ಚಿಂಚೋಳಿ: ವನ್ಯಜೀವಿ ಹಾಗೂ ಅರಣ್ಯ ಸಂರಕ್ಷಣೆಯ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘72ನೇ ವನ್ಯಜೀವಿ ಸಪ್ತಾಹ–2026’ರ ಅಂಗವಾಗಿ ಚಂದಾಪುರದಿಂದ ಚಂದ್ರಂಪಳ್ಳಿವರೆಗೆ 10 ಕಿ.ಮೀ. ಬೃಹತ್ ಜಾಗೃತಿ ವಾಕಥಾನ್ ನಡೆಯಿತು.

ಅರಣ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗ ಕಲಬುರಗಿ (ವನ್ಯಜೀವಿ ವಲಯ, ಚಿಂಚೋಳಿ) ಸಂಯುಕ್ತಾಶ್ರಯದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದ್ದ ವಾಕಥಾನ್‌ಗೆ ಚಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬೆಳಿಗ್ಗೆ 6.30ಕ್ಕೆ ಚಾಲನೆ ನೀಡಲಾಯಿತು. ಕಾಲ್ನಡಿಗೆ ಜಾಥಾವು ಚಂದಾಪುರದಿಂದ ಆರಂಭಗೊಂಡು ಚಂದ್ರಂಪಳ್ಳಿ ನಿಸರ್ಗಧಾಮದವರೆಗೆ ಸಾಗಿತು.

‘ನಮ್ಮ ಹೆಜ್ಜೆ ವನ್ಯಜೀವಿ ಸಂರಕ್ಷಣೆ ಕಡೆ’ ಎಂಬ ಘೋಷವಾಕ್ಯದೊಂದಿಗೆ ನಡೆದ ವಾಕಥಾನ್‌ನಲ್ಲಿ ಅರಣ್ಯ ನಾಶ, ವನ್ಯಜೀವಿಗಳ ಆವಾಸಸ್ಥಾನಗಳ ಕುಸಿತ ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ಒತ್ತಡದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಪ್ರಕೃತಿ ಸಂಪತ್ತು ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂಬ ಸಂದೇಶವನ್ನು ವಾಕಥಾನ್ ಮೂಲಕ ಸಾರಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ (DCF) ಎಂ.ಎ. ಆಶಿಶ್ ರೆಡ್ಡಿ, ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಗರ ತಾವಡೆ, ತಾಲೂಕು ದಂಡಾಧಿಕಾರಿ ಸುಬ್ಬಣ್ಣ ಜಮಖಂಡಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಚವ್ಹಾಣ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಸುನಿಲಕುಮಾರ ಚವ್ಹಾಣ, ಉಪವಲಯ ಅರಣ್ಯ ಅಧಿಕಾರಿಗಳಾದ ಸಂಜುಕುಮಾರ ಚವ್ಹಾಣ ಹಾಗೂ ಜಗನ್ನಾಥ ಕೀರಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಧ್ವಜ ತೋರಿಸುವ ಮೂಲಕ ವಾಕಥಾನ್‌ಗೆ ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಿದರು.

ವಾಕಥಾನ್‌ನಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ವಕೀಲರು, ಪರಿಸರಾಸಕ್ತರು, ಪ್ರಕೃತಿಮಿತ್ರರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಜಾಗೃತಿ ಜಾಥಾಕ್ಕೆ ಉಡುಪಿ ತಂಡದ ಹುಲಿ ನೃತ್ಯ ಹಾಗೂ ಡೊಳ್ಳು ಕುಣಿತ ವಿಶೇಷ ಮೆರುಗು ನೀಡಿತು. ಸಾಂಸ್ಕೃತಿಕ ಕಲಾಪ್ರದರ್ಶನದೊಂದಿಗೆ ಸಾಗಿದ ವಾಕಥಾನ್ ಸಾರ್ವಜನಿಕರ ಗಮನ ಸೆಳೆಯಿತು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor