Kalaburagi | ಕೃಷಿ ಸಂಶೋಧನಾ ಕೇಂದ್ರದ ಜಮೀನು ಆಸ್ಪತ್ರೆ ನಿರ್ಮಾಣಕ್ಕೆ ನೀಡದಂತೆ ಆಗ್ರಹ
ಕಲಬುರಗಿ: ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ) ಹಾಗೂ ಕೃಷಿ ಸಂಶೋಧನಾ ಕೇಂದ್ರದ ಫಲವತ್ತಾದ ಜಮೀನನ್ನು ಆಸ್ಪತ್ರೆ ನಿರ್ಮಾಣಕ್ಕೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಡಬೇಕು ಎಂದು ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಂಘಟನೆಯ ಜಿಲ್ಲಾಧ್ಯಕ್ಷ ರವಿ ಎನ್. ದೇಗಾಂವ, ಆಸ್ಪತ್ರೆ ನಿರ್ಮಾಣ ಮತ್ತು ಆರೋಗ್ಯ ಸೇವೆಗಳ ಅಭಿವೃದ್ಧಿಗೆ ತಮ್ಮ ವಿರೋಧವಿಲ್ಲ. ಆದರೆ, ದಶಕಗಳಿಂದ ಕೃಷಿ ಸಂಶೋಧನೆ, ಬೀಜೋತ್ಪಾದನೆ ಹಾಗೂ ರೈತರ ತರಬೇತಿಗೆ ಬಳಕೆಯಾಗುತ್ತಿರುವ ಫಲವತ್ತಾದ ಕೃಷಿ ಭೂಮಿಯನ್ನು ಬೇರೆ ಉದ್ದೇಶಕ್ಕೆ ಬಳಸುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕಲಬುರಗಿ ಕೃಷಿ ಸಂಶೋಧನಾ ಕೇಂದ್ರವು ದೇಶಕ್ಕೆ 11 ಶ್ರೇಷ್ಠ ತೊಗರಿ ತಳಿಗಳನ್ನು ನೀಡಿದೆ. ಕಳೆದ 34 ವರ್ಷಗಳಿಂದ ಸಸ್ಯರೋಗಗಳು ಸೇರಿದಂತೆ ವಿವಿಧ ಕೃಷಿ ವಿಷಯಗಳ ಕುರಿತು ಇಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ. ಇಂತಹ ಸಂಶೋಧನಾ ಕೇಂದ್ರದ ಜಮೀನನ್ನು ಬೇರೆ ಉದ್ದೇಶಕ್ಕೆ ಬಳಸಿದರೆ, ಈ ವ್ಯವಸ್ಥೆಯನ್ನು ಮರುಸ್ಥಾಪಿಸಲು ಹಲವು ವರ್ಷಗಳು ಬೇಕಾಗಬಹುದು ಎಂದು ಅವರು ಹೇಳಿದರು.
ಐಸಿಎಆರ್ ನಿಯಮಾವಳಿಗಳ ಪ್ರಕಾರ ಪ್ರಾಯೋಜಿತ ಕೃಷಿ ಯೋಜನೆಗಳಿಗೆ ಮೀಸಲಾದ ಜಮೀನನ್ನು ಇತರ ಉದ್ದೇಶಗಳಿಗೆ ವರ್ಗಾಯಿಸಲು ಅವಕಾಶವಿಲ್ಲ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಹಾಗೂ ಸಾವಿರಾರು ರೈತರ ತರಬೇತಿಗೆ ಈ ಕೇಂದ್ರ ಪ್ರಮುಖವಾಗಿದೆ. ಆದ್ದರಿಂದ ಆಸ್ಪತ್ರೆ ನಿರ್ಮಾಣಕ್ಕೆ ನಗರದ ಪರ್ಯಾಯ ಜಾಗವನ್ನು ಗುರುತಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ ಮಠಪತಿ, ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷ ಪಾಟೀಲ, ನಗರಾಧ್ಯಕ್ಷ ವಿಕಾಸ ಚವ್ಹಾಣ, ಪ್ರಧಾನ ಕಾರ್ಯದರ್ಶಿ ಋಶಿ ಬೆನಕನಳ್ಳಿ, ಕಲಬುರಗಿ ತಾಲ್ಲೂಕು ಅಧ್ಯಕ್ಷ ಸಂತೋಷ ಕೆರೂರ, ಸೇಡಂ ತಾಲ್ಲೂಕು ಅಧ್ಯಕ್ಷ ಭೀಮಾಶಂಕರ ಕೊರವಿ, ಆಳಂದ ತಾಲ್ಲೂಕು ಅಧ್ಯಕ್ಷ ಮಡಿವಾಳ ಲಿಂಬಿತೋಟ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಜಮಾದಾರ, ಅಫಜಲಪುರ ತಾಲ್ಲೂಕು ಅಧ್ಯಕ್ಷ ಈಶ್ವರ ಹೇರೂರ, ಜಗದೀಶ ಜಮಾದಾರ ಹಾಗೂ ಮಂಜು ಕಡಗಂಚಿ ಉಪಸ್ಥಿತರಿದ್ದರು.