Kalaburagi | ಐಐಟಿ ಪುಣೆಯ ಡಾ.ಶ್ರೀಪರ್ಣಾ ಸಾಹಾಗೆ ಪ್ರತಿಷ್ಠಿತ ಐಇಟಿಇ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಪ್ರಶಸ್ತಿ
ಕಲಬುರಗಿ: ಪುಣೆಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಡಾ. ಶ್ರೀಪರ್ಣಾ ಸಾಹಾ ಅವರು ತಂತ್ರಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಮಹಿಳೆಯರನ್ನು ಗೌರವಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಪ್ರತಿಷ್ಠಿತ ಇನ್‌ಸ್ಟಿಟ್ಯೂಷನ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಶನ್ ಇಂಜಿನಿಯರ್ಸ್ (ಐಇಟಿಇ) ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸೆಪ್ಟೆಂಬರ್ 25ರಂದು ಕೋಲ್ಕತ್ತಾದಲ್ಲಿ ನಡೆದ 69ನೇ ವಾರ್ಷಿಕ ಐಇಟಿಇ ಸಮಾವೇಶದಲ್ಲಿ ವಿವಿಧ ಗಣ್ಯರ ಹೆಸರಿನಲ್ಲಿ ಸ್ಥಾಪಿಸಲಾಗಿರುವ 37 ಐಇಟಿಇ ಪ್ರಶಸ್ತಿಗಳು, ಎರಡು ಜೀವಮಾನ ಸಾಧನೆ ಪ್ರಶಸ್ತಿಗಳು, ಮೂರು ಐಇಟಿಇ ಕಾರ್ಪೊರೇಟ್ ಪ್ರಶಸ್ತಿಗಳು ಹಾಗೂ ಎರಡು ಐಇಟಿಇ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಈ ವರ್ಷ ಇದೇ ಮೊದಲ ಬಾರಿಗೆ ಪರಿಚಯಿಸಲಾದ ಐಇಟಿಇ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಪ್ರಶಸ್ತಿಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಐಇಟಿಇ ಪದಾಧಿಕಾರಿಗಳ ಸಮ್ಮುಖದಲ್ಲಿ ಡಾ. ಶ್ರೀಪರ್ಣಾ ಸಾಹಾ ಅವರಿಗೆ ಪ್ರದಾನ ಮಾಡಿದರು.
ಪ್ರಶಸ್ತಿಗಾಗಿ ಒಟ್ಟು 37 ಅರ್ಜಿಗಳು ಹಾಗೂ ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ತೀರ್ಪುಗಾರರ ಸಮಿತಿಯು ಡಾ. ಸಾಹಾ ಅವರ ವಿಶೇಷ ಪರಿಣಿತಿ ಕ್ಷೇತ್ರದಲ್ಲಿನ ಸಾಧನೆ, ಸಂಶೋಧನಾ ಕೊಡುಗೆ ಹಾಗೂ ನವೀನ ಚಿಂತನೆಗಳನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.
ಐಇಟಿಇ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಲೆಫ್ಟಿನೆಂಟ್ ಜನರಲ್ ಡಾ. ಎ.ಕೆ.ಎಸ್. ಚಂದಾಲೆ ಹಾಗೂ ಪ್ರೊ. ಜಿ.ಎಸ್.ಎನ್. ರಾವ್ ಅವರಿಗೆ ಪ್ರದಾನ ಮಾಡಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಖ್ಯಾತ ವಿಜ್ಞಾನಿ ಡಾ. ಸಿ.ಎಸ್. ಮಧುಸೂದನ್ ಅವರಿಗೆ ಬಾಹ್ಯಾಕಾಶ ಹಾಗೂ ಕಾರ್ಯತಂತ್ರದ ತಂತ್ರಜ್ಞಾನ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಗುರುತಿಸಿ ಐಇಟಿಇ ದೇವಿ ಸಿಂಗ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಐಇಟಿಇಯ ವಿವಿಧ ವಿಭಾಗಗಳ ಪ್ರಶಸ್ತಿಗಳ ಪೈಕಿ, ಆ್ಯಂಟೆನಾ ವ್ಯವಸ್ಥೆಗಳ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಗಾಗಿ ಎನ್‌ಐಟಿ ವಾರಂಗಲ್‌ನ ಡಾ. ಗೋಪಿ ರಾಮ್ ಅವರಿಗೆ ಪ್ರಶಸ್ತಿ ಲಭಿಸಿತು. ವಸ್ತುಗಳು, ಸಾಧನಗಳು ಹಾಗೂ ಅವುಗಳ ಅನ್ವಯಿಕೆಗಳನ್ನು ಒಳಗೊಂಡ ಆಪ್ಟೋ-ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಮಹತ್ವದ ಕೊಡುಗೆಗಾಗಿ ಐಐಟಿ-ಐಎಸ್‌ಎಂ ಧನಬಾದ್‌ನ ಪ್ರೊ. ಸಂಜೀವ್ ಕುಮಾರ್ ರಘುವಂಶಿ ಹಾಗೂ ಪಂಜಾಬ್ ಎಂಜಿನಿಯರಿಂಗ್ ಕಾಲೇಜು, ಚಂಡೀಗಢದ ಡಾ. ಸಿಮ್ರನ್‌ಜಿತ್ ಸಿಂಗ್ ಅವರಿಗೆ ಜಂಟಿಯಾಗಿ ಐಇಟಿಇ-ಸಿಇಒಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.