ಕಲಬುರಗಿ| ಜಾತಿ ನಿಂದನೆಗೈದು ಕೊಲೆ ಯತ್ನ ಪ್ರಕರಣ : ಆರೋಪಿಗೆ ಜೀವಾವಧಿ ಶಿಕ್ಷೆ
ಸಾಂದರ್ಭಿಕ ಚಿತ್ರ
ಕಲಬುರಗಿ: ಜಾತಿ ನಿಂದನೆಗೈದು ಕೊಲೆ ಮಾಡಲು ಯತ್ನಿಸಿದ ಅಪರಾಧಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ವಿಶೇಷ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 16 ಸಾವಿರ ರೂ. ದಂಡವನ್ನು ವಿಧಿಸಿದೆ.
ಶೇಖರ್ ಅಲಿಯಾಸ್ ರಾಜಶೇಖರ ರಾಣಪ್ಪ ತೆನೂರ್ ಶಿಕ್ಷೆಗೆ ಗುರಿಯಾದಾತ. ಈತ ಕಲಬುರಗಿ ನಗರದ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಮೋಹನ್ ಲಾಡ್ಜ್ ಹತ್ತಿರದ ಪೂರ್ಣಿಮಾ ಮದ್ಯದಂಗಡಿ ಬಳಿ 2024ರ ಮೇ 22ರಂದು ವ್ಯಕ್ತಿಯೊಬ್ಬನಿಗೆ ಜಾತಿ ನಿಂದನೆಗೈದು ಕೊಲೆಗೆ ಯತ್ನಿಸಿದ್ದ.
ಈ ಕುರಿತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ ಮೋಹನ ಬಾಡಗಂಡಿ ಅವರ ಪೀಠ, ಆರೋಪಿಯ ಅಪರಾಧ ಸಾಬೀತಾಗಿದ್ದರಿಂದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರಕಾರದ ಪರವಾಗಿ ವಿಶೇಷ ಅಭಿಯೋಜಕ ರಾಜಮಹೇಂದ್ರ ಜಿ. ವಾದ ಮಂಡಿಸಿದ್ದರು. ತನಿಖಾಧಿಕಾರಿಯಾದ ಎಸಿಪಿ ಭೂತೇಗೌಡ ವಿ.ಎಸ್. ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.