ಅಫಜಲಪುರ: ಅಂಗನವಾಡಿ, ಅಕ್ಷರ ದಾಸೋಹ (ಬಿಸಿಯೂಟ), ಆಶಾ, ಗ್ರಾಮ ಪಂಚಾಯಿತಿ ಹಾಗೂ ಹಾಸ್ಟೆಲ್ ನೌಕರರಿಗೆ ಸೂಕ್ತ ಕನಿಷ್ಠ ಕೂಲಿಯನ್ನು ನಿಗದಿಪಡಿಸಿ ತಕ್ಷಣ ಜಾರಿಗೆ ತರಬೇಕು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ರವಿವಾರ ಸಿಐಟಿಯು ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ. ಪಾಟೀಲ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾ ಅಧ್ಯಕ್ಷೆ ಶಾಂತಾ ಘಂಟೆ ಮಾತನಾಡಿ, ಕಳೆದ ಸೆಪ್ಟೆಂಬರ್ 8ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಸಭೆ ಏರ್ಪಡಿಸುವುದಾಗಿ ಸರ್ಕಾರ ಭರವಸೆ ನೀಡಿದ್ದರೂ, ಬಳಿಕ ಮಾತು ತಪ್ಪಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ರಾಜ್ಯ ಸರ್ಕಾರ ಮೇ 22ರಂದು ಹೊರಡಿಸಿದ್ದ ಕನಿಷ್ಠ ವೇತನ ಅಧಿಸೂಚನೆಯನ್ನು ತಡೆಹಿಡಿದು ಸಂಪುಟ ಉಪಸಮಿತಿ ರಚಿಸಿರುವುದು ಕಾರ್ಮಿಕರಿಗೆ ಎಸಗಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ತಡೆಹಿಡಿದಿರುವ ಆದೇಶವನ್ನು ಹಿಂಪಡೆದು ಕನಿಷ್ಠ ವೇತನವನ್ನು ತಕ್ಷಣ ಜಾರಿಗೆ ತರಬೇಕು. ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನದ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಅಕ್ಷರ ದಾಸೋಹ ಸಿಬ್ಬಂದಿಗೆ 7,000 ರೂ., ಆಶಾ ಕಾರ್ಯಕರ್ತೆಯರಿಗೆ 10,000 ರೂ. ಹಾಗೂ ಅಂಗನವಾಡಿ ನೌಕರರಿಗೆ 15,000 ರೂ. ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಇಎಸ್‌ಐ, ಇಪಿಎಫ್ ಹಾಗೂ ಬೋನಸ್ ಸೌಲಭ್ಯ ಪಡೆಯಲು ಇರುವ ವೇತನ ಮಿತಿಯನ್ನು ರದ್ದುಗೊಳಿಸಬೇಕು. ವಸತಿ ರಹಿತ ಕಾರ್ಮಿಕರಿಗೆ ವಸತಿ ಒದಗಿಸಬೇಕು ಹಾಗೂ ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳ ಖಾಸಗೀಕರಣವನ್ನು ಕೈಬಿಡಬೇಕು ಎಂದು ಸರ್ಕಾರವನ್ನು ಮನವಿ ಮೂಲಕ ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷೆ ಶಾಂತಾ ಘಂಟೆ, ಪ್ರಧಾನ ಕಾರ್ಯದರ್ಶಿ ಎಂ.ಬಿ. ಸಜ್ಜನ್, ಮುಖಂಡರಾದ ಶ್ರೀಮಂತ ಬಿರಾದಾರ, ಗುರು ಚಾಂದಕವಟೆ ಬೋಜರಾಜ ಪಾಟೀಲ, ಕಲಾವತಿ ತೆಲ್ಲೂರ, ಶ್ರೀದೇವಿ ಬೂತಿ,ಕಾಂಚನಾ ಕಾಂಬಳೆ, ಶರಣಬಾಯಿ ತಳವಾರ, ಹಾಗೂ ಹಾಸ್ಟೆಲ್ ನೌಕರರು ಸೇರಿದಂತೆ ಅಂಗನವಾಡಿ, ಅಕ್ಷರ ದಾಸೋಹ, ಗ್ರಾಮ ಪಂಚಾಯಿತಿ ಹಾಗೂ ಹಾಸ್ಟೆಲ್ ನೌಕರರ ಸಂಘಗಳ ಪ್ರಮುಖ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor