×
Ad

ಪದ್ಮ ಪ್ರಶಸ್ತಿಗಳು ಮತ್ತು ಚುನಾವಣಾ ರಾಜಕೀಯ

Update: 2026-01-31 11:22 IST

ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.

ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಮೇಲೆ ಭಾರತ ರತ್ನವೂ ಸೇರಿದಂತೆ ಎಲ್ಲ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹಾಗೆ ನೋಡಿದರೆ, ಈ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಕ್ಷಾತೀತವಾಗಿ ಕೇವಲ ಸಾಧನೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ನೀಡಬೇಕು. ಆಗ ಆ ಪ್ರಶಸ್ತಿಗಳಿಗೂ ಗೌರವ ಮತ್ತು ಪ್ರಶಸ್ತಿ ಸ್ವೀಕರಿಸಿದವರಿಗೂ ಹೆಮ್ಮೆಯ ಭಾವ ಉಂಟಾಗುತ್ತದೆ.

‘ಭಾರತ ರತ್ನ’ ಮತ್ತು ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ‘ಪದ್ಮ ವಿಭೂಷಣ’, ‘ಪದ್ಮಭೂಷಣ’ ಮತ್ತು ‘ಪದ್ಮಶ್ರೀ’ ಪ್ರಶಸ್ತಿಗಳನ್ನು ಕೇವಲ ಪ್ರತಿಭೆ ಮತ್ತು ಸಾಧನೆ ಆಧರಿಸಿ ನೀಡುವ ಪರಿಪಾಠ ನೆಹರೂ ಕಾಲದಿಂದಲೂ ಪಾಲಿಸಿಲ್ಲ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸುದೀರ್ಘ ಕಾಲ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಪಕ್ಷವೂ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ನಿಷ್ಪಕ್ಷವಾಗಿ ನಡೆದುಕೊಂಡಿಲ್ಲ. ಆದರೆ ನರೇಂದ್ರ ಮೋದಿಯವರಷ್ಟು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುವ ಜಾಣ್ಮೆ ಪ್ರದರ್ಶಿಸಿಲ್ಲ. ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ, ಜನಪ್ರಿಯ ನಟರೂ ಆಗಿದ್ದ ಎಂ.ಜಿ. ರಾಮಚಂದ್ರನ್ ಅವರಿಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ‘ಭಾರತ ರತ್ನ’ ನೀಡಲಾಯಿತು. ದುರಂತವೆಂದರೆ, ಅದೇ ಕಾಂಗ್ರೆಸ್ ಪಕ್ಷ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡುವ ಜಾಣ್ಮೆ ಮತ್ತು ಔದಾರ್ಯ ತೋರಲಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನೇಕ ಅನರ್ಹರನ್ನು ಜಾತಿಯ ಕಾರಣಕ್ಕೆ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಪದ್ಮ ಪ್ರಶಸ್ತಿಗಳೂ ಅನರ್ಹರ ಪಾಲಾಗಿವೆ. ಸಿನೆಮಾದ ಜನಪ್ರಿಯತೆಯೊಂದನ್ನೇ ಮಾನದಂಡವನ್ನಾಗಿ ಪರಿಗಣಿಸಿ ‘ಭಾರತ ರತ್ನ’ ನೀಡುವುದಾದರೆ ಎಂ.ಜಿ. ರಾಮಚಂದ್ರನ್ ಅವರಿಗಿಂತ ಮೊದಲು ಎನ್.ಟಿ. ರಾಮರಾವ್, ಡಾ. ರಾಜ್‌ಕುಮಾರ್ ಮುಂತಾದವರಿಗೆ ಕೊಡಬೇಕಿತ್ತು. ಕಾಂಗ್ರೆಸ್ ಪಕ್ಷ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ರತ್ನಕ್ಕೆ ಪರಿಗಣಿಸದೆ ಅನೇಕ ಅನರ್ಹರಿಗೆ ನೀಡುವ ಮೂಲಕ ಅದರ ಘನತೆ ಗೌರವ ಕಡಿಮೆ ಮಾಡಿತ್ತು. ವಿ.ಪಿ. ಸಿಂಗ್ ಪ್ರಧಾನ ಮಂತ್ರಿಯಾಗಿದ್ದಾಗ ಅಂದಿನ ಸಮ್ಮಿಶ್ರ ಸರಕಾರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ‘ಭಾರತ ರತ್ನ’ ನೀಡಿ ಗೌರವಿಸಿತು. ವ್ಯಂಗ್ಯವೆಂದರೆ ಆ ಸಮ್ಮಿಶ್ರ ಸರಕಾರದಲ್ಲಿ ಭಾರತೀಯ ಜನತಾ ಪಕ್ಷವೂ ಪಾಲುದಾರ ಆಗಿತ್ತು. ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರದಲ್ಲಿ ಅಧಿಕಾರ ಸಿಕ್ಕಾಗಲೆಲ್ಲ ‘ಭಾರತ ರತ್ನ’ ಸೇರಿದಂತೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಕೇವಲ ಜಾತಿಯ ಕಾರಣಕ್ಕೆ ಅನರ್ಹರಿಗೆ ನೀಡಲಾಗಿದೆ.

ಆದರೆ ನರೇಂದ್ರ ಮೋದಿಯವರು ‘ಭಾರತ ರತ್ನ’ ನೀಡುವಾಗಲಂತೂ ಚುನಾವಣಾ ರಾಜಕೀಯದ ಲಾಭ ಹಾನಿಗಳನ್ನು ಪ್ರಧಾನವಾಗಿ ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಅಸ್ಸಾಂ ಚುನಾವಣೆಯ ಸಂದರ್ಭದಲ್ಲಿ ಆ ರಾಜ್ಯದ ಹಿರಿಯ ಗಾಯಕ ಭೂಪೆನ್ ಹಝಾರಿಕ ಅವರನ್ನು ‘ಭಾರತ ರತ್ನ’ಕ್ಕೆ ಆಯ್ಕೆ ಮಾಡಲಾಗುತ್ತದೆ. ಭೂಪೆನ್ ಹಝಾರಿಕ ಅವರು ಲತಾ ಮಂಗೇಶ್ಕರ್ ಅವರಿಗೆ ಗುರು ಸಮಾನರು. ಆದರೆ ಲತಾ ಮಂಗೇಶ್ಕರ್ ಅವರಿಗೆ ಮೊದಲೇ ‘ಭಾರತ ರತ್ನ’ ನೀಡಲಾಗಿತ್ತು.

ಮಹಾರಾಷ್ಟ್ರ ಚುನಾವಣೆ ಸಮೀಪಸುತ್ತಿದಂತೆ ಮೋದಿಯವರು ಜನಸಂಘದ ಸ್ಥಾಪಕ ನಾನಾಜಿ ದೇಶ್‌ಮುಖ್ ಅವರಿಗೆ ‘ಭಾರತ ರತ್ನ’ ದಯಪಾಲಿಸುತ್ತಾರೆ. ಬಿಹಾರ ಚುನಾವಣೆಗೂ ಮುಂಚೆ ಹಿರಿಯ ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಮೋದಿ ಸರಕಾರ ‘ಭಾರತ ರತ್ನ’ ಪ್ರಕಟಿಸಿತ್ತು. ಲೋಕಸಭಾ ಚುನಾವಣೆಗೂ ಮುಂಚೆ ಹಿರಿಯ ರೈತ ನಾಯಕ ಚೌಧರಿ ಚರಣಸಿಂಗ್ ಅವರಿಗೆ ‘ಭಾರತ ರತ್ನ’ ನೀಡುವ ಮೂಲಕ ಎಷ್ಟು ಸಾಧ್ಯವೋ ಅಷ್ಟು ಮೋದಿಯವರು ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸಿದರು. ‘ಭಾರತ ರತ್ನ’ ಮಾತ್ರವಲ್ಲ, ಪದ್ಮ ಪ್ರಶಸ್ತಿಗಳನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕಳೆದ ಹನ್ನೊಂದು ವರ್ಷಗಳಿಂದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಜೋಡಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಳ್ಳುತ್ತಾ ಬಂದಿದೆ. ಮಹಾರಾಷ್ಟ್ರ ಚುನಾವಣೆ ಸಮೀಪಿಸಿದಾಗ ಶರದ್ ಪವಾರ್ ಅವರಿಗೆ ಪದ್ಮ ಪ್ರಶಸ್ತಿ ಪ್ರಕಟಿಸಿದರು. ಪಶ್ಚಿಮ ಬಂಗಾಳ ಚುನಾವಣೆಗೂ ಮುಂಚೆ ಕಮ್ಯುನಿಸ್ಟ್ ನಾಯಕ ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಪದ್ಮ ಗೌರವ ನೀಡಲು ಮುಂದಾಗಿದ್ದರು. ಆದರೆ ಬುದ್ಧದೇವ್ ಅವರು ಮೋದಿಯವರು ನೀಡುವ ರಾಜಕೀಯ ಗೌರವವನ್ನು ಸ್ವೀಕರಿಸಲು ಒಪ್ಪಿಕೊಳ್ಳಲಿಲ್ಲ. ಪ್ರತೀ ಬಾರಿ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸುವಾಗ ಮೋದಿ-ಅಮಿತ್ ಶಾ ಅವರಿಗೆ ರಾಜಕೀಯ ಲಾಭ ಹಾನಿಗಳು ಮುಖ್ಯವಾಗಿರುತ್ತವೆ. ಮೋಹನ್ ಭಾಗವತ್ ಸೇರಿದಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರನ್ನು ಮೋದಿ-ಅಮಿತ್ ಶಾ ಜೋಡಿ ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ. ಸಂಘದ ಹಿರಿಯ ಮುಖಂಡರನ್ನು ಸಮಾಧಾನಪಡಿಸಲು ಪದ್ಮ ಪ್ರಶಸ್ತಿಗಳನ್ನು ಬಳಸಿಕೊಳ್ಳುತ್ತಾರೆ. ಸಂಘದ ಹಿರಿಯರು ಸೂಚಿಸಿದ ನಾಲ್ಕೆಂಟು ಜನರಿಗೆ ಪದ್ಮ ಪ್ರಶಸ್ತಿ ನೀಡಿದರೆ ಸಾಕು ಆನಂದ ತುಂದಿಲರಾಗುತ್ತಾರೆ. ಸಂಘದ ಹಿರಿಯರಲ್ಲಿ ಕೆಲವರು ತಮ್ಮ ಸಮುದಾಯಕ್ಕೆ ಸೇರಿದ ಸಾಹಿತಿ, ವಿಜ್ಞಾನಿ ಅಥವಾ ಕಲಾವಿದರ ಹೆಸರು ಸೂಚಿಸಿ ಸಮಾಧಾನಪಟ್ಟು ಕೊಳ್ಳುತ್ತಾರೆ. ಹಾಗಾಗಿಯೇ ಕಳೆದ ಹನ್ನೊಂದು ವರ್ಷಗಳಲ್ಲಿ ಸಂಘನಿಷ್ಠ ಕಲಾವಿದರು ಮತ್ತು ಬುದ್ಧಿಜೀವಿಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳು ಸಂದಿವೆ. ಬಿಜೆಪಿ ಪರ ಅಥವಾ ಸಂಘನಿಷ್ಠ ಪತ್ರಕರ್ತರು, ಸಮಾಜ ಸೇವಕರು, ಕಲಾವಿದರು ಪದ್ಮ ಪ್ರಶಸ್ತಿಗೆ ಭಾಜನರಾಗಿರುವುದು ಗಮನಿಸಬಹುದು.

ಸಂಘನಿಷ್ಠರನ್ನು ಹೊರತು ಪಡಿಸಿ ಚುನಾವಣಾ ರಾಜಕೀಯ ಲೆಕ್ಕಾಚಾರದಲ್ಲಿ ಹಲವರಿಗೆ ‘ಭಾರತ ರತ್ನ’ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ. ಬಿಹಾರದ ಕರ್ಪೂರಿ ಠಾಕೂರ್ ಹೇಳಿಕೇಳಿ ಸಮಾಜವಾದಿ ಹಿನ್ನೆಲೆಯಿಂದ ಬಂದ ನಾಯಕ. ರಾಮಮನೋಹರ್ ಲೋಹಿಯಾ ಅವರ ಶಿಷ್ಯ. ಚುನಾವಣಾ ರಾಜಕೀಯ ಕಾರಣಕ್ಕೆ ಅವರಿಗೆ ‘ಭಾರತ ರತ್ನ’ ನೀಡಲಾಯಿತು. ಬಿಹಾರ ರಾಜ್ಯದಲ್ಲಿ ಕರ್ಪೂರಿ ಠಾಕೂರ್ ಅವರ ಶಿಷ್ಯ ಬಳಗ ಅಪಾರ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರ್ಪೂರಿ ಠಾಕೂರ್ ಅವರ ಶಿಷ್ಯ.

ಮೇಲ್ನೋಟಕ್ಕೆ ಮೋದಿ ನಡೆ ಗುಣಗ್ರಾಹಿ ಎನಿಸಿಕೊಂಡರೂ ಆಳದಲ್ಲಿ ಅದು ಅವಕಾಶವಾದಿ ಲೆಕ್ಕಾಚಾರ ಹೊಂದಿರುತ್ತದೆ.

ಈ ಬಾರಿಯ ಪದ್ಮ ಪ್ರಶಸ್ತಿಗಳ ಪಟ್ಟಿ ಮೇಲೆ ಕಣ್ಣಾಡಿಸಿದರೆ ನರೇಂದ್ರ ಮೋದಿ ಮತ್ತು ಆಮಿತ್ ಶಾ ಅವರ ರಾಜಕೀಯ ಲೆಕ್ಕಾಚಾರ ನಿಚ್ಚಳವಾಗುತ್ತದೆ. 2026ನೇ ಸಾಲಿನ ಪದ್ಮ ಪ್ರಶಸ್ತಿಯಲ್ಲಿ ಚುನಾವಣಾ ರಾಜಕೀಯ ಢಾಳಾಗಿ ಗೋಚರಿಸುತ್ತದೆ. ಒಟ್ಟು 131ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ರಾಜ್ಯಗಳಿಗೆ ಅತಿ ಹೆಚ್ಚು ಪದ್ಮ ಪ್ರಶಸ್ತಿಗಳನ್ನು ದಯಪಾಲಿಸಲಾಗಿದೆ. ತಮಿಳುನಾಡು ರಾಜ್ಯಕ್ಕೆ ಹದಿಮೂರು ಪದ್ಮ ಪ್ರಶಸ್ತಿಗಳು ಹೋಗಿವೆ. ಪಶ್ಚಿಮ ಬಂಗಾಳಕ್ಕೆ ಹನ್ನೊಂದು, ಕೇರಳಕ್ಕೆ ಎಂಟು, ಅಸ್ಸಾಂ ರಾಜ್ಯಕ್ಕೆ ಐದು ಮತ್ತು ಪುದುಚೇರಿಗೆ ಒಂದು ಪದ್ಮ ಪ್ರಶಸ್ತಿ ದಯಪಾಲಿಸಿದ್ದಾರೆ. ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಚುನಾವಣೆ ನಡೆಯುವ ಐದು ರಾಜ್ಯಗಳಿಗೆ 38 ಪದ್ಮ ಪ್ರಶಸ್ತಿಗಳನ್ನು ನೀಡಲಾಗಿದೆ.

ಒಟ್ಟು 131 ಪದ್ಮ ಪ್ರಶಸ್ತಿಗಳಲ್ಲಿ ಐದು ಪದ್ಮ ವಿಭೂಷಣ, ಹದಿಮೂರು ಪದ್ಮಭೂಷಣ ಮತ್ತು 113 ಪದ್ಮಶ್ರೀ ಸೇರಿವೆ.ಗಮನಿಸಬೇಕಾದ ಸಂಗತಿಯೆಂದರೆ, ಐದು ಪದ್ಮವಿಭೂಷಣಗಳಲ್ಲಿ ಮೂರು ಕೇರಳ ರಾಜ್ಯದವರಿಗೆ ನೀಡಲಾಗಿದೆ. ಒಂದು ತಮಿಳುನಾಡು ರಾಜ್ಯದವರಿಗೆ ಇನ್ನೊಂದು ಮಹಾರಾಷ್ಟ್ರ ಅಂತ ತೋರಿಸಿದ್ದಾರೆ. ಆದರೆ ಹಿರಿಯ ಚಿತ್ರ ನಟ ಧರ್ಮೇಂದ್ರ ಮೂಲತಃ ಮಹಾರಾಷ್ಟ್ರದವರಲ್ಲ. ಹಿರಿಯ ಸಂಗೀತ ಕಲಾವಿದೆ ಎನ್. ರಾಜಮ್ಮ ಮೂಲತಃ ತಮಿಳುನಾಡಿನವರು. ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರನ್ನು ಉತ್ತರ ಪ್ರದೇಶದವರು ಎಂದು ಗುರುತಿಸಲಾಗಿದೆ. ಚುನಾವಣೆ ನಡೆಯುವ ರಾಜ್ಯಗಳನ್ನು ಹೊರತು ಪಡಿಸಿದರೆ ಅತಿ ಹೆಚ್ಚು ಅಂದರೆ ಹನ್ನೊಂದು ಪದ್ಮ ಪ್ರಶಸ್ತಿಗಳು ಮಹಾರಾಷ್ಟ್ರ ರಾಜ್ಯದವರ ಪಾಲಾಗಿವೆ. ಆರೆಸ್ಸೆಸ್ ಹೆಡ್‌ಕ್ವಾರ್ಟರ್ ಇರುವುದು ಮಹಾರಾಷ್ಟ್ರದ ನಾಗಪುರದಲ್ಲಿ. ಸಂಘದ ಹಿರಿಯರು ನೀಡಿದ ಹೆಸರುಗಳನ್ನು ಪದ್ಮ ಪ್ರಶಸ್ತಿಗೆ ಪರಿಗಣಿಸಿದ್ದರಿಂದ ಹನ್ನೊಂದು ಜನ ಪದ್ಮ ಪುರಸ್ಕೃತರು ಮಹಾರಾಷ್ಟ್ರದವರಿದ್ದಾರೆ. ಪಶ್ಚಿಮ ಬಂಗಾಳದ ಹನ್ನೊಂದು ಜನರಿಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ ರಾಜ್ಯವು ಚುನಾವಣೆ ಎದುರಿಸುವ ಅತ್ಯಂತ ಮಹತ್ವದ ರಾಜ್ಯವಾಗಿದೆ.

ಹಿರಿಯ ನಟ ಮಮ್ಮುಟ್ಟಿ ಕೇರಳ ರಾಜ್ಯದವರು. ಅವರನ್ನು ಈ ಬಾರಿ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆ ನೋಡಿದರೆ ಮಮ್ಮುಟ್ಟಿಯವರಿಗೆ ಎಂದೋ ಪದ್ಮವಿಭೂಷಣವೇ ನೀಡಿ ಗೌರವಿಸಬೇಕಿತ್ತು. ಅವರಿಗಿಂತ ಕಿರಿಯರಾದ ಮೋಹನ್ ಲಾಲ್, ಚಿರಂಜೀವಿ, ಕಮಲ್ ಹಾಸನ್ ಅವರಿಗೆ ಬಹಳ ಹಿಂದೆಯೇ ಪದ್ಮ ಭೂಷಣ ನೀಡಲಾಗಿದೆ. ಮಮ್ಮುಟ್ಟಿ ಮೊದಲಿನಿಂದಲೂ ಬಿಜೆಪಿ ಆರಾಧಕರಲ್ಲ. ಸಂಗೀತ ನಿರ್ದೇಶಕ ಇಳಯರಾಜ, ಚಿತ್ರನಟರಾದ ರಜನೀಕಾಂತ್, ಮೋಹನ್ ಲಾಲ್, ಗಾಯಕ ಯೇಸುದಾಸ್ ಮುಂತಾದವರು ಮೋದಿ ಭಕ್ತರು. ಆ ಕಾರಣಕ್ಕೆ ಅವರಿಗೆ ಈ ಹಿಂದೆಯೇ ಪದ್ಮ ಗೌರವ ಮತ್ತು ರಾಜಕೀಯ ಸ್ಥಾನಮಾನ ಸಂದಿವೆ. ಇಳಯರಾಜ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಬಿಜೆಪಿ ಸರಕಾರ ನಾಮಕರಣ ಮಾಡಿದೆ.

ಕೇರಳದಲ್ಲಿ ಚುನಾವಣೆ ನಡೆಯುವ ಸಂದರ್ಭ ಎದುರಾಗಿದ್ದರಿಂದ ಅನಿವಾರ್ಯವಾಗಿ ಮಮ್ಮುಟ್ಟಿಯವರಿಗೆ ಪದ್ಮಭೂಷಣ ನೀಡಲಾಗಿದೆ. 2012ರಲ್ಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಕೇಂದ್ರದಲ್ಲಿ ಮೋದಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿದು ದಶಕಗಳೇ ಕಳೆದಿವೆ. ಈಗ ಹಿರಿಯ ಚಿತ್ರ ನಟ ಮಮ್ಮುಟ್ಟಿ ಹೆಸರು ನೆನಪಿಗೆ ಬಂದಿದೆ. ಮಮ್ಮುಟ್ಟಿ ಮುಸ್ಲಿಮ್ ಸಮುದಾಯಕ್ಕೆ ಸೇರಿದವರು ಮತ್ತು ಸೈದ್ಧಾಂತಿಕವಾಗಿ ಬಿಜೆಪಿಯನ್ನು ಇಷ್ಟಪಡದವರು.

ಈ ಬಾರಿ ಕೇರಳದ ಮಾಜಿ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರನ್ನು ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಸೇರಿದ್ದ ಅಚ್ಯುತಾನಂದನ್ ತಮ್ಮ ಬದುಕಿನುದ್ದಕ್ಕೂ ಸೈದ್ಧಾಂತಿಕವಾಗಿ ಬಿಜೆಪಿ ಮತ್ತು ಆರೆಸ್ಸೆಸ್ ತತ್ವಗಳನ್ನು ವಿರೋಧಿಸಿದವರು. ಮೋದಿ ಮತ್ತು ಅಮಿತ್ ಶಾ ಅವರಿಗೆ ಹೇಗಾದರೂ ಮಾಡಿ ಕೇರಳ ರಾಜ್ಯದಲ್ಲಿ ಕೇಸರಿ ಧ್ವಜ ಹಾರಿಸಬೇಕಿದೆ. ಹಾಗಾಗಿ ಅವರು ಕಮ್ಯುನಿಸ್ಟ್ ಪಕ್ಷವನ್ನು ಛಿದ್ರ ಮಾಡಲು ಹೊರಟಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೆಲೆ ವಿಸ್ತಾರವಾಗಿದ್ದೇ ಕಮ್ಯುನಿಸ್ಟ್ ಕೋಟೆ ಛಿದ್ರಗೊಳಿಸಿದ್ದರಿಂದ. ಅಚ್ಯುತಾನಂದನ್ ಕುಟುಂಬವೂ ಪದ್ಮವಿಭೂಷಣ ಪ್ರಶಸ್ತಿ ಒಪ್ಪಿಕೊಂಡಿದೆ. ವಿ.ಎಸ್. ಅಚ್ಯುತಾನಂದನ್ ಕೇರಳದಲ್ಲಿ ಗಣನೀಯ ಪ್ರಮಾಣದಲ್ಲಿರುವ ಈಳವ ಸಮುದಾಯಕ್ಕೆ ಸೇರಿದವರು.

ಈ ಬಾರಿಯ ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ತದ್ವಿರುದ್ಧ ನಿಲುವು ಅನುಸರಿಸಲಾಗಿದೆ. ಒಂದಕ್ಕೊಂದು ತಾಳಮೇಳವೇ ಇಲ್ಲ. ವಿ. ಎಸ್. ಅಚ್ಯುತಾನಂದನ್ ಕಮ್ಯುನಿಸ್ಟ್ ಸಿದ್ಧಾಂತ ಅಪ್ಪಿಕೊಂಡವರು. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿ ಆರೆಸ್ಸೆಸ್ ಮೂಲದವರು. ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದಾಗ ರಾತ್ರೊರಾತ್ರಿ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಪ್ರಮಾಣ ವಚನ ಬೋಧಿಸಿ ಸರಕಾರ ಅತಂತ್ರಗೊಳಿಸಲು ಯತ್ನಿಸಿದವರು. ಜಾರ್ಖಂಡ್‌ನ ಹಿರಿಯ ನಾಯಕ ಶಿಬು ಸೊರೇನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ನೀಡಲಾಗಿದೆ. ಜೆಎಂಎಂ ಲಂಚ ಪ್ರಕರಣದಲ್ಲಿ ಶಿಬು ಸೂರೇನ್ ಆರೋಪಿಯಾಗಿದ್ದರು. ಶಿಬು ಸೊರೇನ್ ಅವರಿಗೆ ಪದ್ಮ ಗೌರವ ದಯಪಾಲಿಸಿದ್ದು ಮಾತ್ರ ರಾಜಕೀಯ ಕಾರಣಕ್ಕೆ. ದ್ವೇಷ ಭಾಷಣಕ್ಕೆ ಹೆಸರುವಾಸಿಯಾದ ವೆಲ್ಲಪಳ್ಳಿ ನಟೇಶನ್ ಅವರಿಗೆ ಪದ್ಮ ಗೌರವ ನೀಡಿದ್ದಾರೆ. ಒಟ್ಟು ಹದಿನಾಲ್ಕು ಜನರಿಗೆ ಮರಣೋತ್ತರವಾಗಿ ಪದ್ಮ ಗೌರವ ನೀಡಿದ್ದಾರೆ. ಅದರಲ್ಲಿ ಹಿರಿಯ ಚಿತ್ರ ನಟ ಧರ್ಮೇಂದ್ರ, ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಪ್ರಮುಖರು. ಬಿಜೆಪಿ ಸಂಸದೆ ಹೇಮಾ ಮಾಲಿನಿಯವರ ಪತಿ ಧರ್ಮೇಂದ್ರ ಅವರಿಗೆ ಬದುಕಿದ್ದಾಗಲೇ ಪದ್ಮಭೂಷಣ ನೀಡಬಹುದಿತ್ತು.

ಇನ್ನು ಕರ್ನಾಟಕದ ಎಂಟು ಜನರನ್ನು ಪದ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಶತಾವಧಾನಿ ಗಣೇಶ್ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಗಣೇಶ್ ಅವರಿಗಿಂತ ಹಿರಿಯರು ಹಲವರಿದ್ದಾರೆ. ಆದರೆ ಅವರ್ಯಾರೂ ಆರೆಸ್ಸೆಸ್ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡವರಲ್ಲ. ಜಿ.ಎಸ್. ಶಿವರುದ್ರಪ್ಪ, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲರಂಥ ಹಿರಿಯ ಸಾಹಿತಿಗಳಿಗೆ ಸಿಗದ ಪದ್ಮಭೂಷಣ ಗೌರವ ಶತಾವಧಾನಿ ಗಣೇಶ್ ಅವರಿಗೆ ದೊರೆತಿದೆಯೆಂದರೆ ಅದನ್ನು ಅನುಮಾನದಿಂದಲೇ ನೋಡಬೇಕು. ಗಣೇಶ್ ಆಯ್ಕೆ ಅಪ್ಪಟ ಜಾತಿವಾದಿ ಆರೆಸ್ಸೆಸ್ ಮುಖಂಡರ ಆಯ್ಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಪದ್ಮ ಗೌರವಕ್ಕೆ ಭಾಜನರಾಗಿರುವ ಕರ್ನಾಟಕದ ಒಟ್ಟು ಎಂಟು ಜನರಲ್ಲಿ ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಹಿಮೋಫಿಲಿ ವೈದ್ಯ ಡಾ. ಸುರೇಶ್ ಹನಗವಾಡಿ ಹೊರತು ಪಡಿಸಿದರೆ ಉಳಿದ ಆರು ಜನರು ಯಾವ ಮಾನದಂಡದಲ್ಲೂ ಜನ ಮೆಚ್ಚುವ ಸಾಧಕರಲ್ಲ. ಶುಭಾ ವೆಂಕಟೇಶ್ ಅಯ್ಯಂಗಾರ್, ಉದ್ಯಮಿ ಟಿ.ಟಿ. ಜಗನ್ನಾಥ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪದ್ಮ ಗೌರವಕ್ಕೆ ಪಾತ್ರರಾದ ಶಶಿಶೇಖರ ವೆಂಪತಿ ಪಕ್ಕಾ ಆರೆಸ್ಸೆಸ್ ಆಯ್ಕೆ. ಅಂಕೆಗೌಡರ ಬದಲಿಗೆ ಪುಸ್ತಕಮನೆ ಹರಿಹರಪ್ರಿಯರನ್ನು ಪದ್ಮ ಗೌರವಕ್ಕೆ ಆಯ್ಕೆ ಮಾಡಿದ್ದರೂ ಉತ್ತಮ ಆಯ್ಕೆ ಎನಿಸಿಕೊಳ್ಳುತ್ತಿತ್ತು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರ ವಿಭಾಗದಲ್ಲಿ ಪದ್ಮಶ್ರೀಗೆ ಆಯ್ಕೆಯಾದ ಪ್ರಭಾಕರ್ ಕೋರೆ ಪದ್ಮ ಗೌರವಕ್ಕೆ ಕಳಂಕ. ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದವರು ಸಪ್ತರ್ಶಿಗಳು. ಎಸ್.ಎಸ್. ಬಸವನಾಳ, ಬಿ.ಬಿ. ಮಮದಾಪುರ, ಎಂ. ಆರ್. ಸಾಖರೆ, ಎಚ್.ಎಫ್. ಕಟ್ಟಿಮನಿ, ಬಿ.ಎಸ್. ಹಂಚಿನಾಳ, ಪಿ.ಆರ್. ಚಿಕೋಡಿ, ವಿ.ವಿ. ಪಾಟೀಲ್ ತ್ಯಾಗದ ಫಲವಾಗಿ ಸಂಸ್ಥೆ ಹುಟ್ಟಿಕೊಂಡಿತ್ತು. ರಾವ್ ಬಹಾದ್ದೂರ್ ಅರಟಾಳ ರುದ್ರಗೌಡರು, ರಾವ್ ಬಹಾದ್ದೂರ್, ವಿ.ಜಿ. ನಾಯಕ ಮತ್ತು ರಾವ್ ಬಹಾದ್ದೂರ್ ವೈಜಪ್ಪ ಅನಿಗೋಳ ಉದಾರವಾಗಿ ದಾನ ಮಾಡಿದ್ದರ ಪರಿಣಾಮವಾಗಿ ಆ ಸಂಸ್ಥೆ ಬೆಳೆದಿದೆ. ಪ್ರಭಾಕರ್ ಕೋರೆ ಲಾಭಕೋರ ಅಷ್ಟೇ. ಸ್ವಂತ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಬೆಳೆಸಿದವರಿಗೆ ಈ ಪ್ರಶಸ್ತಿ ನೀಡಿದರೂ ಸಾರ್ಥಕ ಎನಿಸುತ್ತಿತ್ತು.

ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ರಾಜಕೀಯವನ್ನೇ ಉಸಿರಾಡುವವರು. ಅವರಿಗೆ ಸಾಧಕರು ಬೇಕಾಗಿಲ್ಲ. ಎಲ್ಲವೂ ಬಿಕರಿಗೆ ಇಟ್ಟು ಚುನಾವಣೆ ಗೆಲ್ಲಬೇಕಿದೆ. ಪದ್ಮ ಗೌರವಗಳನ್ನು ಲಾಭಕ್ಕಾಗಿ ಹಂಚಿದ್ದಾರೆ. ಸಾಹಿತ್ಯ, ಕಲೆ, ನಿಜವಾದ ಸಮಾಜ ಸೇವೆ ಅವರಿಗೆ ಬೇಕಿಲ್ಲ. ಚುನಾವಣೆಯಲ್ಲಿ ಲಾಭ ತಂದುಕೊಡುವ ಸಾಧಕರಿಗೆ ಮಾತ್ರ ಮನ್ನಣೆ. ನಿಜವಾದ ಸಾಧಕರು ಪದ್ಮ ಗೌರವದಿಂದ ದೂರ ಉಳಿಯುವುದೇ ಲೇಸು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News