ಆಳಂದ : ಪತ್ರಕರ್ತರ ಬಹುದಿನಗಳ ಬೇಡಿಕೆಯಾಗಿರುವ ಪತ್ರಿಕಾ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ಒದಗಿಸಿ, ಶೀಘ್ರದಲ್ಲೇ ಭವನ ನಿರ್ಮಿಸಲಾಗುವುದು ಎಂದು ಶಾಸಕ ಬಿ.ಆರ್. ಪಾಟೀಲ್ ಭರವಸೆ ನೀಡಿದರು.

ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿರುವ ಅಭಿ ಫಂಕ್ಷನ್ ಹಾಲ್‌ನಲ್ಲಿ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಹಲವು ವರ್ಷಗಳಿಂದ ಪತ್ರಕರ್ತರ ಪತ್ರಿಕಾ ಭವನದ ಬೇಡಿಕೆ ತಮ್ಮ ಗಮನದಲ್ಲಿದ್ದು, ಸರ್ಕಾರದ ಅನುದಾನದ ಮೂಲಕ ಶೀಘ್ರದಲ್ಲೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಂದಿನ ಯೂಟ್ಯೂಬ್ ಹಾಗೂ ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಸಾರ್ವಜನಿಕರು ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ನಂಬಬಾರದು. ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳು ವಾಸ್ತವಾಂಶಗಳ ಆಧಾರಿತವಾಗಿರಬೇಕು. ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಉಳಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದು ಹೇಳಿದರು.

ತಹಸೀಲ್ದಾರ್ ಅಣ್ಣಾರಾವ ಪಾಟೀಲ್ ಮಾತನಾಡಿ, ವಿವಿಧ ಇಲಾಖೆಗಳ ಕಾರ್ಯಕ್ರಮಗಳಿಗೆ ಸೀಮಿತ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಆದರೆ ಪತ್ರಿಕಾ ದಿನಾಚರಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಮಾತನಾಡಿ, ಪತ್ರಕರ್ತರು ಮತ್ತು ಸಾರ್ವಜನಿಕರ ನಡುವೆ ಅವಿನಾಭಾವ ಸಂಬಂಧವಿದ್ದು, ಈ ಕಾರ್ಯಕ್ರಮ ಅದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಹಿರೇಮಠದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿ, ಈ ಬಾರಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿದ್ದು, ಜಲ ಸಂರಕ್ಷಣೆ ಹಾಗೂ ನೀರಿನ ಮಿತ ಬಳಕೆಯ ಕುರಿತು ಮಠಾಧೀಶರು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಲಿಂಗ ತೇಲ್ಕರ್ ಧಂಗಾಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ವಿಜಯಕುಮಾರ ಜಿಡಗೆ, ಸಂಜುಕುಮಾರ ಕಾಂಬಳೆ, ಟಿಎಚ್‌ಒ ಡಾ. ಉಸ್ಮಾನ ಸುತಾರ, ಪಿಐ ಶರಣಬಸಪ್ಪ ಕೋಡ್ಲಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕಿ ಸುವರ್ಣಾ ಗಾಜರೆ, ಸಲಾಂ ಸಗರಿ, ಪಾಶಾ ಗುತ್ತೇದಾರ, ರೇವಣಪ್ಪ ನಾಗೂರೆ, ಬಾಬುರಾವ ಅರುಣೋದಯ, ಡಾ. ಅಭಿನಂದನ ಬೇಡಿಗೆ, ಈರಣ್ಣ ಝಳಕಿ, ರಾಜಶೇಖರ ಯಂಕಂಚಿ, ನಾಗರಾಜ ಶೇಗಜಿ, ಡಾ. ಬುಜುರ್ಕೆ, ಹಣಮಂತ ಶೇರಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಓದುಗರು, ಕನ್ನಡಪರ ಹೋರಾಟಗಾರರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳನ್ನು ಶಾಸಕ ಬಿ.ಆರ್. ಪಾಟೀಲ್ ಹಾಗೂ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಸನ್ಮಾನಿಸಿ ಗೌರವಿಸಿದರು. ಅವಿನಾಶ ದೇವನೂರ ಕಾರ್ಯಕ್ರಮ ನಿರೂಪಿಸಿದರು. ಸಂಜಯ ಪಾಟೀಲ್ ಸ್ವಾಗತಿಸಿದರು. ಪ್ರಭಾಕರ ಸಲಗರೆ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor