ ಕೆಲವು ಸಾವಜಿ ಸಮುದಾಯದ ಯುವಕರೇ ಹಿಂದೂ ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಅವರ ಮೂಲಕ ಮುಸ್ಲಿಮರ ವಿರುದ್ಧ ಚಿತಾವಣೆ ಮಾಡಿಸುತ್ತಾರೆ. ಸಾವಜಿ ಸಮುದಾಯದ ಅಶೋಕ್ ಕಾಟ್ಪೆಯವರನ್ನು ರಾಜಕೀಯವಾಗಿ ತುಳಿದದ್ದೇ ಈ ಜೋಶಿ. ಇವರು 20 ವರ್ಷಗಳ ಕಾಲ ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಧಾರವಾಡವನ್ನು ಜೈಪುರ, ಗ್ವಾಲಿಯಾರ್‌ಗಳಂತೆ ಸಾಂಸ್ಕೃತಿಕ ರಾಜಧಾನಿಯನ್ನಾಗಿಸಬಹುದಿತ್ತು. ಧಾರವಾಡದ ನುಗ್ಗಿಕೆರೆ ಹನುಮಪ್ಪನ ಆವರಣದಲ್ಲಿ ಕಲ್ಲಂಗಡಿ ಮಾರುತ್ತಿದ್ದ ಮುಸ್ಲಿಮ್ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಯುವಕರನ್ನು ರಕ್ಷಿಸಿದ್ದು ಪ್ರಹ್ಲಾದ್ ಜೋಶಿ.

ಪ್ರಹ್ಲಾದ್ ಜೋಶಿ 20 ವರ್ಷಗಳಲ್ಲಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿ ರೂಪಿಸಬಹುದಿತ್ತು. ಕರ್ನಾಟಕ ಕಾಲೇಜು 2017ರಲ್ಲೇ ಶತಮಾನೋತ್ಸವ ಆಚರಿಸಿಕೊಂಡಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿ 75 ವರ್ಷಗಳಾಗಿವೆ. ಭವ್ಯ ಪರಂಪರೆ ಹೊಂದಿರುವ ಈ ಕಾಲೇಜು ಮತ್ತು ವಿಶ್ವವಿದ್ಯಾನಿಲಯವನ್ನು ವಿಶೇಷ ಪ್ರಕರಣವೆಂದು ಕೇಂದ್ರೀಯ ವಿಶ್ವವಿದ್ಯಾನಿಲಯವನ್ನಾಗಿ ಮೇಲ್ದರ್ಜೆಗೆ ಏರಿಸಬಹುದಿತ್ತು. ಈ ಹೊತ್ತು ಕೇಂದ್ರ ಸರಕಾರದ ವಿಶೇಷ ಅನುದಾನದಲ್ಲಿ ನಡೆಯುವ ಜೈಪುರ ಸಂಗೀತೋತ್ಸವ ಜಗದ್ವಿಖ್ಯಾತಿ ಪಡೆದಿದೆ. ಹಾಗೆ ನೋಡಿದರೆ  ಜೈಪುರ, ಧಾರವಾಡದ ಹಾಗೆ ಸಾಹಿತ್ಯ-ಸಂಗೀತ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ದಿಗ್ಗಜರನ್ನು ಸೃಷ್ಟಿಸಿಲ್ಲ. ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಹುಬ್ಬಳ್ಳಿ-ಧಾರವಾಡ ಹಾಳು ಕೊಂಪೆಯಂತಾಗಿದೆ. ಧಾರವಾಡ ಸೀಮೆಯ ಸಾಂಸ್ಕೃತಿಕ ಪರಂಪರೆ ಪರಿಚಯಿಸುವ ಮ್ಯೂಸಿಯಂ ಸ್ಥಾಪನೆ ಮಾಡಿದ್ದರೆ ಪ್ರಹ್ಲಾದ್ ಜೋಶಿಯವರ ಹೆಸರನ್ನು ಸರ್ ಸಿದ್ದಪ್ಪ ಕಂಬಳಿಯವರ ಹಾಗೆ ಜನ ಸದಾ ನೆನಪಿಸಿಕೊಳ್ಳುತ್ತಿದ್ದರು. ದುರಂತವೆಂದರೆ ಅತ್ಯಲ್ಪವಿರುವ ಸಮುದಾಯಕ್ಕೆ ಸೇರಿದ ಪ್ರಹ್ಲಾದ್ ಜೋಶಿ ಅವರನ್ನು ಸತತ ನಾಲ್ಕು ಅವಧಿಗೆ ಗೆಲ್ಲಿಸಿದ ಮತದಾರರನ್ನು ಒಡೆದಾಳುವ ಮೂಲಕ ಅಪಮಾನಿಸುತ್ತಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದ ಮೊದಲ ಸಂಸದ ಕರಮರಕರ ಆದಿಯಾಗಿ ಯಾರೊಬ್ಬರೂ ಧಾರವಾಡದ ಅಸ್ಮಿತೆಗೆ ಧಕ್ಕೆ ತರುವ ಬಗೆಯಲ್ಲಿ ನಡೆದುಕೊಂಡಿರಲಿಲ್ಲ. ಆದರೆ ಜೋಶಿ ಅವರು ಭೇದಭಾವದ ರಾಜಕಾರಣ ಮಾಡುತ್ತಾ ಧಾರವಾಡದ ಸಾಂಸ್ಕೃತಿಕ-ಆಧ್ಯಾತ್ಮಿಕ ಪರಂಪರೆಯನ್ನು ಭಂಗ ಮಾಡುತ್ತಿದ್ದಾರೆ. ಧಾರವಾಡದ ಬಹುತ್ವವನ್ನು, ಪ್ರಜಾತಾಂತ್ರಿಕ ಭಾವೈಕ್ಯದ ಎಳೆಯನ್ನು ಕಡಿದು ಹಾಕುತ್ತಿದ್ದಾರೆ. ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವುದೆಂದರೆ ಧಾರವಾಡದ ಅಸ್ಮಿತೆಯನ್ನು ಗೆಲ್ಲಿಸಿದಂತೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News