ಕಲಬುರಗಿ: ದೆಹಲಿಯ ಜಂತರ್ ಮಂತರ್‌ನಲ್ಲಿ ಅಕ್ಟೋಬರ್ 2 ಮತ್ತು 3ರಂದು ಪ್ರತಿಭಟನೆಯ ವರದಿ ಮಾಡುತ್ತಿದ್ದ ಮೂವರು ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸ್ ಅಧಿಕಾರಿಯೊಬ್ಬರು ನಡೆಸಿದ್ದಾರೆ ಎನ್ನಲಾದ ಲೈಂಗಿಕ ಕಿರುಕುಳದ ಘಟನೆ ಖಂಡನೀಯ ಎಂದು ಹಿರಿಯ ಪತ್ರಕರ್ತೆ ಆಸ್ಮಾ ಎಂ.ಇನಾಮದಾರ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ತವ್ಯದಲ್ಲಿದ್ದ ಮಹಿಳಾ ಪತ್ರಕರ್ತೆಯೊಬ್ಬರೊಂದಿಗೆ ಪೊಲೀಸ್ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿ, ಅವರನ್ನು ತಳ್ಳಾಡಿಸಿ ಹಾಗೂ ವಿಡಿಯೊ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಗಂಭೀರವಾಗಿದೆ. ಇದು ಪತ್ರಕರ್ತರ ಕರ್ತವ್ಯಕ್ಕೆ ಅಡ್ಡಿಪಡಿಸುವುದಲ್ಲದೆ, ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹೇಳಿದ್ದಾರೆ.

ಜಂತರ್ ಮಂತರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ರಕರ್ತೆಯರು ಮಹಿಳಾ ಪೊಲೀಸ್ ಸಿಬ್ಬಂದಿಯ ಭದ್ರತೆ ಇಲ್ಲದಿರುವುದನ್ನು ಪ್ರಶ್ನಿಸಿದ ಸಂದರ್ಭದಲ್ಲಿ ಸೂಕ್ತ ರಕ್ಷಣೆ ನೀಡುವ ಬದಲು ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆ ಎಫ್‌ಐಆರ್ ದಾಖಲಿಸಲು ಎರಡು ದಿನಗಳ ಕಾಲ ಪೊಲೀಸ್ ಠಾಣೆಗೆ ತೆರಳಿದ್ದರೂ ಪ್ರಕರಣ ದಾಖಲಿಸದಿರುವುದು ಆತಂಕಕಾರಿ ಬೆಳವಣಿಗೆ ಎಂದು ತಿಳಿಸಿದ್ದಾರೆ.

ಆರೋಪಿತ ಪೊಲೀಸ್ ಅಧಿಕಾರಿ ಎಸಿಪಿ ವಿವೇಕ್ ಭಗತ್ ಅವರನ್ನು ತಕ್ಷಣ ಅಮಾನತುಗೊಳಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಮಹಿಳಾ ಪತ್ರಕರ್ತೆಯರ ದೂರಿನ ಆಧಾರದ ಮೇಲೆ ತಕ್ಷಣ ಎಫ್‌ಐಆರ್ ದಾಖಲಿಸಿ, ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಸ್ಮಾ ಇನಾಮದಾರ್ ಒತ್ತಾಯಿಸಿದ್ದಾರೆ.

ಜಂತರ್ ಮಂತರ್‌ನಂತಹ ಪ್ರತಿಭಟನಾ ಸ್ಥಳಗಳಲ್ಲಿ ಪತ್ರಕರ್ತರಿಗೆ ಸೂಕ್ತ ಭದ್ರತೆ ಒದಗಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಪತ್ರಕರ್ತರ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಯದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor