Aland | ಕಲ್ಯಾಣ ಕರ್ನಾಟಕದಲ್ಲಿ ಹೈನುಗಾರಿಕೆಗೆ ಉತ್ತೇಜನ ಅಗತ್ಯ: ಡಾ.ಪಿ.ವಿ.ಪಾಟೀಲ್
ಆಳಂದ : ಹಾಲು ಉತ್ಪಾದನೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ತೀರಾ ಹಿಂದುಳಿದಿದ್ದು, ಈ ಭಾಗದಲ್ಲಿ ಹೈನುಗಾರಿಕೆಗೆ ವಿಶೇಷ ಉತ್ತೇಜನ ನೀಡುವ ಮೂಲಕ ಉತ್ಪಾದನೆ ಹೆಚ್ಚಿಸುವ ಅಗತ್ಯವಿದೆ ಎಂದು ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಡಾ. ಪಿ.ವಿ. ಪಾಟೀಲ್ ಹೇಳಿದರು.
ತಾಲೂಕಿನ ತಡೋಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ “ಸ್ವಯಂ ಉದ್ಯೋಗ ಮತ್ತು ಪಶುಪಾಲನೆ” ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಪ್ರತಿದಿನ ಸುಮಾರು 1.20 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದರೆ, ಉತ್ತರ ಕರ್ನಾಟಕದ 16 ಜಿಲ್ಲೆಗಳಲ್ಲಿ ಸೇರಿ ಕೇವಲ 10 ಲಕ್ಷ ಲೀಟರ್ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ ಎಂದು ಹೇಳಿದರು.
ವಿಶಾಲ ಕೃಷಿ ಭೂಮಿ ಹೊಂದಿದ್ದರೂ ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ ಮಹಿಳೆಯರು ಹಾಗೂ ವಿದ್ಯಾವಂತ ಯುವಕರು ಹೈನುಗಾರಿಕೆಯನ್ನು ಗೌರವಯುತ ವೃತ್ತಿಯಾಗಿ ಸ್ವೀಕರಿಸಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಕಲ್ಯಾಣ ಕರ್ನಾಟಕದ ರೈತರೂ ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಪಶುಪಾಲನೆ ಅಳವಡಿಸಿಕೊಂಡರೆ ಹೆಚ್ಚಿನ ಆದಾಯ ಗಳಿಸಬಹುದು ಎಂದು ಸಲಹೆ ನೀಡಿದರು.
ಕುಟುಂಬ ವಿಭಜನೆ, ಕೃಷಿ ಮತ್ತು ಪಶುಸಂಗೋಪನೆಯ ಮೇಲಿನ ನಿರಾಸಕ್ತಿ ಹಾಗೂ ಸಾವಯವ ಗೊಬ್ಬರ ಬಳಕೆಯ ಕೊರತೆ ಹೈನುಗಾರಿಕೆಯ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಹಾಲು ಉತ್ಪಾದನೆ ಹೆಚ್ಚಿದರೆ ಕೃಷಿ, ಪಶುಸಂಗೋಪನೆ, ರೇಷ್ಮೆ ಸೇರಿದಂತೆ ಪೂರಕ ಕ್ಷೇತ್ರಗಳು ಅಭಿವೃದ್ಧಿಯಾಗುವುದರೊಂದಿಗೆ ಗ್ರಾಮೀಣ ಆರ್ಥಿಕತೆಯೂ ಬಲಗೊಳ್ಳಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮೂರ್ತಿ ಗಾಯಕವಾಡ್ ಮಾತನಾಡಿ, ಹೈನುಗಾರಿಕೆ ಗ್ರಾಮೀಣ ಕುಟುಂಬಗಳ ಆರ್ಥಿಕ ಸದೃಢತೆಗೆ ಪ್ರಮುಖ ಆಧಾರವಾಗಿದ್ದು, ಪರಿಶ್ರಮ ಮತ್ತು ಯೋಜಿತ ನಿರ್ವಹಣೆಯಿಂದ ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಕಿಸಾನ್ ಸಭಾ ರಾಜ್ಯ ಕಾರ್ಯಾಧ್ಯಕ್ಷ ಮೌಲಾ ಮುಲ್ಲಾ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚಿನ ಸಹಾಯಧನ, ಸಾಲ ಸೌಲಭ್ಯ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ಉಪನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಜಾನುವಾರುಗಳ ಆರೋಗ್ಯ ಸಂರಕ್ಷಣೆ, ಲಸಿಕೆ, ವೈಜ್ಞಾನಿಕ ಪಶುಪಾಲನೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಿರುವ ಹರಿದಾಸ ಪಾಟೀಲ (ಪಿಂಟು) ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿಶ್ವನಾಥ ಪಾಟೀಲ, ಕಮಲೇಶ ಅವುಟೆ, ಮಲ್ಲಿನಾಥ ಪರೇಣಿ, ಮಹಾಂತೇಶ ಸಣ್ಣಮನಿ, ಕೆಎಂಎಫ್ ಸಹಾಯಕ ವ್ಯವಸ್ಥಾಪಕ ಡಾ. ಚೇತನ್, ರಮೇಶ್ ಅವುಟೆ, ವೆಂಕಟ ಪೂಜಾರಿ, ಲಕ್ಷ್ಮಣ ಕಾಂಬಳೆ, ಡಾ. ಪೃಥ್ವಿರಾಜ ಅರಗಡೆ, ಡಾ. ಮಹೇಶ್ ಮಾನೆ, ಕೆಎಂಎಫ್ ಕ್ಷೇತ್ರಾಧಿಕಾರಿ ಸುನಿತಾ ಸೇರಿದಂತೆ ಹೈನುಗಾರಿಕೆ ರೈತರು ಹಾಗೂ ಗಣ್ಯರು ಉಪಸ್ಥಿತರಿದ್ದರು. ರೈತ ಕಲ್ಯಾಣಿ ಕಾರ್ಯಕ್ರಮ ನಿರೂಪಿಸಿದರು. ಅಸ್ಪಾಕ್ ಮುಲ್ಲಾ ವಂದಿಸಿದರು.