×
Ad

ಕಲಬುರಗಿ | ಪ್ರತಿ ಟನ್‌ ಕಬ್ಬಿಗೆ 3,500 ಬೆಲೆಗೆ ನಿಗದಿಗೆ ಆಗ್ರಹಿಸಿ ಅಫಜಲಪುರ ಬಂದ್

Update: 2025-11-10 19:22 IST

ಕಲಬುರಗಿ: ಪ್ರತಿ ಟನ್‌ ಕಬ್ಬಿಗೆ 3,500 ಬೆಲೆಗೆ ನಿಗದಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ ಅಫಜಲಪುರ ಪಟ್ಟಣವನ್ನು ಬಂದ್ ಮಾಡಿ ರೈತಪರ ಮುಖಂಡರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಫಜಲಪುರ ತಾಲೂಕಿನ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಕಲಬುರಗಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘಗಳ ಆಶ್ರಯದಲ್ಲಿ ನಡೆದಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ಒಂದು ವಾರದಿಂದ ನಿರಂತರ ಧರಣಿ ಸತ್ಯಾಗ್ರಹವನ್ನು ನಡೆಸುತ್ತಾ ಬಂದಿರುವ ಸ್ವಾಭಿಮಾನಿ ರೈತ ಹೋರಾಟಗಾರರ ಒಕ್ಕೂಟದ ಮುಖಂಡರು ಯಾವುದೇ ಕಾರಣಕ್ಕೂ ಕಬ್ಬಿಗೆ ರೂ.3500ಕ್ಕಿಂತ ಕಡಿಮೆ ಬೆಲೆ ನೀಡಿದರೆ ರೈತರು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.  

ಅಫಜಲಪುರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಬೇರೆ ಬೇರೆ ಹಳ್ಳಿಗಳಿಂದ ಆಗಮಿಸಿ, ತಮ್ಮ ಬೇಡಿಕೆಗಾಗಿ ಅಫಜಲಪುರ ಪಟ್ಟಣ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದರು. ಬೆಳಗ್ಗೆ 10 ಗಂಟೆಯಿಂದಲೇ ಪಟ್ಟಣದಾದ್ಯಂತ ಯಾವುದೇ ಬಸ್ ಸಂಚಾರ ನಡೆಯಲಿಲ್ಲ. ರೈತರು ತರುತ್ತಿರುವ ಟ್ಯಾಕ್ಟರ್‌ಗಳು ಮತ್ತು ದ್ವಿಚಕ್ರ ವಾಹನಗಳ ಹೊರತಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. 

ಪಟ್ಟಣದಲ್ಲಿ ವಾರದ ಸಂತೆಯ ದಿನ ಆದ್ದರಿಂದ ಅನೇಕರು ತರಕಾರಿ, ದವಸ ಧಾನ್ಯಗಳನ್ನು ಮತ್ತು ಹಣ್ಣುಗಳನ್ನು ಮಾರಾಟ ಮಾಡಲು ತಂದಿದ್ದರು. ಹಾಲು, ತರಕಾರಿ ವ್ಯಾಪಾರ ಬಿಟ್ಟರೆ ಯಾವುದೇ ರೀತಿಯ ವಾರದ ಸಂತೆ ಪ್ರತಿವಾರದಂತೆ ನಡೆಯಲಿಲ್ಲ. ಬಸ್ ಸಂಚಾರ ಈ ಮೊದಲೇ ಸ್ಥಗಿತವಾಗಿದ್ದರಿಂದ ದೂರದ ವಿಜಯಪುರ, ಅಕ್ಕಲಕೋಟೆ ಮತ್ತು ಧಾರ್ಮಿಕ ಸುಕ್ಷೇತ್ರ ಘತ್ತರಗಿಗೆ ಹೋಗುವ ಪ್ರಯಾಣಿಕರು ಬಸ್ ಸಂಚಾರ ಇಲ್ಲದೆ ಪರದಾಡಿದರು.

ಇಳುವರಿ ನಿಗದಿ ಮಾಡುವ ಮಾನದಂಡಗಳಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ರೈತ ಪ್ರತಿನಿಧಿಗಳ ಎದುರು ಇಳುವರಿ ನಿಗದಿಯ ಪ್ರಕ್ರಿಯೆ ನಡೆಯುವುದಿಲ್ಲ. ಬದಲಾಗಿ ಕಾರ್ಖಾನೆಯ ಪ್ರತಿನಿಧಿಗಳು ಮತ್ತು ಸರಕಾರದ ಅಧಿಕಾರಿಗಳು ಶಾಮೀ ಲಾಗಿ ರೈತರ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.

ಬೆಳಿಗ್ಗೆ ಒಂಭತ್ತು ಗಂಟೆಯಿಂದಲೇ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ಹಸಿರು ಶಾಲು ಕಬ್ಬಿನ ಜಲ್ಲೆಗಳನ್ನು ಹಿಡಿದುಕೊಂಡು ಎತ್ತಿನಗಾಡಿ ಮತ್ತು ಭಾರಕೋಲು ಸಮೇತ ರೈತರು ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು. ನೂರಾರು ಜನ ರೈತರು ಹಸಿರು ಶಾಲು ತಿರುಗಿಸುತ್ತಾ ಬಾರೆಕೋಲಿನ ಚಾಟಿ ಬಾರಿಸುತ್ತಾ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಜಿಲ್ಲಾ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಮತ್ತು ಸಹ ನಿರ್ದೇಶಕರು ಸ್ಥಳಕ್ಕೆ ಆಗಮಿಸುವವರೆಗೆ ಬಂದ್ ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.

ಬಂದ್ ಹಿನ್ನೆಲೆ ಪಟ್ಟಣದ ಪ್ರಮುಖ ವೃತ್ತಗಳಾದ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಮತ್ತು ಪ್ರಮುಖ ಬೀದಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News