ಕೆಬಿಎನ್ ವಿವಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ: ಪ್ರೊ. ಅಶ್ಫಾಕ್ ಅಹ್ಮದ್
ಕಲಬುರಗಿ: ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಒತ್ತಡದ ಬದುಕಿನ ನಡುವೆ ಮನಸ್ಸನ್ನು ಉಲ್ಲಾಸಗೊಳಿಸಲು ಕ್ರೀಡೆ ಪರಿಣಾಮಕಾರಿ ಸಾಧನವಾಗಿದೆ. ಕೆಬಿಎನ್ ವಿವಿಯ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ವಿವಿಯ ಸಮ-ಉಪಕುಲಪತಿ ಪ್ರೊ. ಅಶ್ಫಾಕ್ ಅಹ್ಮದ್ ಹೇಳಿದರು.
ಖ್ವಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ-2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಬಿಎನ್ ಟರ್ಫ್ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿದೆ. ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರು ಕ್ರೀಡೆಗಳಿಗೆ ವಿಶೇಷ ಆಸಕ್ತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡೆಗಳು ಮನಸ್ಸನ್ನು ತಾಜಾಗೊಳಿಸುವುದರ ಜತೆಗೆ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತವೆ. ಕ್ರೀಡಾಂಗಣಕ್ಕೆ ಪ್ರವೇಶಿಸಿದಾಗ ಒತ್ತಡ ಕಡಿಮೆಯಾಗಿ, ಹೊಸ ಉತ್ಸಾಹ ಮೂಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಆಯೋಜನೆಗೆ ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದ ಅವರು, ಇಂತಹ ಕಾರ್ಯಕ್ರಮಗಳು ತಂಡದ ಮನೋಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಗುತ್ತವೆ. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿಶ್ವವಿದ್ಯಾಲಯದ ಕುಲಸಚಿವ ಮಿರ್ ವಿಲಾಯತ್ ಅಲಿ ಮಾತನಾಡಿ, ಆಟಗಳಲ್ಲಿ ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ನಿಜವಾದ ಗೆಲುವು ಎಂದರೆ ಭಾಗವಹಿಸುವಿಕೆ ಎಂದು ಹೇಳಿದರು.
ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಇಂತಹ ಅವಕಾಶಗಳು ಅಗತ್ಯವಾಗಿವೆ. ಕ್ಯಾಂಪಸ್ ನಿರ್ದೇಶಕ ಜನಾಬ್ ಡಾ. ಸಯ್ಯದ್ ಮುಸ್ತಫಾ ಹುಸ್ಸೇನಿ ಅವರು ಕೂಡ ವಿದ್ಯಾರ್ಥಿಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಕೆಬಿಎನ್ ಟರ್ಫ್ ಮೈದಾನದಲ್ಲಿ ಕ್ರಿಕೆಟ್, ಫುಟ್ಬಾಲ್ ಹಾಗೂ ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಇನ್ನೂ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಬರುವ ನವೆಂಬರ್‌ನಿಂದ *‘ಕೆಬಿಎನ್ ಗೋಲ್ಡ್ ಕಪ್’* ಆರಂಭವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿಯ ಸಂಚಾರದ ಬಳಿಕ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.
ಆರು ದಿನಗಳ ಕಾಲ ನಡೆಯಲಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬದಲ್ಲಿ ಕ್ಯಾರಂ, ಚೆಸ್, ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋಬಾಲ್, ಶಾಟ್‌ಪುಟ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ಹಾಗೂ ರಂಗೋಲಿ, ಮೆಹಂದಿ, ಪೇಂಟಿಂಗ್, ಪೋಸ್ಟರ್ ತಯಾರಿ, ಗಾಯನ ಮತ್ತು ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಅನೂಪ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಮರೂಫ್ ವಂದಿಸಿದರು. ವಿದ್ಯಾರ್ಥಿಗಳಾದ ಆಯೇಷಾ ಫಾತಿಮಾ ಹಾಗೂ ಸನಾ ಮೆಹಕ್ ನಿರೂಪಿಸಿದರು. ಸ್ಟೂಡೆಂಟ್ ಕೌನ್ಸಿಲ್ ಕುರಿತು ವೈದ್ಯಕೀಯ ವಿದ್ಯಾರ್ಥಿ ಅಫ್ರೋಜ್ ಪರಿಚಯ ನೀಡಿದರು.
ಕೆಬಿಎನ್ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಡೀನ್ ಡಾ. ಜಮಾ ಮೂಸ್ವಿ, ಮೆಡಿಕಲ್ ಡೀನ್ ಡಾ. ಗುರುಪ್ರಸಾದ್, ಐಕ್ಯೂಎಸಿ ನಿರ್ದೇಶಕ ಡಾ. ಅಬ್ದುಲ್ ಬಸೀರ್, ಎಂಜಿನಿಯರಿಂಗ್ ಡೀನ್ ಪ್ರೊ. ಸುಭಾಷ್ ಕಮಲ್, ಶಿಕ್ಷಣ ಡೀನ್ ಮೊಹಮ್ಮದ್ ಇಕ್ಬಾಲ್, ವಾಣಿಜ್ಯ ಡೀನ್ ಪ್ರೊ. ಶ್ರೀನಿವಾಸ್ ಸೇರಿದಂತೆ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.