ಅಫಜಲಪುರ: ತಾಲೂಕಿನಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಇದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ತಿಳಿಸಿದೆ.

ಪಟ್ಟಣದ ಶ್ರೀ ಗುರು ಮಳೆಂದ್ರ ಮಠದಲ್ಲಿ ಹೋರಾಟದ ಬಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಶಾಶ್ವತ ನೀರಾವರಿ ಹೋರಾಟ ಸಮಿತಿಯ ರೈತ ಮುಖಂಡರು, ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ತರಬೇಕು, ತಾಲೂಕಿನ ಕೆರೆಗಳನ್ನು ತಕ್ಷಣವೇ ತುಂಬಿಸಬೇಕು, ಕಾಲುವೆಗಳಿಗೆ ನೀರು ಹರಿಸಬೇಕು ಹಾಗೂ ಕಬ್ಬಿಗೆ ಪ್ರತಿ ಟನ್‌ಗೆ 5,500 ರೂ. ಬೆಂಬಲ ಬೆಲೆ ಘೋಷಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಮುಖಂಡ ರಮೇಶ್ ಪಾಟೀಲ ಮಾತನಾಡಿ, ಅಕ್ಟೋಬರ್ 14ರಂದು ಅಳ್ಳಗಿ (ಬಿ) ಗ್ರಾಮದಿಂದ ಕಲಬುರಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ನೀರಿನ ಸಮಸ್ಯೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶದಿಂದ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರೈತ ಮುಖಂಡ ಗುರು ಚಾಂದಕವಟೆ ಮಾತನಾಡಿ, ಪಾದಯಾತ್ರೆಯಲ್ಲಿ ತಾಲೂಕಿನ ವಿವಿಧ ಮಠಾಧೀಶರು, ಬುದ್ಧಿಜೀವಿಗಳು, ರೈತ ಸಂಘಟನೆಗಳು, ವಿದ್ಯಾರ್ಥಿಗಳು, ವಕೀಲರ ಸಂಘ, ದಲಿತ ಹಾಗೂ ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಶ್ರೀಮಂತ ಬಿರಾದಾರ ಮಾತನಾಡಿ, ತಾಲೂಕಿನ ಜನರ ಕುಡಿಯುವ ನೀರು, ರೈತರ ಕೃಷಿ ಹಾಗೂ ಬದುಕಿನ ರಕ್ಷಣೆಯ ಉದ್ದೇಶದಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕು ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರಾದ ಶಾಂತು ಅಂಜುಟಗಿ, ರಮೇಶ್ ಶೆಟ್ಟಿ, ಚಿದಾನಂದ ಮಠ, ಶಿವಾನಂದ ಕೊಳಕೂರ, ಚಂದು ಬನ್ನೇಟಿ, ಸಿದ್ದು ಪಾಟೀಲ, ಗುರು ಚಾಂದಕವಟೆ, ಬಸು ಮಂಗಳೂರ, ನೂರಹಮದ್ ಬಾಗವಾನ್, ಶಿವಪುತ್ರ ಬುರ್ಲಿ ಹಾಗೂ ಚಂದು ಕರ್ಜಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು, ಪಾದಯಾತ್ರೆಯನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor