ಕಾಳಗಿಯಲ್ಲಿ ಕೆಡಿಪಿ ಸಭೆ| ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ಡಾ.ಅವಿನಾಶ್ ಜಾಧವ್
ಕಲಬುರಗಿ: ಸಾರ್ವಜನಿಕ ಸೇವೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಉತ್ತಮ ಕೆಲಸ ನಿರ್ವಹಿಸಬೇಕು ಎಂದು ಶಾಸಕ ಡಾ. ಅವಿನಾಶ್ ಜಾಧವ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಕಾಳಗಿ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಅವಿನಾಶ್ ಜಾದವ್, ಗ್ರಾಮ ಪಂಚಾಯಿತಿ ವಸತಿ ಯೋಜನೆಗಳ ಪರಿಶೀಲನೆ ನಡೆಸಿ ಕಾಲಹರಣ ಮಾಡಬೇಡಿ. ಸಾರ್ವಜನಿಕರಿಗೆ ತೊಂದರೆ ಕೊಡದೆ ನ್ಯಾಯಯುತವಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಿದರು.
ಕಾಳಗಿ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ. ಕೊಡ್ಲಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಸಂಜೀವ್ ಕುಮಾರ್ ಸಲ್ಲಿಸಿದ ವರದಿ ಪ್ರಕಾರ, 24,360 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಬೆಳೆ ನಷ್ಟವಾಗಿರುವ ಇನ್ನೂ ಹಲವಾರು ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ ಆಗಿಲ್ಲ, ಇದಕ್ಕೆ ಕಾರಣ ತಿಳಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಜನಸೇವೆಗೆ ಬದ್ಧರಾಗಿ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಬಾಬಾಸಾಹೇಬರ ಸಂವಿಧಾನದ ಬಗ್ಗೆ ಬರೀ ಮಾತಿನಲ್ಲಿ ಹೇಳಿದರೆ ಸಾಲದು, ಪಕ್ಷ -ಭೇದ ಮರೆತು ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಬಂದಿರುವ ಅನುದಾನವನ್ನು ಸಮಾನತೆಯಿಂದ ಹಂಚಿ ಸರ್ವರು ಅಭಿವೃದ್ಧಿ ಕಾಣುವಂತಾಗಬೇಕು. ಆಗ ಮಾತ್ರ ಸಂವಿಧಾನ ರಕ್ಷಣೆ ಆಗುತ್ತದೆ ಎಂದು ಹೇಳಿದರು.
ಈ ವೇಳೆ ಕಾಳಗಿ ಗ್ರೇಡ್-1 ತಹಶೀಲ್ದಾರ್ ಪೃಥ್ವಿರಾಜ್ ಪಾಟೀಲ್, ಜಿಪಂ.ಕಾರ್ಯದರ್ಶಿ ಹಾಗೂ ಕಾಳಗಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಲಕ್ಷ್ಮಣ ಶೃಂಗೇರಿ, ತಾಪಂ ಇಓ ಬಸಲಿಂಗಪ್ಪ ಡಿಗ್ಗಿ, ಸಿಪಿಐ ಜಗದೇವಪ್ಪ ಪಾಳಾ, ಪಪಂ. ಮುಖ್ಯಾಧಿಕಾರಿ ಪಂಕಜಾ ಎ ಸೇರಿದಂತೆ ಹಲವರು ಉಪಸ್ಥಿತರಿದ್ದರು.