ಕಲಬುರಗಿ: ಸಾಹಿತಿಗಳು ಮತ್ತು ವಿಮರ್ಶಕರು ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸುವುದರ ಜೊತೆಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ ಸಮಾಜದ ಆಗುಹೋಗುಗಳನ್ನೂ ವಿಮರ್ಶಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕನ್ನಡ ವಿಭಾಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ‘ಕನ್ನಡ ವಿಮರ್ಶೆಯ ತಾತ್ವೀಕರಣ’ ವಿಷಯದ ಮೂರು ದಿನಗಳ ಕಮ್ಮಟವನ್ನು ಬುಧವಾರ ಸಿಯುಕೆಯ ಕನ್ನಡ ವಿಭಾಗದ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಜೊತೆಗೆ ಸಿನಿಮಾ, ರಂಗಭೂಮಿ, ನಾಟಕ, ಪತ್ರಿಕೋದ್ಯಮ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗಳನ್ನೂ ವಿಮರ್ಶೆಯ ವ್ಯಾಪ್ತಿಗೆ ತರಬೇಕಾಗಿದೆ. ಅನೇಕ ಯುವ ಸಾಹಿತಿಗಳು ತಮ್ಮ ಬರವಣಿಗೆಯ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ. ಅಂತಹ ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಸಂಕಷ್ಟದ ಪರಿಸ್ಥಿತಿಗಳಲ್ಲಿಯೂ ವಿಮರ್ಶಕರು ಹಾಗೂ ಸಾಹಿತ್ಯಕಾರರು ಸತ್ಯವನ್ನು ಹೇಳುವ ಧೈರ್ಯ ಹೊಂದಿರಬೇಕು. ಮೌನಕ್ಕೆ ಶರಣಾಗುವುದು ಆತ್ಮಾಹುತಿಗೆ ಸಮಾನ. ಸಮಾಜದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಅಗತ್ಯವಿದ್ದಲ್ಲಿ ತಮ್ಮ ಬರವಣಿಗೆಯ ಮೂಲಕ ಪ್ರಶ್ನಿಸುವ ಮತ್ತು ಪ್ರತಿರೋಧಿಸುವ ಮನೋಭಾವವನ್ನು ಸಾಹಿತಿಗಳು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ಯಾವುದೇ ಭಾಷೆಯನ್ನು ಪ್ರೀತಿಸುವುದರ ಜೊತೆಗೆ ಗೌರವಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯದಂತೆ ವಿದ್ಯಾರ್ಥಿಗಳಿಗೆ ತಮ್ಮ ಪ್ರಾದೇಶಿಕ ಭಾಷೆಯಲ್ಲಿಯೇ ಶಿಕ್ಷಣ ನೀಡುವುದರಿಂದ ವಿಷಯಗಳನ್ನು, ವಿಶೇಷವಾಗಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಜ್ಞಾನವನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದರು.

ಜಪಾನ್, ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ನೀಡಲಾಗುತ್ತಿದೆ. ಅದೇ ರೀತಿ ಕನ್ನಡದ ಮಹಾನ್ ಕವಿಗಳಾದ ಪಂಪ, ರನ್ನ, ಪೊನ್ನ ಮೊದಲಾದವರ ಸಾಹಿತ್ಯ ಮತ್ತು ಕೃತಿಗಳ ಸತ್ವವನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕಾಗಿದೆ. ಕನ್ನಡವು ಶಾಸ್ತ್ರೀಯ ಹಾಗೂ ಪ್ರಾಚೀನ ಭಾಷೆಯಾಗಿದ್ದು, ಕನ್ನಡ ಸಾಹಿತ್ಯ ಮತ್ತು ಪರಂಪರೆಯನ್ನು ಇತರ ಭಾಷೆಗಳಿಗೆ ಅನುವಾದಿಸುವುದರ ಜೊತೆಗೆ ಇಂದಿನ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿದರು.

ಕಮ್ಮಟದ ಕುರಿತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ. ಬಸವರಾಜ ಎಂ. ಕೋಡಗುಂಟಿ ಹಾಗೂ ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಮಲಿಂಗಪ್ಪ ಟಿ. ಬೇಗೂರು ಮಾತನಾಡಿದರು. ಈ ಸಂದರ್ಭದಲ್ಲಿ ಕನ್ನಡ ವಿಮರ್ಶೆ ಮತ್ತು ತಾತ್ವೀಕರಣ ಕುರಿತು ಸಿಯುಕೆಯ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ. ಗಣೇಶ್ ಪವಾರ್ ವಿಚಾರ ಮಂಡಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಸಿದ್ಧರಾಮ ಹೊನ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಗಂಗಾ ರಮ್ಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಮ್ಮಟದ ಮೊದಲ ದಿನ ವಿ.ಬಿ. ತಾರಕೇಶ್ವರ ಅವರು ‘ಅನುವಾದ ಕೃತಿಗಳಲ್ಲಿನ ಕನ್ನಡ ವಿಮರ್ಶೆಯ ಪರಿಕಲ್ಪನೀಕರಣ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಡಾ. ರಾಮಲಿಂಗಪ್ಪ ಟಿ. ಬೇಗೂರು ಹಾಗೂ ಶ್ರೀಮತಿ ಪದ್ಮಪ್ರಸಾದ ಅವರು ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ವಿಕ್ರಮ ವಿಸಾಜಿ, ಡಾ. ಅಪ್ಪಗೆರೆ ಸೋಮಶೇಖರ, ಡಾ. ಟಿ.ಡಿ. ರಾಜಣ್ಣ, ಡಾ. ರೋಹಿಣಾಕ್ಷ ಶಿರ್ಲಾಲು ಸೇರಿದಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಸಿಯುಕೆಯ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು, ಸಂಪನ್ಮೂಲ ವ್ಯಕ್ತಿಗಳು ಹಾಗೂ ರಾಜ್ಯದ ವಿವಿಧ ಭಾಗಗಳ ಪ್ರತಿನಿಧಿಗಳು ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಭಾಗವಹಿಸಿದ್ದರು.

ಅ. 7ರಿಂದ ಆರಂಭವಾದ ಮೂರು ದಿನಗಳ ಕಮ್ಮಟದಲ್ಲಿ ವಿವಿಧ ಗೋಷ್ಠಿಗಳು, ಉಪನ್ಯಾಸಗಳು ಹಾಗೂ ಸಂವಾದಗಳು ನಡೆಯಲಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor