Aland | ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುವಂತೆ ಒತ್ತಾಯಿಸಿ ಏರ್‌ಟೆಲ್ ಟವರ್ ಏರಿದ ಯುವಕ
ಆಳಂದ: ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸದಿದ್ದರೆ ಟವರ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಯುವಕನೊಬ್ಬ ಏರ್‌ಟೆಲ್ ಟವರ್ ಏರಿದ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಸಮೀಪದ ಮಾಡಿಯಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶಹಾಬಾದ್ ತಾಲೂಕಿನ ತೊನ್ನಸಳ್ಳಿ ಗ್ರಾಮದ ಮಹೇಶ ಮಲ್ಲಪ್ಪ ಭಜಂತ್ರಿ ಟವರ್ ಏರಿದ ಯುವಕ ಎಂದು ಗುರುತಿಸಲಾಗಿದೆ.
ಮಹೇಶ ತನ್ನ ತಾಯಿಯ ತವರುಮನೆಯಾದ ಮಾಡಿಯಾಳ ಗ್ರಾಮಕ್ಕೆ ಶುಕ್ರವಾರ ಬಂದಿದ್ದು, ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸಬೇಕೆಂದು ತಾಯಿಯ ಸಹೋದರರಾದ ರಾಮು ಭಜಂತ್ರಿ ಹಾಗೂ ಭೀಮಾಶಂಕರ ಭಜಂತ್ರಿ ಅವರ ಬಳಿ ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕೆ ಅವರು, ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡೋಣ ಎಂದು ಸಮಾಧಾನಪಡಿಸಿದ್ದರು.
ಆದರೆ, ಮಾವಂದಿರ ಉತ್ತರದಿಂದ ನಿರಾಶೆಗೊಂಡ ಮಹೇಶ ಶನಿವಾರ ಯಾರ ಗಮನಕ್ಕೂ ಬಾರದಂತೆ ಗ್ರಾಮದ ಏರ್‌ಟೆಲ್ ಟವರ್ ಏರಿ ಕುಳಿತಿದ್ದಾನೆ. ಬಳಿಕ ತನ್ನ ಮಾವಂದಿರಿಗೆ ಕರೆ ಮಾಡಿ, “ನನಗೆ ನಾನು ಪ್ರೀತಿಸಿದ ಹುಡುಗಿಯೇ ಬೇಕು. ಇಲ್ಲವಾದರೆ ಟವರ್‌ನಿಂದ ಕೆಳಗೆ ಬಿದ್ದು ಸಾಯುತ್ತೇನೆ” ಎಂದು ಪಟ್ಟು ಹಿಡಿದಿದ್ದಾನೆ ಎಂದು ತಿಳಿದುಬಂದಿದೆ.
ಯುವಕ ಟವರ್ ಏರಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲ ಸಂಬಂಧಿಕರು ಹಾಗೂ ಗ್ರಾಮಸ್ಥರು ಟವರ್‌ನಿಂದ ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು.
“ನೀನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುತ್ತೇವೆ, ಕೆಳಗೆ ಬಾ” ಎಂದು ಸಂಬಂಧಿಕರು ಮತ್ತು ಗ್ರಾಮಸ್ಥರು ಮನವಿ ಮಾಡಿದರೂ ಮಹೇಶ ಆರಂಭದಲ್ಲಿ ಕೆಳಗೆ ಇಳಿಯಲು ಒಪ್ಪಿರಲಿಲ್ಲ.
ಕೊನೆಗೆ ಆತನ ಮಾವ ದೇವರ ಹೆಸರಿನಲ್ಲಿ ಆಣೆ-ಪ್ರಮಾಣ ಮಾಡಿ, ತಾನು ಪ್ರೀತಿಸಿದ ಯುವತಿಯೊಂದಿಗೇ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಮಹೇಶ ಸುರಕ್ಷಿತವಾಗಿ ಟವರ್‌ನಿಂದ ಕೆಳಗೆ ಇಳಿದಿದ್ದಾನೆ.