ಆಳಂದ: ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಯಳಸಂಗಿಯಲ್ಲಿ ರಸ್ತೆ ಚಳವಳಿ
ಆಳಂದ: ತಾಲೂಕಿನ ಯಳಸಂಗಿ ಗ್ರಾಮದಲ್ಲಿ ಉಲ್ಬಣಿಸಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಸೋಮವಾರ ಸುಮಾರು 10 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಸ್ವಾಮಿ ವಿವೇಕಾನಂದ ಕ್ರಾಸ್ ಸಮೀಪ ನಿಂಬರ್ಗಾ–ನಿಂಬಾಳ ಹಾಗೂ ಯಳಸಂಗಿ–ಆಳಂದ ಮಾರ್ಗದಲ್ಲಿ ಮಹಿಳೆಯರು ಖಾಲಿ ಕೊಡಗಳೊಂದಿಗೆ ಬಿಸಿಲಿನಲ್ಲೇ ಕುಳಿತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ಸಲ್ಲಿಸಿದ್ದರೂ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡರು. ಈ ಹಿಂದೆ ಎರಡು ಬಾರಿ ಪ್ರತಿಭಟನೆ ನಡೆಸಿದ್ದರೂ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ಸೋಮವಾರ ರಸ್ತೆ ಚಳವಳಿ ನಡೆಸಲಾಯಿತು.
ಮಧ್ಯಾಹ್ನ 2ರ ಸುಮಾರಿಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ನೋಡಲ್ ಅಧಿಕಾರಿ ಡಾ. ಯಲ್ಲಪ್ಪ ಇಂಗಳೆ ಹಾಗೂ ಗ್ರಾ.ಪಂ. ಪಿಡಿಒ ಶಿವಾನಂದ ಹಡಪದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಶೀಘ್ರ ಬಗೆಹರಿಸುವ ಭರವಸೆ ನೀಡಿದರು. ಆದರೆ ಪ್ರತಿಭಟನಾಕಾರರು, “ಮೊದಲು ನೀರು ಕೊಡಿ, ನಂತರ ಮಾತನಾಡಿ” ಎಂದು ಪಟ್ಟು ಹಿಡಿದರು.
ಸ್ಥಳದಲ್ಲಿಯೇ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಗ್ರಾಮದ ಐದು ಕೊಳವೆಬಾವಿಗಳನ್ನು ಸ್ವಚ್ಛಗೊಳಿಸುವುದು, ಹೊಸ ಪೈಪ್‌ಲೈನ್ ಅಳವಡಿಸುವುದು, ಹಳೆಯ ಪೈಪ್‌ಲೈನ್ ದುರಸ್ತಿ, ಹಡಲಗಿ ಬಾವಿಯ ಪಂಪ್‌ಸೆಟ್‌ಗೆ ಕೇಬಲ್ ಅಳವಡಿಕೆ ಹಾಗೂ ತಾಂಡಾ ಸಮೀಪದ ಎರಡು ಕೊಳವೆಬಾವಿಗಳನ್ನು ಸ್ವಚ್ಛಗೊಳಿಸಿ ಪೈಪ್‌ಲೈನ್ ಸಂಪರ್ಕ ಕಲ್ಪಿಸುವಂತೆ ಸೂಚಿಸಲಾಯಿತು. ಅನಧಿಕೃತವಾಗಿ ಮನೆಗಳಿಗೆ ಮಾಡಿಕೊಂಡಿರುವ ನಳ ಸಂಪರ್ಕಗಳನ್ನು ಕೂಡಲೇ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಾಯಿತು.
ಸಂಜೆ 4 ಗಂಟೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ರಸ್ತೆ ತಡೆ ಹಿನ್ನೆಲೆಯಲ್ಲಿ ಆಳಂದ, ನಿಂಬಾಳ, ಮಾದನ ಹಿಪ್ಪರಗಾ, ನಿಂಬರ್ಗಾ ಹಾಗೂ ಕಲಬುರಗಿಗೆ ಸಂಚರಿಸುವ ಸಾರಿಗೆ ಬಸ್‌ಗಳು ಸೇರಿದಂತೆ ವಾಹನ ಸಂಚಾರಕ್ಕೆ ಅಡಚಣೆಯಾಗಿ ಸಾರ್ವಜನಿಕರು ಪರದಾಡುವಂತಾಯಿತು.
ಭೀಮಣ್ಣ ಎಂ. ಶಿವಪೂರೆ, ಸಾತಲಿಂಗಯ್ಯ ಮಠಪತಿ, ವಿಜಯಕುಮಾರ ಮೇತ್ರೆ, ರಾಜಶೇಖರ ಸಾವಳೆ, ಮಂಜುನಾಥ ಅಕ್ಕಲಕೋಟ, ಶರೀಫಾ ನದಾಫ್, ಕಲ್ಲವ್ವ ಬಸಗೋಂಡ, ಲಕ್ಷ್ಮೀಬಾಯಿ ಅವಟೆ, ಅಂಬಿಕಾ ಕಲಾಲ, ಜುಬಾ ಗೊಲ್ಲರ, ಮಹಾದೇವಿ ಅಕ್ಕಲಕೋಟ, ಸಿದ್ಧರಾಮ ಅವಟೆ, ಶಿವಪುತ್ರ ಯಲ್ದೆ, ಶಾಂತಗೌಡ ಪಾಟೀಲ್, ಪುತಳಾಬಾಯಿ ಅವಟೆ, ಶಿವಲೀಲಾ, ನೀಲಮ್ಮ ಅವಟೆ ಸೇರಿದಂತೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.