ಕಲಬುರಗಿ: ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಾಗೂ ಕಾಂಗ್ರೆಸ್ ನಾಯಕರ ಮೇಲೆ ನಡೆದಿರುವ ಪೊಲೀಸ್ ಬಲಪ್ರಯೋಗವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕಾಂಗ್ರೆಸ್ ಕಚೇರಿಯಿಂದ ಅನ್ನಪೂರ್ಣ ಕ್ರಾಸ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ರಸ್ತೆಯಲ್ಲಿಟಯರ್‌ಗೆ ಬೆಂಕಿ ಹಚ್ಚಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಿಸುವಂತೆ ಒತ್ತಾಯಿಸಿದರು.

ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಚುನಾವಣಾ ಆಯೋಗದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಂತಿಯುತವಾಗಿ ಜಂತರ್ ಮಂತರ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದು ಪೊಲೀಸ್ ಬಲಪ್ರಯೋಗ ಮಾಡಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಚುನಾಯಿತ ಪ್ರತಿನಿಧಿಗಳ ಮೇಲೆ ನಡೆದಿರುವ ಈ ರೀತಿಯ ವರ್ತನೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಅವರು ಆರೋಪಿಸಿದರು.

ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್, ಕುಡಾ ಅಧ್ಯಕ್ಷ ಮಝಾರ ಖಾನ್ ಅಲಂ, ಕಾಂಗ್ರೆಸ್ ಮುಖಂಡರಾದ ಭೀಮರಾವ್ ಟಿಟಿ, ಮಹಾಂತಪ್ಪ ಸಂಗಾವಿ, ಫಾರೂಕ್ ಮನಿಯಾಲ್, ರಾಜವಿ ಜಾನೆ, ಸಂತೋಷ್ ಪಾಟೀಲ್ ಡನ್ನೂರ್, ಶಕೀಲ್ ಸರಡಗಿ, ಲಿಂಗರಾಜ ತಾರಪೈಲ್, ನಯುಮ್ ಖಾನ್, ಅಶೋಕ್ ವೀರನಾಯಕ್, ಈರಣ್ಣ ಪಾಟೀಲ್ ಜಳಕಿ, ಶಿವಾನಂದ ಹೊನಗುಂಟಿ, ದಿನೇಶ್ ದೊಡ್ಡಮನಿ, ಧರ್ಮರಾಜ್ ಹೇರೂರ್, ಪರಶುರಾಮ್ ನಾಟೇಕರ್, ಅಮರ ಶಿರವಾಳ, ಗೌತಮ್ ಕರೆಕಲ್, ಟೈಗರ್ ವಿಘ್ನೇಶ್, ಮನೋಹರ್ ಪದ್ದಾರ್, ಫಾರೂಕ್ ಪಟೇಲ್, ಚಂದ್ರಶೇಖರ್ ಹಡಪದ ತೊನಸನಹಳ್ಳಿ, ಅಸ್ಲಾಂ ಸಿಂದಗಿ, ಮಹೇಶ್ ತೇಲ್ಲೂರಕರ್, ಶಿವಾನಂದ ತೋರವಿ, ಮಲ್ಲಿಕಾರ್ಜುನ ನೀಲೂರ್, ಇಜಾಜ್ ಶೇಕ್, ಉಮರ್ ಜುನೈದಿ, ಶಾಹಿನಾಸ್ ಅತ್ತರ್, ಶೇಕ್ ಸಮ್ರಿನ್, ಆಸೀಮ ಪಟೇಲ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor