Kalaburagi | ವಿದ್ಯಾರ್ಥಿಗಳ ಸಂಘ ಶೈಕ್ಷಣಿಕ ಬೆಳವಣಿಗೆಗೆ ಚೈತನ್ಯ ನೀಡಲಿ: ಪ್ರೊ.ಶಶಿಕಾಂತ್ ಉಡಿಕೇರಿ
ಕಲಬುರಗಿ: ರಸಾಯನಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘವು ವಿಭಾಗದ ಶೈಕ್ಷಣಿಕ ಬೆಳವಣಿಗೆಗೆ ಹೊಸ ಚೈತನ್ಯ ತುಂಬಬೇಕು. ವಿಜ್ಞಾನ ಕ್ಷೇತ್ರದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳಿಗೆ ತಕ್ಕಂತೆ ವಿದ್ಯಾರ್ಥಿಗಳ ಜ್ಞಾನಮಟ್ಟವನ್ನು ಅರಿತು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲ್ಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ರಸಾಯನಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೈನಂದಿನ ಜೀವನದಲ್ಲಿ ಬಳಸುವ ಆಹಾರ, ಆರೋಗ್ಯ, ಕೃಷಿ, ಪರಿಸರ, ಔಷಧ, ಉದ್ಯಮ ಹಾಗೂ ತಂತ್ರಜ್ಞಾನ ಸೇರಿದಂತೆ ಮಾನವನ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ರಸಾಯನಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ಹೇಳಿದರು.
ಜಾಗತಿಕ ವಿಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಬೆಳವಣಿಗೆಗಳನ್ನು ಅರಿತುಕೊಂಡು ಪ್ರಾಯೋಗಿಕ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು. ತಂತ್ರಜ್ಞಾನ ಬೆಳೆದಂತೆ ಜಗತ್ತು ವೇಗವಾಗಿ ಬದಲಾಗುತ್ತಿದ್ದು, ಮಾನವನ ಬುದ್ಧಿಮತ್ತೆಯ ಫಲವಾಗಿ ಕೃತಕ ಬುದ್ಧಿಮತ್ತೆ (ಎಐ)ಯಂತಹ ಹೊಸ ತಂತ್ರಜ್ಞಾನಗಳು ರೂಪುಗೊಂಡಿವೆ. ಆದರೆ ಇಂತಹ ಆಧುನಿಕ ವಿಜ್ಞಾನಗಳ ಬೆಳವಣಿಗೆಗೆ ಮೂಲ ವಿಜ್ಞಾನವೇ ಭದ್ರ ಬುನಾದಿ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.
ಹೈದರಾಬಾದ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯ ಪ್ರೊ. ಫೈಜ್ ಅಹ್ಮದ್ ಖಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ರಸಾಯನಶಾಸ್ತ್ರ ವಿಭಾಗವು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ತಜ್ಞ ಪ್ರಾಧ್ಯಾಪಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದ ಅನೇಕ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಉದ್ಯಮಗಳು ಮತ್ತು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಹೈದರಾಬಾದ್‌ನ ಸಿಎಸ್‌ಐಆರ್–ಐಐಸಿಟಿಯ ನಿವೃತ್ತ ವಿಜ್ಞಾನಿ ಡಾ. ಎಚ್.ಎಂ. ಸಂಪತ್ ಕುಮಾರ್ ಮಾತನಾಡಿ, ಜಾಗತಿಕ ಯುಗದಲ್ಲಿ ಗುರುವಿನ ಮಾರ್ಗದರ್ಶನವಿಲ್ಲದೆ ವ್ಯಕ್ತಿ ಮತ್ತು ಸಮಾಜದ ಸುಸ್ಥಿರ ಬೆಳವಣಿಗೆ ಸಾಧ್ಯವಿಲ್ಲ. ಶಿಕ್ಷಕರು ಜ್ಞಾನದ ಸಂಪತ್ತಾಗಿದ್ದು, ಅವರ ಸಲಹೆ ಮತ್ತು ಮಾರ್ಗದರ್ಶನ ವಿದ್ಯಾರ್ಥಿಗಳ ಬದುಕಿಗೆ ದಿಕ್ಕು ತೋರಿಸುತ್ತದೆ ಎಂದು ಹೇಳಿದರು.
ಹೈದರಾಬಾದ್‌ನ ಡಾ. ರೆಡ್ಡಿ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಮುಖ್ಯಸ್ಥ ಡಾ. ಎ. ಮಲ್ಲೇಶ್ವರ ರೆಡ್ಡಿ ಮಾತನಾಡಿ, ರಸಾಯನಶಾಸ್ತ್ರ ವಿಭಾಗದ ಉನ್ನತಿಯಲ್ಲಿ ಹಿರಿಯ ಪ್ರಾಧ್ಯಾಪಕರ ಪರಿಶ್ರಮ ಮಹತ್ವದ್ದಾಗಿದೆ. ವಿಭಾಗದ ವಿದ್ಯಾರ್ಥಿಗಳು ಆಡಳಿತ, ಸಂಶೋಧನೆ, ಉದ್ಯಮ ಹಾಗೂ ಪ್ರಯೋಗಾಲಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವುದರ ಹಿಂದೆ ಶಿಕ್ಷಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನವಿದೆ ಎಂದರು.
ಇದೇ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ ಶರಣಬಸವ ಅವರು ವಿದ್ಯಾರ್ಥಿಗಳ ಪ್ರಯೋಗಾಲಯ ಕಲಿಕೆಗೆ ನೆರವಾಗುವ ಪೋಲರಿಮೀಟರ್ ಸಾಧನವನ್ನು ನೀಡುವುದಾಗಿ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಸಿದ್ದಪ್ಪ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಜೆ.ಎಸ್. ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳ ಸಂಘದ ಉದ್ದೇಶ, ಧ್ಯೇಯ ಹಾಗೂ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ರಮೇಶ್ ಲಂಡನಕರ್, ವಿತ್ತಾಧಿಕಾರಿ ಜಯಾಂಬಿಕ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ. ಸಿದ್ದಪ್ಪ ಉಪಸ್ಥಿತರಿದ್ದರು.
ವಿಜ್ಞಾನ ವಿಭಾಗಗಳ ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.
ಪ್ರೊ. ಆನಂದ ಆರ್. ಸೌಂದಾನೆ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸೋಮಶೇಖರ್ ಹಾಗೂ ಡಾ. ಸ್ವಾತಿ ಬಿ. ಗಣ್ಯರನ್ನು ಪರಿಚಯಿಸಿದರು. ಪ್ರೊ. ಅರುಣ್ ಕುಮಾರ್ ಲಗಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.